ADVERTISEMENT

ರಿಯಲ್‌ ಎಸ್ಟೇಟ್‌ ಕಾಯ್ದೆ  ಜಾರಿಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 1 ಮೇ 2017, 19:30 IST
Last Updated 1 ಮೇ 2017, 19:30 IST
ರಿಯಲ್‌ ಎಸ್ಟೇಟ್‌ ಕಾಯ್ದೆ  ಜಾರಿಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ
ರಿಯಲ್‌ ಎಸ್ಟೇಟ್‌ ಕಾಯ್ದೆ  ಜಾರಿಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ   
ಒಂಬತ್ತು ವರ್ಷಗಳಿಂದ  ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದ ‘ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ)  ಕಾಯ್ದೆ’ಯು ಸೋಮವಾರದಿಂದ ಪೂರ್ಣ  ಪ್ರಮಾಣದಲ್ಲಿ ಜಾರಿಗೆ ಬಂದಿರುವುದು  ಐತಿಹಾಸಿಕ ನಡೆಯಾಗಿದೆ.  ಮನೆ ಖರೀದಿದಾರರಿಗೆ ಸುಳ್ಳು ಭರವಸೆ ನೀಡಿ ವಂಚಿಸುವ ಕಟ್ಟಡ ನಿರ್ಮಾಣಗಾರರ ಅಟಾಟೋಪಕ್ಕೆ ಈಗ ಮೂಗುದಾರ ಬೀಳಲಿದೆ.

ಮನೆ ಖರೀದಿದಾರರ ಹಿತಾಸಕ್ತಿ ರಕ್ಷಿಸಲೂ ಸಾಧ್ಯವಾಗಲಿದೆ. ‘ಮನೆ ಖರೀದಿದಾರ  ಸ್ನೇಹಿ’ ಕಾಯ್ದೆ ಜಾರಿಗೆ ಬರುವುದರಿಂದ   ಕಟ್ಟಡ ನಿರ್ಮಾಣ ರಂಗದಲ್ಲಿ ಗಣನೀಯ ಚೇತರಿಕೆ ಕಂಡುಬರಲಿದೆ. ಕಾಲಮಿತಿಯೊಳಗೆ ಕಟ್ಟಡ  ನಿರ್ಮಾಣ ಪೂರ್ಣಗೊಳಿಸಬೇಕಾಗುತ್ತದೆ.  ಗುಣಮಟ್ಟ ಕಾಯ್ದುಕೊಳ್ಳಬೇಕಾಗುತ್ತದೆ. ಧರ್ಮ, ಜಾತಿ ಮತ್ತು ಲಿಂಗ ಆಧರಿಸಿ ಮನೆ  ಹಂಚಿಕೆಯನ್ನು ನಿರಾಕರಿಸುವಂತಿಲ್ಲ.
 
ತಮಗೆ ಇಷ್ಟಬಂದಂತೆ ಗೃಹ ನಿರ್ಮಾಣ ಯೋಜನೆಗಳನ್ನು ಕಾರ್ಯಗತಗೊಳಿಸುತ್ತ, ಖರೀದಿದಾರರ ಜೊತೆ ಚೆಲ್ಲಾಟ ಆಡುತ್ತಿದ್ದ ಕಟ್ಟಡ ನಿರ್ಮಾಣಗಾರರ ಹಾರಾಟಕ್ಕೆ  ಕಡಿವಾಣ ಬೀಳಲಿದೆ. ಕಟ್ಟಡ ನಿರ್ಮಾಣ ಯೋಜನೆಯೊಂದರ ಕುರಿತು ಕಾಯ್ದೆಯಲ್ಲಿನ ಕಟ್ಟುನಿಟ್ಟಿನ ನಿಯಮಗಳು  ಈ ಉದ್ದಿಮೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ದಕ್ಷತೆಯನ್ನೂ ಹೆಚ್ಚಿಸಲಿವೆ. ಹೀಗಾಗಿ   ಗ್ರಾಹಕರಿಗೆ ಆನೆಬಲ ಬಂದಂತೆ ಆಗಿದೆ.

ಮನೆ ಖರೀದಿದಾರರೇ ದೊರೆಯಾಗುವುದಕ್ಕೂ ಅವಕಾಶ ಕಲ್ಪಿಸಿಕೊಡಲಿದೆ. ಬಹುಮಟ್ಟಿಗೆ ಅಸಂಘಟಿತ ವಲಯದಲ್ಲಿಯೇ ಇರುವ ಈ ವಹಿವಾಟಿನಲ್ಲಿ ಮನೆ ಖರೀದಿದಾರ ದೂರು ದಾಖಲಿಸಿದರೆ ಆತನನ್ನು  ಕೋರ್ಟ್‌ನಿಂದ ಕೋರ್ಟ್‌ಗೆ ಅಲೆದಾಡಿಸಿ ಹೈರಾಣಾಗಿಸುತ್ತಿದ್ದ ಬಿಲ್ಡರ್‌ಗಳು ಇನ್ನು ಮುಂದೆ ಹಾಗೆ ಮಾಡಲು ಸಾಧ್ಯವೇ ಇಲ್ಲ.
 
ಇದು,  ಲಕ್ಷಾಂತರ ಮನೆ ಖರೀದಿದಾರರಿಗೆ ನೆಮ್ಮದಿ ನೀಡಲಿದೆ.   ಗ್ರಾಹಕರು ತಮ್ಮೆಲ್ಲ ಕುಂದುಕೊರತೆಗಳಿಗೆ ರಿಯಲ್‌ ಎಸ್ಟೇಟ್‌ ನಿಯಂತ್ರಣ ಸಂಸ್ಥೆಗೆ ದೂರು ನೀಡಿ ನ್ಯಾಯ ಪಡೆಯಬಹುದು.  ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗುವ ಬಗೆಯಲ್ಲಿ ವರ್ತಿಸುತ್ತಿದ್ದ ಕಟ್ಟಡ ನಿರ್ಮಾಣಗಾರರನ್ನು ಸರಿದಾರಿಗೆ ತರಲಿದೆ. 
 
ಹೊಸ ಕಾಯ್ದೆಯು ರಿಯಲ್‌ ಎಸ್ಟೇಟ್‌ ವಹಿವಾಟಿನ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು  ದಕ್ಷತೆ ಹೆಚ್ಚಿಸಲಿದೆ ಎನ್ನುವುದು ನಿಜವಾಗಬೇಕಿದ್ದರೆ, ರಾಜ್ಯ ಸರ್ಕಾರಗಳೂ ಕಾಯ್ದೆಯ ಮೂಲ ಆಶಯಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ನಿಯಮಾವಳಿ ಕುರಿತು ಸ್ಪಷ್ಟ ಅಧಿಸೂಚನೆ ಪ್ರಕಟಿಸಬೇಕಾಗಿದೆ. ಕಾಯ್ದೆ ಜಾರಿ ಸಂಬಂಧ ಇದುವರೆಗೆ ಕೆಲವು ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ  13 ರಾಜ್ಯ ಸರ್ಕಾರಗಳು  ಮಾತ್ರ ಅಧಿಸೂಚನೆ ಹೊರಡಿಸಿವೆ.
 
ಇದು ರಾಜ್ಯ ಸರ್ಕಾರಗಳ ಜನಪರ ಕಾಳಜಿಗೆ ಕನ್ನಡಿ ಹಿಡಿಯುತ್ತದೆ. ಈ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಇಲ್ಲದಿರುವುದು ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಶೋಭೆ ತರದು.   ಮಹಾರಾಷ್ಟ್ರದಂಥ  ಕೆಲವು ರಾಜ್ಯ ಸರ್ಕಾರಗಳು ಕಾಯ್ದೆಯ ಕೆಲ ನಿಯಮಗಳನ್ನು ದುರ್ಬಲಗೊಳಿಸಲು ಹೊರಟಿರುವುದು ಖಂಡನೀಯ. ಇದು ಕಾಯ್ದೆಯ ಮೂಲ ಉದ್ದೇಶದ ಆಶಯಕ್ಕೆ ಧಕ್ಕೆ ತರಲಿದೆ.
 
 ಕಪ್ಪು ಹಣವನ್ನು ಲೀಲಾಜಾಲವಾಗಿ ಚಲಾವಣೆಗೆ ತರುವ ತಾಣವಾಗಿರುವ ಈ  ವಹಿವಾಟಿನಲ್ಲಿ ಅಧಿಕಾರ ರಾಜಕಾರಣದ ಮಾಫಿಯಾ ಪ್ರಭಾವ ಗಣನೀಯವಾಗಿದೆ. ಈ ಕಾಯ್ದೆಯ ನೆಪದಲ್ಲಾದರೂ ಇಂತಹ ಮಾಫಿಯಾ ಪ್ರಭಾವ ಹಿಮ್ಮೆಟ್ಟಿಸುವ ಪ್ರಯತ್ನಗಳನ್ನು ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಮಾಡಬೇಕಾಗಿದೆ.
 
ರಾಜಕಾರಣಿಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರಿಂದ ಕಾಯ್ದೆಯ ಮೂಲ ಆಶಯವನ್ನೇ ತಿರುಚುವಂತೆ ಜನಪ್ರತಿನಿಧಿಗಳ ಮೇಲೆ ಒತ್ತಡ ಬರುವ ಸಾಧ್ಯತೆ ಇರುತ್ತದೆ. ನಿಯಮಗಳನ್ನು   ಕಟ್ಟುನಿಟ್ಟಾಗಿ ಜಾರಿಗೆ ತರುವ ವಿಷಯದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ರಿಯಲ್‌ ಎಸ್ಟೇಟ್‌ ಲಾಬಿಯ ಒತ್ತಡಕ್ಕೆ ಮಣಿಯಬಾರದು.
 
ಕಾಯ್ದೆ ದುರ್ಬಲಗೊಳಿಸುವ ಹುನ್ನಾರಕ್ಕೆ ಕೈಹಾಕಲೇಬಾರದು. ಚುನಾವಣಾ ವರ್ಷದಲ್ಲಿ ಸರ್ಕಾರ ದೃಢ ನಿರ್ಧಾರ ಕೈಗೊಂಡು ಅಧಿಸೂಚನೆ  ಹೊರಡಿಸಬೇಕು. ಜನರ ಹಿತರಕ್ಷಣೆಯೇ ತನ್ನ ಮೊದಲ ಆದ್ಯತೆ ಆಗಿರುವುದನ್ನು  ಸಾಬೀತುಪಡಿಸಬೇಕು.
 
ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೊಸ ಮೈಲಿಗಲ್ಲು ಆಗಿರುವ ಕಾಯ್ದೆ ಜಾರಿ ಸಂದರ್ಭದಲ್ಲಿ ಆರಂಭದಲ್ಲಿ   ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ  ಮನೆ ಖರೀದಿದಾರ ‘ದೊರೆ’ ಆಗಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.