ADVERTISEMENT

ಸೇವೆಯ ಮಹತ್ವ ಅರಿಯಲಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ವಿವಾದ ಆಗಬಾರದ ಅತ್ಯಗತ್ಯ ಸಾರ್ವಜನಿಕ ಸೇವೆಯೊಂದು ಸಂಘ­ರ್ಷದ ಹಾದಿ ತುಳಿದರೆ ಏನಾಗುತ್ತದೆ ಎಂಬುದಕ್ಕೆ ಮುಷ್ಕರನಿರತ ವೈದ್ಯರು ಮತ್ತು ಸರ್ಕಾರದ ನಡುವಿನ ಹಗ್ಗಜಗ್ಗಾಟವೇ ಸಾಕ್ಷಿ. ಸರ್ಕಾರಿ ವೈದ್ಯರ ಬೇಡಿಕೆಗಳು ಇಂದು ನಿನ್ನೆಯವಲ್ಲ. ಸಾಕಷ್ಟು ವರ್ಷಗಳಿಂದಲೂ ಅವರು ಆಗಾಗ್ಗೆ ಮುಷ್ಕರ ಹೂಡುವುದು, ಸಾಮೂಹಿಕ ರಾಜೀನಾಮೆಯ ಬೆದರಿಕೆ ಒಡ್ಡುವುದು ಸಾಮಾನ್ಯ ಸಂಗತಿ. ಕೆಲವು ಬೇಡಿಕೆಗಳಿಗೆ ಮಣಿಯುವ ಸರ್ಕಾರ, ಇನ್ನುಳಿದವನ್ನು ಈಡೇರಿಸುವ ಭರವಸೆ ಇತ್ತು ಸಮಸ್ಯೆಗೆ ತಾತ್ಕಾಲಿಕ ವಿರಾಮ ನೀಡುತ್ತದೆ. ಮೊದಲೇ ನಮ್ಮ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಕೇಳು­ವಂತಿಲ್ಲ. ಇನ್ನು ವೈದ್ಯರು ಮುಷ್ಕರ ಹೂಡಿದಾಗಲಂತೂ ಬಡ ರೋಗಿಗಳು ದಿಕ್ಕು ತೋಚದಂತೆ ಆಗುತ್ತಾರೆ. ತಮ್ಮ ಇಂತಹ ಅನಿವಾರ್ಯ ಉಪಸ್ಥಿತಿ­ಯನ್ನೇ ಬಂಡವಾಳ ಮಾಡಿಕೊಳ್ಳುವ ವೈದ್ಯರಿಗೆ ಸರ್ಕಾರವನ್ನು ಬ್ಲ್ಯಾಕ್‌­ಮೇಲ್‌ ಮಾಡಲು ಇಷ್ಟು ಸಾಕು. ಸರ್ಕಾರಕ್ಕೂ ವೈದ್ಯರ ವಿರುದ್ಧ ಗುಟುರು ಹಾಕಿ ಅಧಿಕಾರದ ದಂಡವನ್ನು ಝಳಪಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿರಲಾರದು. ಅದಿಲ್ಲದೆ ಸರ್ಕಾರಕ್ಕೆ ನಿಜವಾಗಲೂ ಬಡ ರೋಗಿಗಳ ಬಗ್ಗೆ ಕಾಳಜಿ ಇದ್ದಿದ್ದರೆ ಸಂಘರ್ಷ ತಾರಕಕ್ಕೇರಲು ಅದು ಆಸ್ಪದವನ್ನೇ ನೀಡುತ್ತಿರಲಿಲ್ಲ.

ವೈದ್ಯರು ಕಳೆದ ಫೆಬ್ರುವರಿಯಲ್ಲೇ ಬೇಡಿಕೆಗಳ ಪ್ರಸ್ತಾವ ಇಟ್ಟಿದ್ದರು. ಈಡೇರಿಕೆಗೆ ಮೂರು ತಿಂಗಳ ಹಿಂದೆ 60 ದಿನಗಳ ಗಡುವು ನೀಡಿದ್ದರು. ಆದರೂ ಅವರೊಂದಿಗೆ ಮಾತನಾಡಲು ಮುಂದಾಗದ ಸರ್ಕಾರ ‘ಯಜ­ಮಾನ್ಯ ಸಂಸ್ಕೃತಿ’ಯ ನೇತಾರನಂತೆ ವರ್ತಿಸಿತು. ಕನಿಷ್ಠ ವೈದ್ಯರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದಾಗಲಾದರೂ ಅದು ಮಾತುಕತೆಗೆ ಮುಂದಾಗ­ಬಹುದಿತ್ತು. ಅದು ಬಿಟ್ಟು ವೈದ್ಯರೆಲ್ಲ ರಾಜಧಾನಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸುವವರೆಗೂ ಕಾಯ್ದು ಬಿಕ್ಕಟ್ಟು ಉಲ್ಬಣಿಸುವಂತೆ ಮಾಡಿದ್ದು ಎಷ್ಟು ಸರಿ? ಎಲ್ಲ 4500 ವೈದ್ಯರೂ ರಾಜೀನಾಮೆ ಸಲ್ಲಿಸುವುದಾಗಿ ವೈದ್ಯರ ಸಂಘ ಹೇಳಿದ್ದರೂ 911 ಮಂದಿಯಷ್ಟೇ ಈ ಕ್ರಮಕ್ಕೆ ಮುಂದಾಗಿದ್ದಾರೆ.

ವೈದ್ಯರ ನಡುವಿನ ಇಂತಹ ಬಿರುಕನ್ನು ಬಯಲಿಗೆಳೆಯುವ ಹುನ್ನಾರ ಸರ್ಕಾರಕ್ಕೆ ಇದ್ದಿರಬಹುದು ಅಥವಾ ಸಂಘವೇ ಆರೋಪಿಸಿರುವಂತೆ, ಸರ್ಕಾರವೆಂಬ ದೇವರ ಬಳಿ ಹೋಗಲು ವೈದ್ಯರಿಗೆ ಪೂಜಾರಿಗಳೇ (ಅಧಿಕಾರಿ­ಗಳು) ಅಡ್ಡಗಾಲು ಹಾಕುತ್ತಿರಬಹುದು. 14 ಬೇಡಿಕೆಗಳಲ್ಲಿ ಹತ್ತನ್ನು ಈಡೇ­ರಿ­ಸಬಹುದು, ಇನ್ನುಳಿದ ನಾಲ್ಕಕ್ಕೆ ತಾಂತ್ರಿಕ ಸಮಸ್ಯೆ ಇದೆ ಎಂದು ಸರ್ಕಾರ ಹೇಳಿದೆ. ಆದರೆ ಹಿಂದಿನ ಭರವಸೆಗಳು ಹುಸಿಯಾಗಿರು­ವುದರಿಂದ ಬರೀ ಬಾಯಿ ಮಾತಿನ ಆಶ್ವಾಸನೆಗಳನ್ನು ನಂಬುವ ಸ್ಥಿತಿಯಲ್ಲಿ ವೈದ್ಯರಿಲ್ಲ. ಅವರ ಸಮಸ್ಯೆಗಳನ್ನು ಅರಿಯಲು ಕಳೆದ ಸರ್ಕಾರ ರಚಿಸಿದ್ದ ಸದನ ಸಮಿತಿಯ ವರದಿ ಬಹಿರಂಗಕ್ಕೂ ಈಗಿನ ಸರ್ಕಾರ ಹಿಂದೇಟು ಹಾಕುತ್ತಿದೆ. ಇಂತಹ ಕ್ರಮಗಳು ಸಾರ್ವಜನಿಕ ಆರೋಗ್ಯ ಸಂರಕ್ಷಣೆಗೆ ಹಿನ್ನಡೆ ಉಂಟು ಮಾಡುತ್ತವೆ. ಒಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ವೈದ್ಯರ ಸೇವೆಯನ್ನು ಪರಿಣಾಮಕಾರಿ ಆಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿ, ಇನ್ನೊಂದೆಡೆ ವೈದ್ಯರ ಬೇಡಿಕೆ­ಗಳನ್ನು ಉಪೇಕ್ಷಿಸುವುದು ಸರಿಯಲ್ಲ. ಅದೇ ರೀತಿ ವೈದ್ಯರಿಗೂ ತಮ್ಮದು ಮಾನವೀಯತೆಗೆ ಒತ್ತು ನೀಡುವ ಕಸುಬಾದ್ದರಿಂದ ವೃತ್ತಿಧರ್ಮ ಪಾಲನೆ ಎಲ್ಲಕ್ಕಿಂತಲೂ ಮಿಗಿಲಾದುದು ಎಂಬ ನೈತಿಕ ಪ್ರಜ್ಞೆ ಇರಬೇಕು. ಕೆಲಸಕ್ಕೆ ಗೈರುಹಾಜರಾಗಿ ಬಡ ರೋಗಿಗಳನ್ನು ಬಲಿಪಶು ಮಾಡುವುದರ ಬದಲು,  ಹಕ್ಕೊತ್ತಾಯಕ್ಕೆ ವೈದ್ಯರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.