ADVERTISEMENT

ಕಿಶೋರರ ಜೊತೆ ಕಿಶೋರರಾಗಿ...

ಸಂಗತ

ಡಾ.ಎಚ್.ಬಿ.ಚಂದ್ರಶೇಖರ್
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST

ಬೆಂಗಳೂರಿನ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಇತರ ವಿದ್ಯಾರ್ಥಿಗಳಿಂದ ಹತ್ಯೆಗೀಡಾದ ಸುದ್ದಿ (ಪ್ರ.ವಾ., ಫೆ. 28) ನಿಜಕ್ಕೂ ಕರುಳು ಹಿಂಡುವಂತಹದ್ದು. ವಿದ್ಯಾರ್ಥಿನಿಯೊಬ್ಬಳ ಗೆಳೆತನದ ಕಾರಣದಿಂದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಆತನನ್ನು ಹತ್ಯೆ ಮಾಡಿದ್ದು ದುರದೃಷ್ಟಕರ.

ಉತ್ಸಾಹದಿಂದ ಕೂಡಿದ್ದ ಹಾಗೂ ಕ್ರೀಡೆಯಲ್ಲಿ ಮುಂದಿದ್ದ ಎಳೇ ವಯಸ್ಸಿನ ಕಿಶೋರನ ಸಾವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ನಮ್ಮ ಶಾಲೆ, ಕುಟುಂಬಗಳು ಮಕ್ಕಳಿಗೆ ಜೀವನ ಕೌಶಲಗಳನ್ನು ಕರಗತ ಮಾಡಿಸಲು ಸಫಲವಾಗಿಲ್ಲವೇ? ಕಿಶೋರಾವಸ್ಥೆಯಲ್ಲಿ ಪ್ರೀತಿ, ಪ್ರೇಮ, ಗೆಳೆತನ, ಆತ್ಮೀಯತೆಯ ನಡುವಿನ ವ್ಯತ್ಯಾಸಗಳನ್ನು ಅರ್ಥೈಸಿಕೊಳ್ಳುವ, ಅವುಗಳನ್ನು ನಿಭಾಯಿಸುವ ಕುರಿತಂತೆ ಸೂಕ್ತ ಜಾಗೃತಿಯನ್ನು ನಾವು ಸರಿಯಾಗಿ ಮೂಡಿಸಲಾಗುತ್ತಿಲ್ಲವೇ? ಒಬ್ಬ ನಾಯಕ ನಟ ಹತ್ತಾರು ಪುಂಡರನ್ನು ಚಚ್ಚಿ ಕೆಡವುವುದನ್ನು ವೈಭವೀಕರಿಸುವ ಅಥವಾ ಗೂಂಡಾಗಿರಿ, ರೌಡಿಗಿರಿಯನ್ನು ವಿಜೃಂಭಿಸುವ ಇಂದಿನ ಸಿನಿಮಾಗಳ ಕೆಟ್ಟ ಪರಿಣಾಮದ ಫಲವೇ ಇದು?

ಧೈರ್ಯ, ಉತ್ಸಾಹ, ಶಕ್ತಿ, ಸಾಮರ್ಥ್ಯ ಪುಟಿಯುವ ಹದಿಹರೆಯದಲ್ಲಿ ಜಗತ್ತನ್ನೇ ಗೆಲ್ಲುವೆನೆಂಬ ಅಪರಿಮಿತ ವಿಶ್ವಾಸ ತುಂಬಿತುಳುಕುತ್ತದೆ. ಇದರೊಟ್ಟಿಗೆ ವಯೋಸಹಜವಾಗಿ ಆಗುವ ದೈಹಿಕ, ಮಾನಸಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ಒಂದಷ್ಟು ಒತ್ತಡ, ಬಿಕ್ಕಟ್ಟು, ಮಾನಸಿಕ ತಳಮಳ ಎಲ್ಲವೂ  ಮನೆ ಮಾಡಿರುತ್ತವೆ. ಪೋಷಕರ ಆಶ್ರಯದಲ್ಲೇ ಸದಾ ಇದ್ದು, ಅವರೊಂದಿಗೇ ಗುರುತಿಸಿಕೊಳ್ಳುತ್ತಿದ್ದವರು ನಿಧಾನವಾಗಿ ಕುಟುಂಬದ ಪರಿಸರದಾಚೆ ತಮ್ಮ ಸಾಮಾಜಿಕ ಸಂಪರ್ಕಗಳನ್ನು ಗೆಳೆಯ, ಗೆಳತಿಯರಲ್ಲಿ ಕಂಡುಕೊಳ್ಳುತ್ತಾ, ತಮ್ಮದೇ ಆದ ಒಂದು ಗುಂಪು ರಚಿಸಿಕೊಂಡು, ಅದರಲ್ಲೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ. ತಮ್ಮ ಗುಂಪಿನ ಸದಸ್ಯರೊಂದಿಗೆ ಹೆಚ್ಚು ಆತ್ಮೀಯವಾಗುತ್ತಾ ಅವರೊಂದಿಗೆ ಹೆಚ್ಚು ಸಮಯ ಕಳೆಯತೊಡಗುತ್ತಾರೆ. ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದರೆ, ಕಿಶೋರ-ಕಿಶೋರಿಯರ ಈ ಗುಂಪು ಸಹವಾಸ, ಸಂಪರ್ಕ ಅವರಲ್ಲಿ ಒಂದಷ್ಟು ಸಾಮಾಜಿಕ ಬೆಳವಣಿಗೆಗೆ ಕಾರಣವಾಗುವುದರ ಜೊತೆಗೆ ಕೆಲವೊಮ್ಮೆ ಅಪಾಯವನ್ನೂ ತಂದೊಡ್ಡುತ್ತದೆ. ಗುಂಪಿನ ಇತರ ಸದಸ್ಯರು ಅವರನ್ನು ಕೆಲವೊಮ್ಮೆ ದುಶ್ಚಟಗಳಿಗೆ ಎಳೆದೊಯ್ಯಬಹುದು ಅಥವಾ ಸಮಾಜಘಾತುಕ ಕೃತ್ಯಗಳಿಗೂ ಕೈಹಾಕುವಂತೆ ಪ್ರೇರೇಪಿಸಬಹುದು. ಈ ಹಿನ್ನೆಲೆಯಲ್ಲಿ, ಕಿಶೋರಾವಸ್ಥೆಯಲ್ಲಿ ಇರುವವರನ್ನು ಜತನದಿಂದ ಕಾಪಾಡಬೇಕಾದ ಹೊಣೆ ಸಮಾಜದ ಮೇಲಿದೆ.

ADVERTISEMENT

ಹದಿಹರೆಯಕ್ಕೆ ಬಂದವರನ್ನು ಸ್ನೇಹಿತರಂತೆ ಕಾಣಬೇಕು ಎಂಬುದು ಮನೋವಿಜ್ಞಾನಿಗಳ ಸಲಹೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಚಿಕ್ಕಂದಿನಲ್ಲಿ ಪೋಷಕರ ಲಾಲನೆ, ಪಾಲನೆ, ಪ್ರೀತಿಯನ್ನಷ್ಟೇ ಉಂಡು ಬೆಳೆಯುವವರು ತಮ್ಮ ಓರಗೆಯವರ ಸ್ನೇಹ, ಸಂಪರ್ಕದಲ್ಲಿ ಹೆಚ್ಚು ಸಮಯ ಸಿಲುಕಿದಾಗ, ಸಹಜವಾಗಿ ಪೋಷಕರು ಅಸಮಾಧಾನಕ್ಕೆ ಒಳಗಾಗುತ್ತಾರೆ. ಕುಟುಂಬದ ಸದಸ್ಯರು, ಹಿರಿಯರು ನೀಡುವ ಸಲಹೆ, ಸೂಚನೆ ಮಾರ್ಗದರ್ಶನ ಮಕ್ಕಳಿಗೆ ಹಿಂಸೆ ಎನಿಸತೊಡಗುತ್ತದೆ. ಪೋಷಕರು ಮತ್ತು ಮಕ್ಕಳ ನಡುವೆ ಅಂತರ ಹೆಚ್ಚಾಗುತ್ತಾ ಹೋಗುತ್ತದೆ. ಪೋಷಕರ ಮಾತನ್ನು ಮಕ್ಕಳು ನಿರ್ಲಕ್ಷಿಸಿದರೆ, ಮಕ್ಕಳ ಮಾತನ್ನು ಪೋಷಕರು ಕೇಳುವುದಿಲ್ಲ.

ಇನ್ನು ಶಾಲೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿರುವುದಿಲ್ಲ. ಒಂದರಿಂದ ಒಂಬತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಹಲವಾರು ತಂತ್ರಗಳ ಮೂಲಕ ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಲು ಶಿಕ್ಷಕರು ಯಶಸ್ವಿಯಾಗಿರುತ್ತಾರೆ. ಹೆಚ್ಚಿನ ವೇಳೆ ಶಿಕ್ಷೆಯ ಭಯ ಅಥವಾ ಬೇಕೆಂದೇ ಮಕ್ಕಳಿಂದ ಅಂತರ ಕಾಯ್ದುಕೊಳ್ಳುವ ಶಿಕ್ಷಕರ ಮನೋಭಾವದಿಂದ ಈ ಕೃತಕ ನಿಯಂತ್ರಣ ಸಾಧ್ಯವಾಗಿರುತ್ತದೆ. ಯಾವಾಗ ಹತ್ತನೇ ತರಗತಿಗೆ ವಿದ್ಯಾರ್ಥಿಗಳು ಕಾಲಿಡುತ್ತಾರೋ, ‘ಇದೊಂದೇ ವರ್ಷ ತಾನೇ ಇವರ ನಿಯಂತ್ರಣ’ ಎಂಬ ಮನೋಭಾವದಿಂದ ಶಿಕ್ಷಕರ ನಿಯಂತ್ರಣದಿಂದ ಹೊರಬರಲು ತುಡಿಯುತ್ತಿರುತ್ತಾರೆ. ಅದರಲ್ಲೂ ಹತ್ತನೇ ತರಗತಿಯ ಶೈಕ್ಷಣಿಕ ವರ್ಷದ ಅಂತ್ಯ ಸಮೀಪಿಸುತ್ತಿರುವಂತೆಯೇ, ಪಂಜರದಿಂದ ಹಾರಿ ಹೋಗಲು ತವಕಿಸುವ ಪಕ್ಷಿಗಳಂತೆ, ಶಿಕ್ಷಕರು ಹೇಳುವ ಎಲ್ಲಾ ಮಾತುಗಳನ್ನೂ ಧಿಕ್ಕರಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ವರ್ತಿಸುತ್ತಾರೆ. ಅದೇ ರೀತಿ ಶಿಕ್ಷಕರೂ, ಇವರು ತಮ್ಮ ನಿಯಂತ್ರಣ ದಾಟಿ ಹೋಗೇ ಬಿಡುತ್ತಾರೇನೋ ಎಂಬಂತೆ ಹತಾಶೆಯ ಮಾತುಗಳನ್ನು ಆಡುವುದನ್ನು ಕಾಣಬಹುದು.

ಹಾಗಾದಲ್ಲಿ ಪರಿಹಾರಗಳೇನು? ಪ್ರತಿ ಪಾಲಕ, ಶಿಕ್ಷಕ ಸಹ ಕಿಶೋರಾವಸ್ಥೆಯನ್ನು ದಾಟಿ ಬಂದವರೇ ಆಗಿರುತ್ತಾರಾದ್ದರಿಂದ, ಆ ಹಂತದ ದುಗುಡ, ಆತಂಕ, ತುಮುಲಗಳನ್ನು ಅರಿಯಲು ಅವರು ಮನಸ್ಸು ಮಾಡಬೇಕು. ಬಾಲ್ಯಾವಸ್ಥೆಯಲ್ಲಿದ್ದಾಗಲೇ ಅತಿಯಾಗಿ ನಿಯಂತ್ರಣದಲ್ಲಿರಿಸುವ ಮನೋಭಾವದಿಂದ ಪೋಷಕರು, ಶಿಕ್ಷಕರು ದೂರ ಸರಿದು, ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಮಕ್ಕಳನ್ನು  ಅರ್ಥಮಾಡಿಕೊಂಡು, ಸಹಜ ಸುರಕ್ಷಿತ ಪ್ರೀತಿ, ಆತ್ಮೀಯತೆಯಿಂದ ಬೆಳೆಸಬೇಕು. ಕಿಶೋರಾವಸ್ಥೆಯ ಹಂತದಲ್ಲಿ ಅವರೊಂದಿಗೆ ಇನ್ನೂ ಹೆಚ್ಚು ಸೂಕ್ಷ್ಮವಾಗಿ ಒಡನಾಡುವ ಅಗತ್ಯವನ್ನು ಮನಗಾಣಬೇಕು.

ಎಳೆಯ ವಯಸ್ಸಿನಲ್ಲಿ ಮೂಡುವ ಆಕರ್ಷಣೆಯನ್ನೇ ಪ್ರೀತಿಯೆಂದು ಪರಿಗಣಿಸಿ, ಅನೇಕ ಸಮಸ್ಯೆಗಳನ್ನು ಮೈಮೇಲೆ ತಂದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪ್ರೀತಿ, ಪ್ರೇಮ, ಸ್ನೇಹ, ಗೆಳೆತನದ ಭಾವನೆಗಳ ನಡುವಿನ ವ್ಯತ್ಯಾಸಗಳು ಮತ್ತು ಅವು ತಂದೊಡ್ಡುವ ಅಪಾಯಗಳ ಕುರಿತಂತೆ ಸ್ಪಷ್ಟ ಮಾಹಿತಿಯನ್ನು ನೀಡುವುದು ಅವಶ್ಯ. ಅಶ್ಲೀಲ ಮಾಹಿತಿ, ವಿಡಿಯೊಗಳು ಎಗ್ಗಿಲ್ಲದೇ ದೊರೆಯುವ ಈ ದಿನಗಳಲ್ಲಿ, ಅವುಗಳಿಂದ ದೂರವಿರುವ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಿದೆ. ಇಂತಹ ಜೀವನ ಕೌಶಲಗಳನ್ನು ಕಲಿಸಲು ಶಾಲೆ ಹಾಗೂ ಪದವಿಪೂರ್ವ ಹಂತದ ಶಿಕ್ಷಣ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕಿದೆ. ಶಾಲೆಗೆ ಸಂಬಂಧವಿಲ್ಲದ ಇತರರು ಶಾಲೆಯ ಆವರಣದೊಳಗೆ ಬಾರದಂತೆ ಎಚ್ಚರಿಕೆಯನ್ನೂ ವಹಿಸಬೇಕಿದೆ.

ಇನ್ನು ಹೀರೊಗಳಂತೆ ಹೊಡೆದಾಡುವ ಮನೋಭಾವವನ್ನು ನಿಯಂತ್ರಿಸುವುದರ ಕಡೆಗೂ ಕ್ರಮ ಕೈಗೊಳ್ಳಬೇಕಿದೆ. ಒಂದು ಪ್ರದೇಶದವರು ಇನ್ನೊಂದು ಪ್ರದೇಶದವರೊಂದಿಗೆ, ಒಂದು ಶಾಲೆ, ಕಾಲೇಜು, ಹಾಸ್ಟೆಲ್‌ನ ವಿದ್ಯಾರ್ಥಿಗಳು ಇತರ ಶಾಲೆ, ಕಾಲೇಜು, ಹಾಸ್ಟೆಲ್‌ನ ವಿದ್ಯಾರ್ಥಿಗಳೊಂದಿಗೆ ಹೊಡೆದಾಟ, ಸಂಘರ್ಷಕ್ಕಿಳಿಯುವುದನ್ನು ಕಾಣುತ್ತೇವೆ. ಈ ಸಮಸ್ಯೆ ವಿಶ್ವವಿದ್ಯಾಲಯಗಳನ್ನೂ ಬಿಟ್ಟಿಲ್ಲ. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳ ಆವರಣದೊಳಗೆ ರಾಜಕೀಯ ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಗಮನಿಸಿದರೆ, ಆರೋಗ್ಯವಂತ ಮನಸ್ಸುಗಳನ್ನು ಎಳೆಯ ವಯಸ್ಸಿನಿಂದಲೇ ಪೋಷಿಸಬೇಕಾದ  ಅಗತ್ಯ ಮನಗಾಣಬಹುದು. ನಮ್ಮ ಯುವಭಾರತವನ್ನು ಯುವಶಕ್ತಿಯಾಗಿ ಪರಿವರ್ತಿಸುವ ದಿಕ್ಕಿನೆಡೆಗೆ ಸ್ಪಷ್ಟ ಹೆಜ್ಜೆಗಳನ್ನಿಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.