ADVERTISEMENT

ಸೇನಾ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ಅಕ್ಷಮ್ಯ: ಬಿಗಿ ಕ್ರಮ ಬೇಕು

ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 19:30 IST
Last Updated 1 ಮಾರ್ಚ್ 2017, 19:30 IST
ಸೇನಾ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ಅಕ್ಷಮ್ಯ: ಬಿಗಿ ಕ್ರಮ ಬೇಕು
ಸೇನಾ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ಅಕ್ಷಮ್ಯ: ಬಿಗಿ ಕ್ರಮ ಬೇಕು   
ಪರೀಕ್ಷಾ ಅಕ್ರಮದ ಪಿಡುಗು ಎಲ್ಲ ಕಡೆ ಹರಡಿಕೊಂಡಿದೆ. ಸರ್ಕಾರಿ ಇಲಾಖೆಗಳ ಉನ್ನತ ಮಟ್ಟದ ಹುದ್ದೆಗಳ ನೇಮಕಾತಿ, ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆಗಳಲ್ಲಂತೂ ರಾಜಾರೋಷವಾಗಿ ನಡೆಯುತ್ತಿದೆ. ಈ ಅನಿಷ್ಟ ಪ್ರವೃತ್ತಿ ಸೇನಾ ಪಡೆಯ ಯೋಧರು, ಸಹಾಯಕರು, ಟ್ರೇಡ್ಸ್‌ಮನ್‌ಗಳಂತಹ ಕೆಳಹಂತದ ಸಾಮಾನ್ಯ ಹುದ್ದೆಗಳ  ನೇಮಕಾತಿಯನ್ನೂ ಬಿಟ್ಟಿಲ್ಲ. ಇದು ಅತ್ಯಂತ ಬೇಸರದ ಮತ್ತು ಆಘಾತಕಾರಿಯಾದ ಸಂಗತಿ.
 
ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯ ಹೊರಗೆ ಬರುತ್ತಿದ್ದಂತೆ  ಕಳೆದ ಭಾನುವಾರ ದೇಶದ ಆರು ಕಡೆ ಸೇನಾ ನೇಮಕಾತಿ ಪರೀಕ್ಷೆಯನ್ನೇ ರದ್ದುಪಡಿಸಬೇಕಾಯಿತು. ಇದು ಸೇನೆಗಷ್ಟೇ ಅಲ್ಲ; ಈ ಪರೀಕ್ಷೆಯನ್ನು ನಿರ್ವಹಿಸುವ ಹೊಣೆ ಹೊತ್ತವರಿಗೆಲ್ಲ ಒಂದು ಕಳಂಕ. ಪರೀಕ್ಷಾ ಅಕ್ರಮದ ಜಾಲವನ್ನು ಸಕಾಲಕ್ಕೆ ಪತ್ತೆ ಮಾಡಿದ ಮಹಾರಾಷ್ಟ್ರದ ಪೊಲೀಸರು 18 ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರಲ್ಲಿ ಅರೆಸೇನಾ ಪಡೆಯ ಒಬ್ಬ ಹಿರಿಯ ಅಧಿಕಾರಿ, ಸೇನಾಪಡೆಯ ಒಬ್ಬ ನಿವೃತ್ತ ಅಧಿಕಾರಿ ಮತ್ತು ಸೇನಾ ನೇಮಕಾತಿ ಪರೀಕ್ಷೆ ತರಬೇತಿ ಕೇಂದ್ರಗಳ ಕೆಲ ಮಾಲೀಕರು, ಮಧ್ಯವರ್ತಿಗಳು ಸೇರಿದ್ದಾರೆ.
 
ಇದರಲ್ಲಿ ಸೇನೆಯ ಕೆಲ ಹಾಲಿ ಅಧಿಕಾರಿಗಳ ಕೈವಾಡವೂ ಇರಬಹುದು ಎಂಬ ಸಂದೇಹ ಪೊಲೀಸರಿಗೆ ಇದೆ. ಇವನ್ನೆಲ್ಲ ನೋಡಿದರೆ, ಪ್ರಶ್ನೆಪತ್ರಿಕೆ ಬಹಿರಂಗಪಡಿಸುವ ಮತ್ತು ಪರೀಕ್ಷೆಯಲ್ಲಿ ಅಕ್ರಮ ನಡೆಸುವ ಜಾಲ ಬಹಳ ದೊಡ್ಡದಿದೆ ಮತ್ತು  ಪ್ರಭಾವಶಾಲಿಯಾಗಿದೆ ಎನ್ನುವುದು ಗೊತ್ತಾಗುತ್ತದೆ.  ಸೋರಿಕೆಯಾದ ಪ್ರಶ್ನೆಪತ್ರಿಕೆ ಹೊಂದಿದ್ದರು ಎಂಬ ಅನುಮಾನದ ಮೇಲೆ ಸುಮಾರು 350 ಅಭ್ಯರ್ಥಿಗಳನ್ನೂ ಪೊಲೀಸರು  ವಿಚಾರಣೆಗೆ ಒಳಪಡಿಸಿದ್ದಾರೆ.
ಅನೇಕರು ಪರೀಕ್ಷೆ ಬರೆಯುವ ಮೊದಲೇ ಪ್ರಶ್ನೆಪತ್ರಿಕೆ ತಮ್ಮ ಕೈಸೇರುವುದಕ್ಕಾಗಿ ಎರಡು ಲಕ್ಷದಿಂದ ಮೂರು ಲಕ್ಷ ರೂಪಾಯಿಯಷ್ಟು ಹಣ ಕೊಟ್ಟಿರುವುದು ತನಿಖೆಯಿಂದ ಗೊತ್ತಾಗಿದೆ.
 
ಇವರೆಲ್ಲ ಒಂದು ಸಾಮಾನ್ಯ ಪರೀಕ್ಷೆಯನ್ನು  ನ್ಯಾಯ ಮಾರ್ಗದಲ್ಲಿ ಬರೆದು ಪಾಸಾಗುವ ಯೋಗ್ಯತೆಯೇ ಇಲ್ಲದವರು. ದೇಶಪ್ರೇಮ, ನಿಷ್ಠೆ, ಪ್ರಾಮಾಣಿಕತೆ ಬಯಸುವ ರಕ್ಷಣಾ ಪಡೆಗಳನ್ನು ಸೇರುವ ಅರ್ಹತೆಯೇ ಇವರಿಗಿಲ್ಲ. ಇವರಷ್ಟೇ ಅಲ್ಲ, ಈ ಜಾಲದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಇತರ ನೌಕರರು ಕೂಡ ಕ್ಷಮೆಗೆ ಅರ್ಹರಲ್ಲ. ಇಂತಹವರನ್ನೆಲ್ಲ ಬೇಗ ಪತ್ತೆ ಹಚ್ಚಿ ಮುಲಾಜಿಲ್ಲದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಂದೆ ಯಾರೂ ಹೀಗೆ ಅಸಹಾಯಕ ಅಭ್ಯರ್ಥಿಗಳ ಬದುಕಿನ ಜತೆ ಆಟವಾಡದಂತೆ ಕಠಿಣ ಸಂದೇಶ ರವಾನೆಯಾಗಬೇಕು. 
 
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿನ ಕೆಳ ಹಂತದ ಸಿ ಮತ್ತು ಡಿ ದರ್ಜೆ ಹುದ್ದೆಗಳು ಹಾಗೂ ನಾನ್‌ ಗೆಜೆಟೆಡ್‌ ಬಿ ವರ್ಗದ ಹುದ್ದೆಗಳ ನೇಮಕಾತಿ ಸಂದರ್ಶನವನ್ನು ಮೋದಿ ನೇತೃತ್ವದ ಸರ್ಕಾರ ರದ್ದು ಮಾಡಿದೆ. ಈ ಹುದ್ದೆಗಳ ನೇಮಕಾತಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರ, ಶೋಷಣೆ ನಡೆಯುತ್ತಿದೆ ಎಂದು ಅದು ಕಾರಣ ಕೊಟ್ಟಿತ್ತು. ಸೇನಾ ನೇಮಕಾತಿ ಪರೀಕ್ಷೆಯಲ್ಲೂ ಹಗರಣ ಹೊರಗೆ ಬಂದಿರುವುದರಿಂದ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಸೈನಿಕರಾಗಲು ದೇಹದಾರ್ಢ್ಯ ಬೇಕು. ಸೈನ್ಯದಲ್ಲಿ ಕಾರಕೂನರಾಗಲು ಸಾಮಾನ್ಯ ಶಿಕ್ಷಣ;  ಬಡಗಿ, ದರ್ಜಿ, ಕ್ಷೌರಿಕ ವೃತ್ತಿಯ ಹುದ್ದೆಗಳಿಗೆ ಆಯಾ ವೃತ್ತಿಯಲ್ಲಿ ಪರಿಣತಿ ಇದ್ದರೆ ಸಾಕು. ಅದಕ್ಕೆ ಲಿಖಿತ ಪರೀಕ್ಷೆಯ ಅಗತ್ಯವಿದೆಯೇ? ಇದು ಗಂಭೀರವಾಗಿ ಚರ್ಚೆಯಾಗಬೇಕಾದ ವಿಷಯ.
 
ಈಗ ಆಧುನಿಕ ತಂತ್ರಜ್ಞಾನಗಳೆಲ್ಲ ಲಭ್ಯ. ಅವನ್ನು ಪರೀಕ್ಷಾ ಪದ್ಧತಿ ಸುಧಾರಣೆ ಮತ್ತು ಪ್ರಶ್ನೆಪತ್ರಿಕೆ ರಹಸ್ಯ ಪಾಲನೆಗೆ ಬಳಸಿಕೊಳ್ಳುವ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಕೊನೆ ಹಂತದಲ್ಲಿ ಪರೀಕ್ಷೆಗಳು ರದ್ದಾದರೆ ಅಥವಾ ಮುಂದೂಡಿಕೆಯಾದರೆ ಪ್ರಾಮಾಣಿಕ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ, ಅವರ ಸ್ಥೈರ್ಯ ಕುಗ್ಗುತ್ತದೆ. ನೇಮಕಾತಿ ಪರೀಕ್ಷೆ ಪಾಸಾಗಲು, ನೌಕರಿ ಗಿಟ್ಟಿಸಲು ಅಪ್ರಾಮಾಣಿಕರು ಎಷ್ಟೇ ಹಣ ಖರ್ಚು ಮಾಡಲು ಸಿದ್ಧರಿರುತ್ತಾರೆ.
 
ಅವರ ಪಾಲಿಗೆ ಇದು ಬಂಡವಾಳ ಹೂಡಿಕೆ ಇದ್ದಂತೆ. ಸರ್ಕಾರಿ ಹುದ್ದೆಗಳು ನಾನಾ ಕಾರಣಗಳಿಗಾಗಿ ಇನ್ನೂ ಆಕರ್ಷಣೆ ಉಳಿಸಿಕೊಂಡಿವೆ. ಹೀಗಾಗಿ ಇಲ್ಲಿ ಭ್ರಷ್ಟಾಚಾರ, ಅಕ್ರಮಗಳಿಗೆ ಅವಕಾಶ ಹೆಚ್ಚು. ಅವನ್ನೆಲ್ಲ ಪತ್ತೆ ಮಾಡಿ ಇಂತಹ ದುಷ್ಟ ಪ್ರವೃತ್ತಿಯನ್ನು ಹೊಸಕಿ ಹಾಕಬೇಕು. ಸರ್ಕಾರಿ ಹುದ್ದೆಗಳ ನೇಮಕಾತಿ ನೀತಿಯಲ್ಲಿ ವ್ಯಾಪಕ ಸುಧಾರಣೆ, ದಕ್ಷತೆ ತರಬೇಕು ಮತ್ತು ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸಬೇಕು. ಆಗ ಅಕ್ರಮಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.