ADVERTISEMENT

ಅಭಿಷೇಕ: ತಿಳಿವಿನ ಬೆಳಕು ಮೂಡಲಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST

ಅಭಿಷೇಕದಿಂದ ಹಾಲು ಹರಿದು ಪೋಲಾಗುವ ಬದಲು, ಅದು ಅತ್ಯಗತ್ಯವಿರುವ ಕಂದಮ್ಮಗಳು, ಬಡಬಗ್ಗರಿಗೆ ಪೋಷಕದ್ರವ್ಯವಾಗಬಹುದಲ್ಲವೇ?

ಭೂತವನ್ನು ಹೆಕ್ಕಿ ವರ್ತಮಾನದೊಂದಿಗೆ ಇಟ್ಟು ಪರಿಷ್ಕರಿಸಿ ಭವಿತವ್ಯವನ್ನು ಕಾಣುವ ನಿಲುವು ಸ್ವಾಗತಾರ್ಹ, ಅನುಪಮ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಆದಿಕವಿ ಪಂಪ ಹತ್ತನೇ ಶತಮಾನದಲ್ಲೇ ಉದ್ಗರಿಸಿದ್ದಾನೆ. ಧರ್ಮ ಧರ್ಮಗಳಲ್ಲಿ ಭೇದವಿಲ್ಲ. ಮಾನವ ಧರ್ಮಕ್ಕಿಂತ ಶ್ರೇಷ್ಠ ಧರ್ಮವಿಲ್ಲ. ಧರ್ಮ ನಿರಪೇಕ್ಷತೆ, ಸಮನ್ವಯ, ಸಹಿಷ್ಣುತೆ- ಇವು ಕೇವಲ ನಿಘಂಟು, ವೇದಿಕೆಯಿಂದ ಮೊಳಗುವ ಪದಗಳಾಗಿಯೇ ಉಳಿಯಬಾರದು. ಸ್ವಭಾವತಃ ಮನುಷ್ಯ ಭಾವುಕತೆ, ಅಂಧ ವಿಶ್ವಾಸದ ಸೆಳೆತಕ್ಕೆ ಸುಲಭವಾಗಿ ಒಳಗಾಗುತ್ತಾನೆ.

ಆಚರಣೆಗಳು ಸಮಷ್ಟಿ ಹಿತಕ್ಕೆ ವಿರುದ್ಧವಾಗಿರದಂತೆ ಎಚ್ಚರ ವಹಿಸಿದರಷ್ಟೆ ಧಾರ್ಮಿಕ ಸ್ವಾತಂತ್ರ್ಯ ಅರ್ಥಪೂರ್ಣ, ಪ್ರಖರ. ಈ ನಿಟ್ಟಿನಲ್ಲಿ ಸಾಕಷ್ಟು ಪರಿಷ್ಕರಣೆಗಳಾಗಿವೆ. ನಂಬಿಕೆಗಳಿಗಿಂತ ವಾಸ್ತವದತ್ತ ಹೆಚ್ಚಿನ ಗಮನಹರಿಸಲಾಗುತ್ತಿದೆ. ಹಾಲು ಹಾವಿನ ಆಹಾರವಲ್ಲವೆಂಬ ಅರಿವು ಮೂಡಿದೆ. ಹುತ್ತಕ್ಕೆ ಹಾಲೆರೆಯದೆ ಮಕ್ಕಳಿಗೆ ನೀಡಲಾಗುತ್ತಿದೆ. ನಿಜ ನಾಗರ ಕಂಡರೆ ಕೊಲ್ಲದೆ ಕಾಡಿಗೆ ಬಿಡಲಾಗುತ್ತಿದೆ. ಮಸಣದ ಮಣ್ಣು, ಊರ ಮಣ್ಣು ಬೇರೆ ಬೇರೆ ಅಲ್ಲವೆನ್ನುವುದು ಮನವರಿಕೆಯಾಗಿದೆ.

ಮಸಣದ ಕಟ್ಟೆ ಮೇಲೆ ಸಂವಾದ, ಕವಿಗೋಷ್ಠಿಗಳಾಗುತ್ತಿವೆ. ಪವಾಡಗಳು ಬಯಲಾಗುತ್ತಿವೆ. ಇವು ಕೆಲವೇ ಉದಾಹರಣೆಗಳು ಮಾತ್ರ. ಸಮಾಜದ ಉನ್ನತಿಗೆ ತೆರೆದ ಮನಸ್ಸಿನಿಂದ ತಿಳಿವಿನ ಹೊಸ ಬೆಳಕಿಗೆ ಸ್ಥಾನ ಕಲ್ಪಿಸಬೇಕು. ವಿಧಿ, ನಿಷೇಧಗಳ ಹಿಂದಿನ ಪರಿಕಲ್ಪನೆಗಳನ್ನು ಮನಗಂಡು ಅವನ್ನು ಸಾಂಕೇತಿಕವಾಗಿ ಆಚರಿಸುವುದು ಯುಕ್ತವಷ್ಟೆ. ಮೂರ್ತಿಗಳಿಗೆ ಅಭಿಷೇಕ ನೆರವೇರಿಸಲು ಹಾಲು, ಹಾಲಿನ ಉತ್ಪನ್ನಗಳನ್ನೂ ಒಳಗೊಂಡಂತೆ ಎಳನೀರು, ಜೇನು, ಸಕ್ಕರೆ, ಬಾಳೆಹಣ್ಣಿನ ರಸಾಯನ, ಕಬ್ಬಿನ ಹಾಲು, ವಿವಿಧ ಹಿಟ್ಟುಗಳು ಮುಂತಾದ ಅಮೂಲ್ಯ ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ‘ಅಭಿಷೇಕ’ ಎಂದರೆ ಸ್ವಚ್ಛಗೊಳಿಸುವುದು.

ಹೀಗೆ ಕಲ್ಪಿಸಿಕೊಳ್ಳಿ. ಮೂರು ಪಾತ್ರೆಗಳು. ಒಂದೊಂದನ್ನು ಹಾಲು, ಹಣ್ಣಿನ ರಸ, ಕಬ್ಬಿನ ಹಾಲು ಅಳೆಯಲು ಬಳಸಿದೆ. ಈಗ ಅವನ್ನು ತೊಳೆದು ಶುಭ್ರಗೊಳಿಸಲು ನೀರನ್ನು ಉಪಯೋಗಿಸಲೇಬೇಕು. ಹೇಗೂ ಹಾಲಿದ್ದ, ಹಣ್ಣಿನ ರಸವಿದ್ದ, ಕಬ್ಬಿನ ಹಾಲಿದ್ದ ಪಾತ್ರೆಗಳಲ್ಲ ಅಂತ ಹಾಗೆಯೆ ಬಿಡಲಾದೀತೇ?  ಬಣ್ಣ, ವಾಸನೆ, ರುಚಿಯಿಲ್ಲದ, ಆದರೂ ನಿತ್ಯ ಸಂಜೀವಿನಿ ಎನ್ನಿಸಿರುವ ನೀರಿಗಿಂತಲೂ ಶುಚಿಕಾರಕ ದ್ರವ್ಯ ಮತ್ತೊಂದಿಲ್ಲವೆನ್ನುವುದು ಸ್ಪಷ್ಟ. ಎಂದಮೇಲೆ ಶುದ್ಧ ನೀರಿನಿಂದಷ್ಟೆ ವಿಗ್ರಹದ ಅಭಿಷೇಕ ನೆರವೇರಿಸಬಹುದಲ್ಲವೇ?

ವೃಥಾ ಅಮೂಲ್ಯ ಆಹಾರ ವಸ್ತುಗಳನ್ನು ಏಕೆ ಬಳಸಿ ವ್ಯರ್ಥಗೊಳಿಸಬೇಕು? ಅದು ರಾಷ್ಟ್ರೀಯ ನಷ್ಟವಾದ್ದರಿಂದ ನೈತಿಕ ನಡೆಯೆನ್ನಿಸದು ಕೂಡ. ಜಗತ್ತಿನಲ್ಲಿ ಪ್ರತಿ ಮೂರೂವರೆ ಸೆಕೆಂಡಿಗೆ ಒಬ್ಬ ಹಸಿವಿನಿಂದ ಸಾಯುತ್ತಿದ್ದಾನೆ. ಇತ್ತೀಚೆಗೆ ಒಂದು ಸ್ವಾಗತಾರ್ಹ ಒಲವು ಮೂಡುತ್ತಿದೆ. ಅಪರೂಪಕ್ಕಾದರೂ ದೇಶದಲ್ಲಿ ಕೆಲವೆಡೆ ಹೋಟೆಲ್ಲುಗಳಲ್ಲಿ, ಆಹಾರ ಸೇವಿಸದೆ ತಟ್ಟೆಯಲ್ಲಿ ಉಳಿಸಿದರೆ  ಬಿಲ್ ಜೊತೆಗೆ ದಂಡವನ್ನೂ ತೆರಬೇಕಾಗುತ್ತದೆ! ನಾನು ತಿನ್ನುವ ಖಾದ್ಯ, ಸೇವಿಸುವ ಪೇಯಕ್ಕೆ ಹಣ ಪಾವತಿಸುತ್ತಿದ್ದೇನೆ; ಸೇವಿಸುವುದು, ಬಿಡುವುದು ನನ್ನ ಹಕ್ಕು ಎನ್ನುವಂತಿಲ್ಲ.

ಆಹಾರ ದೇಶದ ಸಂಪತ್ತು. ಅದನ್ನು ಯಾವುದೇ ಕಾರಣಕ್ಕೆ ವ್ಯರ್ಥಗೊಳಿಸುವ ಬಾಧ್ಯತೆ ಯಾರಿಗೂ ಇಲ್ಲವೆಂಬ ದೃಢ ತತ್ವ ಈ ಕ್ರಮದಲ್ಲಿದೆ. ಆಹಾರವೇ ದೇವರು ಎನ್ನುವುದು ಇಡೀ ಜಗತ್ತು ಕಂಡಿರುವ ಸತ್ಯ. ‘ಉಣಬಂದ ಜಂಗಮಗೆ ಉಣಬಡಿಸಲೊಲ್ಲದೆ/ ಉಣದಿಪ್ಪ ಲಿಂಗಕುಣಬಡಿಸಿ ಕೈ ಮುಗಿದ/ ಬಣಗುಗಳ ನೋಡಾ ಸರ್ವಜ್ಞ’ ಎನ್ನುವುದು ಸಂತ ಸರ್ವಜ್ಞನ ನಿಷ್ಠುರ ನುಡಿ. ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಶೇಕಡ 40ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನಲುಗುತ್ತಿದ್ದಾರೆ.

ಅಭಿಷೇಕದಿಂದ ಹಾಲು ಬಚ್ಚಲಿನಲ್ಲಿ ಹರಿದು ಪೋಲಾಗುವ ಬದಲು ಅದು ಅತ್ಯಗತ್ಯವಿರುವ ಕಂದಮ್ಮಗಳು, ಅಶಕ್ತರು, ವೃದ್ಧರು, ಬಡಬಗ್ಗರ ಪಾಲಿಗೆ ಪೋಷಕದ್ರವ್ಯ ಆಗಬಹುದಲ್ಲವೇ? ಅಭಿಷೇಕಕ್ಕೆ ಬಳಸಿದ ಯಾವುದೇ ಆಹಾರ ವಸ್ತು ವ್ಯರ್ಥವಾಗದು. ಅವನ್ನೇ ಭಕ್ತರಿಗೆ ಪ್ರಸಾದ, ಪಾಯಸದ ರೂಪದಲ್ಲಿ ನೀಡಲಾಗುವುದೆಂಬ ಸಮರ್ಥನೆಯಿದೆ. ಚೆಲ್ಲಿದ್ದು, ಹರಡಿದ್ದು, ಹರಿದಿದ್ದಿರಲಿ, ಕೆಳಗೆ ಬಿದ್ದಿದ್ದನ್ನೂ ಸೇವಿಸುವುದು ಯುಕ್ತವಲ್ಲ ಎನ್ನುವುದು ನಮಗೆ ತಿಳಿದಿದೆ.

ನೆಲದ ಮೇಲೆ ಬಿದ್ದಿದ್ದು ತಿನ್ನಬಾರದೆಂಬುದು ಮಗುವಿಗೆ ಕಲಿಸುವ ಮೊದಲ ಆರೋಗ್ಯ ಪಾಠ. ಅದರಲ್ಲೂ ಮೂರ್ತಿಗೆ ಅಲಂಕರಿಸುವ ತುಪ್ಪ, ಬೆಣ್ಣೆ, ಪರಮಾನ್ನದಂಥ ದ್ರವ್ಯಕ್ಕೆ ತ್ವರಿತವಾಗಿ ದೂಳು, ಕಸ, ಕೊಳೆ ಅಂಟಿಕೊಳ್ಳುತ್ತದೆ. ಶ್ರದ್ಧಾ ಭಕ್ತಿಯಿಂದ ಅರ್ಪಿಸಬೇಕೆಂದಿರುವುದನ್ನು ನೈವೇದ್ಯವಾಗಿ ಅರ್ಥಾತ್ ಸಾಂಕೇತಿಕವಾಗಿ ಸಲ್ಲಿಸಿ ಉಳಿದುದನ್ನು ವಿತರಿಸುವುದು ಸರಿ. ವಿಗ್ರಹ ದೀರ್ಘಕಾಲ ಬಾಳಿಕೆ ಬರುವ ಸಲುವಾಗಿಯೆ ಅಭಿಷೇಕವೆಂಬ ಉಪಚಾರಎನ್ನುವ ವಾದವೂ ಉಂಟು.

ಹಾಲು ಬಿರುಕಿನಲ್ಲಿ ಉಳಿದು ಶಿಲೆಯನ್ನು ಮೆದುಗೊಳಿಸಿ ಅದರ ಆಯಸ್ಸನ್ನು ವೃದ್ಧಿಸೀತೆಂಬ ಸಮಜಾಯಿಷಿಯೂ ಇದೆ. ವಿಜ್ಞಾನ ಮುಂದುವರೆದಿದೆ. ಶಿಲೆ ಯಾವ ಯಾವ ಕಾರಣಗಳಿಂದ ಬಿರುಕು ಬಿಡುತ್ತದೆ, ಸವೆಯುತ್ತದೆ, ಆ ನ್ಯೂನತೆಗಳನ್ನು ತಡೆಯುವುದು ಹೇಗೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯ. ಪರಿಹರಿಸಲು ವೈಜ್ಞಾನಿಕ ವಿಧಾನಗಳಿವೆ. ನಿಮಗೆ ತರಕಾರಿ, ತೆಂಗಿನ ಕಾಯಿ ಬೇಕೇ? ಮನೆಯಲ್ಲಿ ಬೇಳೆ ಇದೆ ತಾನೇ? ತುಪ್ಪ, ಬೆಲ್ಲವೇನಾದರೂ ಬಳಸುತ್ತೀರಾ?- ನಮ್ಮ ಮನೆಗೆ ಬಂದು ಒಯ್ಯಿರಿ ಎನ್ನುವ ಕಾಲವಿತ್ತು.

ಆದರೆ ಇಂದು? ದಿನೇ ದಿನೇ ಬೆಲೆಗಳು ಕೈಗೆಟುಕದಷ್ಟು ಗಗನಮುಖಿ. ಜನಸಂಖ್ಯೆ ಹೆಚ್ಚುತ್ತಿದೆ. ಕೃಷಿ ಭೂಮಿ ಕಿರಿದಾಗುತ್ತಿದೆ. ಹಿತ್ತಿಲೆಂಬ ಪರಿಕಲ್ಪನೆ ಇತಿಹಾಸ ಸೇರಿ ಎಷ್ಟೋ ವರ್ಷಗಳಾಗಿವೆ. ಇನ್ನು ಮನೆಗೆ ಬೇಕಾದ ಕನಿಷ್ಠ ಕರಿಬೇವು, ಕೊತ್ತಂಬರಿ ಸೊಪ್ಪು, ಟೊಮೆಟೊ, ಹಸಿಮೆಣಸಿನ ಕಾಯಿ ವಗೈರೆ ಬೆಳೆದುಕೊಳ್ಳುವ ಸ್ವಾವಲಂಬನೆ ತಾನೇ ಹೇಗೆ? ಆಸ್ಟ್ರೇಲಿಯಾದ ನ್ಯೂ ಸೌತ್‌ವೇಲ್ಸ್ ರಾಜ್ಯದಲ್ಲಿ ಆರಂಭವಾಗಿರುವ ‘ಲವ್ ಫುಡ್, ಹೇಟ್ ವೇಸ್ಟ್’ ಅಭಿಯಾನಕ್ಕೆ ಅದೆಷ್ಟು ಕಾಳಜಿ ಗೊತ್ತೇ?

ಮಾರುಕಟ್ಟೆ ಯಿಂದ ತರಕಾರಿ ತರುವಾಗ ನಿಮ್ಮ ಚೀಲದಲ್ಲಿ ಆಲೂ, ಈರುಳ್ಳಿ, ಬೀಟ್‌ರೂಟ್ ಕೆಳಗಿರಲಿ; ಮೃದುವಾದ ಟೊಮೆಟೊ, ಸೊಪ್ಪು, ಕೋಸು ಮೇಲಿರಲಿ ಎಂದು ಸೂಚಿಸುತ್ತದೆ. ಮೊದಲೇ ಮೃದುವಾದ ಆಹಾರ ವಸ್ತು ಅಪ್ಪಚ್ಚಿಯಾಗಿ ಹಾಳಾಗದಿರಲೆಂಬ ಆಶಯ. ಅಂದಹಾಗೆ ನೆಚ್ಚಿನ ಗಣ್ಯರು, ನಟರ ಪುತ್ಥಳಿ ಹಾಗೂ ಕಟೌಟ್‌ಗೆ ಕ್ಷೀರಾಭಿಷೇಕ ಮಾಡುವುದೂ ಔಚಿತ್ಯವೆನ್ನಿಸದು. ಅಭಿಮಾನವನ್ನು ಸಮಾಜಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ವ್ಯಕ್ತಗೊಳಿಸುವುದು ಆದರ್ಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT