ADVERTISEMENT

ಕುವೆಂಪು ಜಾಗೃತವಾಣಿ

ಆಳುವ ಚಾವಟಿ ಸಿಕ್ಕ ತಕ್ಷಣ ಸಿರಿವಂತ ಬೆಕ್ಕುಗಳ ಜತೆ ಕೂಟ...

ಜಿ.ಕೃಷ್ಣಪ್ಪ
Published 22 ಮೇ 2015, 19:30 IST
Last Updated 22 ಮೇ 2015, 19:30 IST

ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂಸ್ವಾಧೀನ ಮಸೂದೆ ಕುರಿತು ದೇಶದ ಉದ್ದಗಲಕ್ಕೂ ಚರ್ಚೆ ನಡೆದಿದೆ.  ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಸಮುದಾಯದ ಬಹುಪಾಲು ಜನರ ಸಮ್ಮತಿ ಇರಬೇಕು ಎನ್ನುವ 2013ರ ಭೂಸ್ವಾಧೀನ ಕಾಯ್ದೆಯಲ್ಲಿನ ಷರತ್ತನ್ನು ಈ  ಸುಗ್ರೀವಾಜ್ಞೆಯಲ್ಲಿ  ಕೈಬಿಡಲಾಗಿದೆ. ವೈವಿಧ್ಯಮಯ ಬೆಳೆ ತೆಗೆಯುವ ನೀರಾವರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ ಎನ್ನುವ ನಿರ್ಬಂಧಗಳನ್ನೂ ತೆಗೆದುಹಾಕಲಾಗಿದೆ. ಸರ್ಕಾರಿ ಅನುಷ್ಠಾನಾಧಿಕಾರಿಗಳನ್ನು ಎಲ್ಲ ಕಟ್ಟುಪಾಡುಗಳಿಂದ ಮುಕ್ತಗೊಳಿಸಲಾಗಿದೆ. ಈ ಸಡಿಲಿಕೆ, ಸರ್ಕಾರ ಮತ್ತು ಅದರ ಭೂ ಬ್ಯಾಂಕ್‌ಗಳ ಹಿತಾಸಕ್ತಿಯನ್ನು ಮಾತ್ರ ಕಾಪಾಡುತ್ತದೆ.

ರೈತರು ಹೊಂದಿರುವ ಜಮೀನು ಈಗ ಉತ್ಪನ್ನಕಾರಿಯಾಗಿಲ್ಲ ಎಂದು ಹೇಳುತ್ತ ರೈತರು  ತಲತಲಾಂತರದಿಂದ ತಮ್ಮದಾಗಿಸಿಕೊಂಡು ಜೀವಿಸುತ್ತಿದ್ದ ದುಡಿಮೆಯ, ಬದುಕಿನ ಹಕ್ಕನ್ನು ಕಿತ್ತುಕೊಳ್ಳುವ ಯಾವುದೇ ಬಗೆಯ ಹುನ್ನಾರ, ಜನವಿರೋಧಿಯಾಗಿದೆ. ಇದು ಬಂಡವಾಳಶಾಹಿಗಳ ಒಂದು ಬಗೆಯ ವಸಾಹತುಶಾಹಿ  ಕುತಂತ್ರ. ಇದನ್ನು ನೋಡಿದಾಗ ಕುವೆಂಪು ಅವರ ಚಿಂತನಾ ನುಡಿಗಳು ನೆನಪಾಗುತ್ತಿವೆ.

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!
ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ?
ಎಲ್ಲರೂ ಜಿಗಣಿಗಳೆ ನನ್ನ ನೆತ್ತರಿಗೆ!
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?
(ರೈತನ ದೃಷ್ಟಿ: ಕೋಗಿಲೆ ಮತ್ತು ಸೋವಿಯತ್‌ ರಷ್ಯಾ)
ರೈತರ ಜಮೀನನ್ನು ವಶಪಡಿಸಿಕೊಂಡು ಕಾರ್ಪೊರೇಟ್‌ ವಲಯಕ್ಕೆ  ನೀಡಿ ಕೈಗಾರಿಕೀಕರಣ ಮಾಡ ಹೊರಟಿದ್ದಾರೆ ಆಳುವವರು. ಅವರು ರೈತರ ಬಡತನ ನಿರ್ಮೂಲಗೊಳಿಸುತ್ತೇವೆ, ಬೆಳವಣಿಗೆಯ ಸಮತೋಲ ಸಾಧಿಸುತ್ತೇವೆ ಎನ್ನುವುದು ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಜಾಣ ಮೋಸದ ನುಡಿಯಾಗಿದೆ. ನಮ್ಮಿಂದ ಆಯ್ಕೆಗೊಳ್ಳುವಾಗ ನಮ್ಮ ಹಾಗೆ ಶ್ರೀಸಾಮಾನ್ಯರಂತಿದ್ದ   ಈ ಜನ, ಆಳುವ ಚಾವಟಿ ಸಿಕ್ಕ ತಕ್ಷಣ ಬಂಡವಾಳಶಾಹಿ ಸಿರಿವಂತ ಬೆಕ್ಕುಗಳ ಜೊತೆ ಕೂಟ ನಡೆಸುತ್ತಿದ್ದಾರೆ.    ಅದನ್ನು ಕುವೆಂಪು ಅವರು ಹೀಗೆ ಕನ್ನಡದಲ್ಲಿ ವಿಡಂಬಿಸಿದ್ದಾರೆ.

ಶ್ರೀಮಂತ ಬೆಕ್ಕುಗಳೆಲ್ಲ
ಸಭೆ ಸೇರ್ದರಾದಂತೆ ಬಡ ಇಲಿಗಳುದ್ಧಾರ?
ಆಗಿನ ರೈತರ ಸ್ಥಿತಿಯನ್ನು ಕುವೆಂಪು ಹೀಗೆ ಚಿತ್ರಿಸಿದ್ದಾರೆ: 
ಕೈಗೆ ಕೈದುಗಳಿಲ್ಲ; ಬಾಯ್ಗೆ ವಾಗ್ಮಿತೆಯಿಲ್ಲ,
ಮೈಲಿ ರಕ್ತದ ಬಿಂದುವಿಲ್ಲ. ರಾಜ್ಯದ ಭಾರ
ನಿಮ್ಮ ಮೂಳೆಯ ಮೇಲೆ; ರಾಜ್ಯ ಭಾರದ ಸೂತ್ರ
ಪಾತ್ರ ನಿಮಗಿಲ್ಲ.
(ಬೆಕ್ಕು – ಇಲಿ: ಕೃತ್ತಿಕೆ)
ಈ ನೆಲದ ಮಣ್ಣಿನ ಮಕ್ಕಳು ಗೊಬ್ಬರದ ಮಣ್ಣಿನಲ್ಲಿ ದುಡಿದು ಬೆಳೆತೆಗೆದು ಸದಾ ಬಡತನದಲ್ಲಿರುವ ಈ ನಾಡಿನ ತಳಹದಿಯಾಗಿದ್ದಾರೆ. ಓಹ್‌! ಆಳುವವರು ಎಷ್ಟು ಚತುರ ಮೋಸಗಾರರೆಂದರೆ ಈ ದೇಹದ ತಳಹದಿಯನ್ನೆ ಬುಡಸಮೇತ ಕಿತ್ತೆಸೆಯಲು ಕಾನೂನಿನ ಕುಣಿಕೆ ಭದ್ರಪಡಿಸುತ್ತಿದ್ದಾರೆ. ಇವರು ಮೋಹಿನಿಯಂತಹವರು.

ಶ್ರೀಮಂತರೊಡ್ಡುವ ಬಲೆಯು ಮೃತ್ಯು ಎಂದು ಕುವೆಂಪು ಹೇಳುತ್ತಿದ್ದುದನ್ನು ಈ ದೇಶದ ರೈತರು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

ಮೋಹಿನಿಗೆ ಮರುಳಾಗಿ ಮೂರ್ಖದಾನವರೆಲ್ಲ
ತಮ್ಮಗೆಯ್ಮೆಯ ಪಾಲನನ್ಯರಿಗೆ ತೆತ್ತು
ಸತ್ತಂತೆ ಸಾಯದಿರಿ: ಸಂಸ್ಕೃತಿಯ ಹೆಸರಿಂದೆ
ಶ್ರೀಮಂತರೊಡ್ಡುವಾ ಬಲೆ ನಿಮಗೆ ಮೃತ್ಯು!
(ಹೊಸ ಬಾಳಿನ ಗೀತೆ: ಕೋಗಿಲೆ ಮತ್ತು ಸೋವಿಯತ್‌  ರಷ್ಯಾ)
ಆಳುವವರನ್ನು ಕುವೆಂಪು ಕಳ್ಳರೊಡೆಯ ಎಂದು ಕರೆದು, ಅವನೆಂದೂ ಕೃಪೆಯ ಮೂರ್ತಿಯಲ್ಲ ಎಂದಿದ್ದಾರೆ. ಸಿರಿಸುತರು ರಚಿಸುವ ಕಾನೂನಿನಿಂದ ಅವರು ಇನ್ನೂ ಹೆಚ್ಚು ಸಿರಿವಂತರಾಗುತ್ತ, ಕೂಲಿಕಾರ್ಮಿಕರು, ರೈತರಿಗೆ ಒಂದಂಕಣದ ಜಾಗವಿಲ್ಲ ಎಂದು ನೊಂದು ನುಡಿದಿದ್ದಾರೆ.

ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ
ಕಳ್ಳರೊಡೆಯನು ಕೃಪೆಯ ಮೂರ್ತಿಯೇನು?
(ರೈತರ ದೃಷ್ಟಿ: ಕೋಗಿಲೆ ಮತ್ತು ಸೋವಿಯತ್‌ ರಷ್ಯಾ)
ಸಿರಿಸುತರು ಕಾನೂನುಗಳ ರಚಿಸುತಿಹರು
ಬಡವರದಕೊಳಗಾಗಿ ಗೋಳಾಡುತಿಹರು;

*        *        *
ಕೂಲಿಕಾರರ ರಕುತ ಧನಿಕರಿಗೆ ಕೂಳು,
ದಿನವು ತಿಂದರು ರೈತನೀಯುತಿಹ ನೆಲ್ಲ.
ಧಿಕ್ಕರಿಪರಾತನನು ಪಟ್ಟಣಿಗರೆಲ್ಲ
ಹಳ್ಳಿಯವನೆಂದರಾಯಿತು ದಡ್ಡನೆಂದು
ದೂರುವರು ಸುಲಿಯುವರು ಅವನನ್ನು ತಿಂದು;
ದೊಡ್ಡವರದಾಗಿಹುದು ಠಾವಿದ್ದುದೆಲ್ಲ
ಬಡಜನರಿಗೊಂದಂಕಣದ ಜಾಗವಿಲ್ಲ.
(ಹಾಳೂರು)
ಸಹಸ್ರಾರು ವರ್ಷಗಳಿಂದ ಈ ಭರತ ಭೂಮಿ ಆಸೇತು ಹಿಮಾಚಲ ಪರ್ಯಂತ ಹಲವು ಭಾಷೆ, ಹಾಡು, ಹಸೆ, ಸಂಸ್ಕೃತಿಯ ಬೀಡಾಗಿದೆ. ಆಯಾ ಪ್ರದೇಶದ ಪರಿಸರಕ್ಕೆ  ಸೂಕ್ತವಾದ ಆಹಾರ, ಉಡುಗೆ, ಬೇಸಾಯದ ಕುಶಲಕರ್ಮ, ಇತರ ಗುಡಿ ಕೈಗಾರಿಕೆಗಳು, ರೀತಿರಿವಾಜು ಉಳಿದು ಬಂದಿವೆ. ಈ ಬಗೆಯ ವಿವಿಧತೆಯಲ್ಲಿ ಏಕತೆಯ ಬೇರನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವುದು ಈ ದೇಶದ ರೈತರು.
ನಮ್ಮ ದೇಶ ಬೌದ್ಧ, ಜೈನ, ವೈದಿಕ, ಶೈವ, ಚಾರ್ವಾಕ, ಶರಣ, ದಾಸ, ಸೂಫಿ, ಸಂತ ಪರಂಪರೆಯಿಂದ ಶಾಂತಿಯ ಬೀಡಾಗಿದೆ.

ಅದನ್ನು ಕಿತ್ತು ಹಾಕಲು ಈ ದೇಶದ ಮೇಲೆ ದಾಳಿ ಮಾಡಿದ ಹೂಣರು, ಶಕರು, ಗ್ರೀಕರು, ಮೊಘಲರು, ಬ್ರಿಟಿಷರಿಗೂ ಸಾಧ್ಯವಾಗಿರಲಿಲ್ಲ. ಕಾರಣ ಅವರು ಯಾರೂ ರೈತರನ್ನು ಒಕ್ಕಲೆಬ್ಬಿಸಿರಲಿಲ್ಲ.

ಆದರೆ ಈ ನಾಡಿನ ದುರಂತವೆಂದರೆ ಭಾರತೀಯ ಸಂಸ್ಕೃತಿಯ ವಕ್ತಾರರೆಂದು ಹೇಳಿಕೊಳ್ಳುವ ಪಕ್ಷವು ಆಳುವಾಗ ಬಂಡವಾಳಶಾಹಿಗಳ ಒಳಸಂಚಿಗೆ ಒಳಗಾಗಿ ಈ ನೆಲದ ಮಣ್ಣಿನ ಮಕ್ಕಳನ್ನು ಅವರ ಮೂಲವಾಸ ನೆಲೆಯಿಂದ ಬೇರು ಸಮೇತ ಕಿತ್ತೆಸೆಯಲು ಸಿದ್ಧವಾಗಿದೆ. ಕಾನೂನಿನ ಅಸ್ತ್ರವನ್ನು ನಾಜೂಕಾಗಿ ಬಳಸಿ ಗೋಮುಖ ವ್ಯಾಘ್ರವಾಗಿದೆ.

ಸುಮಾರು ಶೇಕಡ 60 ರಷ್ಟು ರೈತರಿರುವ ಈ ದೇಶದ ಬಜೆಟ್‌ನಲ್ಲಿ  ಬೇಸಾಯಕ್ಕೆ ಮೀಸಲಿಡುವ ಹಣ ಶೇ 2 ರಿಂದ 4. ಹಾಗಾದರೆ ಇವರ ಉದ್ಧಾರ ಹೇಗೆ ಸಾಧ್ಯ ಎಂದು ವಿವೇಚಿಸುವ ಗೋಜಿಗೆ ಹೋಗದವರು ಅವರ ಚಿನ್ನದ ಜಮೀನನ್ನು ದೋಚಲು ಕಾನೂನು ರಚಿಸುವರಲ್ಲ. ಇದಕ್ಕೆ ಏನು ಹೇಳುವುದು? ರೈತರಿಗೆ ಹಣ ಸಿಗಬಹುದು. ಕೆಲಸ ಸಿಗುವುದೆ? (ಇರುವ ಬೇಸಾಯದ ಕೆಲಸ ಇಲ್ಲವಾಗುತ್ತದೆ!)

ಕುಡಿಕೆ ಹಣ ಜೀವನ ನಿರ್ವಹಣೆಗೆ ಆಗಿ ಅವನ ಸಂತತಿಗೆ ಉಳಿಯುವುದೆ? ರೈತನ ಮಕ್ಕಳು ಸುಂದರ ಪರಿಸರದಿಂದ ವಂಚಿತರಾಗಿ ನಗರದ ಕೊಳಚೆಯಲ್ಲಿ ಹೀನಾಯವಾಗಿ ಬದುಕಲು ಈ ನಾಡಿಗೆ ಸ್ವಾತಂತ್ರ್ಯ ಬಂದಿತೆ?

ಇಂತಹ ದುರಂತ ಸ್ಥಿತಿಯಲ್ಲಿ ಅಣ್ಣಾ ಹಜಾರೆಯಂತಹವರು ಸತ್ಯಾಗ್ರಹ, ಪಾದಯಾತ್ರೆ ಮೂಲಕ ರೈತರ ಜಮೀನು ಉಳಿಸಲು ದನಿ ಎತ್ತಿರುವುದು  ಒಂದು ಕಿರು ಆಶಾಕಿರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.