ADVERTISEMENT

ಆಯುಷ್ ಚಿಕಿತ್ಸೆ- ವಿಸ್ತೃತ ಚರ್ಚೆ ಅಗತ್ಯ

ಮಂಜುನಾಥ್.ಬಿ.ಆರ್
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST

ಆಯುಷ್ ಚಿಕಿತ್ಸಕರು 6 ತಿಂಗಳ ತರಬೇತಿಯ ಬಳಿಕ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಅಲೋಪಥಿ ಔಷಧಿಗಳನ್ನು ಬಳಸಲು ಸರ್ಕಾರ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ಲೇಖನವು (ಸಂಗತ, ಜ. 7) ವಿಸ್ತೃತವಾದ ಚರ್ಚೆಯನ್ನು ಬಯಸುವಂಥ ಅಂಶಗಳನ್ನು ಒಳಗೊಂಡಿದೆ.

ಸರ್ಕಾರದ ಕೈಯಲ್ಲಿರುವ ಆಸ್ಪತ್ರೆಯ ಆಸ್ತಿಪಾಸ್ತಿಯನ್ನು ನಿಯಮಬಾಹಿರವಾಗಿ ಖಾಸಗಿಯವರಿಗೆ ವಹಿಸಬಾರದು ಎಂಬ ಲೇಖಕರ ವಾದವನ್ನು ಪುರಸ್ಕರಿಸೋಣ. ಆದರೆ ‘ನಿಯಮಬದ್ಧವಾಗಿ’ ಖಾಸಗಿಯವರಿಗೆ ಒಪ್ಪಿಸಿದರೂ ನಾವು ಅದನ್ನು ಪ್ರಶ್ನಿಸಬೇಕು ಮತ್ತು ವಿರೋಧಿಸಬೇಕು. 

ಜನರ ಆರೋಗ್ಯದ ಜವಾಬ್ದಾರಿಯನ್ನು ಸರ್ಕಾರ ಹೆಚ್ಚು ಹೆಚ್ಚಾಗಿ ವಹಿಸಿಕೊಳ್ಳಬೇಕಾದ ಅಗತ್ಯವಿರುವ ಈ ಸಂದರ್ಭದಲ್ಲಿ, ಯಾವುದೋ ಕುಂಟುನೆಪ ತೆಗೆದು, ಆಸ್ಪತ್ರೆ ಕೆಲಸ ಮಾಡದಂತೆ ಮಾಡಿ, ನಂತರ ನಿಯಮಬದ್ಧವಾಗಿಯೇ ಅದನ್ನು ಖಾಸಗಿಯವರಿಗೆ ಒಪ್ಪಿಸುವುದನ್ನು ನಮ್ಮ ಅಧಿಕಾರಿಗಳಿಗೆ ಯಾರೂ ಹೇಳಿಕೊಡಬೇಕಿಲ್ಲ.

ಅದೇ ರೀತಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರಿಗೆ ಆರು ತಿಂಗಳ ತರಬೇತಿಯ ನಂತರ ತುರ್ತು ಸಂದರ್ಭಗಳಲ್ಲಿ ಅಲೋಪಥಿ ಔಷಧಿಗಳನ್ನು ಬಳಸಲು ಅವಕಾಶ ಮಾಡಿಕೊಟ್ಟಿರುವ ಆಜ್ಞೆ ತರಾತುರಿಯಲ್ಲಿ ಬಂದಿದ್ದರೆ, ಸಂಬಂಧಪಟ್ಟ ಎಲ್ಲರನ್ನೂ ಚರ್ಚೆಯಲ್ಲಿ ತೊಡಗಿಸಿಕೊಳ್ಳದೆ ನಿರ್ಧಾರ ತೆಗೆದುಕೊಂಡಿದ್ದರೆ ಅದು ಸರಿಯಾದ ಕ್ರಮವಲ್ಲ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜನತಾಂತ್ರಿಕ ವಿಚಾರ ವಿನಿಮಯ ಅತ್ಯವಶ್ಯಕ.

ಆದರೆ ಇಲ್ಲಿ ‘ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರ ಲಾಬಿಯ ಒತ್ತಡದಿಂದ ಮಾತ್ರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯೇ’ ಎಂಬ  ಮೂಲಭೂತ ಪ್ರಶ್ನೆ ಬರುತ್ತದೆ ಅಥವಾ ಅಲೋಪಥಿ ವೈದ್ಯರು ಹಳ್ಳಿಗಾಡಿನಲ್ಲಿ ಕೆಲಸ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ ಎಂಬ ಸರ್ಕಾರದ ವಾದದಲ್ಲಿ ಹುರುಳಿದೆಯೇ? ಅನೇಕ ಅಧಿಕಾರಿಗಳು ಮತ್ತು ಸಚಿವರು ಬಹುಕಾಲದಿಂದ ಈ ಮಾತನ್ನು ಹೇಳುತ್ತಿದ್ದಾರೆ.

ಜನಸಾಮಾನ್ಯರಲ್ಲೂ ಇಂಥ ಒಂದು ಸಮಸ್ಯೆ ಇದೆಯೆಂಬ ಭಾವನೆ ಇದ್ದಂತಿದೆ. ಹಳ್ಳಿಗಾಡಿನಲ್ಲಿ ಕೆಲಸ ಮಾಡಲು ನಿಜಕ್ಕೂ ಅಡ್ಡಿಬರುತ್ತಿರುವುದು ಸೌಲಭ್ಯಗಳ ಕೊರತೆ ಮಾತ್ರವೇ? ಅತ್ಯಂತ ಕಡಿಮೆ ಸೌಲಭ್ಯಗಳಿದ್ದೂ ನಮ್ಮ ಶಿಕ್ಷಕರು ಹಳ್ಳಿಗಾಡಿನಲ್ಲಿ ಕೆಲಸ ಮಾಡುತ್ತಿಲ್ಲವೇ? ನಮ್ಮ ವೈದ್ಯರ ಜನಪರ ಬದ್ಧತೆ ಪ್ರಶ್ನಾತೀತವೇ?

ಎಂಬಿಬಿಎಸ್ ಮುಗಿದ ಕೂಡಲೇ ಸ್ನಾತಕೋತ್ತರ ಪದವಿ ಬೇಕೇಬೇಕೆಂದು ಭಾವಿಸಿ, ಉದ್ಯೋಗವನ್ನು ಅದರಲ್ಲೂ ಹಳ್ಳಿಗಾಡಿನಲ್ಲಿ ಕೆಲಸ ಮಾಡುವ ಸಾಧ್ಯತೆಯನ್ನು ಪಕ್ಕಕ್ಕೆ ಸರಿಸುವವರ ಸಂಖ್ಯೆ ಹೆಚ್ಚಾಗಿದೆ. ಸ್ನಾತಕೋತ್ತರ ಪದವಿ ಮುಗಿದ ಮೇಲೂ ವಿದೇಶಕ್ಕೆ ವಲಸೆ ಅಥವಾ ನಗರಗಳ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸುಲಭ ಸಂಪಾದನೆಗೆ ಆಸೆಪಡುವ ಪ್ರವೃತ್ತಿಯೇ ಹೆಚ್ಚಲ್ಲವೇ? ಹೀಗಾಗಿ ನಿಜಕ್ಕೂ ಎಂಬಿಬಿಎಸ್ ಪದವೀಧರರು ಹಳ್ಳಿಗಳಲ್ಲಿ ಕೆಲಸ ಮಾಡಲು ಸಿಗುತ್ತಿಲ್ಲ ಎಂಬ ವಾದದ ಯಥಾರ್ಥತೆ ಮೊದಲು ತೀರ್ಮಾನಆಗಬೇಕು.

ವಾಸ್ತವ ಪರಿಸ್ಥಿತಿ ಹಾಗಿದ್ದರೆ ಏನು ಮಾಡಬೇಕು? ಅನೇಕ ಕಡೆ ತುರ್ತು ಸಂದರ್ಭಗಳಲ್ಲಿ ‘ಆಶಾ’ ಕಾರ್ಯಕರ್ತರು, ವಾರ್ಡ್‌ಬಾಯ್‌ಗಳು, ನರ್ಸ್‌ಗಳು ಚಿಕಿತ್ಸೆ ನೀಡಬೇಕಾದ ಅನಿವಾರ್ಯ ಸ್ಥಿತಿ ಇದೆ.

ADVERTISEMENT

ಹೀಗಿರುವಾಗ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು, ಮೂಲಭೂತ ವಿಜ್ಞಾನವನ್ನು ಕಲಿತು, ಆಯುಷ್ ವೈದ್ಯ ಪದ್ಧತಿಯಲ್ಲಿ ಒಂದಿಷ್ಟು ಮೂಲಭೂತ ವೈದ್ಯಕೀಯ ತಿಳಿವಳಿಕೆಯನ್ನೂ ಪಡೆದವರಿಗೆ ಸೂಕ್ತ ತರಬೇತಿ (ಅದು 6 ತಿಂಗಳಿಗಿಂತ ದೀರ್ಘವೂ ಆಗಬಹುದು) ನೀಡಿ, ಅವರು ಈಗಾಗಲೇ ನಿರ್ವಹಿಸುತ್ತಿರುವ ಜವಾಬ್ದಾರಿಯನ್ನು ಸ್ವಲ್ಪ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಮಾಡುವುದು ಕಾರ್ಯಸಾಧುವಲ್ಲವೇ? ಅತ್ಯಂತ ಆಳವೂ ವಿಸ್ತಾರವೂ ಆದ ಜ್ಞಾನದ ಅವಶ್ಯಕತೆಯನ್ನು ಕಡೆಗಣಿಸುವುದು ಬೇಡ. ಆದರೆ ಚರ್ಚೆಯನ್ನು ಕೇವಲ ಅಕಾಡೆಮಿಕ್ ಮಟ್ಟದಲ್ಲಿ ನಡೆಸದೆ ವಾಸ್ತವ ಪರಿಸ್ಥಿತಿಯತ್ತ ನೋಡುವುದು ಉಪಯುಕ್ತ.


ಆಯುಷ್ ವೈದ್ಯರ ಮೇಲೆ ಹೆಚ್ಚು ಆಪಾದನೆಗಳಿಲ್ಲ ಎಂಬುದನ್ನೂ, ಅವರು ಅನೇಕ ಕಡೆ ಜನಾನುರಾಗಿಗಳಾಗಿ ಯಶಸ್ವಿ ವೈದ್ಯರಾಗಿದ್ದಾರೆ ಎಂಬುದನ್ನೂ ಕಡೆಗಣಿಸುವುದು ಬೇಡ. ಚೀನಾದಲ್ಲಿ ಕ್ರಾಂತಿಯ ನಂತರ ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ಅದ್ಭುತ ಕೆಲಸ ಮಾಡಿದ ‘ಬೇರ್ ಫುಟ್’ ವೈದ್ಯರ ಪ್ರಯೋಗವೂ ಅಧ್ಯಯನಯೋಗ್ಯ. (ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗೆ ನಗರದಲ್ಲಿ ತರಬೇತಿ ಪಡೆದ ವೈದ್ಯರು ಲಭ್ಯವಾಗದಿದ್ದಾಗ, ರೈತರಿಗೇ ಮೂಲಭೂತ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತರಬೇತಿ ನೀಡಿ, ಗ್ರಾಮೀಣ ಆರೋಗ್ಯ ಸೇವೆಗೆ ಸಜ್ಜುಗೊಳಿಸಲಾಗಿತ್ತು)

ರೋಗಿಗಳಿಗೆ ವೈದ್ಯರಿಂದ ಅನ್ಯಾಯ ಆಗುತ್ತಿರುವುದಕ್ಕೆ ಇಂಥ ‘ಕ್ರಾಸ್ ಪ್ರ್ಯಾಕ್ಟಿಸ್’ ಮುಖ್ಯ ಕಾರಣವಲ್ಲ. ಕಾರ್ಪೊರೇಟ್ ಲಾಭಬಡುಕತನ, ಸರ್ಕಾರಗಳ ಜನವಿರೋಧಿ ಆರೋಗ್ಯ ನೀತಿಗಳು, ವೈದ್ಯರಲ್ಲಿ ವೃತ್ತಿನೈತಿಕತೆಯ ಅಭಾವ, ಅವಸರದಲ್ಲಿ   ನಡೆಯುವ ಚಿಕಿತ್ಸೆ, ಅನಗತ್ಯ ಔಷಧ ಮತ್ತು ತಪಾಸಣೆಗಳು... ಹೀಗೆ ಪಟ್ಟಿ ದೊಡ್ಡದಿದೆ. ಆದರೆ ನಮ್ಮ ವೃತ್ತಿನಿರತ ವೈದ್ಯರ ಸಂಘಗಳು ಇವುಗಳ ಬಗ್ಗೆ ಪ್ರತಿಕ್ರಿಯಿಸುವುದು ಅಪರೂಪ, ಹೀಗೇಕೆ?

ಇನ್ನು ಆಯುಷ್ ವೈದ್ಯರೂ ಯೋಚಿಸಬೇಕಾದ ಸಂಗತಿಗಳಿವೆ. ಅವರು ಆಧುನಿಕ ಔಷಧಿಗಳನ್ನು ಬಳಸುವ ಹಕ್ಕನ್ನು ಬೇಡಿ ಸಾಧಿಸಿಕೊಳ್ಳುವುದು ತತ್‌ಕ್ಷಣದ ಸುಲಭದ ದಾರಿ. ಅದು ಈ ಕ್ಷಣದಲ್ಲಿ ಅನಿವಾರ್ಯ ಎಂಬುದನ್ನು ವಾದಕ್ಕೆ ಒಪ್ಪಿಕೊಂಡರೂ ನಾವು ಕೇಳಬೇಕಾದ ಪ್ರಶ್ನೆ- ಚಿಕಿತ್ಸೆಯ ದೊಡ್ಡ ಸವಾಲುಗಳನ್ನು ನೀವು ಎಂದು ಎದುರಿಸುತ್ತೀರಿ, ಹೇಗೆ ಎದುರಿಸುತ್ತೀರಿ?

ಎಲ್ಲಾ ಔಷಧಿಗಳೂ ಆಧುನಿಕ ವಿಜ್ಞಾನದ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂಥ ಸಂಶೋಧನೆಗೆ ನೀವು ಆದ್ಯತೆ ನೀಡಿ. ಗುಣಮಟ್ಟ ಮತ್ತು ಬೆಲೆ ಎರಡು ದೃಷ್ಟಿಯಿಂದಲೂ ರೋಗಿಗಳಿಗೆ ಉತ್ತಮ ಔಷಧಿಗಳನ್ನು ಖಾತ್ರಿಪಡಿಸಲು ಔಷಧ ತಯಾರಿಕೆಗೆ ಬೃಹತ್ ಉದ್ಯಮಗಳನ್ನು ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ.

ಪಠ್ಯಕ್ರಮಗಳಲ್ಲಿ ಗೊಡ್ಡು ಸಂಪ್ರದಾಯವಾದಕ್ಕೆ ಜಾಗ ಮಾಡಿಕೊಡದೆ ವೈಜ್ಞಾನಿಕ ಚಿಂತನೆಗೆ ಆದ್ಯತೆ ನೀಡಬೇಕಾಗುತ್ತದೆ. ಇಂಥ ಕಾರ್ಯಸೂಚಿಯ ಮೇಲೆ ಎಲ್ಲ ಪದ್ಧತಿಗಳ ವೈದ್ಯರೂ ಒಂದಾಗಿ ಧ್ವನಿ ಎತ್ತಬೇಕಾಗಿದೆ. ಇದರಲ್ಲಿ ತಮ್ಮ ಹಿತಾಸಕ್ತಿ ಇದೆ ಎಂಬುದನ್ನು ಸಾರ್ವಜನಿಕರೂ ಗ್ರಹಿಸಿ ತಮ್ಮ ಧ್ವನಿ ಸೇರಿಸಬೇಕಾಗುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.