ADVERTISEMENT

ಸ್ವಾಗತಾರ್ಹ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 19:30 IST
Last Updated 24 ಮಾರ್ಚ್ 2014, 19:30 IST

ವಿವಿಧ ಹೈಕೋರ್ಟ್‌ಗಳಲ್ಲಿನ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಶೇ 25ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಕೊನೆಗೂ ಕ್ರಮ ಕೈಗೊಂಡಿದೆ.  ನ್ಯಾಯಾಂಗದ  ಸುಧಾರಣೆ ಮತ್ತು ಬಾಕಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ದಿಸೆಯಲ್ಲಿ ಇದೊಂದು ಸಕಾರಾತ್ಮಕ ಹೆಜ್ಜೆ. ದೇಶದ 24 ಹೈಕೋರ್ಟ್‌ಗಳಲ್ಲಿ ಮಂಜೂರಾದ ನ್ಯಾಯಮೂರ್ತಿಗಳ ಹುದ್ದೆಗಳು 906. ಆದರೆ ಇದರಲ್ಲಿಯೂ 250 ಹುದ್ದೆಗಳು ಖಾಲಿ ಇವೆ. ಕೇಂದ್ರದ ತೀರ್ಮಾನ­ದಿಂದ ಹೊಸದಾಗಿ 206 ಹುದ್ದೆಗಳು ಸೃಷ್ಟಿಯಾಗಲಿದ್ದು ಒಟ್ಟು ಸಂಖ್ಯೆ 1112ಕ್ಕೆ ಏರಲಿದೆ.

ಕರ್ನಾಟಕ ಹೈಕೋರ್ಟ್‌ನಲ್ಲೂ ನ್ಯಾಯಮೂರ್ತಿಗಳ ಸಂಖ್ಯೆ ಈಗಿನ 48ರಿಂದ 60ಕ್ಕೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮೂಲ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಎಲ್ಲ  ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ­ಗಳಿಗೆ ಪತ್ರ ಬರೆದಿದ್ದಾರೆ. ಇದನ್ನು ರಾಜ್ಯ ಸರ್ಕಾರಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳಿಬ್ಬರೂ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಮುಂದಾ­ಗಬೇಕು. ಏಕೆಂದರೆ ಈಗಲೇ ವಿವಿಧ ಹೈಕೋರ್ಟ್‌ಗಳಲ್ಲಿ ಸುಮಾರು 40 ಲಕ್ಷ ಪ್ರಕರಣಗಳು ಬಾಕಿ ಇವೆ. ವಿವಿಧ ಹಂತಗಳ ಕೋರ್ಟ್‌­ಗಳಲ್ಲಿ ನ್ಯಾಯಾಧೀಶರ ಸಂಖ್ಯೆ ಜನಸಂಖ್ಯೆಗೆ ತಕ್ಕಂತೆ ಹೆಚ್ಚದಿರುವುದೇ ಸಮಸ್ಯೆ ಉಲ್ಬಣಿಸಲು ಕಾರಣ. ನ್ಯಾಯಮೂರ್ತಿಗಳ ನೇಮಕದ ಜತೆಯಲ್ಲಿಯೇ ಅವರ ಕಾರ್ಯನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿ, ಸೌಕರ್ಯ ಒದಗಿಸ­ಬೇಕು.

ತ್ವರಿತವಾಗಿ ನ್ಯಾಯ ಪಡೆಯುವುದು ನಾಗರಿಕರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪ್ರಕರಣವೊಂದರಲ್ಲಿ ಹೇಳಿದೆ. ಆ ಹಕ್ಕು ಚಲಾಯಿಸಲು ಸಮರ್ಪಕ ವ್ಯವಸ್ಥೆ ಮಾಡುವುದು ನ್ಯಾಯಾಲಯ ಮತ್ತು ಸರ್ಕಾರ ಎರಡರ ಹೊಣೆಯೂ ಹೌದು. ಆದರೆ, ಇದುವರೆಗಿನ ಅನುಭವಗಳ ಮೇಲೆ ಹೇಳುವುದಾದರೆ ನ್ಯಾಯಮೂರ್ತಿಗಳ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಅಷ್ಟು ಸುಲಭವೇನಲ್ಲ. ಈ ಹುದ್ದೆಗಳ ನೇಮಕಾತಿ ವಿವಾದಕ್ಕೆ ಎಡೆಮಾಡಿದ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಮಂಜೂರಾದ ಹುದ್ದೆಗಳಲ್ಲಿ 250 ಹುದ್ದೆಗಳು ಖಾಲಿ ಇರುವುದಕ್ಕೆ ಇದೂ ಪ್ರಮುಖ ಕಾರಣ.

ಇಷ್ಟಕ್ಕೂ, ಹುದ್ದೆ ಹೆಚ್ಚಳ ಎಂದೋ ಆಗಬೇಕಿತ್ತು. ಏಕೆಂದರೆ 2013ರ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನ ನಡೆದಾಗ, ‘ನ್ಯಾಯಮೂರ್ತಿಗಳ ಸಂಖ್ಯೆಯನ್ನು ಶೇ 25ರಷ್ಟು ಹೆಚ್ಚಿಸಲು ಪ್ರಧಾನಿ ಮನಮೋಹನ್‌ ಸಿಂಗ್‌ ಒಪ್ಪಿದ್ದಾರೆ’ ಎಂದು ಆಗ ಕಾನೂನು ಸಚಿವರಾಗಿದ್ದ ಅಶ್ವನಿ ಕುಮಾರ್ ತಿಳಿಸಿದ್ದರು. ಮುಂದೆ ಈ ವಿಷಯ­ದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಅದಕ್ಕಾಗಿಯೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸದಾಶಿವಂ ಅವರು ಪ್ರಧಾನಿಗೆ ಪತ್ರ ಬರೆದು ಭರವಸೆಯನ್ನು ನೆನಪಿಸಬೇಕಾಗಿ ಬಂತು.

ಬರೀ ಹುದ್ದೆ ಭರ್ತಿ ಸಾಲದು. ಅದರ ಜತೆ ಪೂರಕ ಕೆಲಸಗಳೂ ನಡೆಯಬೇಕು. ಈಗ ಮಾಹಿತಿ ತಂತ್ರಜ್ಞಾನ ನಮ್ಮ ಬದುಕಿನ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿದೆ. ನ್ಯಾಯಾಂಗ­ದಲ್ಲಿಯೂ ದಕ್ಷತೆ ಮತ್ತು ಪ್ರಕರಣಗಳ ವಿಲೇವಾರಿ ಹೆಚ್ಚಿಸಲು ಇದು ಬಳಕೆಯಾಗುತ್ತಿದೆ. ಆದರೆ ಆಧುನೀಕರಣಕ್ಕೆ ಇನ್ನೂ ಹೆಚ್ಚಿನ ಅವಕಾಶಗಳಿವೆ. ಅದನ್ನೆಲ್ಲ ಬಳಸಿಕೊಳ್ಳಬೇಕು. ಅಧೀನ ನ್ಯಾಯಾಲಯಗಳನ್ನು ಬಲಪ­ಡಿಸುವುದೂ ಬಹು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT