ADVERTISEMENT

ಕಂದಕ ಹೆಚ್ಚಿಸುವುದು ಬೇಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST

‘ಧನದಾಹಕ್ಕೆ ನಿಯಂತ್ರಣ ಅಗತ್ಯ’ ಲೇಖನದಲ್ಲಿ (ಪ್ರ.ವಾ., ಸಂಗತ, ಜೂನ್ 14), ‘ಅನುದಾನದ ಕೊರತೆಯ ಕಾರಣ, ರೋಗಿಗಳಿಗೆ ಪೂರ್ಣಪ್ರಮಾಣದ ಸೇವೆ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು...’ ಎಂದು ರಿಯಾಯಿತಿ ನೀಡಿರುವುದು ಸಮರ್ಥನೀಯವಲ್ಲ.

ಸಾಮಾನ್ಯ ಜನರ ಆರೋಗ್ಯದ ಜವಾಬ್ದಾರಿ ಚುನಾಯಿತ ಸರ್ಕಾರದ್ದು. ಆದರೆ ಲೇಖಕರು, ಸರ್ಕಾರದ ಅನುದಾನ ಕೊರತೆಯ ಅಸಹಾಯಕತೆಯನ್ನು ಸುಲಭವಾಗಿ ಒಪ್ಪಿಕೊಂಡಂತಿದೆ. ಇಡೀ ಲೇಖನದಲ್ಲಿ, ಇಂದಿನ ಆರೋಗ್ಯ ಕ್ಷೇತ್ರದ ದುಃಸ್ಥಿತಿಗೆ ಎಲ್ಲಾ ಪಕ್ಷಗಳ ಸರ್ಕಾರಗಳ ಸತತ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯನ್ನು ವ್ಯವಸ್ಥಿತವಾಗಿ ಹಾಳು ಮಾಡಿದ ನೀತಿಗಳ ವಿರುದ್ಧ ಚಕಾರವಿಲ್ಲ!

‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)–2017’ ಮಸೂದೆಯ ವ್ಯಾಪ್ತಿಯೊಳಗೆ ಸರ್ಕಾರಿ ಆಸ್ಪತ್ರೆಗಳನ್ನು ತರಬೇಕೋ ಬೇಡವೋ ಎಂಬುದು ಬೇರೆಯೇ ವಿಚಾರ. ಆದರೆ ಬಲಿಷ್ಠ ಸಾರ್ವಜನಿಕ ಆರೋಗ್ಯ ಸೇವೆಯನ್ನೇ ದುರ್ಬಲಗೊಳಿಸುವಂತಹ ಇಂತಹ ಅಭಿಪ್ರಾಯವನ್ನು ಸರ್ಕಾರ ಸ್ವಾಗತಿಸುತ್ತದೆ ಮತ್ತು ಅದನ್ನು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ADVERTISEMENT

ಇನ್ನು, ಖಾಸಗಿ ಕ್ಷೇತ್ರದಲ್ಲಿ ಆಗುತ್ತಿರುವ ವೈದ್ಯಕೀಯ ನೈತಿಕತೆಯ ಉಲ್ಲಂಘನೆಗೆ, ಇಡೀ ವೈದ್ಯ ಸಮೂಹ ಕಾರಣವೆಂಬಂತೆ ಸಾಮಾನ್ಯೀಕರಿಸಿದ್ದು ಸರಿಯಲ್ಲ. ಉದಾತ್ತ ವೈದ್ಯಕೀಯ ಮೌಲ್ಯಗಳು ನಾಶವಾಗುತ್ತಿರುವುದು ನೋವಿನ ಸಂಗತಿ. ಆದರೆ ಅದರ ಕಾರಣಗಳ ಸ್ವರೂಪ ಸಂಕೀರ್ಣವಾದುದು. ಸಮಸ್ತ ವೈದ್ಯ ವೃಂದವನ್ನು ದೂಷಿಸುವುದು ಅಥವಾ ಜನರನ್ನು ಗ್ರಾಹಕರಂತೆ ನೋಡುವ ಕಾಯ್ದೆಗಳನ್ನು ತರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.

ವೈದ್ಯರನ್ನು ವಿಶಾಲ ಜನಸಮೂಹದಿಂದ ಬೇರ್ಪಡಿಸುವ ಯತ್ನಗಳಿಂದ ಕಂದಕ ಹೆಚ್ಚಾಗುತ್ತದೆ.  ವೈದ್ಯ-ರೋಗಿ, ವೈದ್ಯಸಮೂಹ-ಜನಸಾಮಾನ್ಯರ ಒಗ್ಗಟ್ಟಿನಲ್ಲಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ಕಟ್ಟುವಲ್ಲಿ ಪರಿಹಾರವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
-ಡಾ. ವಸುಧೇಂದ್ರ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.