ADVERTISEMENT

ತಬರ ಸೆಟ್ಟಿ ಮತ್ತು ಅಮೀರ್‌ ಸಾಬ್‌

ಡಾ.ಲಕ್ಷ್ಮಣ ವಿ.ಎ.
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
ತಬರ ಸೆಟ್ಟಿ ಮತ್ತು ಅಮೀರ್‌ ಸಾಬ್‌
ತಬರ ಸೆಟ್ಟಿ ಮತ್ತು ಅಮೀರ್‌ ಸಾಬ್‌   

ತನ್ನ ಪ್ರೀತಿಯ ಹೆಂಡತಿ ಅಪ್ಪಿಯ ಪ್ರಾಣ ಉಳಿಸಲು ಅಸಹಾಯಕನಾದ ತಬರಸೆಟ್ಟಿ  ಕೊನೆಗೆ ಉಳಿದಿರಬಹುದಾದ ಒಂದೇ ಉಪಾಯವಾಗಿ ಗ್ಯಾಂಗ್ರಿನ್‌ನಿಂದಾಗಿ ಕೊಳೆತುಹೋದ  ಆಕೆಯ ಕಾಲನ್ನು ಕತ್ತರಿಸಲು ಕಟುಕ ಯೂಸುಫನ ಹತ್ತಿರ ಬಂದು  ವಿನಂತಿಸಿಕೊಂಡಾಗ ಅಕ್ಕಪಕ್ಕದ ಜನ ತಬರನಿಗೆ ಹುಚ್ಚು ಹಿಡಿದಿದೆಯೆಂದು ಗೇಲಿ ಮಾಡಿ ನಗುತ್ತಾರೆ.

ನಿಜವಾಗಿ ಅವನು ಹುಚ್ಚನಾ? ಅವನು ಹುಚ್ಚ ಹೌದೆಂದರೆ ಅವನಿಗೆ ಹುಚ್ಚು ಹಿಡಿಸಿದ ಸಂವೇದನಾಶೂನ್ಯ ವ್ಯವಸ್ಥೆಗೆ ಮೊದಲು ಚಿಕಿತ್ಸೆ ಕೊಡಬೇಕಾಗುತ್ತದೆ. ಇಡೀ ವ್ಯವಸ್ಥೆಯೇ ರೋಗಗ್ರಸ್ತವಾದಾಗ ಯಾರಿಗೆ ಮೊದಲು ಚಿಕಿತ್ಸೆ ಕೊಡಬೇಕೆಂಬ ಜಿಜ್ಞಾಸೆ ಕಾಡುತ್ತದೆ.

ಪೂರ್ಣಚಂದ್ರ ತೇಜಸ್ವಿಯವರು ಬರೆದ ‘ತಬರನ ಕತೆ’ ಓದಿದವರು ತಬರನ ಸಂಕಟವನ್ನು ತಮ್ಮ ಇಡೀ ಜೀವಮಾನದವರೆಗೆ ಹೊತ್ತು ತಿರುಗಬೇಕಾಗುತ್ತದೆ. ಅದಕ್ಕೇ ಸೂಕ್ಷ್ಮಮತಿಗಳು ಇದನ್ನು ಓದದೇ ಇದ್ದರೆ ಕ್ಷೇಮ.

ADVERTISEMENT

ತೇಜಸ್ವಿಯವರು ಈ ಕತೆ ಬರೆದು ನಲವತ್ತೈದು ವರುಷಗಳು ಕಳೆದಿವೆ. ಈ ನಡುವೆ ಸಕಲೇಶಪುರ, ಚಿಕ್ಕಮಗಳೂರು ಮತ್ತು ತಬರ ಜೀವಿಸಿದ ಪಡುಗೆರೆಯೆಂಬ ಊರುಗಳಲ್ಲಿ ಸಾಕಷ್ಟು ನೀರು ಹರಿದಿದೆ. ಊರಿನ ರಸ್ತೆಗಳಿಗೆ ಟಾರು ಬಂದಿದೆ, ಗಟಾರು ಬಂದಿದೆ, ಅಂತರಿಕ್ಷಕ್ಕೆ ಅಸಂಖ್ಯಾತ ಉಪಗ್ರಹಗಳು ಉಡಾವಣೆಯಾಗಿವೆ, ಎಲ್ಲರ ಕೈಯಲ್ಲಿ ಮೊಬೈಲು ಇದೆ, ಮನೆಗೆ ಟಿ.ವಿ. ಬಂದಿದೆ. ಎಲ್ಲ... ಎಲ್ಲ... ಬಂದಿದೆ. ಆದರೆ ತಬರನ ಕತೆ ಬದಲಾಗಿದೆಯೇ?

ಇಂದಿಗೂ ತಬರ ಎಲ್ಲೆಲ್ಲೂ ಎದಿರಾಗುತ್ತಲೇ ಇದ್ದಾನೆ. ಮುನಿಸಿಪಾಲಿಟಿ ಆಫೀಸಿನ ಕಾರಿಡಾರಿನಲ್ಲಿ, ತಾಲ್ಲೂಕು ಕಚೇರಿಯ ದೂಳು ಮೆತ್ತಿದ ಫೈಲುಗಳಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಜವಾನನ ಮುಂದೆ ದೈನ್ಯನಾಗಿ, ಲೇವಾದೇವಿಗಾರ ಸುಬ್ಬುಶೆಟ್ಟಿಯ ಅಂಗಡಿಯ ಎದಿರು ಸಾಲಕ್ಕಾಗಿ ಕೈಯೊಡ್ಡಿ... ಅಷ್ಟೇ ಏಕೆ,  ಮೊನ್ನೆ ಮೊನ್ನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ತನ್ನ ಗಂಡ ಅಮೀರ್‌ ಸಾಬ್‌ಗೆ ವೀಲ್ ಚೇರು ಸಿಗದ ಕಾರಣ ಅವರನ್ನು ದರ ದರನೆ ಎಕ್ಸರೇ ರೂಮಿಗೆ ಎಳೆದೊಯ್ದ ಅಸಹಾಯಕ ಫಾಮಿದಾ ರೂಪದಲ್ಲಿ ನಮಗೆ ಸಿಕ್ಕೇ ಸಿಗುತ್ತಾನೆಂಬ ಸಂಕಟವಿದೆ.

ಈ ದೃಶ್ಯವನ್ನು ಚಿತ್ರೀಕರಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಘಟನೆಯನ್ನು ಖಂಡಿಸಿ ದೇಶದಾದ್ಯಂತ ಅಕ್ರೋಶ ವ್ಯಕ್ತವಾಯಿತು, ಹಾಗೆಯೇ ‘ಇದೊಂದು ಪೂರ್ವಯೋಜಿತ ಪಿತೂರಿ, ಕಾಣದ ಕೈಗಳ ಕೈವಾಡ, ಅಪಪ್ರಚಾರ ಮಾಡಲು ನಮಗಾಗದವರು ಮಾಡಿದ ಕುತಂತ್ರ’ ಎಂದು ತಲೆಗೆ ಒಬ್ಬೊಬ್ಬರಂತೆ ಮಾತನಾಡಿಕೊಂಡರು. ಸದ್ಯ ತನ್ನ ಪತಿಯನ್ನು ಎಳೆದೊಯ್ದ ಫಾಮಿದಾಗೆ ಹುಚ್ಚು ಹಿಡಿದಿದೆಯೆಂದು ಯಾರೂ ಹೇಳಲಿಲ್ಲ.

ಅಲ್ಲ ಸ್ವಾಮಿ, ಆ ಬಡ ಮಹಿಳೆ ತನ್ನ ಅಸಹಾಯಕ ಗಂಡನ ಕಾಯಿಲೆ ಸದ್ಯ ವಾಸಿಯಾದರೆ ಸಾಕು ಎಂದು ಕಾಣದ ದೇವರಿಗೆ ಕೈ ಮುಗಿಯುತ್ತ ಕುಳಿತಿರುವುದು ಬಿಟ್ಟರೆ ಅಕ್ಷರ ಲೋಕದವರಂತೆ ಪ್ರಚಾರದ ಗೀಳಿಗೆ ಬಿದ್ದು ತನ್ನ ಗಂಡನನ್ನು ಲೋಕದೆದುರಿಟ್ಟು ಅಗ್ಗದ ಪ್ರಚಾರ ಪಡೆಯುವ ಹರಕತ್ತಾದರೂ ಏನಿದೆ?

ಮೆಗ್ಗಾನ್‌ ಆಸ್ಪತ್ರೆ ಇಲ್ಲಿ ನೆಪ, ತಬರ ಎದುರಿಸಿದ ಸರ್ಕಾರಿ ವ್ಯವಸ್ಥೆಯ ಒಂದು ತುಣುಕು ಅಷ್ಟೇ. ಹಾಗಂತ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯಾ? ಇದನ್ನು ಒಪ್ಪಲೂ ಮನಸಾಗುವುದಿಲ್ಲ. ಪ್ರತಿವರ್ಷ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ತೆಗೆದಿರಿಸುತ್ತದೆ.  ಜಿಲ್ಲಾ ಆಸ್ಪತ್ರೆಗಳನ್ನು ಪ್ರತಿವರ್ಷ ಮೇಲ್ದರ್ಜೆಗೆ ಏರಿಸುತ್ತಾರೆ. ಡಯಾಲಿಸಿಸ್ ಯಂತ್ರ, ಸ್ಕ್ಯಾನಿಂಗ್ ಯಂತ್ರಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ಕೊಡುತ್ತಾರೆ. ಆದರೆ ಆರೋಗ್ಯ ಸಚಿವರು ಒಮ್ಮೆ ಮಾರುವೇಷದಲ್ಲಿ ಬಂದು ತಾವೇ ಕೊಟ್ಟ ಅನುದಾನದ ಫಲವನ್ನು ಜನಸಾಮಾನ್ಯರು ಹೇಗೆ ಉಣ್ಣುತ್ತಿದ್ದಾರೆ ಎಂದು ನೋಡಿ ಬರಲಿ ನೋಡೋಣ?

ಡಯಾಲಿಸಿಸ್ ಯಂತ್ರ ಕೆಟ್ಟಿರುತ್ತದೆ, ಸ್ಕ್ಯಾನಿಂಗ್ ಯಂತ್ರದ ವೈದ್ಯರು ರಜೆಯ ಮೇಲಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆಸ್ಪತ್ರೆಯ ಇಡೀ  ತುರ್ತು ಚಿಕಿತ್ಸಾ ಘಟಕ ಕೃತಕ ಉಸಿರಾಟದಲ್ಲಿರುತ್ತದೆ. ಇನ್ನೂ ಹೇಳಬೇಕೆಂದರೆ ಸರ್ಕಾರಿ ಕೋಟಾದಲ್ಲಿ ಸೀಟು ಗಿಟ್ಟಿಸಿಕೊಂಡು, ಸರ್ಕಾರದ ಅನುದಾನದಲ್ಲಿ ಪದವಿ ಪಡೆದು, ಸ್ನಾತಕೋತ್ತರವನ್ನೂ ಮುಗಿಸಿದವರೆಲ್ಲ  ಎಲ್ಲಿ ಎಂದು ಕೇಳುವ ಧೈರ್ಯ ಸರ್ಕಾರಕ್ಕೂ ಇಲ್ಲ. ಏಕೆಂದರೆ ಇಂತಹ ವೈದ್ಯರೆಲ್ಲ ಕೋರ್ಟಿಗೆ ದಂಡ ಕಟ್ಟಿ ಹಳ್ಳಿಯಲ್ಲಿ ಚಿಕಿತ್ಸೆ ನೀಡಬೇಕೆನ್ನುವ ಸರ್ಕಾರದ ಕಾನೂನಿನಿಂದ ಜಾಣತನದಿಂದ ತಪ್ಪಿಸಿಕೊಂಡಿರುತ್ತಾರೆ. ಇವರೆಲ್ಲಾ ಒಂದೋ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಲಕ್ಷ ಲಕ್ಷ ಎಣಿಸುತ್ತಿರುತ್ತಾರೆ ಇಲ್ಲವೇ, ಈ ದೇಶದ ಋಣ ಸಾಕೆಂದು ವಿದೇಶದಲ್ಲಿ  ‘ಸ್ಪೆಷಲಿಸ್ಟ್‌’ ವೈದ್ಯರಾಗಿ ದುಡಿಯುತ್ತಿರುತ್ತಾರೆ.  ಮೇಲಿನ ಘಟನೆಗೂ ವೈದ್ಯರಿಗೂ ತಳಕು ಹಾಕಲು ಹೇಗೆ ಸಾಧ್ಯವಾಗದು ಹೇಳಿ?

ಅಮಾನತುಗೊಂಡವರು ಅದೇ ಅಸಹಾಯಕ ನರ್ಸ್‌ಗಳು ಮತ್ತು ಆಯಾಗಳು. ಇವರ ನಿಯಂತ್ರಣ ಮೇಲಧಿಕಾರಿಗಳ ಕೈಯಲ್ಲಿ ಇರುವುದಲ್ಲವೇ?
ವಿಡಿಯೊ ಮಾಡಿದ ಮಾತ್ರಕ್ಕೆ, ಪತ್ರಿಕೆ, ಟಿ.ವಿ.ಯಲ್ಲಿ ಬಂದ ಕಾರಣದಿಂದ ಈ ವಿಚಾರ ಜಾಹೀರಾಗಿದೆ. ಬೆಳಕಿಗೆ ಬಾರದ ಪ್ರಕರಣಗಳೆಷ್ಟೋ?
ಅಂದಹಾಗೆ ಮೊನ್ನೆಯಷ್ಟೇ ಹೊಸಕೋಟೆ ತಾಲ್ಲೂಕಿನ ಆಲಪನಹಳ್ಳಿಯ ಮುನಿರಾಜು ದಂಪತಿ ರಸ್ತೆ ಅಪಘಾತವಾಗಿ ಚಿಕಿತ್ಸೆಗೆಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಬಂದು,  ವೈದ್ಯರು ಸಿಗದೆ ಆಸ್ಪತ್ರೆಯ ಆವರಣದಲ್ಲೇ ಮಲಗಿ ಕಾಲ ಕಳೆದಿದ್ದಾರೆ. ಕಾರಣ ಕೇಳಿದರೆ ‘ಭಾನುವಾರ ರಾತ್ರಿ ವೈದ್ಯರಿರುವುದಿಲ್ಲ!’ ಇನ್ನು ಮುಂದೆ ರೋಗಿಗಳು ವಾರ–ತಿಥಿ ನೋಡಿಕೊಂಡು ಅಪಘಾತ ಮಾಡಿಕೊಳ್ಳಬೇಕು. ಇಲ್ಲವೇ ಮರಣ ಹೊಂದಬೇಕು.
ಮಾನವೀಯತೆ ಮೆರೆಯಬೇಕಾದ ಆಸ್ಪತ್ರೆಗಳು ಈ ತರಹ ವರ್ತಿಸಿದರೆ ಇಲ್ಲಿ ಯಾರು, ಯಾರಿಗೆ ಚಿಕಿತ್ಸೆ ಕೊಡಬೇಕು?

ಅಂದಹಾಗೆ ಸರ್ಜನ್ ಮೆಗ್ಗಾನ್ ಎಂಬ ಬ್ರಿಟಿಷ್ ವೈದ್ಯರ ನೆನಪಿನಲ್ಲಿ ಕಟ್ಟಿರುವ ಮೆಗ್ಗಾನ್‌ ಆಸ್ಪತ್ರೆ ಈಗ ಶಿವಮೊಗ್ಗದ ಸರ್ಕಾರಿ ಕಾಲೇಜು ಮತ್ತು ಆಸ್ಪತ್ರೆಯಾಗಿದೆ. ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಮೈಸೂರು ಮತ್ತು ಶಿವಮೊಗ್ಗ ಒಳಗೊಂಡಂತೆ ಮಲೆನಾಡು ಭಾಗಗಳಲ್ಲಿ ಅತಿಯಾಗಿ ಕಾಡುತಿದ್ದ ಮಲೇರಿಯಾ ಮತ್ತು ಕಾಲರಾ ರೋಗಿಗಳಿಗೆ  ಸುಮಾರು ಮೂವತ್ತು ವರ್ಷಗಳ ಕಾಲ ಹಗಲು ರಾತ್ರಿಯೆನ್ನದೆ ಇವರು ಸೇವೆ ಸಲ್ಲಿಸಿದ ಇತಿಹಾಸವಿದೆ. ಮೈಸೂರು ಮಹಾರಾಜರು ಇವರನ್ನು ದರ್ಬಾರಿನ ವೈದ್ಯರೆಂದು ಗೌರವಿಸಿ ಇವರ ಸೇವೆ ಪಡೆದಿದ್ದಾರೆ. ನಿವೃತ್ತಿಯ ನಂತರವೂ ಅವರ ತಾಯ್ನಾಡು ಇಂಗ್ಲೆಂಡ್‌ಗೆ ತೆರಳದೆ ಮೈಸೂರಿನಲ್ಲಿ ತಮ್ಮ ದೇಹತ್ಯಾಗ ಮಾಡಿದವರು.

ಅಮೀರ್‌ ಸಾಬ್‌ರಂತಹ ತಬರರು ಈ ಘನವೆತ್ತ ಆಸ್ಪತ್ರೆಯಲ್ಲಿ ನರಳದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.