ADVERTISEMENT

ಸಂಸತ್‌ನಲ್ಲಿ ಚರ್ಚೆ ಗುಣಮಟ್ಟ ಕಾಪಾಡಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 10:24 IST
Last Updated 26 ಜುಲೈ 2017, 10:24 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ನೂತನ ರಾಷ್ಟ್ರಪತಿಗೆ ಅಧಿಕಾರ ಹಸ್ತಾಂತರದ ಮುನ್ನಾದಿನ ಮಾಡಿದ ವಿದಾಯ ಭಾಷಣದಲ್ಲಿ ಪ್ರಣವ್ ಮುಖರ್ಜಿ ಅವರು ಹಲವು ಪ್ರಸ್ತುತ ವಿಚಾರಗಳಿಗೆ ದನಿ ನೀಡಿದ್ದಾರೆ. ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ, ಸಹಿಷ್ಣುತೆಯ ಅಗತ್ಯ ಹಾಗೂ ಸಂಸದರ ಕರ್ತವ್ಯಗಳ ಬಗ್ಗೆ ತಾವು ರಾಷ್ಟ್ರಪತಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ಅನೇಕ ಬಾರಿ ರಾಷ್ಟ್ರಕ್ಕೆ ನೆನಪಿಸಿದ್ದಾರೆ ಪ್ರಣವ್.

ಈಗ ವಿದಾಯ ಭಾಷಣದಲ್ಲೂ ಈ ವಿಚಾರಗಳು ಅನುರಣಿಸಿವೆ. ‘ಸಹಿಷ್ಣುತೆ ಎಂಬುದು ದೇಶವನ್ನು ವಿಶಿಷ್ಟವಾಗಿಸುತ್ತದೆ. ಜನರಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ಅವಕಾಶಗಳಿರಬೇಕು. ಇಂತಹ ಬೇರೆ ಬೇರೆ ಅಭಿಪ್ರಾಯಗಳನ್ನು ಯಾರೂ ನಿರಾಕರಿಸಲಾಗದು’ ಎಂಬಂಥ ಪ್ರಣವ್ ಅವರ ಮಾತುಗಳು ಸಕಾಲಿಕ.

ದಿನೇ ದಿನೇ ರಾಷ್ಟ್ರದಲ್ಲಿ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರಣವ್ ಅವರು ವ್ಯಕ್ತಪಡಿಸಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಣವ್ ಮುಖರ್ಜಿ ಅವರು ಈ ಹಿಂದೆ ಕೇಂದ್ರ ಸಂಪುಟದಲ್ಲಿ ಹಿರಿಯ ಸಚಿವರಾಗಿ ಕಾರ್ಯನಿರ್ವಹಿಸಿದ ಮುತ್ಸದ್ದಿ. ಅಪಾರ ಅನುಭವವಿರುವ ಸಂಸದೀಯ ಪಟು. ಅಳೆದೂ ತೂಗಿ ಮಾತುಗಳನ್ನು ಆಡುವವರು ಅವರು. ಹೀಗಾಗಿಯೇ ಕಾನೂನು ನಿರ್ಮಾತೃಗಳ ಹೊಣೆಗಾರಿಕೆಯನ್ನು ಕುರಿತು ಅವರು ಹೇಳಿರುವ ಮಾತುಗಳು ಮುಖ್ಯವಾಗುತ್ತವೆ.

ADVERTISEMENT

ಸಂಸತ್‌ನ ಉಭಯ ಸದನಗಳಲ್ಲಿನ 788 ಸಂಸದರ ಧ್ವನಿ ಸದನದಲ್ಲಿ ಕೇಳಿಸಬೇಕಾದುದರ ಅಗತ್ಯವನ್ನು ಅವರು ಪ್ರತಿಪಾದಿಸಿರುವುದು ಸರಿಯಾಗಿದೆ. ತಾವು ರೂಪಿಸುವ ಕಾನೂನುಗಳ ಬಗ್ಗೆ ಚರ್ಚಿಸಲು ಸಂಸದರು ಹೆಚ್ಚು ಸಮಯ ವಿನಿಯೋಗಿಸದಿರುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಚರ್ಚೆಗಳೇ ಇಲ್ಲದೆ ಕಾನೂನು ರೂಪಿಸುವುದು ತಾವುಗಳು ಪ್ರತಿನಿಧಿಸುವ ಜನರಿಗೆ ಸಂಸದರು ಮಾಡುವಂತಹ ಮೋಸವಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಲಾಪಗಳಿಗೆ ಅಡ್ಡಿ ಪಡಿಸುವುದು ಸರಿಯಲ್ಲ.

ಚರ್ಚೆಗಳಿಗೆ ಹೆಚ್ಚು ಆದ್ಯತೆ ನೀಡಬೇಕಾದುದು ಅವಶ್ಯ ಎಂಬ ಮಾತುಗಳು ಸಕಾಲಿಕ. ಸದನ– ಚರ್ಚೆ, ಸಂವಾದಗಳ ತಾಣವಾಗಬೇಕೇ ಹೊರತು ಕದನ ಕಣವಾಗಬಾರದು ಎಂಬಂತಹ ಕಾಳಜಿಯನ್ನು ಸಂಸದರು ಅರ್ಥ ಮಾಡಿಕೊಳ್ಳಬೇಕು. ಆರು ಸಂಸದರು ಅಮಾನತುಗೊಂಡಿರುವ ಪ್ರಸಕ್ತ ಸಂದರ್ಭದಲ್ಲಿ ಈ ಮಾತುಗಳು ಇನ್ನಷ್ಟು ಮುಖ್ಯವಾಗುತ್ತವೆ.

ಸಂಸತ್ ಕಲಾಪಗಳಿಗೆ ಪ್ರತಿಪಕ್ಷಗಳು ಅಡ್ಡಿ ಪಡಿಸುವ ಪ್ರವೃತ್ತಿ ವಿರುದ್ಧ ಪ್ರಣವ್ ಅವರು ಈ ಹಿಂದೆಯೂ ಅನೇಕ ಬಾರಿ ಮಾತನಾಡಿದ್ದಾರೆ. ಕಳೆದ ವರ್ಷ ಸಂಸತ್‌ನ ಚಳಿಗಾಲದ ಅಧಿವೇಶನ ಕಲಾಪಗಳಿಗೆ ಅನೇಕ ಬಾರಿ ಅಡ್ಡಿಯಾಗಿ ಕಲಾಪ ಮುಂದೂಡಿಕೆಯಾಗುತ್ತಲೇ ಇದ್ದಾಗ ಪ್ರಣವ್ ಮುಖರ್ಜಿ ಅವರು ‘ದೇವರೇ... ನಿಮ್ಮ ಕೆಲಸ ನೀವು ಮಾಡಿ’ ಎಂದು ಸಮಾರಂಭವೊಂದರಲ್ಲಿ ಹರಿಹಾಯ್ದಿದ್ದರು.

ತೀರಾ ಅಗತ್ಯವಿದ್ದಾಗ ಮಾತ್ರ ಸುಗ್ರೀವಾಜ್ಞೆ ಮಾರ್ಗ ಅನುಸರಿಸಬೇಕು ಎಂಬ ಬಗ್ಗೆ ಪ್ರಣವ್ ಅವರು ಇದೇ ಸಂದರ್ಭದಲ್ಲಿ ನೀಡಿದ ಸಲಹೆ ಹೆಚ್ಚಿನ ಗಮನ ಸೆಳೆದುಕೊಂಡಿದೆ. ಅರುಣಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಯಾವುದೇ ಪಶ್ನೆ ಕೇಳದೆ ಪ್ರಣವ್ ಅವರು ಅಂಕಿತ ಹಾಕಿದ್ದು ಅವರ ಅಧಿಕಾರಾವಧಿಯ ಕಪ್ಪು ಚುಕ್ಕೆ. ನ್ಯಾಯಾಲಯದ ಮಧ್ಯಪ್ರವೇಶದಿಂದ ಈ ತಪ್ಪು ಕಡೆಗೆ ಸರಿಯಾಯಿತು.

ಈ ಹಿಂದೆ ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕುರಿತಾದ ಸಂಪುಟ ನಿರ್ಣಯಗಳನ್ನು ಆಗ ರಾಷ್ಟ್ರಪತಿಯಾಗಿದ್ದ ಕೆ.ಆರ್. ನಾರಾಯಣನ್ ಅವರು ವಾಪಸ್ ಕಳುಹಿಸಿದ್ದ ಉದಾಹರಣೆ ನಮ್ಮ ಮುಂದಿದೆ. ರಾಷ್ಟ್ರಪತಿ ಹುದ್ದೆ ಬಹಳ ಸಂದರ್ಭಗಳಲ್ಲಿ ಆಲಂಕಾರಿಕವಾದುದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇಂತಹ ಸನ್ನಿವೇಶಗಳಲ್ಲೇ ರಾಷ್ಟ್ರಪತಿ ಹುದ್ದೆ ಅಗ್ನಿಪರೀಕ್ಷೆಗೆ ಒಳಪಡುತ್ತದೆ ಎಂಬುದನ್ನು ಮರೆಯುವಂತಿಲ್ಲ. ರಾಷ್ಟ್ರಪತಿಯಾಗಿ ಪ್ರಣವ್ ಮುಖರ್ಜಿ ಅವರು ಸುಮಾರು 35 ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದರು. ಬಹುಶಃ ಅತಿಹೆಚ್ಚು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದವರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.