ADVERTISEMENT

ಲೋಕಪಾಲ ನೇಮಕ ವಿಳಂಬ ಸಲ್ಲದು: ಕೋರ್ಟ್ ಆದೇಶ ಪಾಲಿಸಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2017, 19:30 IST
Last Updated 30 ಏಪ್ರಿಲ್ 2017, 19:30 IST
ಲೋಕಪಾಲ ನೇಮಕ ವಿಳಂಬ ಸಲ್ಲದು: ಕೋರ್ಟ್ ಆದೇಶ ಪಾಲಿಸಿ
ಲೋಕಪಾಲ ನೇಮಕ ವಿಳಂಬ ಸಲ್ಲದು: ಕೋರ್ಟ್ ಆದೇಶ ಪಾಲಿಸಿ   
ಕೇಂದ್ರದಲ್ಲಿ ಯುಪಿಎ ಆಡಳಿತದ ಅಂತಿಮ ಅವಧಿಯಲ್ಲಿ  ಅಂಗೀಕಾರಗೊಂಡ ‘ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ’ ಜಾರಿಗೆ ಬಂದಿದ್ದು  2014ರ ಜನವರಿಯಲ್ಲಿ. ಅಂದರೆ ಇಂದಿಗೆ ಸರಿಸುಮಾರು ಮೂರು ವರ್ಷಗಳ ಹಿಂದೆ. ಭ್ರಷ್ಟಾಚಾರ ನಿರ್ಮೂಲನೆಯ ಹಾದಿಯಲ್ಲಿ ಈ ಕಾಯ್ದೆ ದೊಡ್ಡದೊಂದು ಹೆಜ್ಜೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಲೋಕಪಾಲ ಹುದ್ದೆಗೆ ಇದುವರೆಗೂ ನೇಮಕಾತಿಯೇ ಆಗಿಲ್ಲ.

ಲೋಕಪಾಲರು ಇಲ್ಲದೇ ಹೋದರೆ ಇಂತಹದೊಂದು ಕಾಯ್ದೆ ಇದ್ದೂ ಇಲ್ಲದಂತೆ. ಅದರಿಂದೇನೂ ಪ್ರಯೋಜನವೇ ಇಲ್ಲ. ಇದು ಸರ್ಕಾರಕ್ಕೂ ಗೊತ್ತು. ಆದರೆ ನೋವಿನ ಸಂಗತಿ ಎಂದರೆ, ‘ಭ್ರಷ್ಟಾಚಾರ ಈ ದೇಶದ ದೊಡ್ಡ ಶತ್ರು. ಭ್ರಷ್ಟಾಚಾರವನ್ನು  ಸಹಿಸಿಕೊಳ್ಳುವುದಿಲ್ಲ. ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಸಂದರ್ಭ ಸಿಕ್ಕಾಗಲೆಲ್ಲ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರದೇ ಸರ್ಕಾರ ಕೂಡ ಲೋಕಪಾಲರ ಹುದ್ದೆಯನ್ನು ಭರ್ತಿ ಮಾಡುತ್ತಿಲ್ಲ.
 
ಕಾಯ್ದೆಯಲ್ಲಿರುವ  ‘ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕ’ ಎಂಬ ವ್ಯಾಖ್ಯಾನಕ್ಕೆ ತಿದ್ದುಪಡಿಯಾಗಬೇಕು ಎಂಬ ನೆಪ ಹೇಳುತ್ತಿದೆ. ಜನ ಖಂಡಿತವಾಗಿಯೂ ಈ ಸರ್ಕಾರದಿಂದ ಇಂತಹ ಧೋರಣೆ ನಿರೀಕ್ಷೆ ಮಾಡಿರಲಿಲ್ಲ.
 
ಈ ಸರ್ಕಾರ ಉದ್ದೇಶಪೂರ್ವಕವಾಗಿಯೇ ಲೋಕಪಾಲರ ನೇಮಕವನ್ನು ಮುಂದೂಡುತ್ತಿದೆ ಎಂದು ದೂರಿ ‘ಕಾಮನ್ ಕಾಸ್’ ಎಂಬ ಸ್ವಯಂಸೇವಾ ಸಂಸ್ಥೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್ ಸಹ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
 
‘ಕಾಯ್ದೆ ತಿದ್ದುಪಡಿಗೆ ಕಾಯಬೇಕಾಗಿಲ್ಲ. ವಿರೋಧ ಪಕ್ಷದ ನಾಯಕನ ಹಾಜರಿ ಇಲ್ಲದೆಯೂ ಈಗಿರುವ ನಿಯಮಗಳಲ್ಲಿಯೇ ನ್ಯಾಯಪಂಡಿತರೊಬ್ಬರನ್ನು ಸದಸ್ಯರಾಗಿ ನೇಮಕ ಮಾಡಿಕೊಂಡು ಲೋಕಪಾಲ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅವಕಾಶವಿದೆ’  ಎಂದು ಅದು ಸ್ಪಷ್ಟವಾಗಿ ಹೇಳಿದೆ.
 
ನೇಮಕಾತಿ ಮಾಡಲೇಬೇಕು ಎಂಬ ಮನಸ್ಸಿದ್ದರೆ ಮುಂದುವರಿಯಲು ನ್ಯಾಯಾಂಗದ ಇಷ್ಟು ಸಮ್ಮತಿಯೇ ಸಾಕು. ಆದರೆ, ತಿದ್ದುಪಡಿ ಆಗದೆ ನೇಮಕಾತಿ ಸಾಧ್ಯವೇ ಇಲ್ಲ ಎಂದು ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ  ಜನರಲ್ ಪಟ್ಟು ಹಿಡಿದಿದ್ದಾರೆ. ಮುಖ್ಯ ಜಾಗೃತ ಆಯುಕ್ತ, ಸಿಬಿಐ ನಿರ್ದೇಶಕ, ಮುಖ್ಯ ಮಾಹಿತಿ ಆಯುಕ್ತ ಹುದ್ದೆಗಳಿಗೆ ಆಯ್ಕೆ ಮಾಡುವಾಗಲೂ  ‘ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕ’ ಇರಲಿಲ್ಲ.
 
ದೊಡ್ಡ ಪಕ್ಷ ಎಂಬ ಕಾರಣಕ್ಕಾಗಿ ಸದನದ ಕಾಂಗ್ರೆಸ್ ಗುಂಪಿನ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಭೆಗೆ ಆಹ್ವಾನಿಸಿ, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಅದೇ ನೀತಿಯನ್ನು ಮುಂದುವರಿಸಲು ಈಗ ಏಕೆ ಸಾಧ್ಯವಿಲ್ಲ? ಪೂರ್ವನಿದರ್ಶನವೇ ಇದೆಯಲ್ಲ. ಆದ್ದರಿಂದ ಇಂತಹ ವಿಷಯಗಳಲ್ಲಿ ಸರ್ಕಾರ ಅನುಮಾನಕ್ಕೆ ಎಡೆಮಾಡುವಂತೆ ನಡೆದುಕೊಳ್ಳಬಾರದು. ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು.

ಲೋಕಪಾಲರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರ ಪ್ರತಿನಿಧಿ, ಲೋಕಸಭೆಯ ಸ್ಪೀಕರ್, ಲೋಕಸಭೆಯ ಪ್ರತಿಪಕ್ಷ ನಾಯಕ ಮತ್ತು ನ್ಯಾಯಪಂಡಿತರೊಬ್ಬರು ಇರಬೇಕು ಎನ್ನುವ ನಿಯಮ ಕಾಯ್ದೆಯಲ್ಲಿಯೇ ಇದೆ. ಆದರೆ ಲೋಕಸಭೆಯಲ್ಲಿ ಈಗ ಅಧಿಕೃತವಾಗಿ ಮಾನ್ಯತೆ ಪಡೆದ ವಿರೋಧ ಪಕ್ಷವೇ ಇಲ್ಲ.

ಕನಿಷ್ಠ 55 ಸದಸ್ಯರಿದ್ದರೆ ಮಾತ್ರ ವಿರೋಧ ಪಕ್ಷದ ಮಾನ್ಯತೆ ಸಿಗುತ್ತದೆ. ಕಾಂಗ್ರೆಸ್‌ಗೆ ಅದಕ್ಕಿಂತ 10 ಸ್ಥಾನಗಳು ಕಡಿಮೆ ಇವೆ. ಹೀಗಾಗಿ ಅದು ಸದನದಲ್ಲಿ ಅತಿ ದೊಡ್ಡ ಪ್ರತಿಪಕ್ಷ ಮಾತ್ರ. ಇಂತಹ ಸ್ಥಿತಿ ಉದ್ಭವಿಸಿದಾಗ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘ಸದನದ ಅತಿ ದೊಡ್ಡ ವಿರೋಧ ಪಕ್ಷದ ಮುಖ್ಯಸ್ಥನನ್ನು’ ಲೋಕಪಾಲ ಆಯ್ಕೆ ಸಮಿತಿ ಸದಸ್ಯನಾಗಿ ಮಾಡುವ ತಿದ್ದುಪಡಿ ಮಸೂದೆ ಸಂಸತ್ತಿನ ಮುಂದೆ ಮಂಡಿಸಲಾಗಿದೆ.

ಅದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎನ್ನುವುದು ಲೋಕಪಾಲರ ನೇಮಕದ ದಾರಿಯಲ್ಲಿ ಅಡ್ಡಿ ಆಗಬಾರದು. ಈ ವಿಷಯದಲ್ಲಿ ನ್ಯಾಯಾಂಗದ ಪರೋಕ್ಷ ಸಮ್ಮತಿಯ ಬಲ ಕೂಡ ಈಗ ಅದರ ಬೆನ್ನಿಗಿದೆ.  ಆದ್ದರಿಂದ ತನ್ನ ಮೇಲೆ ಜನ ಇಟ್ಟುಕೊಂಡಿರುವ ವಿಶ್ವಾಸಕ್ಕೆ ಭಂಗ ಬಾರದಂತೆ ಸರ್ಕಾರ ನಡೆದುಕೊಳ್ಳಬೇಕು. ನೆಪ ಹೇಳುವುದು ಸಾಕು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.