ADVERTISEMENT

ಕನ್ನಡ ಮಾಧ್ಯಮಕ್ಕೂ ಇರಲಿ ಬದ್ಧತೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ಕರ್ನಾಟಕಕ್ಕೆಂದು ಪ್ರತ್ಯೇಕ ಧ್ವಜವನ್ನು ರೂಪಿಸಿರುವ ರಾಜ್ಯ ಸರ್ಕಾರ, ಅದರ ವಿನ್ಯಾಸಕ್ಕೆ ಕನ್ನಡ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಅನುಮೋದನೆ ಪಡೆದಿದ್ದು, ಅದರ ಅಧಿಕೃತ ಬಳಕೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪ್ರಸ್ತಾವ ಕಳಿಸುವುದಾಗಿ ಹೇಳಿದೆ (ಪ್ರ.ವಾ., ಮಾ. 9). ಇದು, ಸಂತೋಷದ ಸುದ್ದಿ. ಏಕೆಂದರೆ ಕೇಂದ್ರದ ಕಡೆಯಿಂದ ಹೆಚ್ಚೆಚ್ಚು ರಾಜಕೀಯ ಅಧಿಕಾರಗಳು ಕೇಂದ್ರೀಕೃತವಾಗುತ್ತಿರುವ ಈ ಸಂದರ್ಭದಲ್ಲಿ ಒಂದು ಒಕ್ಕೂಟ ರಾಷ್ಟ್ರ ಎಂಬ ಸಂದೇಶವನ್ನು ಇದು ಕೇಂದ್ರಕ್ಕೆ ರವಾನಿಸುವ ಪ್ರಯತ್ನವೂ ಆಗಿದೆ. ಸಕಾಲಿಕ ಕ್ರಮವೂ ಆಗಿದೆ.

ಆದರೆ ರಾಜ್ಯ ಸರ್ಕಾರ ಈ ರಾಜ್ಯಧ್ವಜದ ಪ್ರಸ್ತಾವವನ್ನು ಇಷ್ಟು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡಿರುವ ರೀತಿ ನೋಡಿದರೆ, ಇದು ಚುನಾವಣೆ ಹೊತ್ತಿಗೆ ಕನ್ನಡದ ಹೆಮ್ಮೆಯನ್ನು ಉದ್ದೇಶಪೂರ್ವಕವಾಗಿ ಕೆರಳಿಸುವ ಪ್ರಯತ್ನ ಮಾತ್ರದಂತೆಯೂ ಕಂಡು ನಿರಾಸೆ ಹುಟ್ಟಿಸುತ್ತದೆ. ಏಕೆಂದರೆ, ‘ಕನ್ನಡಿಗ’ ಎಂಬ ಪರಿಕಲ್ಪನೆಯ ಕೇಂದ್ರದಲ್ಲಿರುವ ಕನ್ನಡ ಭಾಷೆ ಕರ್ನಾಟಕದಲ್ಲಿ ಎರಡನೆಯ ಮತ್ತು ಮೂರನೆಯ ಆದ್ಯತೆಯ ಭಾಷೆಯಾಗಿ ಸಾರ್ವಜನಿಕ ಜೀವನದಲ್ಲಿ ಹಿನ್ನೆಲೆಗೆ ಸರಿಯುತ್ತಿದೆ. ಈ ಬಗ್ಗೆ ಯಾವುದೇ ಕಾಳಜಿ ವಹಿಸದ ಸರ್ಕಾರ, ನಾಡಧ್ವಜದ ಬಳಕೆಯ ಜಾರಿಗೆ ಇಷ್ಟು ಆದ್ಯತೆ ನೀಡಿರುವುದು ವಿಪರ್ಯಾಸಕರ ಎನಿಸುತ್ತದೆ. ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣವಾದರೂ ಕಡ್ಡಾಯವಾಗಿ ಕನ್ನಡದಲ್ಲಿ ನಡೆಯಲು ಕ್ರಮಜರುಗಿಸಲಿಲ್ಲ. ಸಾರ್ವಜನಿಕ ಜೀವನದಲ್ಲಿ ಕನ್ನಡವು ಜೀವಂತವಾಗಿ ಉಳಿದು ಬೆಳೆಯುವಂತಹ ದಾರಿಗೆ ಎದುರಾಗಿರುವ ಅಡ್ಡಿ- ಆತಂಕಗಳನ್ನು ನಿವಾರಿಸುವಂತಹ ಕ್ರಮಗಳನ್ನೂ ಇದುವರೆಗೆ ಕೈಗೊಳ್ಳಲಿಲ್ಲ. ಈಗ ಈ ನಾಡಧ್ವಜದ ಮೂಲಕ ನಾಡು- ನುಡಿಯ ಅಭಿಮಾನವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿರುವುದು ವಿಷಾದನೀಯ.

ಕಳೆದ ಎರಡು ರಾಜ್ಯೋತ್ಸವಗಳ ಸಂದರ್ಭಗಳಲ್ಲೂ ‘ಪ್ರಾಥಮಿಕ ಶಿಕ್ಷಣವನ್ನು ಕನ್ನಡದ ಎಲ್ಲ ಮಕ್ಕಳಿಗೂ ಕಡ್ಡಾಯ ಮಾಡುವ ರಾಜ್ಯ ಸರ್ಕಾರದ ಆಜ್ಞೆಯನ್ನು ಸಾಂವಿಧಾನಿಕವಾಗಿ ಅಸಿಂಧು’ ಎಂದು ನಮ್ಮ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಅಪ್ರಸ್ತುತಗೊಳಿಸಲು ರಾಜ್ಯದ ಪರವಾಗಿ ಏನೆಲ್ಲ ಪ್ರಯತ್ನಗಳನ್ನು ಮಾಡಬಹುದು ಎನ್ನುವುದನ್ನು ಕುರಿತಂತೆ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಅಂತಹ ಯಾವ ಪ್ರಯತ್ನವೂ ಈವರೆಗೆ ನಡೆದಂತೆ ತೋರುತ್ತಿಲ್ಲ. ಹಾಗಾಗಿ ಈ ಮಾತುಗಳೆಲ್ಲ ಸಂದರ್ಭಕ್ಕೆ ತಕ್ಕಂತೆ ಮೂಗಿಗೆ ತುಪ್ಪ ಸವರಿಬಿಡುವ ರಾಜಕೀಯ ತಂತ್ರದಂತೆಯೇ ಕಾಣುತ್ತದೆ. ನಾಡಧ್ವಜವನ್ನು ಅನುಮೋದಿಸಲು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಯಾರೂ ಈ ಪ್ರಸ್ತಾಪವನ್ನು ಮಾಡಿಲ್ಲದಿರುವುದೂ ನೋವಿನ ಸಂಗತಿ. ಇದು ‘ಕನ್ನಡಪರತೆ’ ಎಂಬುದು ಇಂದು ಏನಾಗಿದೆ, ಯಾವ ಅರ್ಥವನ್ನು ಪಡೆದಿದೆ ಎಂಬುದರ ದ್ಯೋತಕವೂ ಆಗಿದೆ ಎಂದೂ ಹೇಳಬಹುದು.

ADVERTISEMENT

ಅದೇನೇ ಇರಲಿ, ಮುಖ್ಯಮಂತ್ರಿಯವರು ರಾಜ್ಯೋತ್ಸವಗಳ ಸಂದರ್ಭದಲ್ಲಿ ಕನ್ನಡಿಗರಿಗೆ ನೀಡಿದ ವಚನವನ್ನು ಪಾಲಿಸುವ ದಿಸೆಯಲ್ಲಿ ನಾಡಧ್ವಜದ ವಿಷಯದಲ್ಲಿ ತೆಗೆದುಕೊಂಡಂತಹ ಆದ್ಯತೆಯ ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸಬಯಸುತ್ತೇನೆ. ಅಥವಾ ಇದು ಆಗಹೋಗದ ಕೆಲಸವೆಂದು ಭಾವಿಸಿ ಈ ದಿಸೆಯ ಪ್ರಯತ್ನಗಳನ್ನು ಕೈಬಿಡುವ ನಿರ್ಧಾರಕ್ಕೆ ಸರ್ಕಾರ ಬಂದಿದ್ದರೆ, ಅದನ್ನಾದರೂ ಬಹಿರಂಗವಾಗಿ ಹೇಳಬೇಕು ಎಂದು ಕೋರುತ್ತೇನೆ.
ಡಿ.ಎಸ್. ನಾಗಭೂಷಣ, ಶಿವಮೊಗ್ಗ

***

ಭಾಷೆಗೋ ನಾಡಿಗೋ...?
ಸರ್ಕಾರ ಅಂಗೀಕರಿಸಿದ್ದು ‘ಕನ್ನಡಧ್ವಜವೋ, ನಾಡಧ್ವಜವೋ?’ (ಸಂಗತ, ಮಾ. 13) ಎಂದು ಅಬ್ದುಲ್ ರೆಹಮಾನ್‌ ಪಾಷ ಪ್ರಶ್ನೆ ಎತ್ತಿದ್ದಾರೆ. ಸಂವಿಧಾನ, ಸುಪ್ರೀಂ ಕೋರ್ಟ್‌ಗಳ ಉಲ್ಲೇಖವೂ ಲೇಖನದಲ್ಲಿದೆ. ಧ್ವಜವೊಂದು ಇರಲೇಬೇಕೆಂ

ದಾದರೆ ಅದು ನಾಡಿಗೆ ಹೊರತು ಭಾಷೆ ಅಥವಾ ಸಂಸ್ಕೃತಿಗೆ ಅಲ್ಲ. ದೇಶವೆನ್ನುವುದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿದೆ. ಇಲ್ಲಿ ಪ್ರಾಂತ್ಯಕ್ಕೆಂದು ಭಾಷೆ ನಿಗದಿಗೊಳಿಸಲಾಗಿದೆಯೋ, ಭಾಷೆಗೆಂದು ಪ್ರಾಂತ್ಯ ರಚಿಸಲಾಗಿದೆಯೋ? ಸಾಮಾನ್ಯ ಜ್ಞಾನದಿಂದ ಉತ್ತರಿಸುವುದಾದರೆ, ಭಾಷೆಗೆಂದೇ ಅಂದರೆ ಸಾಂಸ್ಕೃತಿಕ ಘಟಕವಾಗಿ ಪ್ರಾಂತ್ಯಗಳನ್ನು ವಿಂಗಡಿಸಲಾಗಿದೆಯೇ ಹೊರತು, ಒಂದು ಭೌಗೋಳಿಕ ಎಲ್ಲೆಕಟ್ಟು ನಿರ್ಮಿಸಿ, ಅದರಲ್ಲಿ ಭಾಷೆ– ಸಂಸ್ಕೃತಿಯನ್ನು ತುರುಕಲಾಗಿಲ್ಲ. ರಾಜ್ಯವೊಂದನ್ನು ಅದರ ಭಾಷಾಸಂಸ್ಕೃತಿ ಪ್ರತಿನಿಧಿಸುತ್ತದೆ ಎನ್ನುವುದಾದರೆ, ಧ್ವಜವೆನ್ನುವುದು ಭಾಷೆ, ಸಂಸ್ಕೃತಿಯನ್ನು ಸಂಕೇತಿಸುತ್ತದೆ. ಅದು ಸಹಜವಾಗಿಯೇ ನಾಡಿನ ಸಂಕೇತವೂ ಆಗುತ್ತದೆ.

ಅಖಂಡ ಭಾರತಕ್ಕೆ ಒಂದು ರಾಷ್ಟ್ರಧ್ವಜವಿರುವಾಗ, ನಾಡಧ್ವಜಗಳ ಅಗತ್ಯವೇನು ಎನ್ನುವುದು ಬೇರೆ ಪ್ರಶ್ನೆ. ರಾಷ್ಟ್ರಧ್ವಜಕ್ಕೆ ಪೂರ್ಣ ಗೌರವ ಸಲ್ಲಿಸುತ್ತಲೇ, ರಾಜ್ಯದ ಸಾಂಸ್ಕೃತಿಕ ಸ್ವಂತಿಕೆಯನ್ನು ಪ್ರತಿನಿಧಿಸುವಂತೆ ಪ್ರತ್ಯೇಕ ಧ್ವಜವನ್ನು ವಿನ್ಯಾಸಗೊಳಿಸಿಕೊಂಡರೆ ಅದು ರಾಷ್ಟ್ರೀಯತೆಯ ಉಲ್ಲಂಘನೆಯೇನೂ ಆಗುವುದಿಲ್ಲ. ಆದರೆ ನಾಡಿಗೊಂದು ಧ್ವಜವಿರಲಿ, ಭಾಷೆಗಿನ್ನೊಂದಿರಲಿ ಎನ್ನುವುದು ಅಪ್ರಬುದ್ಧ ಬೌದ್ಧಿಕತೆ.
ಆರ್.ಕೆ. ದಿವಾಕರ, ಬೆಂಗಳೂರು

***
ಮತಕ್ಕೆ ತಳಕು ಬೇಡ
ನಮ್ಮದು ಭಾಷಾವಾರು ಒಕ್ಕೂಟ ರಾಜ್ಯ ವ್ಯವಸ್ಥೆಯಾಗಿರುವುದರಿಂದ ರಾಷ್ಟ್ರಧ್ವಜದಂತೆ ರಾಜ್ಯಧ್ವಜ ಇರಬೇಕೆನ್ನುವುದು ಸಹಜ ಬಯಕೆ. ಅದು ರಾಷ್ಟ್ರಧ್ವಜದಂತೆ ಮತಧರ್ಮ ನಿರಪೇಕ್ಷವಾಗಿರಬೇಕಾದುದೂ ಅಗತ್ಯ. ಅದನ್ನೂ ಕನ್ನಡ ತಾಯಿಯ ಅರಿಸಿನ–ಕುಂಕುಮ ಎಂದು ನಿರ್ದಿಷ್ಟ ಮತಧರ್ಮವೊಂದರ ನಂಬಿಕೆಗಳ ಜೊತೆ ತಳಕು ಹಾಕಕೂಡದು.

ದೇಶದ ಎಲ್ಲ ರಾಜ್ಯಗಳಿಗೂ ತಮ್ಮ ತಮ್ಮ ರಾಜ್ಯ ಧ್ವಜಗಳಿರಲಿ. ಅವೆಲ್ಲವೂ ರಾಷ್ಟ್ರಧ್ವಜದಂತೆಯೇ ಇದ್ದು ಮಧ್ಯದಲ್ಲಿ ರಾಷ್ಟ್ರಧ್ವಜದ ಚಿಹ್ನೆಯಾದ ಚಕ್ರದ ಬದಲು ರಾಜ್ಯ ಚಿಹ್ನೆ ಇರಲಿ (ಕರ್ನಾಟಕದಲ್ಲಿ ಗಂಡಭೇರುಂಡ). ರಾಷ್ಟ್ರಗೀತೆಯಂತೆ ರಾಜ್ಯಗೀತೆಯೂ ಮತಧರ್ಮ ನಿರಪೇಕ್ಷವಾಗಿದ್ದು ನಾಡಿನ ಸಮೃದ್ಧಿಗಳ ಸಂಭ್ರಮ ಮಾತ್ರ ಅಲ್ಲಿರಲಿ.
ಪಂಡಿತಾರಾಧ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.