ADVERTISEMENT

ಯಶಸ್ಸಿನ ಕಿರೀಟ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ಇಸ್ರೊ ಪಾಲಿಗೆ ೨೦೧೪ ಯಶಸ್ಸಿನ ಸಂಭ್ರಮದ ವರ್ಷ. ಸೆಪ್ಟೆಂಬರ್‌ ತಿಂಗಳಲ್ಲಿ ಮೊದಲ ಯತ್ನದಲ್ಲೇ ಮಂಗಳಯಾನ ನೌಕೆಯನ್ನು ಗುರಿ ತಲುಪಿಸಿದ ಕೀರ್ತಿಯ ಬೆನ್ನ ಹಿಂದೆಯೇ ಜಿಎಸ್‌ಎಲ್‌ವಿ ಮಾರ್ಕ್‌ ೩ ಸಹ ಯಶಸ್ವಿಯಾಗಿ ಉಡಾವಣೆಯಾಗಿದೆ. ರಾಕೆಟ್‌ ಮೂಲಕ ಹಾರಿದ್ದ ಮಾನವ­ರಹಿತ ನೌಕೆ ಭೂಮಿಗೆ ಮರುಪ್ರವೇಶ ಮಾಡಿ ಬಂಗಾಳ ಕೊಲ್ಲಿಯಲ್ಲಿ ಇಳಿದಿದೆ. ಈ ಪ್ರಯೋಗ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿದೆ. ಇದರ ಸಂಪೂರ್ಣ ಶ್ರೇಯ ಇಸ್ರೊ ವಿಜ್ಞಾನಿಗಳಿಗೆ ಸಲ್ಲಬೇಕು. ವೈಜ್ಞಾನಿಕ ಸಂಶೋ­ಧನೆ­ಯಲ್ಲಿ ವಿಶ್ವದ ಮುಂದುವರೆದ ದೇಶಗಳಿಗೆ ಹೋಲಿಸಿದರೆ  ಭಾರತದ ಪ್ರಮುಖ ಸಂಸ್ಥೆಗಳು ಇನ್ನೂ ತೆವಳುತ್ತಿವೆ.

ರಕ್ಷಣಾ ಸಂಶೋಧನೆ ಮತ್ತು ಅಭಿ­ವೃದ್ಧಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಹಲವು ಸಂಶೋಧನೆಗಳು ಕಾಲ­ಮಿತಿಯಲ್ಲಿ ಪೂರ್ಣಗೊಳ್ಳದೆ  ಮುಗ್ಗರಿಸುತ್ತಿವೆ. ಇದರಲ್ಲಿ ತೇಜಸ್‌ ಯುದ್ಧ ವಿಮಾನ, ಇದೇ ವಿಮಾನಕ್ಕಾಗಿ ಅಭಿವೃದ್ಧಿ ಪಡಿಸುತ್ತಿರುವ ಕಾವೇರಿ ಎಂಜಿನ್‌ ಸಹ ಸೇರಿದೆ. ಗುಣಮಟ್ಟದಿಂದ ಕೂಡಿದ ಸಂಶೋಧನಾ ಪ್ರಬಂಧ­ಗಳ ಸಂಖ್ಯೆಯೂ ಕುಸಿದಿದೆ. ಇಂತಹ ಕಾಲಘಟ್ಟದಲ್ಲಿ ಇಸ್ರೊ ಸಾಧನೆ ಸ್ತುತ್ಯರ್ಹ. ಇದೊಂದು ಉತ್ತುಂಗದ ಸಾಧನೆಯೇ ಸರಿ.

ಜಿಎಸ್‌ಎಲ್‌ವಿ ಮಾರ್ಕ್ ೩ ರಾಕೆಟ್‌ನ ಹಾರಾಟದ ಮೂಲ ಉದ್ದೇಶವೇ ಗಗನಯಾನ. ಇದಕ್ಕೆ ಪೂರಕವಾಗಿ ಗಗನಯಾತ್ರಿಗಳನ್ನು ಕೊಂಡೊಯ್ಯುವ ಸಾಮರ್ಥ್ಯದ ನೌಕೆಯನ್ನು ರಾಕೆಟ್‌ನಲ್ಲಿ ಇರಿಸಲಾಗಿತ್ತು. ಭೂಮಿಯ ಮರು­ಪ್ರವೇಶದ ವೇಳೆಯಲ್ಲಿ ಉತ್ಪತ್ತಿಯಾಗುವ ಅಗಾಧ ಪ್ರಮಾಣದ ಶಾಖ­ವನ್ನು  ಇದು ತಡೆದುಕೊಳ್ಳುವುದೇ ಎನ್ನುವುದರ ಪರೀಕ್ಷೆ ಆಗಬೇಕಿತ್ತು. ಅದ­ರಲ್ಲಿ ಈಗ ಯಶಸ್ಸು ಸಿಕ್ಕಿದೆ. ಮಾರ್ಕ್‌ ೩ ರಾಕೆಟ್‌  ನಾಲ್ಕು ಟನ್‌ ಭಾರ­ವನ್ನು ಎತ್ತಿಕೊಂಡು ಹಾರುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಷ್ಟು ಭಾರದ ಉಪಗ್ರಹಗಳನ್ನು ಹಾರಿಸುವ ಸಂದ­ರ್ಭದಲ್ಲಿ ವಿದೇಶಿ ಉಡಾವಣಾ ವಾಹನಗಳ ಅವಲಂಬನೆ ತಪ್ಪಲಿದೆ. ಇದ­ರಿಂದ ಇಸ್ರೊಗೆ ಹಣ ಉಳಿತಾಯವಾಗಲಿದೆ. ಮತ್ತೊಂದು ಕಡೆ  ವಿದೇಶದ ಉಪಗ್ರಹಗಳನ್ನು ಇದೇ ರಾಕೆಟ್‌ ಮೂಲಕ ಹಾರಿಸಿ ವಿದೇಶಿ ವಿನಿಮಯ­ವನ್ನು ಗಳಿಸಬಹುದು. ಈ ಅಂಶಗಳು ಯಶಸ್ಸಿಗೆ ಮೆರುಗು ತಂದಿವೆ.

ಇದರ ಹಿಂದೆ ದಶಕಗಳ ಪರಿಶ್ರಮವಿದೆ. ೬೩೦.೫ ಟನ್‌ ತೂಕದ ರಾಕೆಟ್‌­ನಲ್ಲಿ ಮೂರು ಬಗೆಯ ಇಂಧನಗಳಿವೆ. ಮೊದಲ ಹಂತದಲ್ಲಿ ೧೫೩ ಸೆಕೆಂಡ್‌­ವರೆಗೆ ಘನ ಇಂಧನ, ನಂತರ ೧೨೦ ಸೆಕೆಂಡ್‌ವರೆಗೆ ದ್ರವ ಇಂಧನ ತುಂಬ­ಲಾಗಿತ್ತು. ಮುಂದಿನ ಹಂತದಲ್ಲಿ ಕ್ರಯೋಜನಿಕ್‌ ಇಂಧನ ತುಂಬಲು ಅವ­ಕಾಶ­ವಿದೆ. ಇದನ್ನು ದೂರದ ಪ್ರಯಾಣದ ಸಂದರ್ಭದಲ್ಲಿ ಬಳಸಲಾಗುತ್ತದೆ. ಪ್ರಾಥ­ಮಿಕ ಪರೀಕ್ಷೆಯಿಂದ ರಾಕೆಟ್‌ ಹಾರಾಟ, ನೌಕೆಯು ರಾಕೆಟ್‌ನಿಂದ ಪ್ರತ್ಯೇಕ­ವಾದ ವಿದ್ಯಮಾನ, ನೌಕೆಯು ಭೂಮಿಯನ್ನು ಮರುಪ್ರವೇಶಿಸಿದ ಸಂದರ್ಭ ಮತ್ತು ಸಮುದ್ರದಲ್ಲಿ ಬೀಳುವ ಮುನ್ನ ಪ್ಯಾರಾಚೂಟ್‌ ತೆರೆ­ದು­ಕೊಂಡ ಕ್ರಿಯೆ ಎಲ್ಲವೂ ನಿರೀಕ್ಷೆಯಂತೆಯೇ ನಡೆದಿವೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್‌ ಹೇಳಿದ್ದಾರೆ.  ಬಿದ್ದ ನಂತರ ನೌಕೆಯನ್ನು ಗುರುತಿಸಲು ಸಮುದ್ರದ ಭಾಗ ಹಸಿರು ಬಣ್ಣಕ್ಕೆ ತಿರುಗುವಂತೆ ನೌಕೆಯಿಂದ ರಾಸಾಯನಿಕ ಬಿಡುಗಡೆಯಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಅದೂ ಯಶಸ್ವಿಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಜಿಎಸ್‌ಎಲ್‌ವಿ ಮಾರ್ಕ್‌ ೩ ಪರಿಪೂರ್ಣ ಹಾರಾಟ ನಡೆಸಲಿದೆ ಎಂದು ಇಸ್ರೊ ಅಧ್ಯಕ್ಷರು ಹೇಳಿದ್ದಾರೆ. ಇದೂ ಯಶಸ್ಸನ್ನು ಕಾಣಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.