ADVERTISEMENT

ಭರವಸೆಯ ತೀರ್ಪು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಾಚಿಲ್‌ ಗಡಿ ನಿಯಂತ್ರಣ ರೇಖೆ ಬಳಿ  ಭಾರತೀಯ ಸೈನ್ಯವು 2010ರ ಮೇ 3­ರಂದು ನಡೆಸಿದ್ದ ನಕಲಿ ಎನ್‌ಕೌಂಟರ್‌ನಲ್ಲಿ ಭಾಗವಹಿಸಿದ್ದ ಐವರು ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ ಇಬ್ಬರು ಅಧಿಕಾರಿಗಳು ಹಾಗೂ ಮೂವರು  ಸೈನಿಕರಿದ್ದಾರೆ.   ಜಮ್ಮು– ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ನಾದಿಹಾಲ್‌ ಗ್ರಾಮದ ಮೂವರು ನಾಗರಿಕರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಈ ಸಿಬ್ಬಂದಿಗೆ ಶಿಕ್ಷೆಯಾಗಿದೆ. 

ಸೇನೆಯಲ್ಲಿ ಕೆಲಸ ಕೊಡಿಸು­ತ್ತೇವೆ ಎಂದು ನಂಬಿಸಿ  ಈ ಮೂವರು ಯುವಕರನ್ನು ಗಡಿ ಪ್ರದೇಶಕ್ಕೆ  ಕರೆದು­ಕೊಂಡು ಹೋಗಿ, ಬಳಿಕ ಅವರನ್ನು ಎನ್‌ಕೌಂಟರ್‌ ಹೆಸರಿನಲ್ಲಿ ಕೊಂದಿದ್ದರು.  ಮೃತ-­­ರನ್ನು ಭಯೋತ್ಪಾದಕರು ಎಂದು ಬಿಂಬಿಸುವ ಯತ್ನಗಳು ನಡೆದಿದ್ದವು. ಕಾನೂನಿನ ಚೌಕಟ್ಟು ಮೀರಿ, ಅಮಾನುಷವಾಗಿ ನಡೆದುಕೊಳ್ಳುವ ತನ್ನ ಸಿಬ್ಬಂದಿಯ ವರ್ತನೆಯನ್ನು ಸೇನೆ ಲಘುವಾಗಿ ಪರಿಗಣಿಸುವುದಿಲ್ಲ ಎಂಬುದಕ್ಕೆ ಈಗ ವಿಧಿಸಿರುವ ಶಿಕ್ಷೆ ಒಂದು ಸ್ಪಷ್ಟ ನಿದರ್ಶನ.

ಅನಾಥ ಪ್ರಜ್ಞೆಯಿಂದ ಪೂರ್ತಿ ಹೊರಬರಲಾಗದ ಸ್ಥಿತಿಯಲ್ಲಿರುವ ರಾಜ್ಯದ ಜನರಿಗೆ  ಈ ತೀರ್ಪಿ­ನಿಂದ ತುಸು ಸಮಾಧಾನ ಸಿಕ್ಕಿರಬಹುದು. ಕೆಲವು ದಿನಗಳ ಹಿಂದೆ  ಬಡಗಾಂ ಜಿಲ್ಲೆ­ಯಲ್ಲಿ ಇಬ್ಬರು ನಾಗರಿಕರು ಸೇನಾ ಸಿಬ್ಬಂದಿಯ ಗುಂಡಿಗೆ ಬಲಿ­ಯಾಗಿ­ದ್ದರು.  ಈ ಪ್ರಕರಣದಲ್ಲಿ ಆದ ಅಚಾತುರ್ಯವನ್ನು ಸೇನೆ ಒಪ್ಪಿಕೊಂಡು ಕ್ಷಮೆ ಯಾಚಿಸಿತ್ತು.  ಸೇನೆಗೆ ತನ್ನ ತಪ್ಪಿನ ಅರಿವಾಗಿರುವುದರ ಸೂಚನೆ ಇದು. 

ಈಗ ಶಿಕ್ಷೆ ಆಗಿರುವ ಪ್ರಕರಣದಲ್ಲಿ, ತಪ್ಪಿತಸ್ಥರಾದ ಸೇನಾಧಿಕಾರಿಗಳು ಮತ್ತು ಸಿಬ್ಬಂದಿಯು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆ ನಿಗ್ರಹಕ್ಕೆ ಇರುವ ಬಹುಮಾನ ಪಡೆಯುವ ಸಂಚು ನಡೆಸಿದ್ದರು ಎಂಬುದು ಕಳವಳ ಮೂಡಿಸಿರುವ ಸಂಗತಿ. ಬಹುಮಾನಕ್ಕಾಗಿ ದೇಶದ ನಾಗರಿಕರನ್ನೇ ನಕಲಿ ಎನ್‌ಕೌಂಟರ್‌  ನೆಪದಲ್ಲಿ  ಕೊಲ್ಲುವ ಈ ಕ್ರಮ ನಿಜಕ್ಕೂ ನಾಚಿಕೆ­ಗೇಡಿ­ನದು. ಇದು ಭಾರತೀಯ ಸೇನೆಯ ಪ್ರತಿಷ್ಠೆಗೆ ಒಂದು ಕಪ್ಪುಚುಕ್ಕೆ.

ಸೇನಾ­ಪಡೆಯು ಕಾನೂನನ್ನು ಉಲ್ಲಂಘಿಸಿ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ಈ ಪ್ರಕರಣ ರವಾನಿಸಿದೆ.  ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಹಿಂದೆಂದೋ ಅಗತ್ಯವಿದ್ದಿರಬಹುದು. ಆದರೆ 2001ರ ನಂತರ ಜಮ್ಮು– ಕಾಶ್ಮೀರದಲ್ಲಿ  ಪರಿಸ್ಥಿತಿ ಸುಧಾರಿಸಿದೆ. ಆಗಾಗ್ಗೆ ತಲೆಎತ್ತುವ ಸಣ್ಣಪುಟ್ಟ ಹಿಂಸಾ ಚಟುವಟಿಕೆಗಳನ್ನು ನಿಗ್ರಹಿಸಲು ನಾಗರಿಕ ಕಾನೂನುಗಳು ಸಶಕ್ತವಾಗಿವೆ. ಸೇನಾ ನ್ಯಾಯಾಲಯ ಈಗ ನೀಡಿರುವ ತೀರ್ಪಿ­ನಿಂದ ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಇನ್ನಷ್ಟು ಗಟ್ಟಿ­ಗೊಳ್ಳಬಹುದು. ಮುಂದಿನ ದಿನಗಳಲ್ಲಿ ಸೇನೆ  ಹೊರಗಿನ ಶತ್ರುಗಳೊಡನೆ ಕಾದಾಡುವ ತನ್ನ ಮೂಲ ಕಾಯಕಕ್ಕೆ ಸೀಮಿತವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT