ADVERTISEMENT

ವಿದ್ಯುತ್ ಅಪಘಾತ ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಮಕ್ಕಳು ವಿದ್ಯುತ್ ಸ್ಪರ್ಶಕ್ಕೆ ಬಲಿ­ಯಾಗಿದ್ದಾರೆ. ಕರ್ನಾಟಕದಲ್ಲಿ ವಿದ್ಯುತ್ ಸಂಬಂಧಿ ಆಕಸ್ಮಿಕ­ಗಳಿಗೆ ಪ್ರತಿವರ್ಷ ಬಲಿಯಾಗುವವರ ಸಂಖ್ಯೆ ಮುನ್ನೂರಕ್ಕೂ ಹೆಚ್ಚು. ಸರಾಸರಿ ಪ್ರತಿದಿನವೂ ಒಂದು ಅಮೂಲ್ಯ ಜೀವ ವಿದ್ಯುದಾ­ಘಾತಕ್ಕೆ ಸಿಲುಕುವ ಸ್ಥಿತಿ ನಮ್ಮದು.

ಕರ್ನಾಟಕದ ವಿದ್ಯುತ್ ವಿತ­ರಣಾ ಕಂಪೆನಿಗಳು ತಮ್ಮ ಲೈನುಗಳನ್ನು ನಿರ್ವಹಿಸುವ ಬಗೆಯನ್ನು ಕಂಡ­ವರಿಗೆ ಇದು ಆಶ್ಚರ್ಯ ಹುಟ್ಟಿಸುವಂಥದ್ದೇನೂ ಅಲ್ಲ. ನಿಬಿಡ ಜನವಸತಿ ಇರುವ, ಬಹು ಅಂತಸ್ತಿನ ಕಟ್ಟಡಗಳಿರುವ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಮತ್ತು ಅದರ ಜೊತೆ ಜೊತೆಯಲ್ಲೇ ಇರುವ ದೂರವಾಣಿ, ಕೇಬಲ್ ಟಿ.ವಿ.ಯ ಕೇಬಲ್‌ಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿವೆಯೇನೋ ಎಂಬಂತೆ ಕಾಣಿಸುತ್ತವೆ. ಇವು ಯಾರದ್ದಾದರೂ ಪ್ರಾಣಕ್ಕೆ ಎರವಾದಾಗ ಕೆಲ­ದಿನಗಳ ಕಾಲ ಈ ಪರಿಸ್ಥಿತಿಯ ಸುಧಾರಣೆಯ ಕುರಿತಂತೆ ವಿದ್ಯುತ್ ಕಂಪೆನಿ­ಗಳು ಮಾತನಾಡುತ್ತವೆ. ಮತ್ತೆ ಈ ವಿಷಯ ನೆನಪಾಗುವುದಕ್ಕೆ ಇನ್ನೊಂದು ಸಾವು ಸಂಭವಿಸಬೇಕು.

ಹೀಗೆ ಬಲಿಯಾಗುವವರು ಪ್ರತಿಷ್ಠಿತರಾಗಿದ್ದರೆ ಅವರ ಮನೆಗೆ ಮುಖ್ಯಮಂತ್ರಿಯೂ ಸಂದರ್ಶಿಸುವುದುಂಟು. ವಿಪ್ರೊ ಉದ್ಯೋಗಿ­ಯೊ­ಬ್ಬರ ಮಗು ವಿದ್ಯುತ್ ಸ್ಪರ್ಶಕ್ಕೆ ಬಲಿಯಾದಾಗ ಸಾಂತ್ವನ ಹೇಳುವುದಕ್ಕೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೇ ಹೋಗಿದ್ದರು. ಇಂಧನ ಖಾತೆ­ಯನ್ನೂ ನಿರ್ವಹಿಸುತ್ತಿದ್ದ ಅವರು ವಿತರಣಾ ವ್ಯವಸ್ಥೆಯಲ್ಲಿ ಸುರಕ್ಷತೆ­ಯನ್ನು ಖಾತರಿಪಡಿಸಿಕೊಳ್ಳುವ ಭರವಸೆ ನೀಡಿದ್ದರು. ಈ ಘಟನೆ ಸಂಭವಿಸಿದ ನಂತರ ಕರ್ನಾಟಕದಲ್ಲಿ ಐದು ಮಂದಿ ಮುಖ್ಯಮಂತ್ರಿಗಳು ಆಗಿ ಹೋಗಿ ಈಗ ಆರನೆಯವರು ಬಂದಿದ್ದಾರೆ. ಇಲ್ಲಿಯ ತನಕವೂ ವಿದ್ಯುತ್ ತಂತಿಗಳಿಗೆ ಬಲಿಯಾಗುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.

ಸಾರ್ವಜನಿಕ  ಸುರಕ್ಷೆಗೆ ಸಂಬಂಧಿಸಿದಂತೆ  ಆಡಳಿತ ನಡೆಸುವವರಿಂದ ಆರಂಭಿಸಿ ಆಳಿಸಿಕೊಳ್ಳುವವರ ತನಕ ಎಲ್ಲರೂ ನಿರ್ಲಕ್ಷ್ಯದ ಹಾದಿಯನ್ನು ತುಳಿ­ಯುತ್ತಿ­ರುವವರೇ. ಹೇಗಾದರೂ ಮಾಡಿ ವಿದ್ಯುತ್ ಪೂರೈಕೆ ಸರಿಯಾಗಿ­ರು­ವಂತೆ ನೋಡಿಕೊಂಡರೆ ಸಾಕು ಎಂಬ ನಿಲುವು ವಿದ್ಯುತ್ ಪೂರೈಕೆ ಕಂಪೆನಿ­ಗಳದ್ದು. ಬಳಕೆದಾರರೂ ಅಷ್ಟೇ, ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕರೆ ಸಾಕು ಎಂಬ ನಿಲುವು ತಳೆದಿರುತ್ತಾರೆಯೇ ಹೊರತು ಅದು ಹೇಗೆ ತಮ್ಮ ಮನೆಯ­ವ­ರೆಗೂ ತಲುಪುತ್ತದೆ ಎಂಬುದರ ಕುರಿತು ಕಾಳಜಿ ವಹಿಸುವುದಿಲ್ಲ. ಮನೆ ನಿರ್ಮಾ­ಣಕ್ಕೆ ಲೈಸೆನ್ಸ್ ನೀಡುವವರು ಸುರಕ್ಷೆಯನ್ನು ಲಂಚಕ್ಕೆ ಮಾರಿ­ಕೊಂಡಿ­ರುತ್ತಾರೆ.

ಲಂಚ ನೀಡುವವರಿಗೆ ತಾವು ಖರೀದಿಸುತ್ತಿರುವುದು ಅಪಾಯ­ವನ್ನು ಎಂಬುದು ನೆನಪಿರುವುದಿಲ್ಲ. ವಿದ್ಯುತ್ ತಂತಿಗಳು ಹಾದು ಹೋಗುವ ಮಾರ್ಗ­ದಲ್ಲಿರುವ ಮರವೊಂದರ ರೆಂಬೆಗಳನ್ನು ಕತ್ತರಿಸುವುದಕ್ಕೆ ಇರುವ ಕಾನೂ­ನಿನ ತೊಂದರೆಗಳು ನೂರೆಂಟು. ಪರಿಣಾಮ ಬಾಲ್ಕನಿಯಲ್ಲಿ ನಿಂತರೆ, ಮರ ಹತ್ತಿದರೆ ವಿದ್ಯುತ್ ತಂತಿ ಕೈಗೆ ಸಿಗುವ ಸ್ಥಿತಿ ಉದ್ಭವಿಸುತ್ತದೆ. ಇದನ್ನು ಬದಲಾಯಿಸುವುದಕ್ಕೆ ಇರುವ ಏಕೈಕ ಮಾರ್ಗ ವಿದ್ಯುತ್ ವಿತರಣಾ ಕಂಪೆನಿಗಳನ್ನು ಬಳಕೆದಾರರೇ ಮುಂದಾಗಿ ಎಚ್ಚರಿಸುವುದು ಮಾತ್ರ.

ಬಹು­ಮಹಡಿಯ ವಸತಿ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳ ಬದಲಿಗೆ ಭೂಗತ ಕೇಬಲ್‌ಗಳನ್ನು ಬಳಸಬೇಕು. ಮಕ್ಕಳನ್ನು ಮರ ಹತ್ತದಂತೆ ತಡೆ­ಯುವು­ದಕ್ಕಿಂತ ಸುಲಭದ ಕೆಲಸ ವಿದ್ಯುತ್ ತಂತಿಗಳು ಮರಗಳನ್ನು ಸ್ಪರ್ಶಿಸದಂತೆ ನೋಡಿ­ಕೊಳ್ಳುವುದು. ಈ ಬಗೆಯ ಸುಧಾರಣೆಗಳಿಂದ ವಿದ್ಯುತ್ ಸೋರಿ­ಕೆಯೂ ಕಡಿಮೆಯಾಗುತ್ತದೆ. ಅಮಾಯಕರ ಪ್ರಾಣಗಳೂ ಉಳಿಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.