ADVERTISEMENT

ಮಾಲಿನ್ಯ ನಿಯಂತ್ರಣ ಕಾಳಜಿ ವ್ಯಾಪಕವಾಗಲಿ

ನೂತನ ಎಂ.ದೋಶೆಟ್ಟಿ
Published 26 ಅಕ್ಟೋಬರ್ 2014, 19:30 IST
Last Updated 26 ಅಕ್ಟೋಬರ್ 2014, 19:30 IST

ದೀಪಾವಳಿ ಮುಗಿದಿದೆ. ಆದರೆ ಪಟಾಕಿ ಸದ್ದು ಆಗೊಮ್ಮೆ ಈಗೊಮ್ಮೆ ಇನ್ನೂ ಕೇಳುತ್ತಿದೆ. ಜತೆಗೆ ಪಟಾಕಿಯಿಂದಾದ ಅನಾ­ಹುತ, ಅದಕ್ಕೆ ಈಡಾದವರನ್ನು ಹಾಗೂ ಅವರ ಕುಟುಂಬವನ್ನು ಜೀವನ ಪರ್ಯಂತ  ಕಾಡುತ್ತದೆ. ಇದು ಪ್ರತಿವರ್ಷದ ನೋವು. ಆದರೂ ಇದು ಪುನರಾವರ್ತನೆ ಆಗುತ್ತಲೇ ಇದೆ. ಆದರೆ ಈ ಬಾರಿ ಪಟಾಕಿ ಸಿಡಿಸುವ ಬಗ್ಗೆ ಸಾಮಾ­ಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆ­ಯಾಗಿದೆ.

‘ನಾವು ಚಿಕ್ಕವರಿದ್ದಾಗ ಪಟಾಕಿ ಸಿಡಿಸಿ ಆನಂದಿಸಿದ್ದೆವು. ಈಗ ನಮ್ಮ ಮಕ್ಕಳನ್ನು ನಿಯಂತ್ರಿ­ಸಿ­ದರೆ ಅದು ಒಂದು ರೀತಿಯ ಅನ್ಯಾಯ ಅಲ್ಲವೇ?’ ಎಂಬ ಪ್ರಶ್ನೆ ಕೆಲವರದಾದರೆ, ‘ಪಟಾಕಿ ಸಿಡಿಸಿ ಆಮೇಲೆ ನಮ್ಮ ಓಣಿಯನ್ನು ನಾವೇ ಸ್ವಚ್ಛ ಮಾಡಿದ್ದೇವೆ’ ಎಂದು ಸಮಾಧಾನ ಪಟ್ಟು­ಕೊಂಡ­ವರು ಕೆಲವರು. ವರ್ಷಕ್ಕೊಮ್ಮೆ ಬರುವ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದರೆ ಆಗುವ ಮಾಲಿನ್ಯಕ್ಕಿಂತ ದಿನನಿತ್ಯ ವಾಹನಗಳ ಹೊಗೆ­ಯಿಂದ ಆಗುವ ವಾಯು ಮಾಲಿನ್ಯ, ಕಾರ್ಖಾನೆ­ಗಳಿಂದ ಆಗುತ್ತಿರುವ ಜಲಮಾಲಿನ್ಯ ಹೆಚ್ಚಲ್ಲವೇ? ಇದು ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಏಕಿಲ್ಲ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ.

ಕೊನೆಯ ಪ್ರಶ್ನೆ ಯೋಚನೆಗೆ ಹಚ್ಚುವಂತ­ಹುದು. ವರ್ಷಕ್ಕೊಮ್ಮೆ ಬರುವ ಹಬ್ಬದಲ್ಲಿ ವಾಯು ಮಾಲಿನ್ಯದ ಬಗ್ಗೆ ಒತ್ತಿ ಹೇಳುವ ಧ್ವನಿ, ನಿತ್ಯದ ಮಾಲಿನ್ಯ ನಿಯಂತ್ರಣ ವಿಚಾರದಲ್ಲಿ ದಿಟ್ಟವಾಗಿ ಕೇಳಿಬರುವುದಿಲ್ಲ ಏಕೆ ಎಂಬ ವಾದ  ಈ ವರ್ಷ ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ­ವಾಗಿ ಮಂಡನೆಯಾಗಿದೆ. ಮಹಾನಗರ­ಗಳಲ್ಲಿ ಜನಸಂಖ್ಯೆಯ ಒತ್ತಡದ ಪ್ರಭಾವ ಪಟಾಕಿ ಸುಡುವುದರ ಮೇಲೂ ಸಹಜವಾಗಿ ಆಗುತ್ತಿದೆ. ಆದರೆ ಸಣ್ಣ ಊರು,- ಪಟ್ಟಣಗಳಲ್ಲಿ ಮಹಾ ನಗರಗಳಷ್ಟು ವಾಯು ಮಾಲಿನ್ಯ ಆಗುವುದಿಲ್ಲ ಎನ್ನುವುದೂ ಸತ್ಯ.

ಇನ್ನು ರಾತ್ರಿ ಹತ್ತರ ನಂತರ ಪಟಾಕಿ ಸುಡುವು­ದಕ್ಕೆ ನಿಷೇಧವಿದ್ದರೂ ಅದು ಪರಿಪೂರ್ಣವಾಗಿ ಜಾರಿ­ಯಾಗುತ್ತಿಲ್ಲ. ಸರಿ ರಾತ್ರಿಯವರೆಗೂ ಪಟಾಕಿಯ ಸದ್ದು ಕೇಳುತ್ತಲೇ ಇರುತ್ತದೆ. ಇದ­ರಿಂದ ಹೆಚ್ಚಾಗಿ ತೊಂದರೆಗೊಳ­ಗಾಗು­ವವರು ಮಕ್ಕಳು ಹಾಗೂ ಹಿರಿಯರು. ಅಲ್ಲದೆ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ದನ-–ಕರುಗಳು, ಪಕ್ಷಿಗಳು ಭಯ ಭೀತವಾಗುತ್ತವೆ. ಮನೆಯಲ್ಲಿ ಸಾಕಿದ ನಾಯಿ, ಬೆಕ್ಕುಗಳು ಊಟ ಮರೆತು ಮೂಲೆ­ಗಳಲ್ಲಿ ಅವಿತು ಕುಳಿತರೆ, ಪಕ್ಷಿಗಳು ಅವೇಳೆ­ಯಲ್ಲಿ ಕೂಗುವುದು, ಹಾರುವುದು ಮಾಡು­­ತ್ತವೆ.

ಪಟಾಕಿಯ ಮೋಜಿನಲ್ಲಿ ಮೈಮರೆ­ತವರ ಗಮನಕ್ಕೆ ಇವೆಲ್ಲ ಬರುವುದಿಲ್ಲ. ಬದುಕುವ ಹಕ್ಕು ಇರುವುದು ಎಷ್ಟಾದರೂ ಮನುಷ್ಯರಿಗೆ ಮಾತ್ರ ತಾನೆ!?  ದೀಪಾವಳಿ ಎಂದರೆ ಬೆಳಕು. ಅದಕ್ಕೆ ಪರ್ಯಾಯ ಇಂದಿನ ದಿನಗಳಲ್ಲಿ ವಿದ್ಯುತ್. ಇದೀಗ ಅಕ್ಟೋಬರ್ ಕೊನೆಯ ವಾರ. ಈಗಲೇ ಲೋಡ್ ಶೆಡ್ಡಿಂಗ್ ಬಗ್ಗೆ ಮಾತು ಕೇಳಿಬರುತ್ತಿದೆ. ಪರಿಸ್ಥಿತಿ ಹೀಗಿರುವಾಗ ದೀಪಾವಳಿಯ ಸಲು­ವಾಗಿ ಅಂಗಡಿ– -ಮುಂಗಟ್ಟು, ಮನೆ, ರಸ್ತೆ, ಕೊನೆಗೆ ಗಿಡ-ಮರಗಳನ್ನೂ ಝುಗಮಗಿ­ಸುವುದ­ಕ್ಕಾಗಿ ವ್ಯಯ­ವಾಗುವ ವಿದ್ಯುತ್‌ ಎಷ್ಟು? ಈ ಪರಿ ಕೇವಲ ಹಬ್ಬದ ದಿನಗಳಲ್ಲಿ ಮಾತ್ರವಲ್ಲ; ಹಬ್ಬದ ಆರಂಭಕ್ಕೆ ಮೊದಲು ಹಾಗೂ ನಂತರ, ಹೀಗೆ ತಿಂಗಳುಗಟ್ಟಲೆ ಇರುತ್ತದೆ. ಇಲ್ಲಿ ಉಳಿತಾಯ ಖಂಡಿತಾ ಸಾಧ್ಯ. ಆದರೆ ಇದಕ್ಕೆ ಯಾವ ಆಕ್ಷೇಪಣೆಯೂ ಇಲ್ಲ.

ಇದರಂತೆ ಹಬ್ಬದ ಸಮಯದ ವ್ಯಾಪಾರ,  ರಿಯಾಯಿತಿ ದರ ಇತ್ಯಾದಿಗಳ ವಿವರ ನೀಡುವ  ಕರ ಪತ್ರಗಳು ವಿವಿಧ ಆಕಾರ, ಬಣ್ಣ, ಅಳತೆಗಳಲ್ಲಿ ಮನೆಮನೆಯ ಅಂಗಳಕ್ಕೆ ಬಂದು ಬೀಳುತ್ತವೆ. ಇವು­ಗಳಿಗಾಗಿ ಅನಗತ್ಯವಾಗಿ ಪೋಲಾ­­­­ಗುವ ಕಾಗದದ ಬಗ್ಗೆ ಯಾವ ಚಕಾರವೂ ಕೇಳು­ವುದಿಲ್ಲ. ಇದು ಮಾರುಕಟ್ಟೆಯ ತಂತ್ರ. ಇಲ್ಲಿ ಯಾವ ಮಾಲಿನ್ಯದ ಕೂಗು ಕೇಳದು! ಇವುಗಳಿಗೆ ಬಳ­ಸುವ ರಾಸಾಯನಿಕ­ಗಳು ನಮ್ಮ ಹಜಾರಕ್ಕೂ ಲಗ್ಗೆ ಇಡುತ್ತವೆ. ಈ ಕಾಗದಗಳನ್ನು ಮನೆಗಳಲ್ಲಿ ತಿಂಡಿ ತಿನ್ನಲೂ ಉಪಯೋಗಿಸಲಾಗುತ್ತದೆ. ರದ್ದಿ­ಯ­ವನಿಗೆ ಹಾಕಿ­ದರೆ  ಅಂಗಡಿಗಳಲ್ಲಿ ಸಾಮಾನು ಕಟ್ಟು­­ವುದ­ರಿಂದ ಹಿಡಿದು ತಿಂಡಿ ಕಟ್ಟಿ ಕೊಡಲೂ ಉಪಯೋಗವಾದೀತು. ಇಲ್ಲೆಲ್ಲ ಮೌನವೇ ಲೇಸು ಎಂಬ ಧೋರಣೆ.

ಇಂದು ಯಾವುದೇ ಹಬ್ಬವೆಂದರೆ ಬೆಲೆ­ಯೇರಿಕೆಗೆ ಇಂಬು ಕೊಟ್ಟಂತೆ. ಹಬ್ಬದ ಮಾರನೇ ದಿನದ ರಸ್ತೆಗಳ ಮೇಲೆ ಕಸದ ಬೆಟ್ಟಗಳು. ನಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಈ ಮಟ್ಟಿಗೆ ತಂದು ನಿಲ್ಲಿಸಿದ ಶ್ರೇಯ ಆಧುನಿಕ ಕಾಲದ್ದು ಎಂಬುದು ಮಾತ್ರ ವಿಷಾದದ ಸಂಗತಿ.
ಅಂದಹಾಗೆ ಇಂದು ಬೆಳಿಗ್ಗೆ ಜಾಗಿಂಗ್ ಮಾಡು­ತ್ತಿದ್ದ ಪ್ರತಿಷ್ಠಿತ ಶಿಕ್ಷಣವೇತ್ತರೊಬ್ಬರು ಫೋನಿನ ಸಂಭಾಷಣೆಯಲ್ಲಿ ಈ ನುಡಿಮುತ್ತು­ಗಳನ್ನು ಉದ್ಧರಿಸಿದರು. 

‘ನಮಗೆ ದೇವರು ಎರಡು ಕೈ, ಎರಡು ಕಾಲು, ಎರಡು ಕಿಡ್ನಿ... ಎಲ್ಲಾ ಎರಡೆರಡು ಯಾಕೆ ಕೊಟ್ಟಿ­ದಾನೆ ಹೇಳು? ಒಂದು ಕೈ ಕೊಟ್ರೆ ಇನ್ನೊಂದು ಕೆಲಸಾ ಮಾಡ್ಲೀ ಅಂತ....’ ಇಷ್ಟು ಕೇಳಿದ ಮೇಲೆ ಮುಂದೆ ಕೇಳಿಸಿಕೊಳ್ಳಲು ಏನೂ ಉಳಿದಿರಲಿಲ್ಲ. ಇಂತಹ ಶಿಕ್ಷಣ ನಮ್ಮದಾದರೆ ಯಾವ ಮಾಲಿನ್ಯದ ಬಗ್ಗೆಯೂ ನಾವು ತಲೆಕೆಡಿಸಿ­ಕೊಳ್ಳು­ವುದಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸು­ತ್ತಾನೆ ಎಂದು ಹಾಯಾಗಿ ಇದ್ದು ಬಿಡುತ್ತೇವೆ. ಇಂದು ಆಗುತ್ತಿ­ರುವುದು ಅದೇ.

ನಮ್ಮ ಶಿಕ್ಷಣ ಸಮಾಜ­ಮುಖಿಯಾದರೆ ಪರಸ್ಪರ ಕಾಳಜಿ ತಾನೇ ತಾನಾಗಿ ಬರುತ್ತದೆ. ಇಲ್ಲವಾದರೆ ಸ್ವಂತದ ಜೇಬು ತುಂಬಿರುವಾಗ ಲೋಕದ ಬಗ್ಗೆ ಕಾಳಜಿ  ಒಂದು ಗುಂಪಿನದು ಮಾತ್ರ ಎಂಬ ಭಾವನೆ ಬೆಳೆದರೂ ಆಶ್ಚರ್ಯವಿಲ್ಲ. ಮುಂದಿನ ದೀಪಾವಳಿ ಇನ್ನೂ ಹೆಚ್ಚಿನ ಗುಣಾ­ತ್ಮಕ ಬದಲಾವಣೆಗಳ ಬೆಳಕನ್ನು ಹೊತ್ತು ಬರಲಿ ಎಂಬುದಷ್ಟೇ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.