ADVERTISEMENT

ದಲಿತರ ಸಮಸ್ಯೆಗಳಿಗೆ ದನಿಯಾಗುವುದು ಬೇಡವೆ?

ಡಾ.ಎಚ್.ಡಿ.ಉಮಾಶಂಕರ್
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಅಧ್ಯಕ್ಷ ಸ್ಥಾನಕ್ಕೆ ದಲಿತರು ಬೇಕು; ಗೋಷ್ಠಿಯಲ್ಲಿ ದಲಿತ ಪರ ಚರ್ಚೆ ಬೇಡ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ನಿಲುವಾಗಿ-­ರ­ಬಹುದೇನೋ! ಏಕೆಂದರೆ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಾವೊಂದು ಗೋಷ್ಠಿಯಲ್ಲೂ ದಲಿತ ಸಾಹಿತ್ಯವನ್ನಾಗಲೀ, ದಲಿತಪರ ಧೋರಣೆಗಳ ಚರ್ಚೆಯನ್ನಾಗಲೀ ಏರ್ಪಡಿಸಿಲ್ಲ. ಆದರೆ ದಲಿತರೊಬ್ಬರನ್ನು ಅಧ್ಯಕ್ಷರ­ನ್ನಾಗಿ ಮಾಡಿ ಸಾಹಿತ್ಯ ಪರಿಷತ್ತು ಹೆಮ್ಮೆಯಿಂದ ಬೀಗುತ್ತಿದೆ. ಇದರ ಪರಿಣಾಮ ದಲಿತರ ದಿನ­ನಿತ್ಯದ ಸಮಸ್ಯೆಗಳನ್ನು ಚರ್ಚೆಯಿಂದ ದೂರ ಉಳಿಸಿದೆ. ಕಡ್ಡಾಯವಾಗಿ ದಲಿತರ ಸಮಸ್ಯೆ­ಗಳನ್ನು ಚರ್ಚೆ ಮಾಡಬೇಕೆನ್ನುವುದಕ್ಕೆ ಯಾವ ಲಿಖಿತ, ಅಲಿಖಿತ ನಿಯಮಗಳೂ ಇಲ್ಲ. ಆದರೆ ದಲಿತ­ರೊ­ಬ್ಬ­ರನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂದು ಪಣ­ತೊಟ್ಟ ಸಾಹಿತ್ಯ ಪರಿಷತ್ತಿಗೆ ದಲಿತರ ಸಮಸ್ಯೆಗಳು ಕಾಣಿಸುವುದಿಲ್ಲವಲ್ಲ, ಇದೇ ಸಮಸ್ಯೆ. ಈ ಸಮಸ್ಯೆ­ಗಳನ್ನು ಸಮ್ಮೇಳನ ನಡೆಯುವ ಜಿಲ್ಲೆ­ಯಲ್ಲೇ ಹುಡುಕಿದರೆ ಸಿಗುವ ಪ್ರಕರಣಗಳು ಹಲವು ಇವೆ.

ಇದೇ ಹಾಸನ ಜಿಲ್ಲೆಯಲ್ಲಿ ‘ಜೀವಕ’ ಎಂಬ ಸಂಸ್ಥೆ ಇದುವರೆಗೆ ೫೩೪ ವಿವಿಧ ರೀತಿಯ ಜೀತ ಪ್ರಕರಣಗಳನ್ನು ಪತ್ತೆ ಮಾಡಿದೆ. ವಯಸ್ಸಾದ ಮುದುಕರು ಇಂದಿಗೂ ಜೀತದಲ್ಲಿ ನೆಲೆ ನಿಂತಿರು­ವುದು ದುರಂತವೇ ಸರಿ. ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಹೋಬಳಿ ಬದ್ದಿಕೆರೆ ಗ್ರಾಮದ ದಲಿತ ರಂಗಸ್ವಾಮಿ ಅವರನ್ನು ತಮಟೆ ಹೊಡೆಯಲಿಲ್ಲ ಎಂಬ ಕಾರಣದಿಂದ ಬೆತ್ತಲೆ­ಗೊಳಿಸಿ ಕಂಬಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿ ಹೊಡೆದಿ­ದ್ದಾರೆ. ಅವರ ಹೆಂಡತಿಗೆ ಅತ್ಯಾಚಾರ ಮಾಡುವ ಬೆದರಿಕೆ ಒಡ್ಡಿದ್ದಾರೆ. ಅರಕಲುಗೂಡಿನ ಸಿದ್ದಾಪುರ ಗ್ರಾಮದ ದಲಿತರಿಗೆ ಅಲ್ಲಿನ ಸವರ್ಣೀಯರೆಲ್ಲ ಸೇರಿ ಬಹಿಷ್ಕಾರ ಹಾಕಿದ್ದಾರೆ. ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿಯ ಗಂಗೂರಿನ ದೇವಸ್ಥಾನ ಪ್ರಕರಣ ರಾಜ್ಯದಾದ್ಯಂತ ಒಂದಷ್ಟು ದಿನ ತಳಮಳವನ್ನು ಹುಟ್ಟು ಹಾಕಿ ಜಾತಿಭೂತ ಮನಸ್ಸುಗಳನ್ನು ನಾಡಿಗೆ ಪರಿಚಯಿ­ಸಿತ್ತು (ಈ ಎಲ್ಲಾ ಮಾಹಿತಿ­ಗಳು ‘ಜಾಡಮಾಲಿ ಜಗತ್ತು’ ಪುಸ್ತಕದಲ್ಲಿ ಈಗಾಗಲೇ ದಾಖಲಾಗಿವೆ).

ಇದೇ ಜಿಲ್ಲೆಯ ಗಂಡಸಿ ಸಮೀಪದ ಬಾಗೀ­ವಾಳು ಎಂಬಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತ­ರಿಗೆ ಬಹಿಷ್ಕಾರ ಹಾಕಲಾಗಿದೆ. ಹಾಸನ ನಗರದಲ್ಲಿ ಅಸ್ಪೃಶ್ಯ ಜಾತಿಯವರಿಗೆ ಬಾಡಿಗೆ ಮನೆ ಸಿಗದ ಉದಾಹರಣೆಗಳು ಸಾಕಷ್ಟಿವೆ. ಇಲ್ಲಿನ ಪೌರ­ಕಾರ್ಮಿಕರು ದಿನನಿತ್ಯ ಕೊಳಕು ಜಾಗದಲ್ಲಿ ಕೆಲಸ ಮಾಡುತ್ತಾ ನೂರಾರು ಸೊಳ್ಳೆ ನೊಣಗ­ಳೊಂದಿಗೆ ಜೀವನ ಮಾಡುತ್ತಿದ್ದಾರೆ. ಇವು ಬೆಳಕಿಗೆ ಬಂದಂಥ­ವುಗಳು, ಬೆಳಕಿಗೆ ಬಾರದವುಗಳು ಇನ್ನೆಷ್ಟೋ!

ಇದಲ್ಲದೆ ರಾಜ್ಯದ ಬೇರೆ ಕಡೆಗಳಲ್ಲಿ ಇಂತಹ ನೂರಾರು ಪ್ರಕರಣಗಳು ನಡೆದಿವೆ. ಉದಾ­ಹರಣೆಗೆ ಚಿತ್ರದುರ್ಗದ ಕೋನಿಗರಹಳ್ಳಿಯಲ್ಲಿ ಸವರ್ಣೀಯರು ಇತ್ತೀಚೆಗೆ ದಲಿತರಿಗೆ ಕ್ಷುಲ್ಲಕ ಕಾರಣಕ್ಕಾಗಿ ಬಹಿಷ್ಕಾರ ಹಾಕಿ, ಒಂದು ಹೆಣ್ಣು ಮಗಳ ಸಾವಿಗೂ ಕಾರಣರಾದರು. ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ಜಾತಿ ದ್ವೇಷದ ಹಿನ್ನೆಲೆಯಲ್ಲಿ  ದಲಿತರ ಆರು ಮನೆಗಳಿಗೆ ಬೆಂಕಿ ಇಡಲಾಗಿದೆ. ಮೈಸೂರು ಪಕ್ಕದ ಹುಣಸೂರಿನ ಬಿಳಿಗೆರೆಯಲ್ಲಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ­ರಿಗೆ ಬಹಿಷ್ಕಾರ ಹಾಕಲಾಗಿತ್ತು. ಇದೆಲ್ಲ ಏನನ್ನು ಹೇಳು­ತ್ತದೆ? ದಲಿತರ ಪರಿಸ್ಥಿತಿ ಮೊದಲಿಗಿಂತ ಯಾವು­ದ­ರಲ್ಲೂ ಭಿನ್ನವಾಗಿಲ್ಲ ಎಂಬುದನ್ನು ತಿಳಿ­ಸುತ್ತದೆ. ಇದನ್ನು ಹೋಗಲಾಡಿಸುವುದು ಪ್ರತಿ­ಯೊಂದು ಮಾನವಪರ ಸಂಘ ಸಂಸ್ಥೆಯ ಕರ್ತವ್ಯ­ವಲ್ಲವೇ?

ಇದನ್ನು ಸಮ್ಮೇಳನದಲ್ಲಿ ಚರ್ಚಿಸಿದ ತಕ್ಷಣ ಎಲ್ಲವೂ ನಿಂತುಹೋಗುತ್ತದೆ ಎಂಬ ಭ್ರಮೆ ಇಲ್ಲಿಲ್ಲ. ಆದರೆ ಈ ಚರ್ಚೆಯನ್ನು ಸಾಹಿತ್ಯ ಸಮ್ಮೇಳನದಂತಹ ಜನಸಂದಣಿಯ ನಡುವೆ ಚರ್ಚಿಸಿದರೆ ಕೆಲವರ ಕಿವಿಗಾದರೂ ಬಿದ್ದು ಕನಿಷ್ಠ ಇದರ ವಿರುದ್ಧ ಧ್ವನಿ ಎತ್ತುವ ಮನಸ್ಥಿತಿ­ಯಾ­ದರೂ ಉಂಟಾಗುತ್ತದೆ. ಅಥವಾ ನವನಾಗರಿಕ­ರೆನಿಸಿಕೊಂಡ ಹಲವು ನಗರಜೀವಿಗಳಿಗೆ ಇದು ಮನಮುಟ್ಟಿ ತಮ್ಮ ನಿಲುವಿನ ಬಗ್ಗೆ ತಮಗೇ ಹೇಸಿಗೆ ಬರುವಂತಾಗುತ್ತದೆ. ಅಥವಾ ದೌರ್ಜನ್ಯ ಮಾಡುವ ಕೆಲವರಿಗಾದರೂ ಅದು ಅಪರಾಧ ಅಥವಾ ತಪ್ಪು ಎನ್ನುವ ಧೋರಣೆಯಾದರೂ ಮೈಗೂಡುತ್ತದೆ. ಆದರೆ ಇಂತಹ ಒಂದು ಅವಕಾಶಕ್ಕೆ ಕಸಾಪ ಕಲ್ಲು ಹಾಕಿದೆ.

ದೇಶದಲ್ಲಿ ಇನ್ನೂ ಎಷ್ಟೋ ಸಮಸ್ಯೆಗಳು ಇವೆ. ಆದರೆ ಎಲ್ಲವನ್ನೂ ಸಮ್ಮೇಳನದಲ್ಲಿ ಚರ್ಚಿಸಲು ಸಾಧ್ಯವೇ? ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ದಲಿತ ನೆಲೆಯಿಂದ ಬಂದ ಕವಿಯನ್ನು ಅಧ್ಯಕ್ಷರನ್ನಾಗಿ ಮಾಡಿ ದಲಿತರ ಸಮಸ್ಯೆಗಳ ಚರ್ಚೆಯಾಗ­ದಿರುವುದು ವಿಪರ್ಯಾಸ. ‘ಆಧುನಿಕ ಆತಂಕಗಳು’ ಶೀರ್ಷಿಕೆಯ ಗೋಷ್ಠಿ­ಯಲ್ಲಿ ಕೃಷಿ, ಕೈಗಾರಿಕೆ, ಪರಿಸರ ಇವುಗಳ ಕುರಿತು ಚರ್ಚಿಸುತ್ತಿರುವ ಕಸಾಪಕ್ಕೆ (ಇವುಗಳು ಅಮುಖ್ಯ­ವೆನ್ನುವ ಧೋರಣೆ ಇಲ್ಲಿಲ್ಲ) ಹಾಸನ ಜಿಲ್ಲೆ­ಯಲ್ಲೇ ಅಸ್ತಿತ್ವದಲ್ಲಿರುವ ಜೀತ ಪದ್ಧತಿ ಮತ್ತು ಕ್ರೂರ ಜಾತಿಪದ್ಧತಿ ಕುರಿತ ಮೌನವೇಕೆ? ಇದು ಪ್ರಧಾನಧಾರೆಯಲ್ಲಿ ಚರ್ಚೆಯಾಗು­ತ್ತಿಲ್ಲವೇಕೆ?

ಸಾಹಿತ್ಯ, ಸಾಮಾಜಿಕ, ಭಾಷಾ ಚಳವಳಿಗಳ ಹಿನ್ನೆಲೆಯಲ್ಲಿ ದಲಿತರ ಸಮಸ್ಯೆಗಳ ಕುರಿತು ಒಂದು ಸಣ್ಣ ನೋಟ ಇಲ್ಲಿ ಚರ್ಚಿತವಾಗ­ಬ­ಹುದು. ಆದರೆ ಸಮಗ್ರ ದೃಷ್ಟಿಯಲ್ಲಿ ಇಲ್ಲಿ ಚರ್ಚೆ ನಡೆಯುತ್ತಿಲ್ಲ. ಹಾಗಾದರೆ ದಲಿತರ ಸಮಸ್ಯೆಗಳು ಪೂರ್ತಿ ಪರಿಹಾರ ಕಂಡಿವೆಯೇ? ದಲಿತರು ಅನುಭವಿಸುತ್ತಿರುವ ಬಹಿಷ್ಕಾರ, ಅತ್ಯಾ­ಚಾರ, ಅವಮಾನ  ಇವುಗಳು ನಿರಂತರವಾಗಿ ಉಳಿಯ­ಬೇಕೆ? ಅಥವಾ ಇಂತಹ ವಿಷಯಗಳು ಗೌಣವೇ? ಈ ಎಲ್ಲದರ ಹಿನ್ನೆಲೆಯಲ್ಲಿ ದಲಿತರಿಗೆ ಎಲ್ಲಿಯ­ವರೆಗೂ ಇಂತಹ ಪರಿಸ್ಥಿತಿ ಇರುತ್ತದೋ ಅಲ್ಲಿಯ­ವರೆಗೆ ಇಂತಹ ಸಮ್ಮೇಳನಗಳಲ್ಲಿ ಗರಿಷ್ಠ ಮಟ್ಟದ ಚರ್ಚೆಯಾಗಲೇಬೇಕು. ಏಕೆಂದರೆ ಈ ಬಾರಿ ಕಸಾಪ ದಲಿತ ಅಧ್ಯಕ್ಷರನ್ನು ಮಾಡಿ ತಾನು ದಲಿತ­ಪರ ಎಂಬಂತೆ ನಡೆದುಕೊಳ್ಳುತ್ತಿದೆ. ಇದಕ್ಕೂ ಮುಖ್ಯ­ವಾಗಿ ಸಾಹಿತ್ಯದ ಚರ್ಚೆ ಕೇವಲ ಸಾಹಿತ್ಯ­ಕ್ಕಷ್ಟೆ ಸೀಮಿತವಲ್ಲ ತಾನೆ. ಇದಷ್ಟೇ ಆಗಿದ್ದರೆ ಸಿದ್ಧಲಿಂಗಯ್ಯ ಅವರ ಕವನಗಳಲ್ಲಿ ಬರುವ ಶೋಷಿತರು, ಕುವೆಂಪು ಕಾದಂಬರಿಗಳಲ್ಲಿ ಬರುವ ದುಡಿಯುವ ವರ್ಗ, ಕಾರಂತರ ಚೋಮ ಇನ್ನೂ ಮುಂತಾದ ಸಾಹಿತ್ಯ ಪರ್ವತದಲ್ಲಿ ಮೂಡಿಬಂದಿ­ರುವ ಅನೇಕ ಪಾತ್ರಗಳನ್ನು ಕೇವಲ ಪಾತ್ರಗಳ­ನ್ನಾಗಿ ನೋಡಬೇಕಿತ್ತು. ಆದರೆ ಹಾಗೆ ನೋಡಲು ಆಗುವುದಿಲ್ಲ. ಈ ‘ಆಗುವುದಿಲ್ಲ’ ಎಂಬುದೇ ದಲಿತರ ವಸ್ತುಸ್ಥಿತಿಯ ಚರ್ಚೆಗೆ ಒತ್ತಾಯಿ­ಸು­ತ್ತದೆ. ಇದನ್ನು ಮೊದಲು ಪರಿಗಣಿಸಬೇಕು.

ಇಲ್ಲಿ ದಲಿತ ಸಾಹಿತ್ಯ ಚರ್ಚೆಯಾಗಬೇಕಿತ್ತು. ಆ ಮೂಲಕ ದಲಿತರ ವಸ್ತುಸ್ಥಿತಿ ಚರ್ಚೆ­ಯಾಗ­ಬೇಕಿತ್ತು. ಆದರೆ ಇದ್ಯಾವುದಕ್ಕೂ ಕಸಾಪ ಆಸ್ಪದ­ವನ್ನೇ ನೀಡದೆ ಹಾಸನದ ಜಿಲ್ಲೆಯಲ್ಲೇ ಜೀವಂತ­ವಿರುವ ಜ್ವಲಂತ ಸಮಸ್ಯೆಯನ್ನೂ  ಕಡೆಗಣಿಸಿದೆ. ಈ ಹಿಂದೆಯೂ ಇಂತಹುದೇ ಕಾರಣಗಳಿಂದಾಗಿ ದಲಿತ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬರಲು ಇದೇ ಕಸಾಪದ ಧೋರಣೆ ಕಾರಣವಾಯಿತು. ಒಂದು ವೇಳೆ ಕಸಾಪ, ‘ದಲಿತರ ಸಾಹಿತ್ಯ, ಸಂಸ್ಕೃತಿಯನ್ನು ಕುರಿತು ದಸಾಪ ಚರ್ಚಿಸುತ್ತಿದೆ, ಇಲ್ಲೂ ಚರ್ಚೆ ಏಕೆ?’ ಎಂದು ಯೋಚಿಸಿದರೆ, ಕನ್ನಡದಲ್ಲೇ ಇನ್ನಿತರ ಸಮ್ಮೇಳನಗಳು ನಡೆಯು­ತ್ತಿವೆ, ಅಲ್ಲೂ ಸಾಹಿತ್ಯ, ಸಂಸ್ಕೃತಿಯ ಹಲವು ಮಜಲುಗಳು ಚರ್ಚೆ­ಯಾಗುತ್ತಿವೆ. ಇದನ್ನು ಕುರಿತು ಯಾವ ರೀತಿಯ ಅಭಿಪ್ರಾಯ ಕಸಾಪ ತಳೆಯುತ್ತದೋ ಗೊತ್ತಿಲ್ಲ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.