ADVERTISEMENT

ಸುಧಾರಣೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ರೈಲ್ವೆ ಬಜೆಟ್ ಮಂಡನೆ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೊದಲ ಅಗ್ನಿ ಪರೀಕ್ಷೆಯನ್ನು ಎದುರಿಸಿದೆ.  ಬಜೆಟ್ ಮಂಡ­ನೆಗೆ ಮುಂಚೆಯೇ ರೈಲ್ವೆ ಪ್ರಯಾಣ ದರದಲ್ಲಿಶೇ 14.2ರಷ್ಟು ಏರಿಕೆಯ ಕಹಿ ಉಣಿ­ಸಿದ್ದ ರೈಲ್ವೆ ಸಚಿವ ಸದಾನಂದ ಗೌಡ ಅವರು ತಮ್ಮ ಚೊಚ್ಚಲು ರೈಲ್ವೆ ಬಜೆಟ್‌­ನಲ್ಲಿ ರೈಲ್ವೆ ಸುಧಾರಣೆಯ ಭರವಸೆಗಳನ್ನು ನೀಡಿದ್ದಾರೆ.

ಮೂಲ ಸೌಕರ್ಯ ವಲ­ಯವಾಗಿ ಮಾತ್ರವಲ್ಲ ಸೇವಾ ವಲಯವಾಗಿಯೂ ರೈಲ್ವೆ­ಯನ್ನು ಪರಿ­ಗಣಿ­ಸಿ­ರುವಂತಹ  ದೃಷ್ಟಿಕೋನ  ಎದ್ದು ಕಾಣಿಸು­ವಂತ­ಹದ್ದು.  ಜನಪ್ರಿಯ ಬಜೆಟ್‌­ಗಳ ಹಾವಳಿಯಿಂದ  ಸೊರಗಿ ಹೋಗಿರುವ  ರೈಲ್ವೆ­ಯನ್ನು ಬಲಗೊಳಿಸುವ ಪ್ರಯತ್ನ  ಹೊಸತನದ್ದಾಗಿದೆ.  ಟಿಕೆಟ್  ಖರೀದಿ­ಯಿಂದ ಹಿಡಿದು ರೈಲು ಪ್ರಯಾ­­ಣದ ಎಲ್ಲಾ ಹಂತಗಳಲ್ಲೂ ಆಧು­ನೀ­ಕರಣದ ಸ್ಪರ್ಶಕ್ಕೆ ಮುಂದಾಗಿರು­ವುದು ಸ್ವಾಗತಾರ್ಹ.

ಹಿಂದಿನ ಸರ್ಕಾರ­ಗಳ ಬಜೆಟ್‌ಗಳು ಹೊಸ ಯೋಜನೆ­ಗಳನ್ನು ಪ್ರಕಟಿಸುವುದಕ್ಕೆ ಸೀಮಿತ­ವಾಗಿ­ದ್ದವು. ಆದರೆ ಈಗ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ   ಆದ್ಯತೆ ನೀಡಲಾಗು­ವುದು ಎಂಬಂಥ ಮಾತುಗಳನ್ನು ಹೇಳಿರುವ ಕೇಂದ್ರ ಸರ್ಕಾರ ಅದಕ್ಕೆ ಬದ್ಧವಾಗಬೇಕಾಗಿದೆ.  ವಿಸ್ತೃತವಾಗಿರುವ ಈ ಬಜೆಟ್‌ನಲ್ಲಿ ಜೈವಿಕ ಶೌಚಾಲಯಗಳಿಂದ ಹಿಡಿದು ಬುಲೆಟ್ ಟ್ರೈನ್‌ವರೆಗೆ ಪ್ರಸ್ತಾಪವಿದೆ. 

ರಾಷ್ಟ್ರದ ಪ್ರಮುಖ ನಗರಗಳನ್ನು ಸಂಪರ್ಕಿಸುವ  ಅತಿ ವೇಗದ ರೈಲುಗಳ ವಜ್ರ  ಚತುಷ್ಕೋನ ಜಾಲಕ್ಕೆ  ಆರಂಭದ ಮೊತ್ತವಾಗಿ ರೂ. 100 ಕೋಟಿ ತೆಗೆದಿರಿಸಲಾಗಿದೆ. ಇ–ಟಿಕೆಟಿಂಗ್ ವ್ಯವಸ್ಥೆ ಸುಧಾರಣೆ, ಸ್ವಚ್ಛತೆಗೆ ಆದ್ಯತೆ,  ಸಿದ್ಧ ಆಹಾರದ  ಲಭ್ಯತೆ, ಹಿರಿಯರಿಗೆ ಹಾಗೂ ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ,  ಆಯ್ದ ಪ್ರಮುಖ ರೈಲುಗಳಲ್ಲಿಯೇ  ರೈಲ್ವೆ ಕಚೇರಿ ಇತ್ಯಾದಿ ಹಲವು ಕ್ರಮಗಳನ್ನು ಪ್ರಕಟಿಸಿರುವುದು ಗ್ರಾಹಕ ಸ್ನೇಹಿಯಾಗಿದೆ.

ರೈಲ್ವೆಯನ್ನು ಆಧುನೀಕರಿಸುವ ಪ್ರಕ್ರಿಯೆಗೆ ದೊಡ್ಡ ಪ್ರಮಾಣದ ಸಂಪ­ನ್ಮೂಲ ಬೇಕು ಎಂಬುದು ಸರ್ವವಿದಿತ.  ಇದಕ್ಕಾಗಿ  ಸರ್ಕಾರ  ಹಾಗೂ ಖಾಸಗಿ ಪಾಲ್ಗೊಳ್ಳುವಿಕೆ   (ಪಿಪಿಪಿ) ಮಾದರಿ    ಮತ್ತು ವಿದೇಶಿ ನೇರ ಬಂಡ­ವಾಳದ  (ಎಫ್‌ಡಿಐ) ಮೂಲಕ ಸಂಪನ್ಮೂಲ ಕ್ರೋಡೀಕರಿಸುವ  ಪ್ರಸ್ತಾಪ ಮಾಡ­ಲಾ­ಗಿದೆ.  ಪಿಪಿಪಿ ಮಾದರಿ ಹಿಂದೆ ಹೆಚ್ಚು ಯಶಸ್ವಿಯಾಗಿಲ್ಲ.  ಇದು ಭವಿಷ್ಯ­ದಲ್ಲಿ ಯಶಸ್ವಿಯಾಗಬೇಕಾದಲ್ಲಿ  ಸರ್ಕಾರದ ನೀತಿಗಳು ಹೆಚ್ಚಿನ ಮಟ್ಟ­ದಲ್ಲಿ ಹೂಡಿಕೆ ಸ್ನೇಹಿ­ಯಾಗಿರಬೇಕಾಗುತ್ತವೆ.   ಇನ್ನು ಎಫ್‌ಡಿಐಗೆ ಕೇಂದ್ರ ಸಂಪುಟದ ಅನು­ಮತಿ ದೊರೆತು  ನೀತಿಯಾಗಿ  ರೂಪುಗೊಳ್ಳಲು ಸಾಕಷ್ಟು ಸಮಯ ಹಿಡಿ­ಸ­ಲಿದೆ.

ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ 2.3 ಕೋಟಿಯಷ್ಟು ಜನರು ತಮ್ಮ ದಿನ ನಿತ್ಯದ ಸಂಚಾರಕ್ಕೆ ರೈಲುಗಳನ್ನು ಅವ­ಲಂಬಿಸಿ­ದ್ದಾರೆ. ಹಾಗೆಯೇ ಪ್ರತಿದಿನ ಸಾವಿರಾರು ಟನ್ ಸರಕು ಸಾಗಣೆ­ಯಾಗುತ್ತದೆ. ಹೀಗೆ ಭಾರ­ತೀಯರ ದಿನನಿತ್ಯದ ಬದುಕಿನ ಜೀವರೇಖೆ­ಯಾಗಿ­ರುವ ರೈಲುಗಳ ಸಾಮಾ­ಜಿಕ ಆಯಾಮ ಮಹತ್ವದ್ದು. ಈಗ ಈ ಸಾಮಾಜಿಕ ಆಯಾಮದ  ಜೊತೆಗೇ ಲಾಭ­ವನ್ನೂ ಗಳಿಸುವಂತಹ  ವಾಣಿಜ್ಯವನ್ನು ಒಳ­ಗೊ­ಳ್ಳುವ ಸಮ­ತೋಲನದ ದೃಷ್ಟಿಯ ಅಗತ್ಯವನ್ನು ಪ್ರತಿಪಾದಿಸಲಾಗಿದೆ.

1950ರ ದಶಕದಲ್ಲಿ ಭಾರತದ ಶೇ 90ರಷ್ಟು ಸರಕು ಸಾಗಣೆಗೆ ರೈಲನ್ನು ಅವ­ಲಂಬಿಸ­­ಲಾಗುತ್ತಿತ್ತು. ಆದರೆ ಇಂದು  ಟ್ರಕ್‌ಗಳ ಜೊತೆಗಿನ ಸ್ಪರ್ಧೆ­ಯಲ್ಲಿ ಈ ಪ್ರಮಾಣ ಕೇವಲ ಶೇ 33ರಷ್ಟಿದೆ.  ಈಗ ಸರಕು ಸಾಗಣೆ  ಕ್ಷೇತ್ರಕ್ಕೆ ನೀಡ­ಲಿರುವ ಆದ್ಯ­ತೆಯೂ ಸುಧಾರಣೆಯತ್ತ ಇರಿಸಲಾಗುವ ಮತ್ತೊಂದು ಹೆಜ್ಜೆ. ಹೊಸ ರೈಲು­ಗಳು ಹಾಗೂ ಹೊಸ ರೈಲು ಮಾರ್ಗ ಸಮೀಕ್ಷೆ ವಿಚಾರದಲ್ಲಿ ಹಣಕಾಸು ಬಿಕ್ಕ­ಟ್ಟಿನ ನಡುವೆಯೂ ಕರ್ನಾಟಕದ ಸಾಕಷ್ಟು ನಿರೀಕ್ಷೆಗಳು ಈಡೇರಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.