ADVERTISEMENT

ಬನಾರಸ್‌ ವಿ.ವಿ: ಪುಂಡರ ಹಾವಳಿಗೆ ಕಡಿವಾಣ ಬೀಳಲಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2017, 19:30 IST
Last Updated 26 ಸೆಪ್ಟೆಂಬರ್ 2017, 19:30 IST
ಬನಾರಸ್‌ ವಿ.ವಿ: ಪುಂಡರ ಹಾವಳಿಗೆ ಕಡಿವಾಣ ಬೀಳಲಿ
ಬನಾರಸ್‌ ವಿ.ವಿ: ಪುಂಡರ ಹಾವಳಿಗೆ ಕಡಿವಾಣ ಬೀಳಲಿ   

ಉತ್ತರಪ್ರದೇಶದ ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಈಗ ಅಶಾಂತಿಯ ಗೂಡಾಗಿದೆ. ಪುರುಷ ಪೊಲೀಸರು ವಿಶ್ವವಿದ್ಯಾಲಯದ ಆವರಣದ ಒಳಗೆ ವಿದ್ಯಾರ್ಥಿನಿಯರ ಮೇಲೆ ಮನಬಂದಂತೆ ಲಾಠಿ ಬೀಸಿದ್ದಾರೆ. ಇದರಲ್ಲಿ ಅನೇಕ ವಿದ್ಯಾರ್ಥಿನಿಯರು, ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಇದು 101 ವರ್ಷಗಳ ಇತಿಹಾಸ ಹೊಂದಿದ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರವೊಂದಕ್ಕೆ ಭೂಷಣಪ್ರಾಯ ಅಲ್ಲ. ಸಂವೇದನೆಯನ್ನೇ ಕಳೆದುಕೊಂಡಿರುವ ಆಡಳಿತ ವರ್ಗವೇ ಇದರ ಹೊಣೆ ಹೊರಬೇಕು. ಕುಲಪತಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದರೆ, ಸೂಕ್ಷ್ಮತೆ ಪ್ರದರ್ಶಿಸಿದ್ದರೆ, ಮೊಂಡುತನ ಬಿಟ್ಟಿದ್ದರೆ ಇಂತಹ ಅಹಿತಕರ ಮತ್ತು ತಲೆತಗ್ಗಿಸುವ ಪ್ರಸಂಗ ನಡೆಯುತ್ತಲೇ ಇರಲಿಲ್ಲ. ಇಲ್ಲಿ ಪೊಲೀಸರ ಅತಿರೇಕವೂ ಖಂಡನಾರ್ಹ.

ವಿದ್ಯಾರ್ಥಿನಿಯೊಬ್ಬಳನ್ನು ಕಿಡಿಗೇಡಿಗಳು ಗುರುವಾರ ಸಂಜೆ ಚುಡಾಯಿಸಿದ ಮತ್ತು ಅದರ ವಿರುದ್ಧ ಆರಂಭವಾದ ಪ್ರತಿಭಟನೆಯೇ ಈ ಗಲಾಟೆಗೆ ಮೂಲ ಎಂದು ಹೇಳಲಾಗುತ್ತಿದ್ದರೂ ಇದೊಂದೇ ಕಾರಣ ಇರಲಾರದು. ಇಲ್ಲಿ 10 ಸಾವಿರ ವಿದ್ಯಾರ್ಥಿನಿಯರಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸುರಕ್ಷತೆ ಹೆಚ್ಚಿಸಬೇಕು, ತಮಗೆ ರಕ್ಷಣೆ ಕೊಡಬೇಕು ಎಂದು ಇವರು ಪದೇಪದೇ ಮೊರೆ ಇಡುತ್ತಲೇ ಬಂದಿದ್ದಾರೆ. ಏಕೆಂದರೆ ಅವರ ಮೇಲೆ ಲೈಂಗಿಕ ದುರ್ವರ್ತನೆ ತೋರಿದ ಅನೇಕ ಪ್ರಕರಣಗಳು ನಡೆದಿವೆ. 2016ನೇ ಇಸವಿಯಂತೂ ವಿಶ್ವವಿದ್ಯಾಲಯದ ಮಟ್ಟಿಗೆ ಅತ್ಯಂತ ಕೆಟ್ಟ ವರ್ಷ. ಆ ವರ್ಷದ ಆರಂಭದಲ್ಲಿಯೇ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಆಕೆಯ ಹಿರಿಯ ಸಹಪಾಠಿಯಿಂದ ಅತ್ಯಾಚಾರ ನಡೆದಿತ್ತು.

ಆಗಸ್ಟ್‌ನಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬನ ಮೇಲೆ ವಿಶ್ವವಿದ್ಯಾಲಯದ ಫಲಕ ಇದ್ದ ಕಾರಿನಲ್ಲಿಯೇ ಐವರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಪೊಲೀಸರು ಸಹ, ಒತ್ತಡ ಬರುವವರೆಗೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಪ್ರಕರಣದಲ್ಲೂ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಕೆಲಸ ನಡೆಯಲಿಲ್ಲ. ಅದಕ್ಕಿಂತ ನಾಲ್ಕು ತಿಂಗಳ ಮೊದಲು ಕಲೆ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾರಾಮಾರಿ ನಡೆಸಿದ್ದರು. ಆಗ ಗುಂಡಿನ ಚಕಮಕಿಯಲ್ಲಿ 10 ಮಂದಿ ಗಾಯಗೊಂಡಿದ್ದರು. ಜನವರಿಯಲ್ಲಿ ವಿದ್ಯಾರ್ಥಿನಿಯರ ರಕ್ಷಣೆಗಾಗಿ ಸಹಾಯವಾಣಿ ಮತ್ತು ವಿಶೇಷ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದ ಎರಡನೇ ದಿನವೇ ಕುಡುಕ ಕಾನ್‌ಸ್ಟೆಬಲ್ ಒಬ್ಬ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಆದರೆ ಆತನ ಮೇಲೆ ಯಾವುದೇ ಕ್ರಮ ಜರುಗಿಸಲಿಲ್ಲ. ಇವೆಲ್ಲ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆದ ಪ್ರಕರಣಗಳು. ಚುಡಾಯಿಸುವುದು ಇಲ್ಲಿ ಸಾಮಾನ್ಯ ಎಂಬಂತಾಗಿದೆ. ಅಂದರೆ ಈ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪಾಲಿಗೆ ಅದರಲ್ಲಿಯೂ ಹುಡುಗಿಯರ ಪಾಲಿಗಂತೂ ಸುರಕ್ಷಿತವಾದ ಸ್ಥಳ ಅಲ್ಲ ಎಂಬುದು ಸಾಬೀತಾಗುತ್ತಲೇ ಬಂದಿದೆ.

ADVERTISEMENT

ದೂರು ಕೊಟ್ಟರೂ ಪ್ರಯೋಜನ ಆಗದಿರುವುದರಿಂದ ಮತ್ತು ಅಭದ್ರತೆಯ ವಾತಾವರಣದಿಂದ ಬೇಸತ್ತ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಇಳಿದಿದ್ದರೆ ಅದು ಸಹಜ. ಅವರಿಗೆ ಬೇರೆ ದಾರಿಯೂ ಇರಲಿಲ್ಲ. ಹೀಗಿರುವಾಗ, ತಮ್ಮನ್ನು ಭೇಟಿಯಾಗಲು ಬಂದ ವಿದ್ಯಾರ್ಥಿನಿಯರ ಅಹವಾಲು ಕೇಳಿ ಕ್ರಮ ಕೈಗೊಳ್ಳಬೇಕಾದುದು ಕುಲಪತಿ ಜಿ.ಸಿ. ತ್ರಿಪಾಠಿ ಅವರ ಕೆಲಸವಾಗಿತ್ತು. ಇಲ್ಲಿ ಅವರು ವಿಫಲರಾಗಿದ್ದಾರೆ. ಈ ಕರ್ತವ್ಯಲೋಪ ಅಕ್ಷಮ್ಯ. ‘ವಿಶ್ವವಿದ್ಯಾಲಯದಲ್ಲಿ ಅನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ; ಅದಕ್ಕೆಲ್ಲ ಉತ್ತರಿಸುತ್ತ ಕುಳಿತುಕೊಳ್ಳುವುದು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರ ವಾರಾಣಸಿ ಭೇಟಿಯ ಹಿಂದಿನ ದಿನ ನಡೆದ ಈ ಪ್ರತಿಭಟನೆಯಲ್ಲಿ ರಾಜಕೀಯ ಇದೆ’ ಎಂದೆಲ್ಲ ಹೇಳುವುದು ಉಡಾಫೆಯ ಪರಮಾವಧಿ.

ಈ ವಿಶ್ವವಿದ್ಯಾಲಯದ ಹುಡುಗರ ಹಾಸ್ಟೆಲ್‌ಗಳಿಗೆ ಹೋಲಿಸಿದರೆ ಹುಡುಗಿಯರ ಹಾಸ್ಟೆಲ್‌ಗಳಲ್ಲಿ ಊಟ, ಓಡಾಟದ ಸಮಯ ನಿಗದಿಯಲ್ಲಿ ತಾರತಮ್ಯ, ಅನೇಕ ನಿರ್ಬಂಧಗಳಿವೆ. ಇದು ಸರಿಯಲ್ಲ. ಸಮಾನತೆಯನ್ನು ಕಲಿಸಬೇಕಾದ, ಹುಡುಗಿಯರಲ್ಲಿ ಧೈರ್ಯ– ಸ್ಥೈರ್ಯ ಬೆಳೆಸಬೇಕಾದ ಕಡೆಯಲ್ಲೇ ಅವರನ್ನು ಎರಡನೇ ದರ್ಜೆ ಪ್ರಜೆಯಂತೆ ನೋಡುವುದಂತೂ ಖಂಡಿತಾ ಸರಿಯಲ್ಲ. ಲಾಠಿಪ್ರಹಾರದ ಬಗ್ಗೆ ಸರ್ಕಾರ ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ. ಇಬ್ಬರು ಪೊಲೀಸ್‌ ಅಧಿಕಾರಿಗಳು, ಮೂವರು ಹೆಚ್ಚುವರಿ ಮ್ಯಾಜಿಸ್ಟ್ರೇಟರನ್ನು ಅಮಾನತು ಮಾಡಿದೆ. ಆದರೆ ಇಷ್ಟೇ ಸಾಲದು. ವಿದ್ಯಾರ್ಥಿನಿಯರು ಎದುರಿಸುತ್ತಿರುವ ಕಿರುಕುಳ, ತಾರತಮ್ಯ, ಸಮಸ್ಯೆಗೆ ಕಾಯಂ ಪರಿಹಾರ ಒದಗಿಸಬೇಕು. ಅವರಲ್ಲಿ ಸುರಕ್ಷತೆಯ ಭಾವ ಮೂಡಿಸಬೇಕು. ಅದು ತಕ್ಷಣ ಆಗಬೇಕಾದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.