ADVERTISEMENT

ಮರೆಯಾದ ಬಾಯಿಪಾಠ ಸಂಸ್ಕೃತಿಯ ಸಮರ್ಥನೆಯಲ್ಲಿ

ನೂತನ ಎಂ.ದೋಶೆಟ್ಟಿ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ಅದೊಂದು ಕಾಲ. ಸಂಜೆ ಆಯಿತೆಂದರೆ ಮನೆಯ ಹಿರಿಯರು ಮಕ್ಕಳಿಗೆ ‘ಕೈ ಕಾಲು, ಮುಖ ತೊಳೆದು ದೇವರಿಗೆ ನಮಸ್ಕಾರ ಮಾಡಿ ಬಾಯಿಪಾಠ ಹೇಳಿಕೊಳ್ಳಿ’ ಎನ್ನುತ್ತಿದ್ದರು. ಮನೆಯ ಮಕ್ಕಳೆಲ್ಲ ಸಾಲಾಗಿ ಕುಳಿತುಕೊಂಡರೆ ಅವರಲ್ಲಿ ಎಲ್ಲರಿಗಿಂತ ಹಿರಿಯ ಮಗು ಅಂದರೆ ಅಕ್ಕನೋ, ಅಣ್ಣನೋ ಉಳಿದವರಿಗೆ ಬಾಯಿಪಾಠ ಹೇಳಿಕೊಡುತ್ತಿದ್ದರು. ಗಣೇಶನ ಸ್ತುತಿಯ ಶ್ಲೋಕ­ದಿಂದ ಆರಂಭವಾಗುವ ಈ ಪಾಠದಲ್ಲಿ ಮಗ್ಗಿ, ತಿಥಿ, ನಕ್ಷತ್ರ, ವಾರ, ತಿಂಗಳು, ಮಾಸ, ಋತು ಇವು­ಗಳ ಜೊತೆಯಲ್ಲಿ ಗಣಿತ, ವಿಜ್ಞಾನ, ಸಾಮಾನ್ಯ ಜ್ಞಾನ ಮೊದಲಾದ ವಿಷಯಗಳು ಅಡಗಿರು­ತ್ತಿದ್ದವು. ಒಂದರಿಂದ ಇಪ್ಪತ್ತರವರೆಗಿನ ಮಗ್ಗಿ ೨-೩ನೇ ಇಯತ್ತೆಯಲ್ಲೇ ಮಕ್ಕಳಿಗೆ ಸಾಮಾನ್ಯವಾಗಿ ಕಂಠಪಾಠವಾಗಿರುತ್ತಿತ್ತು. ‘ಚೈತ್ರ, ವೈಶಾಖ–ವಸಂತ ಋತು, ಜ್ಯೇಷ್ಠ-, ಆಷಾಢ–ಗ್ರೀಷ್ಮ ಋತು...’ ಈ ಪದ್ಯರೂಪದ ಪಾಠ ನಮ್ಮ ತಿಂಗಳು­ಗಳು ಹಾಗೂ ಋತುಗಳು ಎರಡನ್ನೂ ಒಟ್ಟಿಗೇ ಮಕ್ಕಳಿಗೆ ಪರಿಚಯಿಸುತ್ತಿತ್ತು.

ಆಗಿನ್ನೂ ಕನ್ನಡ ಮಾಧ್ಯಮ ಶಾಲೆಗಳೇ ಎಲ್ಲೆಡೆ ಇದ್ದ ಕಾಲ. ಆಂಗ್ಲ ಮಾಧ್ಯಮ ಶಾಲೆಗಳು ಅಲ್ಲೊಂದು ಇಲ್ಲೊಂದು ಇದ್ದವು. ಹಾಗಾಗಿ ಕನ್ನಡಮಯ ವಾತಾವರಣ­ವಿತ್ತು. ನಂತರ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ನಿಧಾನವಾಗಿ ಹೆಚ್ಚಿದಂತೆ ಈ ಬಾಯಿಪಾಠಕ್ಕೆ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್...’ ನಂತಹ ರೈಮ್‌­ಗಳೂ ಸೇರಿಕೊಂಡವು. ಕಾಲಕ್ರಮೇಣ ಮನೆ­ಪಾ­ಠದ ಪದ್ಧತಿ ಬೆಳೆದಂತೆ ಸಂಜೆಯ ಬಾಯಿ­ಪಾಠ ಕಣ್ಮರೆಯಾಯಿತು. ಅದರೊಂದಿಗೆ ಮನೆಯ ಮಕ್ಕಳು, ಕೆಲವೊಮ್ಮೆ ಅಕ್ಕ ಪಕ್ಕದ ಮಕ್ಕಳೂ ಸೇರಿ ಕಳೆಯುತ್ತಿದ್ದ ಸಂಜೆಯ ಶಿಸ್ತಿನ ಸ್ವಯಂ ಪಾಠದ ಸಮಯ ಹಾಗೂ ತಿಥಿ, ನಕ್ಷತ್ರ, ಋತುಗಳ ಹೆಸರುಗಳು, ಮಗ್ಗಿಗಳೂ ಮಕ್ಕಳ ಕಲಿಕೆಯಿಂದ ಮಾಯವಾದವು.

ಈಗ ಹತ್ತನೇ ಇಯತ್ತೆಯಲ್ಲಿ ಓದುವ ಮಕ್ಕಳೂ ಮಗ್ಗಿ ಹೇಳುವಾಗ ತಡವರಿಸುತ್ತಾರೆ. ಸಂಡೆ, ಮಂಡೆ... ಎಂದು ವಾರಗಳನ್ನು ಸುಲಭ­ವಾಗಿ ಹೇಳುವ ಮಗು ಭಾನುವಾರ, ಸೋಮ­ವಾರ... ಎಂದರೆ ಕಣ್ಣು ಕಣ್ಣು ಬಿಡುತ್ತದೆ. ಇನ್ನು ತಿಥಿ, ನಕ್ಷತ್ರಗಳ ಬಗ್ಗೆಯಂತೂ ಮಾತಾಡುವುದೇ ಬೇಡ. ಇದು ಒಂದು ಭಾಷೆಯ ಪ್ರಶ್ನೆ ಮಾತ್ರ­ವಲ್ಲ. ರೂಢಿಯಲ್ಲಿದ್ದ ಒಂದು ಸರಳ, ಸುಂದರ ಕಲಿಕಾ ವಿಧಾನವೇ ಕಾಲದೊಂದಿಗೆ ಕಳೆದು ಹೋಯಿ­ತಲ್ಲಾ ಎಂಬ ನೋವು ಹಾಗೂ ಸೋಜಿಗ.

ಆಧುನಿಕ ಜೀವನಕ್ಕೆ ಮೊಟ್ಟ ಮೊದಲು ಲಗ್ಗೆ ಇಟ್ಟಿದ್ದು ಟಿ.ವಿ. ಮನೆಯ ಸಂಜೆಗಳನ್ನು ಅದು ಬದಲಿಸಿಬಿಟ್ಟಿತು. ಬೆಳಗಿನಿಂದ ಕೆಲಸ ಮಾಡಿ ದಣಿದ ಮನೆಯ ಮಹಿಳೆಯರು ಸಂಜೆ ಟಿ.ವಿ. ಮುಂದೆ ಕಾಲು ಚಾಚಿಕೊಂಡು ಸೊಪ್ಪು, ಅವರೆ­ಕಾಯಿ ಬಿಡಿಸುತ್ತ ರಾತ್ರಿಯ ಅಡುಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮನೆಯ ಮಕ್ಕಳ ಓದಿಗೆ ಟಿ.ವಿ. ಸದ್ದು ಅಡ್ಡಿಯಾಗುತ್ತಿತ್ತು. ಜೊತೆಗೆ ಆಂಗ್ಲ ಭಾಷೆಯ ಭಾರ ಬೇರೆ. ಆಗ ಮಕ್ಕಳನ್ನು ಮನೆ­ಪಾಠಕ್ಕೆ ಕಳಿಸಿ ಈ ಎರಡೂ ಸಮಸ್ಯೆಗಳಿಗೆ ಪರಿ­ಹಾರ ಕಂಡುಕೊಳ್ಳಲಾಯಿತು. ಆದರೆ ಮಕ್ಕ­ಳೊಂದಿಗೆ ಮನೆಯ ಹಿರಿಯರೂ ಬಾಯಿ­ಪಾಠ­ದಿಂದ ತಾವು ಕಲಿತಿದ್ದ ಎಲ್ಲವನ್ನೂ ಮರೆತರು. ವಾರಗಳ ಹೆಸರುಗಳೇನೊ ಉಪಯೋಗದಲ್ಲಿವೆ. ಆದರೆ ತಿಥಿ, ನಕ್ಷತ್ರ ಮುಂತಾದವು ಮನೆಯ ಎಲ್ಲರ ನೆನಪಿನಿಂದ ಮರೆಯಾದವು.  

ನಂತರ ತಂತ್ರಜ್ಞಾನದ ಅಭಿವೃದ್ಧಿಯ ಭರಾಟೆ­ಯಲ್ಲಿ ಒಂದರ ಹಿಂದೆ ಒಂದು ಪೈಪೋಟಿ ನಡೆಸಿ ಬಂದ ಕಂಪ್ಯೂಟರ್, ಮೊಬೈಲ್, ಪ್ಲೇಸ್ಟೇಷನ್ ಮೊದಲಾದವುಗಳು ಕಲಿಕೆಯನ್ನು ವಿಸ್ತರಿಸಿದಂತೆ ಏಕಾಂತ­ವನ್ನು ಹೆಚ್ಚು ಬೇಡಿದವು. ಅದು ಮಾತಿ­ಲ್ಲದ ಅಸಹನೀಯ ಮೌನ. ನಾಲ್ಕಾರು ಮಕ್ಕಳು ಸೇರಿ ಬಾಯಿಪಾಠದಲ್ಲಿ ಅನುಭವಿಸುತ್ತಿದ್ದ ಆನಂದ ಇದರಿಂದ ಸಿಗುವುದು ಸಾಧ್ಯವಿರಲಿಲ್ಲ. ಈ ಆಧುನಿಕ ಉಪಕರಣಗಳಿಂದ ಪ್ರತಿ ಮಗುವೂ ದ್ವೀಪವಾಗುತ್ತಿದೆ. ತನ್ನೊಂದಿಗೆ ತಾನೇ ಸಂಭಾಷಿಸಿ­ಕೊಳ್ಳುತ್ತದೆ. ಇತರ ಮಕ್ಕಳ ಸಂಗವನ್ನು ಕೆಲವು ಬಾರಿ ಸಹಿಸುವುದೂ ಅದಕ್ಕೆ ಸಾಧ್ಯವಾಗು­ವು­ದಿಲ್ಲ. ಏಕೆಂದರೆ ತನ್ನ ಆಟದ ಉಪಕರಣಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗುತ್ತದಲ್ಲಾ.

ಬಾಯಿಪಾಠ ಪದ್ಧತಿ, ಕಲಿಕೆಯೊಂದಿಗೆ ಅನೇಕ ಗುಣಗಳನ್ನೂ ಮಕ್ಕಳಿಗೆ ಕಲಿಸುತ್ತಿತ್ತು. ಎಲ್ಲ ಮಕ್ಕಳೂ ಸಾಲಾಗಿ ಕೈಕಟ್ಟಿ ಕುಳಿತುಕೊಳ್ಳ­ಬೇಕಾದ್ದು ಶಿಸ್ತನ್ನು ಹೇಳಿಕೊಡುತ್ತಿತ್ತು. ನೆಲದ ಮೇಲೆ ಚಕ್ಕಳಪಟ್ಟೆ ಹಾಕಿ ಕುಳಿತುಕೊಳ್ಳುವುದು ಅವರಿಗೆ ವ್ಯಾಯಾಮವಾಗಿತ್ತು (ಇಂದು ಮಕ್ಕ­ಳಿ­ರಲಿ. ಹಿರಿಯರಿಗೂ ನೆಲದ ಮೇಲೆ ಕುಳಿತು­ಕೊಳ್ಳುವ ಅಭ್ಯಾಸವಿಲ್ಲ. ಬಹುತೇಕರಿಗೆ ಚಕ್ಕಳ­ಪಟ್ಟೆ ಹಾಕಿ ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ). ಅಕ್ಕನೋ, ಅಣ್ಣನೋ ಹೇಳಿಕೊಡುವು­ದನ್ನು ಪುನರುಚ್ಚರಿಸುವುದರಿಂದ ಕೇಳುವ ಶಿಸ್ತು,  ಸಹನೆ, ಏಕಾಗ್ರತೆ ಮುಂತಾದ ಗುಣಗಳನ್ನು ಕಲಿಸುತ್ತಿತ್ತು. ಎಲ್ಲರೊಂದಿಗೆ ಬೆರೆ­ಯುವ ಸ್ವಭಾವ ಹಾಗೂ ಅದರ ಆನಂದ ಎರಡನ್ನೂ ಬೆಳೆಸುತ್ತಿತ್ತು. ಚಿಕ್ಕವರು ದೊಡ್ಡವರ ಮಾತನ್ನು ಕೇಳಬೇಕು ಎಂಬುದನ್ನು ಸೂಚ್ಯವಾಗಿ ಕಲಿಸುತ್ತಿದ್ದ ಈ ಬಾಯಿಪಾಠ ಪರಸ್ಪರ ಗೌರವ ಭಾವನೆಯನ್ನು ಕಲಿಸುತ್ತಿತ್ತು. ದಿನವೂ ಅದನ್ನೇ ಉರು ಹೊಡೆ­ಯುವ ಪರಿಪಾಠ ಇಲ್ಲಿರಲಿಲ್ಲ. ಆ ಗುಂಪಿನ ಹಿರಿಯ ಅಕ್ಕನೋ ಅಣ್ಣನೋ ತಾನು ಹೊಸತಾಗಿ ಕಲಿತಿದ್ದನ್ನು ತನಗಿಂತ ಕಿರಿಯರಿಗೆ ಹೇಳಿ­ಕೊಡುತ್ತಿ­ದ್ದರು. ತಮ್ಮ- ತಂಗಿಯರಿಗಾಗಿ ಅವರೂ ಸದಾ ಹೊಸತನ್ನು ಕಲಿಯುವ ಪ್ರಯತ್ನ ಮಾಡುತ್ತಿ­ದ್ದರು. ಇಲ್ಲಿ ಜ್ಞಾನದ ಕೊಡು ಕೊಳ್ಳು­ವಿಕೆ ಆಗು­ತ್ತಿತ್ತು. ಅದೇನು ಮಹಾ ಜ್ಞಾನ­ಭಂಡಾ­ರವಲ್ಲ. ಆದರೂ ಚಿಕ್ಕಮಕ್ಕಳ ಸಾಮ್ರಾಜ್ಯದಲ್ಲಿ ಅದಕ್ಕೆ ಅದರದ್ದೇ ಆದ ವಿಶೇಷ, ಘನತೆ ಖಂಡಿತ ಇತ್ತು.

ಬಾಯಿಪಾಠ, ಕಲಿಕೆಯ ವಿಧಾನ ಮಾತ್ರವಾ­ಗಿ­ರದೆ ಒಂದು ಸಂಸ್ಕೃತಿಯಾಗಿತ್ತು. ಇಂದಿನ ಎರಡು ತಲೆಮಾರುಗಳ ಹಿಂದೆ ಪ್ರಚಲಿತದಲ್ಲಿದ್ದ ಬಾಯಿಪಾಠ ಸಂಸ್ಕೃತಿ ಇಂದು ಸಂಪೂರ್ಣವಾಗಿ ನಮ್ಮ ನಡುವಿನಿಂದ ಮರೆಯಾಗಿದೆ. ಟಿ.ವಿ. ಕಾರ್ಯಕ್ರಮಗಳನ್ನು ಯಥೇಚ್ಛವಾಗಿ ಬಯ್ಯುವ ನಾವು ಮತ್ತೆ ನಮ್ಮ ನಮ್ಮ ಮನೆಗಳಲ್ಲಿ ಈ ಬಾಯಿ ಪಾಠವನ್ನು ಪ್ರಾರಂಭಿಸಬಾರದೇಕೆ? ಮಕ್ಕ­ಳೊಂದಿಗೆ ನಾವು ಕೂಡ ಮರೆತಿರುವ ತಿಥಿ, ನಕ್ಷತ್ರಗಳನ್ನು ನೆನಪಿಸಿಕೊಳ್ಳಬಾರದೇಕೆ? ‘ಪಾಡ್ಯ, ಬಿದಿಗೆ, ತದಿಗೆ..’ ಎಂದು ಹೇಳುತ್ತ ಹೋದರೆ ಅವು ಏನೆಂದು ಕಣ್ಣುಬಾಯಿ ಬಿಡುವ ಮಕ್ಕಳಿಗೆ ಅವುಗಳ ಪರಿಚಯ ಮಾಡಬಹುದಲ್ಲವೇ? ಅಶ್ವಿನಿ, ಭರಣಿ, ಕೃತ್ತಿಕಾ.. ಮುಂತಾದವು ನಕ್ಷತ್ರ­ಗಳು ಎಂದು ಹೇಳಿಕೊಟ್ಟು ನಕ್ಷತ್ರಗಳ ಬಗ್ಗೆ ಅವ­ರಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದಲ್ಲವೇ? ‘ವಾರ­ಗಳೂ...’ ಎಂಬ ಪ್ರಶ್ನೆಗೆ ಏಳು ಎಂಬ ಜೋರು ದನಿಯ ಒಕ್ಕೊರಲಿನ ಉತ್ತರ,  ಹಿಂದೆಯೇ ಅಬ್ಬ­ರಿಸಿ ಬರುವ ಮಕ್ಕಳ ನಗು ಇವೆಲ್ಲ ಮತ್ತೆ ನಮ್ಮ ಮನೆಗಳಲ್ಲಿ ಅನುರಣಿಸುವಂತಾದರೆ... ಮನೆಯ ಎದುರು ಹಾದು ಹೋಗುವವರೂ ‘ಹೋ ಮಕ್ಕಳು ಬಾಯಿಪಾಠ ಹೇಳಿ ಖುಷಿಪಡುತ್ತಿವೆ’ ಎಂದು ಮುಗುಳ್ನಗುತ್ತ ಹೋಗುವಂತಾದರೆ... ಮಕ್ಕಳಿಗೆ ಅವರ ಬಾಲ್ಯವನ್ನು ಮರಳಿ ಕೊಟ್ಟಂತೆ ಆಗುವುದಂತೂ ಖಂಡಿತ.

ಈಗ ಮನೆ ಪಾಠದ ಮನೆಗಳಲ್ಲಿ ಓವನ್ ಒಳಗೆ ಕೂರಿಸಿಟ್ಟ ಅನುಭವ­ದಲ್ಲಿ ಮಕ್ಕಳು ಕಲಿಯುತ್ತಿವೆ. ಅವರ ಸಂಜೆಗಳಲ್ಲಿ ನಾವು ಅನುಭವಿಸಿದ್ದ ಯಾವುದೇ ಸ್ವಾರಸ್ಯವಿಲ್ಲ. ಕಲಿಕೆ ಸಹಜವಾಗಿ, ಬಿಗುವಿಲ್ಲದ ವಾತಾವರಣ­ದಲ್ಲಿ ಇದ್ದರೆ ಮಕ್ಕಳಿಗೆ ಅದೆಂಥ ಆನಂದ ಕಲಿ­ಯುವುದರಲ್ಲಿ ದೊರೆಯುತ್ತದೆ ಎಂಬುದನ್ನು ಬಾಯಿಪಾಠ ಹೇಳಿಕೊಂಡವರಿಗೆಲ್ಲ ಗೊತ್ತು. ‘ಎರಡೊಂದ್ಲೆ.. ಎರಡೊ.. ಎರಡೆರಡ್ಲೆ.. ನಾಲ್ಕೊ..’ ಎಂಬ ಪ್ರಾಸಬದ್ಧ ಕೂಗು ಕಿವಿಯಲ್ಲಿ ಪ್ರತಿಧ್ವನಿಸಿ­ದಂತಾಗಿ ಇಂದಿನ ಮನೆಪಾಠದ ಮಕ್ಕಳ ಬ್ಯಾಗಿನ ಭಾರದಂತೆ ಮನಸ್ಸೂ ಭಾರ­ವಾಗು­ತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.