ADVERTISEMENT

ದುಬಾರಿ ‘ವಿದ್ಯೆ’ ಭ್ರಮನಿರಸನಕ್ಕೆ ದಾರಿ?

ಎಚ್.ಕೆ.ಶರತ್
Published 17 ಮೇ 2017, 20:12 IST
Last Updated 17 ಮೇ 2017, 20:12 IST
ದುಬಾರಿ ‘ವಿದ್ಯೆ’ ಭ್ರಮನಿರಸನಕ್ಕೆ ದಾರಿ?
ದುಬಾರಿ ‘ವಿದ್ಯೆ’ ಭ್ರಮನಿರಸನಕ್ಕೆ ದಾರಿ?   

ಮೊನ್ನೆ ಬಸ್‌ನಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸುತ್ತಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಅವರ ಮಾತು ನನ್ನ ಕಿವಿಗೂ ಬೀಳಲಾರಂಭಿಸಿತು. ಅತ್ತ ಕಡೆಯಿಂದ ಇವರ ಮಾತು ಆಲಿಸುತ್ತಿದ್ದ ವ್ಯಕ್ತಿಗೆ, ‘ಅವ್ಳಿಗೆ ಸೆವೆನ್ ಒನ್‌ಜಾ ಸೆವೆನ್ ಕಲ್ಸಿ. ಆಟ ಆಡೋಕೆ ಬಿಡ್ಬೇಡಿ’ ಎನ್ನುವ ಸೂಚನೆ ನೀಡುತ್ತಿದ್ದರು.

ಮನೆಯಲ್ಲಿರುವ ತಮ್ಮ ಮಗಳು ಬೇಸಿಗೆ ರಜೆಯನ್ನು ಆಟವಾಡುತ್ತ ಹಾಳುಗೆಡಹುವ ಬದಲಿಗೆ ಮುಂದಿನ ತರಗತಿಯಲ್ಲಿ ಕಲಿಯಬೇಕಿರುವುದನ್ನು ಈಗಲೇ ಕಲಿತು ಬಿಡಲಿ ಎನ್ನುವ ಧಾವಂತ ಅವರಲ್ಲಿ ಮನೆಮಾಡಿದಂತಿತ್ತು. ಹಾಗಾಗಿಯೇ ತಾವು ಮನೆಯಿಂದ ಹೊರಗಿರುವ ದಿನವೂ ಮಗಳ ಕಲಿಕೆಗೆ ಯಾವುದೇ ಭಂಗ ಬಾರದಿರುವಂತೆ ಎಚ್ಚರಿಕೆ ವಹಿಸುತ್ತಿದ್ದರು.

ಇತ್ತೀಚೆಗೆ ಮನೆಗೆ ಬಂದಿದ್ದ ಸಂಬಂಧಿಯೊಬ್ಬರು, ಮಕ್ಕಳನ್ನು ಎಂತಹ ಶಾಲೆಗಳಲ್ಲಿ ಓದಿಸಬೇಕೆಂಬ ಕುರಿತು ಇತರರಿಗೆ ಸಲಹೆಗಳನ್ನು ನೀಡಲಾರಂಭಿಸಿದರು. ಸಾಧ್ಯವಾದಷ್ಟು ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗೆ ಮಕ್ಕಳನ್ನು ದಾಖಲಿಸುವುದು ಸೂಕ್ತವೆಂಬ ನಿಲುವಿಗೆ ಅವರು ಜೋತು ಬಿದ್ದಿದ್ದರು. ಕಡಿಮೆ ವಿದ್ಯಾರ್ಥಿಗಳಿದ್ದರೆ, ಓದುವ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ನಡುವೆ ತೀವ್ರ ಸ್ಪರ್ಧೆ ಏರ್ಪಡುವುದಿಲ್ಲ.

ಮಕ್ಕಳು ಓದಿನೆಡೆಗೆ ಹೆಚ್ಚು ಗಮನ ನೀಡದೆ ಹಿಂದುಳಿದು ಬಿಡುತ್ತಾರೆ. ಅದೇ ಅಧಿಕ ವಿದ್ಯಾರ್ಥಿಗಳಿರುವ ತರಗತಿಯಲ್ಲಿದ್ದರೆ, ಇತರರನ್ನು ನೋಡಿ ತಾವೂ ಅವರಿಗಿಂತ ಹೆಚ್ಚು ಅಂಕ ಗಳಿಸಬೇಕೆಂಬ ಪೈಪೋಟಿಗೆ ಬಿದ್ದು ಓದಿನಲ್ಲಿ ಮುಂದಿರುತ್ತಾರೆ ಅಂತೆಲ್ಲ ವಾದಿಸಿದರು.

* * *
ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದಕ್ಕಿಂತ ಮುಖ್ಯವಾದ ಜವಾಬ್ದಾರಿ ಮತ್ತಿನ್ನೇನಿದೆ ಎನ್ನುವ ನಿಲುವನ್ನು ಪೋಷಕರು ತಳೆದಿರುವುದು ಒಂದೆಡೆ ಆಶಾದಾಯಕ ಬೆಳವಣಿಗೆಯಂತೆ ಭಾಸವಾಗುತ್ತಿದ್ದರೆ, ಮತ್ತೊಂದೆಡೆ ಶಿಕ್ಷಣ ಕೊಡಿಸುವ ಬಗೆ ಮತ್ತು ಪ್ರಕ್ರಿಯೆಯ ಕುರಿತು ಬೇರೂರುತ್ತಿರುವ ಆಲೋಚನೆಗಳು, ನಾವು ಇದುವರೆಗೂ ಶಿಕ್ಷಣದ ಸುತ್ತ ಕಟ್ಟಿಕೊಂಡಿದ್ದ ಸಮಾಜಮುಖಿ ವ್ಯಕ್ತಿತ್ವ ರೂಪಿಸುವ ಸಾಧ್ಯತೆಯ ಬಗೆಗಿನ ದಂತಗೋಪುರ ಕುಸಿದು ಬೀಳುತ್ತಿರುವ ಸೂಚನೆಯನ್ನು ರವಾನಿಸುತ್ತಿವೆ.

ಉತ್ತಮ ಶಿಕ್ಷಣಕ್ಕೂ ಪರೀಕ್ಷೆಯಲ್ಲಿ ಗಳಿಸುವ ಅಂಕಕ್ಕೂ ನೇರಾನೇರ ಸಂಬಂಧವಿದೆ ಎಂದು ಪೋಷಕರು ನಂಬಿದಂತಿದೆ ಅಥವಾ ಅವರಿಗೆ ನಂಬಿಸಿದಂತಿದೆ. ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳೆಂದು ಪೋಷಕರು ಗುರುತಿಸುವ ಶಾಲೆಗಳು ಮಕ್ಕಳಲ್ಲಿನ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನೆಲ್ಲ ಪಠ್ಯಪುಸ್ತಕಗಳಿಗೆ ಸುರಿದು ರ‍್ಯಾಂಕ್‌ಗಳನ್ನು ಉತ್ಪಾದಿಸುವ ರೇಸಿನಲ್ಲಿ ಮುಂಚೂಣಿಯಲ್ಲಿರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ತಿಳಿಯದ ವಿಚಾರವೇನಲ್ಲ.

ಮಕ್ಕಳನ್ನು ಒಳ್ಳೆ ಶಾಲೆಯಲ್ಲಿ ಓದಿಸಬೇಕೆಂಬ ಹಂಬಲದಿಂದ ತಮ್ಮ ಶಕ್ತಿ ಮೀರಿ ಹಣ ವ್ಯಯಿಸಲು ಸಿದ್ಧರಾಗುವ ಪೋಷಕರು, ತಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಲಿ ಎಂದಷ್ಟೇ ಬಯಸುವರೋ ಅಥವಾ ಈಗ ಹೂಡಿರುವ ಬಂಡವಾಳಕ್ಕೆ ತಕ್ಕಂತೆ ಹೆಚ್ಚೆಚ್ಚು ಹಣ ಸಂಪಾದಿಸಬಹುದಾದ ವೃತ್ತಿಗಳಲ್ಲಿ ತೊಡಗುವಂತಾಗಲಿ ಎಂದು ಅಪೇಕ್ಷಿಸುವರೋ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.

ಖಾಸಗಿ ಶಾಲೆಗಳ ಸಂಖ್ಯೆ ಏರುತ್ತ, ಸರ್ಕಾರಿ ಶಾಲೆಗಳು ಮುಚ್ಚುತ್ತ ಹೋದಂತೆಲ್ಲ ‘ಹೂಡಿಕೆ ಮತ್ತು ಗಳಿಕೆ’ ಎಂಬ ವ್ಯವಹಾರದ ವೃತ್ತದೊಳಗೆ ಬಂದು ಸೇರುವ ಶಾಲಾ ಶಿಕ್ಷಣ ಮುಂದೊಂದು ದಿನ, ಅಂಕಗಳ ಸುತ್ತ ಕನಸಿನ ಗೋಪುರ ನಿರ್ಮಿಸಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಹತಾಶೆಯ ಕಂದಕಕ್ಕೆ ನೂಕಬಹುದಾದ ಸಾಧ್ಯತೆ ದಟ್ಟವಾಗುತ್ತಿದೆ.

ಉದ್ಯೋಗ ಸೃಷ್ಟಿಗೆ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲು ಸೋಲುತ್ತಿರುವ ನೀತಿ ನಿರೂಪಕರು, ಜಗತ್ತಿನಲ್ಲೆಲ್ಲೋ ಘಟಿಸುವ ಬೆಳವಣಿಗೆಯೂ ನಮ್ಮವರ ಉದ್ಯೋಗಾವಕಾಶದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ಒಳಗೊಂಡಂತೆ ಉದ್ಯೋಗ ಸೃಷ್ಟಿ ವಲಯದಲ್ಲಿನ ಏರಿಳಿತಗಳನ್ನು ವರ್ತಮಾನದ ಕಣ್ಣಿನಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದರೂ, ನಾಳೆಗಳ ಸುತ್ತ ಕವಿದಿರುವ ಅತಂತ್ರತೆಯ ಕಾರ್ಮೋಡ ಕಣ್ಣೆದುರು ಆವರಿಸಿಕೊಳ್ಳುತ್ತದೆ.

ವಾಸ್ತವ ಹೀಗಿದ್ದರೂ ಅಧಿಕ ಡೊನೇಷನ್ ತೆತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸಿದರಷ್ಟೇ ಇನ್ನು ಹದಿನೈದು ಇಪ್ಪತ್ತು ವರ್ಷಗಳ ನಂತರ ಉದ್ಯೋಗಿಗಳಾಗಲಿರುವ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಭಾವಿಸುವುದು ಭ್ರಮನಿರಸನಕ್ಕೆ ದಾರಿ ಮಾಡಿಕೊಡಲಾರದೇ?

ADVERTISEMENT

ಶಿಕ್ಷಣ ಕ್ಷೇತ್ರವೂ ವ್ಯಾವಹಾರಿಕ ತಕ್ಕಡಿಯ ಮೇಲೆಯೇ ತೂಗುತ್ತಿರುವಾಗ ತಾವು ಮಕ್ಕಳ ಶಿಕ್ಷಣದ ಮೇಲೆ ಹೂಡುತ್ತಿರುವ ಬಂಡವಾಳ ಮುಂದೆಂದಾದರೂ ತಮಗಲ್ಲದಿದ್ದರೂ ತಮ್ಮ ಮಕ್ಕಳಿಗಾದರೂ ಲಾಭ ತಂದುಕೊಡಬಲ್ಲದೇ ಎಂದು ಪರಿಶೀಲಿಸಬೇಕಿದೆ. ಇಲ್ಲಿ ಪೋಷಕರು ಹೂಡುತ್ತಿರುವುದು ಹಣವನ್ನಷ್ಟೇ ಅಲ್ಲ. ಮಕ್ಕಳು ಹಾಗೂ ಪೋಷಕರ ಸಮಯ, ನೆಮ್ಮದಿ ಮತ್ತು ನಲಿವಿನ ಹೂಡಿಕೆಯೂ ಜರುಗುತ್ತಿದೆ.

ಶಿಕ್ಷಣ ಕ್ಷೇತ್ರವನ್ನು ಸುತ್ತುವರೆದಿರುವ ಬಂಡವಾಳಶಾಹಿ ಮನಸ್ಥಿತಿ ಬಿತ್ತುತ್ತಿರುವ ಅಂಕದ ಅಮಲಿನ ದುಷ್ಪರಿಣಾಮ ಅರಿಯಲು ಪ್ರತಿವರ್ಷ ಪ್ರಕಟವಾಗುವ ದ್ವಿತೀಯ ಪಿಯುಸಿ ಮತ್ತು ಸಿಇಟಿ ಫಲಿತಾಂಶವನ್ನು ತುಲನೆ ಮಾಡಿ ನೋಡಿದರೂ ಸಾಕು. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸುಲಭವಾಗಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸುವ ಎಷ್ಟೋ ವಿದ್ಯಾರ್ಥಿಗಳು, ಸಿಇಟಿಯಲ್ಲೇಕೆ ಅದಕ್ಕೆ ಸರಿಸಮನಾದ ಫಲಿತಾಂಶ ಪಡೆಯುವಲ್ಲಿ ವಿಫಲರಾಗುತ್ತಾರೆ?

ಅಂಕಪಟ್ಟಿಯಲ್ಲಿ ಜಾಣರಾಗಿ ಹೊರಹೊಮ್ಮಿದರೂ, ಮುಂದೊಮ್ಮೆ ಉದ್ಯೋಗದಾತರ ಕಣ್ಣಿಗೆ ಏಕೆ ತಮ್ಮ ಕೆಲಸಕ್ಕೆ ಬಾರದವರಾಗಿ ಗೋಚರವಾಗುತ್ತಾರೆ? ಅಂಕ ಗಳಿಕೆಗೂ ವಿಷಯ ಗ್ರಹಿಕೆ, ಸಮಾಜಮುಖಿ ತಿಳಿವಳಿಕೆಗೂ ಇರುವ ಅಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾರ್ಕ್ಸ್‌ಮಯವಾಗಿಸಿ, ವಿದ್ಯಾರ್ಥಿಗಳು ಮತ್ತು ಪೋಷಕರ ಹಾದಿ ತಪ್ಪಿಸಲಾಗುತ್ತಿದೆ. ಇದರಲ್ಲಿ ಶಿಕ್ಷಣದ ವ್ಯಾಪಾರಿಗಳ ಕುತಂತ್ರದ ಪಾಲು ಹೆಚ್ಚಿದೆ.

ಮಕ್ಕಳ ಸಹಜ ವಿಕಸನಕ್ಕೆ ವ್ಯತಿರಿಕ್ತವಾದ, ಹೇರಿಕೆಯ ರೂಪದಲ್ಲಷ್ಟೇ ದೊರಕುತ್ತ ಹೋಗುವ ವಿದ್ಯೆ ಒಂದೆಡೆ ಅದರ ಗುರಿಯಾದ ಕೈ ತುಂಬಾ ಸಂಬಳ ಸಿಗುವ ನೌಕರಿಗೂ ದಾರಿಯಾಗದೆ, ಮತ್ತೊಂದೆಡೆ ಶಿಕ್ಷಣದ ಮೂಲ ಉದ್ದೇಶವಾದ ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣಕ್ಕೂ ಪೂರಕವಾಗದೆ ಹೋದರೆ ಶಪಿಸಬೇಕಿರುವುದು ಯಾರನ್ನು?

ಮಕ್ಕಳ ಓದಿಗಾಗಿ ಸರ್ವಸ್ವವನ್ನೂ ಪಣಕ್ಕೊಡ್ಡುವ ಉಮೇದು ತೋರುವವರು, ಶಿಕ್ಷಣದ ವ್ಯಾಪಾರಿಗಳು ಬಿತ್ತುವ ಜನಪ್ರಿಯ ಭ್ರಮೆಗಳಿಗೆ ಜೋತು ಬೀಳುವ ಮುನ್ನ ವಾಸ್ತವದ ನೆಲೆಗಟ್ಟಿನಲ್ಲೂ ಆಲೋಚಿಸಬೇಕಿದೆ. ಅಧಿಕ ಬಂಡವಾಳ ಬೇಡದ, ಎಲ್ಲರನ್ನೂ ಒಳಗೊಳ್ಳುವ ತನ್ನ ಗುಣದಿಂದಲೇ ಸಾಮಾಜಿಕ ಅರಿವನ್ನೂ ಬಿತ್ತುವ ಸಾಧ್ಯತೆ ಒಳಗೊಂಡಿರುವ ವಿದ್ಯಾಸಂಸ್ಥೆಗಳತ್ತ ಪೋಷಕರ ಗಮನ ಹರಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.