ADVERTISEMENT

ಉತ್ಪಾದನೆ ಹೆಚ್ಚಳವಷ್ಟೇ ಪರಿಹಾರ

ಪ್ರಜಾವಾಣಿ ವಿಶೇಷ
Published 17 ಅಕ್ಟೋಬರ್ 2014, 19:30 IST
Last Updated 17 ಅಕ್ಟೋಬರ್ 2014, 19:30 IST

ರಾಜ್ಯವನ್ನು ನಿರಂತರವಾಗಿ ಕಾಡುತ್ತಿರುವ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು­ಕೊಳ್ಳಬೇಕಾದರೆ ಉತ್ಪಾದನೆ ಜಾಸ್ತಿ ಮಾಡು­ವು­ದೊಂದೇ ನಮ್ಮ ಮುಂದಿರುವ ಆಯ್ಕೆ. ಹಿಂದೆ ವರ್ಷಕ್ಕೆ 40 ಸಾವಿರ ದಶಲಕ್ಷ ಯೂನಿಟ್‌ ವಿದ್ಯುತ್‌ ಖರೀದಿ ಮಾಡಲಾಗುತ್ತಿತ್ತು. ಆದರೆ, ಈಗ 60 ಸಾವಿರ ದಶಲಕ್ಷ ಯೂನಿಟ್‌ ಖರೀದಿ ಮಾಡಲಾಗುತ್ತಿದೆ. ಆದರೂ ಕೊರತೆ ಇರುವುದು ನಿಜ.

ಗುಜರಾತ್‌ನಲ್ಲಿ 20 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗು­ತ್ತಿದೆ. ನಮ್ಮಲ್ಲಿ 10 ಸಾವಿರ ಮೆಗಾ­ವಾಟ್‌ನ್ನೂ ತಲುಪಲು ಸಾಧ್ಯವಾಗಿಲ್ಲ. ಹೊಸ ಯೋಜನೆಗಳಿಗೆ ವಿರೋಧ ವ್ಯಕ್ತವಾಗುತ್ತಿರುವುದೇ ಇದಕ್ಕೆ ಕಾರಣ.

ವಿದ್ಯುತ್‌ ಬೇಕು, ಆದರೆ ಹೊಸ ಯೋಜನೆಗಳನ್ನು ಆರಂ­ಭಿ­ಸ­­­ಬಾರದು ಎಂದರೆ ಹೇಗೆ? ವಿದ್ಯುತ್‌ ಯೋಜನೆಗಳಿಗೆ ವಿರೋಧ ಮಾಡು­­ತ್ತಿ­­ರು­ವವರು ಇದನ್ನು ಅರ್ಥ ಮಾಡಿಕೊಳ್ಳ­ಬೇಕು. ಘಟಪ್ರಭಾ, ತದಡಿ, ನಿಡ್ಡೋಡಿ, ಚಾಮ­ಲಾ­ಪುರ, ಕೂಡಗಿ ಸೇರಿ­ದಂತೆ ಹಲವು ಯೋಜನೆಗಳಿಗೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ದೊಡ್ಡ ಯೋಜನೆ­ಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ.

ಅಹಮದಾಬಾದ್‌ ಪಕ್ಕದಲ್ಲೇ ವಿದ್ಯುತ್‌ ಸ್ಥಾವರ ಇದೆ. ಅಲ್ಲಿ ಯಾರೂ ವಿರೋಧ ಮಾಡಿಲ್ಲ. ಗುಜರಾತ್‌ನಲ್ಲಿ 3–4 ಕಡೆ ದೊಡ್ಡ ಸ್ಥಾವರಗಳಿವೆ. ಅದೇ ರೀತಿ ನಮ್ಮಲ್ಲೂ ಮಾಡ­ಬೇಕು. ಇದಕ್ಕೆ ಅಗತ್ಯವಿರುವ ಬಂಡವಾಳ­ವನ್ನು ಸರ್ಕಾರವಾಗಲೀ, ಖಾಸಗಿ­ಯವರಾಗಲೀ ಹೂಡಬೇಕು.

8–10 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಘಟಕ­ಗಳನ್ನು ಶುರು ಮಾಡಬೇಕು. ಕಲ್ಲಿದ್ದಲು ದೊರೆಯುವುದು ಕಷ್ಟ. ಬೇರೆ ದೇಶ­ದಿಂದ ಕಲ್ಲಿದ್ದಲು ತರಿಸಿದರೆ ಬಳಕೆದಾರರು ಹೆಚ್ಚಿನ ಹಣ ನೀಡ­ಬೇಕಾ­ಗು­­ತ್ತದೆ. ಗ್ರಾಹಕರು ಇದಕ್ಕೆ ಸಿದ್ಧರಾಗಬೇಕು.  ಆಂಧ್ರಪ್ರದೇಶ, ತಮಿಳು­ನಾಡಿಗೆ   ಹೋಲಿಸಿ­ದರೆ ನಮ್ಮಲ್ಲಿ ಲೋಡ್‌­ಶೆಡ್ಡಿಂಗ್‌ ಪ್ರಮಾಣ ಕಡಿಮೆ. ಅಲ್ಲದೆ 2–3 ವರ್ಷಗಳಿಂದ ಕೊರತೆ ಪ್ರಮಾಣ ಕಡಿಮೆ­ಯಾಗಿದೆ.
– ಎಂ.ಆರ್‌.ಶ್ರೀನಿವಾಸಮೂರ್ತಿ, ಅಧ್ಯಕ್ಷರು, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ

ಲೋಡ್‌ಶೆಡ್ಡಿಂಗ್‌ ಇರಲಿಲ್ಲ
ಇತ್ತೀಚೆಗೆ ಅಧಿಕೃತವಾಗಿ ಎಲ್ಲಿಯೂ ಲೋಡ್‌­ಶೆಡ್ಡಿಂಗ್‌ ಜಾರಿ ಮಾಡಿರ­ಲಿಲ್ಲ. ಉತ್ಪಾದನೆ­ಯಲ್ಲಿ ಖೋತಾ ಆಗಿರುವು­ದ­ರಿಂದ ಪರಿಸ್ಥಿತಿಯನ್ನು ಸರಿದೂ­ಗಿಸಲು ತಾತ್ಕಾಲಿಕವಾಗಿ ಅನಿಯ­ಮಿತ ವಿದ್ಯುತ್‌ ಕಡಿತ ಮಾಡಲಾಗಿತ್ತು ಅಷ್ಟೆ.

ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ರಾಯ­ಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಹಾಗೂ ಯುಪಿಸಿಎಲ್‌­ನಲ್ಲಿ ಉತ್ಪಾದನೆ ಕಡಿಮೆಯಾದ ಕಾರಣ 4–5 ದಿನಗಳ ಹಿಂದೆ 2,500 ಮೆಗಾ­­ವಾಟ್‌ ವಿದ್ಯುತ್‌ ಖೋತಾ ಆಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾ­ರಿಸಿದೆ.

ಕಲ್ಲಿದ್ದಲು ಕೊರತೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಕೆಲವೊಮ್ಮೆ ಉತ್ಪಾದನಾ ಘಟಕಗಳು ಸ್ಥಗಿತಗೊಳ್ಳುತ್ತವೆ. ಆಗ ಪೂರೈಕೆಯಲ್ಲಿ ಕೊರತೆ ಆಗುವುದು ಸಹಜ. ಶೇ 25ರಷ್ಟು ಕೊರತೆ ಇದೆ ಎಂದು ಇಂಧನ ಸಚಿವ ಡಿ.ಕೆ.-­ ಶಿವಕುಮಾರ್‌ ಅವರು ಹೇಳಿರುವುದು ಆ ದಿನದ (ಅ.12) ಮಾಹಿತಿ ಅಷ್ಟೆ.

ಪ್ರತಿದಿನವೂ ಅದೇ ರೀತಿ ಇರುವುದಿಲ್ಲ.ಕಳೆದ ವರ್ಷ ಈ ಅವಧಿ­ಯಲ್ಲಿ ನೀಡುತ್ತಿದ್ದ ಪ್ರಮಾಣದಷ್ಟು ವಿದ್ಯುತ್‌ ಅನ್ನು ಈ ವರ್ಷವೂ ನೀಡಲಾ­ಗು­ತ್ತಿದೆ. ಅಲ್ಪಾವಧಿಗೆ 90ರಿಂದ 100 ಮೆಗಾವಾಟ್‌ ವಿದ್ಯುತ್ ಖರೀದಿಸ­ಲಾಗುತ್ತಿದೆ.
– ಜಿ.ಕುಮಾರ ನಾಯಕ್‌, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT