ADVERTISEMENT

ಲೈನ್‌ಮನ್‌ ಹುದ್ದೆ: ಮಹಿಳೆಯರಿಗಿಲ್ಲ ಮೀಸಲಾತಿ

ಕೆ.ನರಸಿಂಹ ಮೂರ್ತಿ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

‘ಲೈನ್‌ಮನ್‌ ಹುದ್ದೆಗೆ ಆಯ್ಕೆ ಮಾಡುವ ಸಲುವಾಗಿ ‘ಬೆಸ್ಕಾಂ’ನ ದೈಹಿಕ ಸಾಮರ್ಥ್ಯ ಪರೀಕ್ಷೆಗಳು ನಡೆದ ವೇಳೆ ನಾನು ಮೂರು ತಿಂಗಳು ಗರ್ಭಿಣಿ. ಅದು ಹೆಣ್ಣುಮಕ್ಕಳಿಗೆ ಅತ್ಯಂತ ಸೂಕ್ಷ್ಮವಾದ ಕಾಲ. ಆದರೆ ಲೈನ್‌ಮನ್‌ ಆಗಲೇಬೇಕು ಎಂಬ ಆಸೆ ಬಿಡಲಿಲ್ಲ. ಕಷ್ಟಪಟ್ಟು ಕಂಬವನ್ನು ಏರಿದ್ದೆ. ಒಂದು ನಿಮಿಷಕ್ಕೆ 50 ಬಾರಿ ಹಗ್ಗ ಆಡಿದ್ದೆ. ಆದರೆ ಓಟದ ಸ್ಪರ್ಧೆಗಳಲ್ಲಿ ಪುರುಷರಿಗೆ ಸಮನಾಗಿ ಓಡಲು ಆಗಲಿಲ್ಲ...’

ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಕೀಲುಹೊಳಲಿ ಗ್ರಾಮದ ಅಭ್ಯರ್ಥಿ ವೈ.ಕೆ.ಉಮಾದೇವಿ ಅವರ ನಿರಾಶೆಯ ನುಡಿಗಳಿವು.
‘ಮಹಿಳೆಯರಿಗೆ ಸ್ಪರ್ಧೆಗಳ ಮಾನದಂಡದಲ್ಲಿ ರಿಯಾಯಿತಿ ನೀಡಿದ್ದರೆ ನಾನೂ ಆಯ್ಕೆಯಾಗು ತ್ತಿದ್ದೆ’ ಎನ್ನುತ್ತಾರೆ ಅವರು. ಅವರಂತೆಯೇ ಕಂಬ ಏರಿದ್ದ ಮುಳಬಾಗಲು ತಾಲ್ಲೂಕಿನ ಎಸ್‌.ನಾಗಮಣಿಯವರೂ ಕೆಲಸ ಸಿಗದೆ ಹತಾಶರಾಗಿದ್ದಾರೆ. ಲೈನ್‌ಮನ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮಹಿಳೆಯರಿವರು. ಯಾವುದೇ ರಿಯಾಯಿತಿ ಇಲ್ಲದೆ, ಪುರುಷ–ಮಹಿಳೆಯರಿಬ್ಬರಿಗೂ ಒಂದೇ ಮಾನದಂಡದಲ್ಲಿ ಬೆಸ್ಕಾಂ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಏರ್ಪಡಿಸಿದ್ದ ಪರಿಣಾಮವಾಗಿ ಯಾವೊಬ್ಬ ಮಹಿಳಾ ಅಭ್ಯರ್ಥಿಗೂ ಕೆಲಸ ಸಿಗದ ಸನ್ನಿವೇಶ ಈಗ ನಿರ್ಮಾಣವಾಗಿದೆ.

ಈ ಹುದ್ದೆಗೆ ಐ.ಟಿ.ಐ. ಪೂರೈಸಿರುವ ರಾಜ್ಯದ ವಿವಿಧ ಜಿಲ್ಲೆಗಳ 363 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಜುಲೈ 25ರಂದು ಬೆಂಗಳೂರಿನ ಕೆ.ಇ.ಬಿ. ಎಂಜಿನಿಯರುಗಳ ಸಂಘದ ಕಟ್ಟಡದಲ್ಲಿ ಕೌನ್ಸೆಲಿಂಗ್‌ ನಿಗದಿಯಾ ಗಿದೆ. ಪಟ್ಟಿಯಲ್ಲಿ ಒಬ್ಬ ಮಹಿಳೆಯ ಹೆಸರೂ ಇಲ್ಲ. ಎಂಟು ಮೀಟರ್‌ ಎತ್ತರದ ಕಂಬವನ್ನು ಏರುವ ಮೊದಲ ಕಡ್ಡಾಯ ಪರೀಕ್ಷೆಯೂ ಸೇರಿ ದಂತೆ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿರುವ ಓಟ, ಹಗ್ಗದಾಟ, ಗುಂಡು ಎಸೆತ ಸ್ಪರ್ಧೆಗಳು, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ಸುಮಾರು 150 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿ ಬ್ಬರಿಗೂ ಏಕಪ್ರಕಾರವಾಗಿಯೇ ಕೋಲಾರದಲ್ಲಿ ಜೂನ್‌ 10ರಂದು ನಡೆದಿತ್ತು.

ಪುರುಷರಿಗೆ ಇರುವ ಅರ್ಹತಾ ಮಟ್ಟವನ್ನೇ ಮಹಿಳೆಯರಿಗೂ ಅಳವಡಿಸಿ ನಡೆಸಿರುವ ತಾರತಮ್ಯದ ಬಗ್ಗೆ ಗೊತ್ತಿದ್ದರೂ ಮಹಿಳಾ ಅಭ್ಯರ್ಥಿಗಳು ಇದನ್ನು ಪ್ರಶ್ನಿಸಲಾಗದೆ ಸ್ಪರ್ಧಿಸಿದ್ದರು. ಅವರ ಪೈಕಿ ಇಬ್ಬರಿಗೆ ಮಾತ್ರವೇ ಕಂಬ ಏರಲು ಸಾಧ್ಯವಾಗಿತ್ತು. ಈ ಇಬ್ಬರ ಪೈಕಿ ಒಬ್ಬರು ಗರ್ಭಿಣಿ ಎಂಬುದು ಗಮನಿಸಬೇಕಾದ ಸಂಗತಿ.

ಪೊಲಿಸ್‍ ಸಬ್‍ ಇನ್ಸ್‌ಪೆಕ್ಟರ್‍, ಕಾನ್ಸ್‌ ಟೆಬಲ್‍, ಅಬಕಾರಿ  ಸಬ್‍ ಇನ್ಸ್‌ಪೆಕ್ಟರ್‍, ಅಬ ಕಾರಿ ರಕ್ಷಕರ ಹುದ್ದೆಗಳೂ  ಸೇರಿದಂತೆ ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುವ ಸಂದರ್ಭದಲ್ಲಿ ಪರೀಕ್ಷೆಯ ಮಾನದಂಡಗಳನ್ನು ಪುರುಷ ಮತ್ತು ಮಹಿಳೆ ಯರಿಗೆ ಪ್ರತ್ಯೇಕವಾಗಿಯೇ ನಿಗದಿಪಡಿಸಲಾಗಿರು ತ್ತದೆ. ಆದರೆ ಲೈನ್‌ಮನ್‌ ಹುದ್ದೆಗೆ ಮಾತ್ರ ಏಕೆ ಈ ನಿಯಮ ಅನ್ವಯಿಸುವುದಿಲ್ಲ ಎಂಬ ಮಹಿಳಾ ಸ್ಪರ್ಧಿಗಳ ಪ್ರಶ್ನೆಯನ್ನು ಬೆಸ್ಕಾಂ ಗಂಭೀರವಾಗಿ ಪರಿಗಣಿಸಲಿಲ್ಲ.

ಹುಸಿಯಾದ ಭರವಸೆ: ಜೂನ್‌ 24ರಂದು ವಿಧಾನ ಪರಿಷತ್ತಿನಲ್ಲಿ ಸದಸ್ಯೆ ತಾರಾ ಅನುರಾಧಾ ಅವರ ಪ್ರಶ್ನೆಗೆ ಉತ್ತರಿಸಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು, ‘ಕಂಬ ಹತ್ತುವುದಾದರೆ ಮಹಿಳೆಯರಿಗೆ ಲೈನ್‌ಮನ್‌  ಹುದ್ದೆ ನೀಡಲು ಇಲಾಖೆ ಬದ್ಧವಾಗಿದೆ. ಮಹಿಳೆಯರನ್ನು ನೇಮಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ’ ಎಂದಿದ್ದರು. ಆದರೆ ಸಚಿವರ ಹೇಳಿಕೆ ಹುಸಿಯಾಗಿದೆ. ಈಗ ಪ್ರಕಟವಾಗಿರುವ ಆಯ್ಕೆ ಪಟ್ಟಿಯಲ್ಲಿ ಯಾವೊಬ್ಬ ಮಹಿಳಾ ಅಭ್ಯರ್ಥಿಯ ಹೆಸರೂ ಇಲ್ಲ ಎಂಬ ಉಮಾದೇವಿಯವರ ಅಳಲು ಈಗ ಕೇಳುವವರು ಯಾರು?

ಎಲ್ಲಿದೆ ಮೀಸಲಾತಿ?: ಈ ಮಹಿಳೆಯರು ಈಗ ಬೆಸ್ಕಾಂನಲ್ಲಿ ಎಲ್ಲಿದೆ ಮಹಿಳೆಯರಿಗೆ ಮೀಸಲಾತಿ ಎಂದು ಕೇಳುತ್ತಿದ್ದಾರೆ.
ಎಲ್ಲ ಅಭ್ಯರ್ಥಿಗಳೂ ವಿದ್ಯುತ್‌ ಕಂಬ ಹತ್ತುವುದು ಕಡ್ಡಾಯ. ಉಳಿದಂತೆ ನಾಲ್ಕು ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಪೈಕಿ ಎರಡು ಪರೀಕ್ಷೆಗಳಲ್ಲಿ ಪಾಸಾಗಬೇಕಿತ್ತು. ಸ್ಪರ್ಧೆಗಳಲ್ಲಿ ಮಹಿಳೆಯರಿಗೆ ಗುರಿ ಮುಟ್ಟಲು ಅರ್ಹತಾ ಮಟ್ಟದಲ್ಲಿ ರಿಯಾಯಿತಿಯನ್ನೇ ಬೆಸ್ಕಾಂ ನೀಡದಿರುವುದು ವಿಪರ್ಯಾಸ. ಆ ಮೂಲಕ ಮಹಿಳೆಯರ ಉದ್ಯೋಗ ಮೀಸಲಾತಿಯೂ ಮೂಲೆಗುಂಪಾಗಿದೆ.

14 ಸೆಕೆಂಡ್‌ಗಳಲ್ಲಿ 100 ಮೀಟರ್, 3 ನಿಮಿಷದಲ್ಲಿ 800 ಮೀಟರ್‌ ಓಟವನ್ನು ಪೂರ್ಣಗೊಳಿಸಬೇಕು. ಒಂದು ನಿಮಿಷಕ್ಕೆ 50 ಬಾರಿ ಹಗ್ಗ ಆಡಬೇಕು. 12 ಪೌಂಡ್‌ ತೂಕದ ಗುಂಡನ್ನು 8 ಮೀಟರ್ ದೂರಕ್ಕೆ ಎಸೆಯ ಬೇಕೆಂಬ ಸ್ಪರ್ಧೆಗಳಲ್ಲಿ ಮಹಿಳೆಯರು ಪುರು ಷರಿಗೆ ಸಮಾನವಾಗಿ ಪೈಪೋಟಿ ನೀಡಲು ಸಾಧ್ಯ ವಾಗಿಲ್ಲ. ಕಂಬ ಹತ್ತಿದ ಮಹಿಳಾ ಸ್ಪರ್ಧಿಗಳ ನ್ನಾದರೂ ಹುದ್ದೆಗೆ ಆಯ್ಕೆ ಮಾಡಬೇಕಿತ್ತು ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಹೇಳುತ್ತಾರೆ.

‘ಲೈನ್‌ಮನ್‌ಗಳಾಗಲು ಕಂಬ ಹತ್ತುವುದು ಕಡ್ಡಾಯ. ಸರಿ, ಗರ್ಭಿಣಿಯಾದರೂ ನಾನು ಕಂಬ ಹತ್ತಿದೆ. ಆದರೆ ಕೆಲಸ ಸಿಗಲಿಲ್ಲ. ಈ ಹುದ್ದೆಯಿಂದ ಮಹಿಳೆಯರನ್ನು ದೂರವಿಡುವ ಸಲುವಾಗಿಯೇ, ದೈಹಿಕ ಸಾಮರ್ಥ್ಯ ಪರೀಕ್ಷೆ ಗಳನ್ನು ಪುರುಷರಿಗೆ ಸಮಾನವಾಗಿಯೇ ಮಹಿಳೆ ಯರಿಗೂ ಏರ್ಪಡಿಸಿರುವ ಬೆಸ್ಕಾಂಗೆ  ಸಮಾ ನತೆಯ, ಮಹಿಳಾ ಮೀಸಲಾತಿಯ ಪಾಠಗಳನ್ನು ಯಾರು ಹೇಳಬೇಕು’ ಎಂಬ ಉಮಾದೇವಿ ಅವರ ಪ್ರಶ್ನೆಗೆ ಯಾರಾದರೂ ಉತ್ತರಿಸುತ್ತಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.