ADVERTISEMENT

ರಾಜಕೀಯ ಸ್ಥಿರತೆ ಮೂಡಲಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2014, 19:30 IST
Last Updated 23 ಸೆಪ್ಟೆಂಬರ್ 2014, 19:30 IST

ಆಫ್ಘಾನಿಸ್ತಾನದ ಮುಂದಿನ ಅಧ್ಯಕ್ಷರಾಗಿ ಆರ್ಥಿಕ ತಜ್ಞ ಅಶ್ರಫ್‌ ಘನಿ ಅಹಮದ್ಜಾಯಿ ಅವರು ಆಯ್ಕೆಯಾಗಿದ್ದಾರೆ. ಇದರಿಂದ ಆಫ್ಘಾನಿ­ಸ್ತಾನ­ದಲ್ಲಿ ಏಪ್ರಿಲ್‌ನಲ್ಲಿ ಆರಂಭವಾದ ಚುನಾವಣಾ ಪ್ರಕ್ರಿಯೆಗೆ ಕಡೆಗೂ ಒಂದು ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.  ಜೂನ್ 14ರಂದು ನಡೆದ ಅಂತಿಮ ಹಂತದ ಅಧ್ಯಕ್ಷೀಯ ಚುನಾವಣೆಯಲ್ಲಿ  ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದ ಘನಿ ಹಾಗೂ ಮಾಜಿ ವಿದೇಶಾಂಗ ಸಚಿವ ಡಾ.ಅಬ್ದುಲ್ಲಾ ಅಬ್ದುಲ್ಲಾ ಮಧ್ಯೆ ನಡೆದ ಕಡೆ ಗಳಿಗೆಯ ಒಪ್ಪಂದದಿಂದ ಇದು ಸಾಧ್ಯವಾಗಿದೆ. ಚುನಾವಣೆ­ಯಲ್ಲಿ ಸಾಕಷ್ಟು ಅಕ್ರಮಗಳನ್ನು ನಡೆಸಲಾಗಿದೆ  ಎಂದು ಡಾ.ಅಬ್ದುಲ್ಲಾ  ಆರೋ­ಪಿ­ಸಿದ್ದರು.

ಆ ಕಾರಣ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಕಡೆಗೂ ಈ ರಾಜಕೀಯ ಅನಿಶ್ಚಯ ಕೊನೆಗೊಳಿಸಿ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಅನುವು ಮಾಡಿಕೊಡಲಾಗಿದೆ. ಈ ಸರ್ಕಾರದಲ್ಲಿ ಈ ಇಬ್ಬರೂ ನಾಯಕರ ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ.  ಪ್ರಧಾನಿ ಹುದ್ದೆಗೆ ಸಮಾನವಾದಂತಹ  ಸಿಇಒ ಹುದ್ದೆಯನ್ನು  ಸೃಷ್ಟಿಸಲಾಗುತ್ತಿದ್ದು ಇದನ್ನು  ಅಬ್ದುಲ್ಲಾ ಬೆಂಬಲಿಗರಿಗೆ ನೀಡಲಾಗುವುದು. 

ಈ ಒಪ್ಪಂದದಿಂದಾಗಿ ಅಂತ­ರ್ಯುದ್ಧದ ಭೀತಿಯಿಂದಂತೂ ರಾಷ್ಟ್ರ ಹೊರಬಂದಂತಾಗಿದೆ.  ಏಕೆಂದರೆ ಅಧಿ­ಕಾರ­ಕ್ಕಾಗಿ ಘನಿ–ಅಬ್ದುಲ್ಲಾ ಸೆಣಸಾಟ, ಪಸ್ತೂನರು ಹಾಗೂ ತಾಝಿಕ್‌­ಗಳ ನಡುವಣ ಹೋರಾಟವಾಗಬಹುದು ಎಂಬಂಥ ಭೀತಿ ವ್ಯಕ್ತ­ವಾಗಿತ್ತು. ಈಗ ಆ ಭೀತಿ ಕಡಿಮೆ ಆಗಿದೆ ಎಂಬುದೇ ಸಮಾಧಾನದ ಅಂಶ.

ಕಳೆದ ಕೆಲವು ತಿಂಗಳುಗಳಿಂದ ನಡೆದ ಬೆಳವಣಿಗೆಗಳನ್ನು  ಘನಿ ಹಾಗೂ ಅಬ್ದುಲ್ಲಾ ಕಡೆಯವರು ಅಷ್ಟು ಸುಲಭವಾಗಿ ಮರೆಯುತ್ತಾರೆಂದು ನಿರೀಕ್ಷಿ­ಸುವುದು ತಪ್ಪಾಗುತ್ತದೆ. ಹೀಗಾಗಿ ಈಗಲೇ ಸಮಾಧಾನದ ನಿಟ್ಟುಸಿರು ಬಿಡ­ಲಾಗದು. ನಿಜ ಹೇಳಬೇಕೆಂದರೆ  ಆಫ್ಘಾನಿಸ್ತಾನಕ್ಕೆ ಈಗ ಕ್ಲಿಷ್ಟಕರವಾದಂತಹ ಸಂಕ್ರಮಣ ಕಾಲ. ಬರಲಿರುವ ತಿಂಗಳುಗಳಲ್ಲಿ  ಆಫ್ಘಾನಿಸ್ತಾನದ ಹೊಸ  ಅಧ್ಯಕ್ಷ ಹಾಗೂ ಒಕ್ಕೂಟ ಸರ್ಕಾರ ಅನೇಕ ಸವಾಲುಗಳನ್ನು ಎದುರು­ಗೊಳ್ಳ­ಬೇಕಿದೆ.  ಇದರಲ್ಲಿ ಬಹಳ ಮುಖ್ಯವಾದದ್ದು  2014ರ ಆಚೆಗೂ  ಆಫ್ಘಾನಿ­ಸ್ತಾ­ನದಲ್ಲಿ ವಿದೇಶಿ ಸೇನಾ ಪಡೆಗಳು ಇರುವುದಕ್ಕೆ ಅವಕಾಶ ಮಾಡಿ­ಕೊಡಲು  ಅಮೆರಿಕದ ಜತೆ ಭದ್ರತಾ ಒಡಂಬಡಿಕೆಗೆ ಸಹಿ ಹಾಕಬೇಕಾಗಿದೆ. 

ಈ ಒಪ್ಪಂದಕ್ಕೆ ಸಹಿ ಹಾಕಲು ನಿರ್ಗಮಿಸುತ್ತಿರುವ ಅಧ್ಯಕ್ಷ ಹಮೀದ್ ಕರ್ಜೈ ವಿರೋಧಿಸುತ್ತಿದ್ದಾರೆ.  ಆದರೆ ಘನಿ ಹಾಗೂ ಅಬ್ದುಲ್ಲಾ,  ಒಡಂಬಡಿಕೆಯ ಪರ­ವಾಗಿದ್ದಾರೆ.  ಈ ಬಗೆಗಿನ ನಿರ್ಧಾರವನ್ನು ತಕ್ಷಣವೇ ಮಾಡಬೇಕಾದ ಜರೂರಿದೆ.  ತಾಲಿಬಾನ್ ಜತೆಗೂ ಮಾತುಕತೆ ಪುನರಾರಂಭಿಸಬೇಕಾಗಿದೆ.  ಆಫ್ಘನ್ ಆರ್ಥಿಕತೆಯಂತೂ ತೀವ್ರ ಬಿಕ್ಕಟ್ಟಿನಲ್ಲಿದೆ. ಇದರ ಪರಿಹಾರಕ್ಕೆ  ರಾಜ­ಕೀಯ ಸ್ಥಿರತೆ ತರುವುದು ಹೊಸ ನಾಯಕತ್ವದ ಮುಂದಿರುವ ಅಗ್ನಿಪರೀಕ್ಷೆ. ಬರೀ ಬಾಯಿ ಮಾತಿನ ಭರವಸೆಗಳು ಸಾಲದು, ರಾಷ್ಟ್ರವನ್ನು ಮುನ್ನಡೆ­ಸಲು ಘನಿ ಹಾಗೂ ಅಬ್ದುಲ್ಲಾ ಸಹಭಾಗಿಗಳಾಗಬೇಕು.

ಈ ಮೈತ್ರಿ ಅಲ್ಪಾವಧಿ­ಯದಾಗಬಾರದು. ಆ ಮೂಲಕ ಮತದಾರರ ನಿರೀಕ್ಷೆಗಳನ್ನು ಈಡೇರಿಸು­ವಂತಾ­ಗಬೇಕು. ಏಕೆಂದರೆ ಕೆಟ್ಟ ಹವಾಮಾನ ಹಾಗೂ ತಾಲಿಬಾನ್ ಪ್ರಾಯೋ­­­ಜಿತ ಹಿಂಸಾಚಾರಗಳ ಮಧ್ಯೆಯೂ ಜನ ದೊಡ್ಡ ಸಂಖ್ಯೆಯಲ್ಲಿ ಹೊರ­ಬಂದು ಮತ ಹಾಕಿದ್ದಾರೆ ಎಂಬುದನ್ನು ಈ ನಾಯಕರು ಮರೆಯ­ಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT