ADVERTISEMENT

ಲೋಕಾಯುಕ್ತರಿಗೆ ಚೂರಿ ಇರಿತ ಭದ್ರತಾ ಲೋಪ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಲೋಕಾಯುಕ್ತರಿಗೆ ಚೂರಿ ಇರಿತ ಭದ್ರತಾ ಲೋಪ ಅಕ್ಷಮ್ಯ
ಲೋಕಾಯುಕ್ತರಿಗೆ ಚೂರಿ ಇರಿತ ಭದ್ರತಾ ಲೋಪ ಅಕ್ಷಮ್ಯ   

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಕೊಲೆಗೆ ದುಷ್ಕರ್ಮಿಯೊಬ್ಬ ಬುಧವಾರ ಪ್ರಯತ್ನಿಸಿದ್ದು ಅತ್ಯಂತ ಆಘಾತಕಾರಿ ಸಂಗತಿ. ಭದ್ರತಾ ವೈಫಲ್ಯದಿಂದಾಗಿಯೇ ಈ ಕೃತ್ಯ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಶೆಟ್ಟಿ ಅವರನ್ನು ಇರಿಯಲು ಬಳಸಿದ ಚಾಕುವನ್ನು ಆರೋಪಿ ಎಲ್ಲರ ಕಣ್ಣು ತಪ್ಪಿಸಿ ಹೇಗೆ ಕಚೇರಿಯೊಳಗೆ ಕೊಂಡೊಯ್ದ?  ಈ ಕೃತ್ಯ ಎಸಗಿದ್ದರ ಹಿಂದಿನ ಉದ್ದೇಶವಾದರೂ ಏನು ಎಂಬ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು.

ಲೋಕಾಯುಕ್ತ ಕಚೇರಿ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಲೋಹಶೋಧಕ ಕೆಟ್ಟುಹೋಗಿ ನಾಲ್ಕು ವರ್ಷವಾಗಿದೆ. ಅದನ್ನು ಸರಿಪಡಿಸುವಂತೆ 2015ರ ಮೇ 19ರಂದು ಪೊಲೀಸ್‌ ಕಮಿಷನರ್‌ಗೆ ಲೋಕಾಯುಕ್ತ ರಿಜಿಸ್ಟ್ರಾರ್‌ ಪತ್ರ ಬರೆದಿದ್ದರು. ಇದಾದ ಬಳಿಕ ಮತ್ತೆರಡು ಪತ್ರ ರವಾನಿಸಿದ್ದರು. ಪತ್ರದ ಹಿಂದೆ ಪತ್ರ ಬರೆದರೂ ಪೊಲೀಸರು ನಿರ್ಲಕ್ಷ್ಯ ತಾಳಿದ್ದು ಸರಿಯಲ್ಲ.

ಸುಮಾರು 500 ಸಿಬ್ಬಂದಿ, ಮಹತ್ವದ ದಾಖಲೆಗಳಿರುವ ಲೋಕಾಯುಕ್ತ ಕಚೇರಿ ಪ್ರವೇಶ ದ್ವಾರಕ್ಕೆ 2016ರ ಅಕ್ಟೋಬರ್‌ 19ರಂದು ಬೆಂಕಿ ಬಿದ್ದ ಮೇಲಾದರೂ ಎಚ್ಚೆತ್ತುಕೊಳ್ಳಬೇಕಿತ್ತು. ಸೂಕ್ತ ಭದ್ರತೆ ಕೊಡಬೇಕಿತ್ತು. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಹಾಗೂ ಹೈಕೋರ್ಟ್‌ಗೆ ಭದ್ರತಾ ವ್ಯವಸ್ಥೆ ಒದಗಿಸಲು ವಿಧಾನಸೌಧದ ಅತೀ ಗಣ್ಯರ ವಿಭಾಗದ ಪೊಲೀಸರು ಗೃಹ ಇಲಾಖೆಗೆ ₹ 10 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಿದ್ದರು.

ADVERTISEMENT

ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸದೆ ಲೋಪ ಎಸಗಿದೆ. ಬುಧವಾರದ ಬೆಳವಣಿಗೆ ಬಳಿಕ ಲೋಕಾಯುಕ್ತ ಹಾಗೂ ಪೊಲೀಸರು ಪರಸ್ಪರರನ್ನು ದೂರುತ್ತಿದ್ದಾರೆ. ಕರ್ನಾಟಕ ಲೋಕಾಯುಕ್ತ, ಸ್ವಾಯತ್ತ ಸಂಸ್ಥೆ. ಅದಕ್ಕೇ ಪ್ರತ್ಯೇಕ ಪೊಲೀಸ್‌ ವಿಭಾಗವಿದೆ. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಐಜಿಪಿ, ನಾಲ್ವರು ಎಸ್‌ಪಿಗಳು ಹಾಗೂ ಅನೇಕ ಇನ್‌ಸ್ಪೆಕ್ಟರ್‌ಗಳಿದ್ದಾರೆ. ಇಷ್ಟೆಲ್ಲಾ ಸಿಬ್ಬಂದಿ ಇದ್ದಾಗ್ಯೂ ಈ ಕೃತ್ಯ ನಡೆದಿದ್ದು ಹೇಗೆ, ಆರೋಪಿಯು ಲೋಕಾಯುಕ್ತರ ಕಚೇರಿಯೊಳಗೆ ಪ್ರವೇಶಿಸಿದಾಗ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗಳು ಎದ್ದಿವೆ.

ಲೋಕಾಯುಕ್ತರ ಮೇಲೆ ನಡೆದ ದಾಳಿಯಿಂದಾಗಿ ತಪ್ಪು ಸಂದೇಶ ರವಾನೆಯಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ನಡೆದಿರುವ ಈ ಕೃತ್ಯದಿಂದ  ರಾಜಕೀಯ ಲಾಭ ಮಾಡಿಕೊಳ್ಳಲು ವಿರೋಧ ಪಕ್ಷಗಳು ‍ಪ್ರಯತ್ನಿಸುತ್ತಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಈ ಕೃತ್ಯವನ್ನು ಬಳಸಿಕೊಳ್ಳುತ್ತಿವೆ.

ರಾಜ್ಯದಲ್ಲಿ ಕಾನೂನು– ಸುವ್ಯವಸ್ಥೆ ಕುಸಿದಿದೆ ಎಂದು ಬೊಬ್ಬೆ ಹಾಕುತ್ತಿವೆ. ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಪ್ರಕರಣಗಳನ್ನು ತಡೆಯಲು ಸರ್ಕಾರ ವಿಫಲವಾಗಿದೆ. ಗೃಹ ಇಲಾಖೆಯು ಕೈಕಟ್ಟಿ ಕುಳಿತುಕೊಳ್ಳದೆ ಕಾನೂನು– ವ್ಯವಸ್ಥೆ ಪಾಲನೆ ಕಡೆ ಇನ್ನಾದರೂ ಗಮನಹರಿಸಬೇಕಿದೆ.

ಕರ್ನಾಟಕ ಲೋಕಾಯುಕ್ತವು ದೇಶಕ್ಕೆ ಮಾದರಿ ಸಂಸ್ಥೆಯಾಗಿತ್ತು. ಕೆಲವು ರಾಜ್ಯಗಳು ಈ ಸಂಸ್ಥೆ ಕುರಿತು ಅಧ್ಯಯನ ನಡೆಸಿದ್ದವು. ಇದೇ ಮಾದರಿಯ ಸಂಸ್ಥೆ ಹೊಂದುವುದು ಆ ರಾಜ್ಯಗಳ ಉದ್ದೇಶವಾಗಿತ್ತು. ಆದರೆ, ಈ ಸಂಸ್ಥೆಯನ್ನು ಈಚಿನ ವರ್ಷಗಳಲ್ಲಿ ದುರ್ಬಲಗೊಳಿಸಲಾಗಿದ್ದು, ಇದರಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೆರಡರ ಪಾಲೂ ಇದೆ.

ಲೋಕಾಯುಕ್ತ ಸಂಸ್ಥೆಯನ್ನು ಪುನಃ ಬಲಪಡಿಸುವ ಅಗತ್ಯವಿದೆ. ಅನೇಕ ಮಹತ್ವದ ಪ್ರಕರಣಗಳ ಕುರಿತು ಸಂಸ್ಥೆ ವಿಚಾರಣೆ ನಡೆಸುತ್ತಿರುವುದರಿಂದ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಬೇಕಾದ ಹೊಣೆ ಸರ್ಕಾರದ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.