ADVERTISEMENT

ಪಂಕ್ತಿಭೇದದ ಮೂಲ ಹುಡುಕುತ್ತ...

ಪಂಕ್ತಿಭೇದ, ಹಿಂದೂ ಧಾರ್ಮಿಕ ತತ್ವದ ಅವಿಭಾಜ್ಯ ಅಂಗವಾಗಿದೆ

ರಘೋತ್ತಮ ಹೊ.ಬ
Published 16 ಅಕ್ಟೋಬರ್ 2016, 19:30 IST
Last Updated 16 ಅಕ್ಟೋಬರ್ 2016, 19:30 IST

ಪಂಕ್ತಿಭೇದ– ಹೀಗೊಂದು ವಿಷಯ ಈಗ ಚರ್ಚೆಯಲ್ಲಿದೆ. ಉಡುಪಿ ಸೇರಿದಂತೆ ರಾಜ್ಯದ ಕೆಲವು ಮಠ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಸದ್ಯ ಅದು ಅಸ್ತಿತ್ವದಲ್ಲಿದೆ. ಚಲೋ ಉಡುಪಿ ಸಂದರ್ಭದಲ್ಲಿ ಸಂಘಟಕರು, ವಿಶೇಷವಾಗಿ ಗುಜರಾತ್ ದಲಿತ ಹಕ್ಕುಗಳ ಹೋರಾಟದ ನೇತಾರ ಜಿಗ್ನೇಶ್ ಮೇವಾನಿ, ಇದರ ರದ್ದತಿಗೆ ಕ್ರಮ ಕೈಗೊಳ್ಳದಿದ್ದರೆ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ ಅದು ಚರ್ಚೆಯ ಮಂಚೂಣಿಗೆ ಬಂದಿದೆ.

ಪಂಕ್ತಿಭೇದದ ಈ ಪದ್ಧತಿ ಅನಿಷ್ಟವೋ, ಇಷ್ಟವೋ ಅದು ಅಯಾ ಸಾಮಾಜಿಕ ಮಟ್ಟದಲ್ಲಿ ನಿಂತು ಮಾತನಾಡುವವರಿಗೆ ಸಂಬಂಧಿಸಿದುದಾಗಿದೆ. ಆದರೆ ವಾಸ್ತವವೆಂದರೆ ಅದು ಹಿಂದೂ ಧಾರ್ಮಿಕ ತತ್ವದ ಅವಿಭಾಜ್ಯ ಅಂಗವಾಗಿದೆ ಮತ್ತು ಅಂತಹ ಅವಿಭಾಜ್ಯತೆಯ ಕಾರಣಕ್ಕೆ ಅದು ಸಹಜವಾಗಿ ಅಸ್ತಿತ್ವದಲ್ಲಿದೆ.

ವಿವಿಧ ಜಾತಿಗಳವರನ್ನು ಮನೆಗೆ ಸೇರಿಸದಿರುವುದು, ಅವರ ಜೊತೆ ಊಟ ಮಾಡದಿರುವುದು, ಅದರಲ್ಲೂ ಕೆಳ ಜಾತಿಗಳವರನ್ನು ಮುಟ್ಟಿಸಿಕೊಳ್ಳದಿರುವುದು,  ಅವರಿಗೆ ನೀರು ಕೊಡದಿರುವುದು, ಭೂಮಿ ಕೊಡದಿರುವುದು- ಇವು ಅಸ್ತಿತ್ವದಲ್ಲಿರುವ ಸಹಜ ಪರಿಪಾಠಗಳು.  ಮತ್ತು ಇಂತಹ ಪರಿಪಾಠಗಳೇ ಹಿಂದೂ ಧರ್ಮದ ತತ್ವಗಳಾಗಿವೆ.

ADVERTISEMENT

ಇವನ್ನು ಅಸಮಾನತೆ, ಅಸ್ಪೃಶ್ಯತೆ, ದಬ್ಬಾಳಿಕೆ,  ಹೀಗೆ ಏನೆಲ್ಲ ಪದಗಳಿಂದ ಸಮಾಜ ವಿಜ್ಞಾನಿಗಳು ಕರೆದಿದ್ದಾರೆ, ವಿಶೇಷವಾಗಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಇದರ ಬಗ್ಗೆ ಸಾಲು ಸಾಲು ಬರೆದಿಟ್ಟು ಹೋಗಿದ್ದಾರೆ. ಅದರಲ್ಲೂ ತಮ್ಮ ‘ಫಿಲಾಸಫಿ ಆಫ್ ಹಿಂದೂಯಿಸಂ’ ಕೃತಿಯಲ್ಲಿ ಅಂಬೇಡ್ಕರರು ಪಂಕ್ತಿಭೇದ ಒಳಗೊಂಡಂತೆ ವಿವಿಧ ಭೇದಗಳ ತಾತ್ವಿಕ ಹಿನ್ನೆಲೆ ಹೇಳುತ್ತಾ ಹೋಗುತ್ತಾರೆ. ಈ ದಿಸೆಯಲ್ಲಿ ಅದನ್ನು ಅರಿತುಕೊಳ್ಳುವುದು ಅಗತ್ಯ.

ಪಂಕ್ತಿಭೇದ; ಮುಖ್ಯವಾಗಿ ಅದನ್ನು ಅಂಬೇಡ್ಕರರು ಪ್ರಸ್ತಾಪಿಸುವುದು ಸಹೋದರತೆಯ ಅಸ್ತಿತ್ವದ ನೆಲೆಯಲ್ಲಿ. ಹಿಂದೂಗಳಲ್ಲಿ ಸಹೋದರತೆ ಇದೆಯೇ ಎನ್ನುವ ಅವರು, ಸಕಾರಾತ್ಮಕ ಉತ್ತರ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ.

ಸಹೋದರತೆಯ ಭಾವನೆ ಬೆಳೆಯಲು ಮೂಲ ಷರತ್ತು ‘ನಾವೆಲ್ಲ ದೇವರ ಮಕ್ಕಳು’ ಎಂದು ಪ್ರತಿಪಾದಿಸುವುದಾಗಲೀ  ‘ನಮ್ಮೆಲ್ಲರ ಜೀವನ ಪರಸ್ಪರ ಅವಲಂಬಿತವಾಗಿದೆ’ ಎಂದು ಅರಿಯುವುದಾಗಲೀ ಅಲ್ಲ. ಏಕೆಂದರೆ ಅದು ಅಂತಹ ಭಾವನೆ (ಸಹೋದರತೆಯ) ಬೆಳೆಸಲು ತೀರಾ ತಾರ್ಕಿಕ ಮಾರ್ಗವಾಗಿದೆ. ಈ ಕಾರಣಕ್ಕಾಗಿ ಸಹೋದರತೆಯ  ಭಾವ ಬೆಳೆಸಲು ಮುಖ್ಯ ಷರತ್ತು ಏನಾಗಿರಬೇಕೆಂದರೆ ಜೀವನದ ಅಗತ್ಯ ಕ್ರಿಯೆಗಳನ್ನು ಪರಸ್ಪರ ಹಂಚಿಕೊಳ್ಳುವುದಾಗಿದೆ. ಅಂದರೆ ಹುಟ್ಟು, ಸಾವು, ಮದುವೆ ಮತ್ತು ಆಹಾರ, ಇವುಗಳ ಖುಷಿ ಮತ್ತು ನೋವುಗಳನ್ನು ಹಂಚಿಕೊಳ್ಳುವುದಾಗಿದೆ.

ಈ ಬಗ್ಗೆ ಪ್ರೊ.ಸ್ಮಿತ್, ಸಾಮುದಾಯಿಕ ಭಾವವೊಂದನ್ನು ಸೃಜಿಸಲು ಆಹಾರವನ್ನು ಹಂಚಿಕೊಳ್ಳುವುದಕ್ಕೆ ಪ್ರಾಮುಖ್ಯ ನೀಡುವುದು ಮುಖ್ಯ ಅಂಶವಾಗಿದೆ ಎನ್ನುತ್ತಾರೆ. ಆದರೆ ಹಿಂದೂಗಳಲ್ಲಿ ಸುಖ-ದುಃಖಗಳನ್ನು ಒಳಗೊಂಡ ಜೀವನದ ಇಂತಹ ಅಗತ್ಯ ಕ್ರಿಯೆಗಳನ್ನು ಪರಸ್ಪರ ಹಂಚಿಕೊಳ್ಳುವ ಪ್ರಕ್ರಿಯೆ ಇಲ್ಲ. ಬದಲಿಗೆ ಪ್ರತಿಯೊಂದೂ ಪ್ರತ್ಯೇಕ. ಉದಾಹರಣೆಗೆ ಭಾರತಕ್ಕೆ ಭೇಟಿ ನೀಡುವ ವಿದೇಶಿಗನೊಬ್ಬ ಹಿಂದೂಗಳಿಗಾಗಿ ನೀರು ಅಥವಾ ಮುಸಲ್ಮಾನರಿಗಾಗಿ ನೀರು ಎಂದು ವ್ಯಕ್ತಿಗಳು ಕೂಗುವುದನ್ನು ಕೇಳುವುದಿಲ್ಲ. ಬದಲಿಗೆ ಬ್ರಾಹ್ಮಣರ ಫಲಾಹಾರ ಮಂದಿರಗಳನ್ನು ನೋಡುತ್ತಾನೆ. ಅಂದಹಾಗೆ ಅವುಗಳಿಗೆ ಬ್ರಾಹ್ಮಣೇತರ ಹಿಂದೂಗಳಿಗೆ ಪ್ರವೇಶವಿರುವುದಿಲ್ಲ... ಹೀಗೆ ಅಂಬೇಡ್ಕರರು ವಾಸ್ತವ ದಾಖಲಿಸುತ್ತಾರೆ.

ಹಾಗೆಯೇ ಆ ವಿದೇಶಿಗ, ಬ್ರಾಹ್ಮಣರು, ಮರಾಠರು ಮತ್ತು ಭಾಟಿಯಾಗಳು, ಇವರೆಲ್ಲರೂ ಹಿಂದೂಗಳಾದರೂ  ಆತ ಪ್ರತ್ಯೇಕ. ಈ ಹಿನ್ನೆಲೆಯಲ್ಲಿ ಬ್ರಾಹ್ಮಣರ ಮನೆಯಲ್ಲಿ ಏನಾದರೂ ಒಂದು ಮದುವೆಯಾದರೆ, ಮಗು ಜನಿಸಿದರೆ ಬ್ರಾಹ್ಮಣೇತರರಿಗೆ ಆ ಖುಷಿಯಲ್ಲಿ ಪಾಲ್ಗೊಳ್ಳಲು ಆಹ್ವಾನವಿರುವುದಿಲ್ಲ ಮತ್ತು ಅಲ್ಲಿ ಪಾಲ್ಗೊಳ್ಳಲು ಅವರೂ ಆಸೆ ಪಡುವುದಿಲ್ಲ. ಒಟ್ಟಾರೆ, ಒಂದು ಜಾತಿಯ ದುಃಖ, ಸಂತೋಷ ಅದು ಆ ಜಾತಿಗಷ್ಟೇ ಸೀಮಿತ.

ಅಂದಹಾಗೆ ಕೆಲವು ಹಿಂದೂಗಳು ಸತ್ತಾಗ ಶವವನ್ನು ಹೂಳುತ್ತಾರೆ ಮತ್ತೂ ಕೆಲವು ಹಿಂದೂಗಳು ಸುಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಹೆಣವನ್ನು ಹೂಳುವವರು ಒಂದೇ ಸ್ಮಶಾನವನ್ನು ಹಂಚಿಕೊಳ್ಳುವುದಿಲ್ಲ, ಪ್ರತಿಯೊಂದೂ ಜಾತಿಯೂ ಹೂಳಲು ಪ್ರತ್ಯೇಕ ಸ್ಮಶಾನವನ್ನು ಬಳಸಿಕೊಳ್ಳುತ್ತದೆ. ಇನ್ನು ಸುಡುವವರು? ಅವರೂ ಅಷ್ಟೇ, ಒಂದೇ ಸ್ಥಳದಲ್ಲಿ ಸುಡುವುದಿಲ್ಲ. ಅಕಸ್ಮಾತ್ ಸುಟ್ಟರೂ ಸಂಸ್ಕಾರಕ್ಕೆ ಪ್ರತ್ಯೇಕ ಚಿತೆಯ ಕಟ್ಟೆಗಳನ್ನೇ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ ಸಹೋದರತೆಯ ಈ ಭಾವ ಹಿಂದೂಗಳಿಗೆ ಪರಕೀಯ ಎನ್ನುವುದರಲ್ಲಿ ಅಚ್ಚರಿಯಾದರೂ ಏನಿದೆ? ಹಾಗೆಯೇ ಜೀವನದ ಸಹಜ ದುಃಖ ಮತ್ತು ಸಂತೋಷಗಳನ್ನು ಪರಸ್ಪರ ಹಂಚಿಕೊಳ್ಳಲು ಸಂಪೂರ್ಣ ನಿರಾಕರಿಸುವವರ ಮಧ್ಯೆ ಸಹೋದರತೆಯ ಭಾವ ಬೇರು ಬಿಡುವುದಾದರೂ ಹೇಗೆ? ಅಂಬೇಡ್ಕರರು ಪ್ರಶ್ನಿಸುತ್ತಾ ಹೋಗುತ್ತಾರೆ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ:3, ಪು: 65).

ಅವರ ಪ್ರಕಾರ ಹಿಂದೂಗಳು ಜೀವನದ ಅಗತ್ಯ ಕ್ರಿಯೆಗಳಾದ ಹುಟ್ಟು, ಸಾವು, ಮದುವೆ ಮತ್ತು ಆಹಾರ ಈ ನಾಲ್ಕು ಅಂಶಗಳ ಸುಖ-ದುಃಖಗಳನ್ನು ಹಂಚಿಕೊಳ್ಳಬೇಕು. ಆಗ ಅವರ ನಡುವೆ ಸಹೋದರತೆಯ ಭಾವ ಮೂಡುತ್ತದೆ. ಅಂಬೇಡ್ಕರರು ಹೇಳುವ ಈ ನಾಲ್ಕು ಅಂಶಗಳಲ್ಲಿ ಒಂದಾದ ಆಹಾರದ ಅಂಶದಲ್ಲಿ ಸದ್ಯದ ಪಂಕ್ತಿಭೇದ ಸ್ಥಾನ ಪಡೆಯುತ್ತದೆ. ಅರ್ಥಾತ್ ಅಂಬೇಡ್ಕರರು ಹೇಳಿದ ಅದರ ಸಂತೋಷವನ್ನು, ಅಂದರೆ ಆಹಾರದ ಸಂತೋಷವನ್ನು ಪರಸ್ಪರ ಹಂಚಿಕೊಳ್ಳದಿರುವುದೇ ಪಂಕ್ತಿಭೇದವಾಗಿದೆ. ಹಾಗಿದ್ದರೆ ಹಿಂದುತ್ವ ಏಕೆ ಪಂಕ್ತಿಭೇದವನ್ನು ಆಚರಿಸುತ್ತದೆ ಅಥವಾ ಆಹಾರದ ಸಂತೋಷವನ್ನು ಪರಸ್ಪರ ಹಂಚಿಕೊಳ್ಳಲು ನಿರಾಕರಿಸುತ್ತದೆ? ಅಂಬೇಡ್ಕರ್ ಹೇಳುತ್ತಾರೆ: ‘ಹಿಂದೂಗಳು ಹೀಗೆ ಜೀವನದ ಸಹಜ ಕ್ರಿಯೆಗಳ ದುಃಖ ಮತ್ತು ಸಂತೋಷವನ್ನು ಹಂಚಿಕೊಳ್ಳಲು ನಿರಾಕರಿಸುತ್ತಾರೆ. ಏಕೆಂದರೆ ಅವರ ಧರ್ಮ ಹಾಗೆ ಹಂಚಿಕೊಳ್ಳದಂತೆ ಬೋಧಿಸುತ್ತದೆ’. ಅಂದಹಾಗೆ ಹೀಗೆ ನಿರ್ಣಯಕ್ಕೆ ಬರುವುದಕ್ಕೆ ಅಚ್ಚರಿಪಡಬೇಕಾದ್ದು ಏನೂ ಇಲ್ಲ. ಯಾಕೆಂದರೆ ಹಿಂದುತ್ವ ಬೋಧಿಸುವುದಾದರೂ ಏನು? ಪರಸ್ಪರ ಜಾತಿಗಳವರು ಬೆರೆಯಬೇಡಿರಿ, ಅಂತರ್ಜಾತಿ ವಿವಾಹ- ಅಂತರ್ಜಾತಿ ಸಹಭೋಜನ ಬೇಡಿ... ಹೀಗೆ. ಈ ನಿಟ್ಟಿನಲ್ಲಿ ಇಂತಹ ಬೇಡಗಳೇ ಹಿಂದುತ್ವದ ಬೋಧನೆಯ ಅಸ್ತಿತ್ವದ ಅಂಶಗಳಾಗಿವೆ. (ಅದೇ ಕೃತಿ. ಪು: 66)

ಒಟ್ಟಾರೆ ಅಂಬೇಡ್ಕರರು ದಾಖಲಿಸಿರುವ ಇಂತಹ ಬೇಡಗಳು ಅಂದರೆ ಅಂತರ್ಜಾತಿ ವಿವಾಹ ಬೇಡ, ಅಂತರ್ಜಾತಿ ಸಹಭೋಜನ ಬೇಡ, ಪರಸ್ಪರ ಜಾತಿಗಳವರು ಬೆರೆಯುವುದು ಬೇಡ ಎಂಬ ಇವು ಹಿಂದುತ್ವದ ತತ್ವಗಳಾಗಿರುವಾಗ, ಆ ಬೇಡಗಳಲ್ಲೊಂದಾದ ಅಂತರ್ಜಾತಿ ಸಹಭೋಜನ ಬೇಡ ಎಂಬ ಬೇಡದ ಪಟ್ಟಿಗೆ ಬರುವ ಪಂಕ್ತಿಭೇದ ಹಿಂದುತ್ವದ ತತ್ವದಲ್ಲೇ ಒಂದು ತತ್ವವಾಗಿ ಅಡಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪಂಕ್ತಿಭೇದ ಬೇಡ ಎನ್ನುವವರು ಅಂತಹ ಬೇಡ ಎಂಬ ನಿರಾಕರಣೆ ಹಿಂದುತ್ವದ ತತ್ವಗಳಲ್ಲಿ ಒಂದಾಗಿರುವುದನ್ನು ಗಮನಿಸಬೇಕು ಮತ್ತು ಒಂದು ಬೇಡವನ್ನಲ್ಲ, ಸಮಗ್ರ ಬೇಡಗಳನ್ನು ತೊಲಗಿಸಲು ಕಾರ್ಯೋನ್ಮುಖರಾಗಬೇಕು. ಆಗ ಪಂಕ್ತಿಭೇದ ತಾನಾಗೇ ಕೊನೆಗೊಳ್ಳುತ್ತದೆ. ಇಲ್ಲದಿದ್ದರೆ ಇದು ಪರಸ್ಪರ ಕೆಸರೆರಚಾಟದ ಭಾಗವಾಗುತ್ತದಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.