ADVERTISEMENT

ವೃತ್ತಿಪರ ಶಿಕ್ಷಣ: ಬಾಣಲೆಯಿಂದ ಬೆಂಕಿಗೆ?

ಡೊನೇಷನ್ ಎಂಬ ಕಾಯಿಲೆಗೆ ‘ನೀಟ್’ ಎಂಬ ಔಷಧಿ ಕೊಟ್ಟರೆ ಸಮಂಜಸವಾದೀತೆ?

​ಪ್ರಜಾವಾಣಿ ವಾರ್ತೆ
Published 18 ಜುಲೈ 2016, 19:30 IST
Last Updated 18 ಜುಲೈ 2016, 19:30 IST

ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ದೇಶಕ್ಕೆಲ್ಲ ಒಂದೇ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಜಾರಿಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ ಏಪ್ರಿಲ್‌ನಲ್ಲಿ ತೀರ್ಪು ನೀಡಿತ್ತು.  ಖಾಸಗಿ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳನ್ನು ಡೊನೇಷನ್- ಕ್ಯಾಪಿಟೇಷನ್ ಶುಲ್ಕದ ಹೆಸರಿನಲ್ಲಿ ಸುಲಿಗೆ ಮಾಡುತ್ತಿವೆ. ಅದನ್ನು ತಡೆಗಟ್ಟುವುದೇ ಈ ತೀರ್ಪಿನ ಹಿಂದಿರುವ ಉದ್ದೇಶ.

ಕೆಲ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಸೀಟಿಗೆ ₹ 3  ಕೋಟಿಗೂ ಹೆಚ್ಚು ಡೊನೇಷನ್ ಪಡೆಯುತ್ತಿರುವುದು ಸರ್ಕಾರಕ್ಕೂ ತಿಳಿದಿದೆ. ಅವ್ಯವಹಾರ ಮತ್ತು ಭ್ರಷ್ಟಾಚಾರ ಕಾಮೆಡ್-ಕೆ ವ್ಯವಹಾರದಲ್ಲಿ ತಾಂಡವವಾಡುತ್ತಿವೆ. ಸೀಟು ಬ್ಲಾಕಿಂಗ್ ದಂಧೆ ಕಾನೂನಿನ ಮೂಗಿನ ಅಡಿಯಲ್ಲಿ ನಡೆಯುತ್ತಿದೆ. ಇನ್ನೊಂದೆಡೆ ಲಕ್ಷಾಂತರ ವಿದ್ಯಾರ್ಥಿಗಳು ಡಜನ್‌ಗಟ್ಟಲೆ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದು ವೃಥಾ ಆತಂಕಕ್ಕೆ ಸಿಲುಕುತ್ತಿದ್ದಾರೆ.

ಇಂಥ ಹಲವು ಪಿಡುಗುಗಳನ್ನು ಹೋಗಲಾಡಿಸಲು ‘ನೀಟ್’ ರಾಮಬಾಣವಾಗಲಿ, ಇನ್ಯಾವುದಕ್ಕಲ್ಲವಾದರೂ ಡೊನೇಷನ್-ಕ್ಯಾಪಿಟೇಷನ್ ಶುಲ್ಕದ ಹಾವಳಿ ತಪ್ಪಬಹುದೆಂಬ ಹಂಬಲದಿಂದ ‘ನೀಟ್’ ಜಾರಿಯಾಗಲೆಂದು ಪೋಷಕರು ಅಭಿಲಾಷೆಪಟ್ಟರು.

ಆದರೆ ಸಹಜವಾಗಿಯೇ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ದೇಶಕ್ಕೆಲ್ಲ ಒಂದೇ ಪ್ರವೇಶ ಪರೀಕ್ಷೆ ನಡೆಸುವುದರಿಂದ ಡೊನೇಷನ್ ಹಾವಳಿ ಹೇಗೆ ತಪ್ಪುತ್ತದೆ? ಹೆಚ್ಚೆಂದರೆ ‘ನೀಟ್‌’ನಿಂದಾಗಿ ಹಲವು ಪರೀಕ್ಷೆಗಳನ್ನು ಬರೆಯುವ ಗೋಜಲು ತಪ್ಪುತ್ತದೆ. ತತ್ಫಲವಾಗಿ ಹಲವು ಬಾರಿ ಪರೀಕ್ಷಾ ಶುಲ್ಕ ಪಾವತಿಸುವುದು ತಪ್ಪಬಹುದು ಅಷ್ಟೆ.

‘ನೀಟ್’ ಎಂಬುದು ಒಂದು ಪ್ರವೇಶ ಪರೀಕ್ಷೆಯೇ ಹೊರತು ಶುಲ್ಕ ನಿಗದಿಪಡಿಸುವ ಅಧಿಕಾರ ಅದಕ್ಕಿಲ್ಲವಲ್ಲ? ಸುಪ್ರೀಂ ಕೋರ್ಟ್‌, ಭಾರತೀಯ ವೈದ್ಯಕೀಯ ಮಂಡಳಿ ಅಥವಾ ಕೇಂದ್ರ ಸರ್ಕಾರ ಇವು ಯಾವುವೂ ನೀಟ್‌ಗೆ ಶುಲ್ಕ ನಿಯಂತ್ರಿಸುವ ಕಾನೂನಾತ್ಮಕ ಬಲವನ್ನು ನೀಡಿಲ್ಲ ಅಂದಮೇಲೆ ಡೊನೇಷನ್ ಎಂಬ ಕಾಯಿಲೆಗೆ ‘ನೀಟ್’ ಎಂಬ ಔಷಧಿ ಕೊಟ್ಟರೆ ಸಮಂಜಸವಾದೀತೆ?

ಡೊನೇಷನ್ ಹಾವಳಿ ತಡೆಗಟ್ಟಲು ಇಚ್ಛಾಶಕ್ತಿ ಇದ್ದಲ್ಲಿ ನ್ಯಾಯಾಲಯವು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಇಂತಿಷ್ಟಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಅದು ಕಾನೂನಿಗೆ ವಿರುದ್ಧವಾದದ್ದು, ಅಂತಹ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂಬ ತೀರ್ಪು  ನೀಡಬಹುದು. ಆದರೆ ಇದು ಯಾವ ಪಕ್ಷದವರಿಗೂ ಪಥ್ಯವಾಗುವುದಿಲ್ಲ. ಇಂತಹ ಕಾನೂನು ರೂಪುಗೊಳ್ಳಬೇಕಾದರೆ ಬೃಹತ್ ಜನಾಂದೋಲನವೇ ಆಗಬೇಕು.

ಶೇ 85ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕೆಂದು ನ್ಯಾಯಾಲಯ ಘೋಷಿಸಿತ್ತು. ದುರದೃಷ್ಟವೆಂದರೆ, ಸೀಟುಗಳಲ್ಲಿ ಸರ್ಕಾರಿ ಕೋಟಾ ಎಷ್ಟು, ಕಾಮೆಡ್-ಕೆ ಕೋಟಾ ಎಷ್ಟು ಎಂಬ ಬಹಳ ಮುಖ್ಯ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಅದು ಹೋಗಲಿಲ್ಲ. ಆದರೆ ‘ನೀಟ್’ ಈ ಬಾರಿ ಅನುಷ್ಠಾನಕ್ಕೆ ಬಂದ ನಂತರವಷ್ಟೇ ವಾಸ್ತವಾಂಶದ ಸ್ಪಷ್ಟ ಚಿತ್ರಣ ದೊರಕಲು ಆರಂಭವಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 85ರಷ್ಟು ಸೀಟುಗಳು ‘ನೀಟ್’ ಪರೀಕ್ಷೆ ವ್ಯಾಪ್ತಿಗೆ ಬರಲಿದ್ದು ಇವುಗಳಲ್ಲಿ ಯಾವ ಸೀಟನ್ನೂ ಸರ್ಕಾರಿ ಕೋಟಾಗೆ ಬಿಟ್ಟುಕೊಡುವುದಿಲ್ಲ ಎಂದು ಕಾಮೆಡ್-ಕೆ ಹಟ ಹಿಡಿದದ್ದನ್ನು ನೋಡಿದ್ದೇವಷ್ಟೆ. ಕೊನೆಗೂ ಸರ್ಕಾರದೊಂದಿಗೆ ಹಲವು ಬಾರಿ ಮಾತುಕತೆಯ ನಂತರ ಹಿಂದೆಂದೂ ಕಾಣದ ಶೇ 35ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಹಸಿರು ನಿಶಾನೆ ಕೊಟ್ಟ ಬಳಿಕ ತನ್ನ ಹಟವನ್ನು ಕಾಮೆಡ್-ಕೆ ಸಡಿಲಗೊಳಿಸಿತು. ಕೊನೆಗೂ ಈ ಹಗ್ಗ ಜಗ್ಗಾಟದಲ್ಲಿ ಏಟು ತಿಂದವರು ವಿದ್ಯಾರ್ಥಿಗಳು ಮತ್ತು ಪೋಷಕರು. ‘ನೀಟ್’ ಜಾರಿಯಾಗುವ ಬೆನ್ನಲ್ಲೇ ಕ್ಯಾಪಿಟೇಷನ್ ಶುಲ್ಕದ ಹೊರೆ ಇಳಿಯುವ ಬದಲು ಏರುತ್ತಿದೆ.

ಇನ್ನು, ಹತ್ತು ಹಲವು ಪ್ರವೇಶ ಪರೀಕ್ಷೆಗಳನ್ನು ಎಷ್ಟು ವಿದ್ಯಾರ್ಥಿಗಳು ಬರೆಯುತ್ತಾರೆ ಎಂಬ ಅಂಕಿ-ಅಂಶವನ್ನು ಪರಿಶೀಲಿಸುವುದು ಉತ್ತಮ. ಮಹಾರಾಷ್ಟ್ರದಲ್ಲಿ 4 ಲಕ್ಷ ವಿದ್ಯಾರ್ಥಿಗಳು ಒಂದೇ ಸಿಇಟಿ ಬರೆಯುತ್ತಾರೆ. ಆಂಧ್ರದಲ್ಲಿ 3 ಲಕ್ಷ ವಿದ್ಯಾರ್ಥಿಗಳು ಇಎಮ್‌ಸೆಟ್ ಬರೆಯುತ್ತಾರೆ. ತಮಿಳುನಾಡಿನಲ್ಲಂತೂ 12ನೇ ತರಗತಿಯ ಫಲಿತಾಂಶದ ಆಧಾರದ ಮೇರೆಗೆ ವೃತ್ತಿಪರ ಸೀಟುಗಳನ್ನು ವಿತರಿಸಲಾಗುವುದು.

ಗುಜರಾತಿನಲ್ಲಿ ಚಾಲ್ತಿಯಲ್ಲಿರುವುದು ಒಂದೇ ಗುಜ್‌ಸಿಇಟಿ ಹಾಗೂ ಬಂಗಾಳದಲ್ಲಿರುವುದು ಒಂದೇ ಜೆಇಇ. ಅಂದಮೇಲೆ ವೈದ್ಯಕೀಯ ಸೀಟು ಆಕಾಂಕ್ಷಿಗಳೆಲ್ಲರೂ ಹತ್ತಾರು ಪ್ರವೇಶ ಪರೀಕ್ಷೆಗಳನ್ನು ಬರೆಯುತ್ತಾರೆ ಎಂಬುದು ನಿಜವೇ? ಕರ್ನಾಟಕದ ಮಟ್ಟಿಗೆ ಕಾಮೆಡ್-ಕೆ ಪ್ರತ್ಯೇಕ ಪರೀಕ್ಷೆ ನಡೆಸುತ್ತದೆ. ಆದರೆ ಪರೋಕ್ಷವಾಗಿ ಕಾಮೆಡ್-ಕೆ ಅಸ್ತಿತ್ವಕ್ಕೆ ಇಂಬು ನೀಡಿದ್ದು, ಸುಪ್ರೀಂ ಕೋರ್ಟ್‌ನ  ಹನ್ನೊಂದು ನ್ಯಾಯಮೂರ್ತಿಗಳ ಪೀಠ 2002ರಲ್ಲಿ ನೀಡಿದ ತೀರ್ಪು ಎಂಬುದನ್ನು ಮರೆಯುವಂತಿಲ್ಲ.

ಅದಕ್ಕೂ ಮುನ್ನ ಕರ್ನಾಟಕದಲ್ಲೂ ಜರುಗುತ್ತಿದ್ದುದು ಒಂದೇ ಸಿಇಟಿ ಪರೀಕ್ಷೆ. ಈಗಲೂ ಎಂಟು ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಕಾಮೆಡ್-ಕೆ ಪರೀಕ್ಷೆಗಳಿಗೆ ಹಾಜರಾಗುವುದು ಅಲ್ಪ ಸಂಖ್ಯೆಯ ವಿದ್ಯಾರ್ಥಿ ಸಮುದಾಯವಷ್ಟೆ. (ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ಸ್ಥಿತಿವಂತ ವರ್ಗಕ್ಕೆ ಸೇರಿದವರು). ವಾಸ್ತವಾಂಶ ಹೀಗಿದ್ದಾಗ ‘ನೀಟ್’ ಪ್ರಹಸನ ಕೇವಲ ಕೆಲವು ಹಣವುಳ್ಳ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವುದೇ ಆಗಿದೆಯೇ?

ವಿದ್ಯಾರ್ಥಿಗಳು, ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಹತ್ತಾರು ರಾಜ್ಯ ಮಟ್ಟದ ಬೋರ್ಡ್‌ಗಳಲ್ಲಿ ಅಭ್ಯಾಸ ಮಾಡುತ್ತಿರುವುದರಿಂದ ಸಾಮಾನ್ಯ ಪರೀಕ್ಷೆಯು ಕನಿಷ್ಠ ಗುಣಮಟ್ಟವನ್ನು ಕಾದಿರಿಸುವ ಒಂದು ಸಾಧನವಾಗುವುದು ಎಂದು ‘ನೀಟ್’ ಪರವಾದ ಮತ್ತೊಂದು ವಾದವಿದೆ. ದೇಶದಲ್ಲಿ ಅಮಾನವೀಯ ಎನ್ನುವಷ್ಟರ ಮಟ್ಟಿಗೆ ಬೆಳೆದಿರುವ ಆರ್ಥಿಕ ಅಸಮಾನತೆ ಶೈಕ್ಷಣಿಕ ರಂಗದಲ್ಲೂ ತನ್ನ ವಿರೂಪದ ಛಾಪನ್ನು ಒತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.

ಸ್ಥಿತಿವಂತರ ಮಕ್ಕಳಿಗೆ ಇಂಟರ್‌ನ್ಯಾಷನಲ್ ಶಾಲೆಗಳು, ಬಡವರ ಮಕ್ಕಳಿಗೆ ಸರ್ಕಾರಿ ಶಾಲೆಗಳು ಎಂಬ ದುಃಸ್ಥಿತಿ ಉಂಟಾಗಿದೆ. ಮೂರನೇ ತರಗತಿಯ ಶೇಕಡ 82ರಷ್ಟು ಮಕ್ಕಳು ಕಳೆಯುವ ಲೆಕ್ಕ ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂಬಂಥ ಕರಾಳ ವಾಸ್ತವಾಂಶವನ್ನು ಪ್ರಥಮ್‌ ಸಂಸ್ಥೆ  ಬಿಚ್ಚಿಟ್ಟಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸಂಸತ್‌ನಲ್ಲಿ ಈ ಹಿಂದೆ ವರದಿ ಮಂಡಿಸಿತ್ತು. ಸರ್ಕಾರಿ ಸಂಸ್ಥೆಗಳಿಗೆ ಮೂಲ ಸೌಕರ್ಯಗಳನ್ನು ನೀಡದೆ ಸರ್ಕಾರವೇ ಹಾಳುಗೆಡವಿರುವುದು ಇಂಥ ದುಃಸ್ಥಿತಿಗೆ ಕಾರಣ.

ಒಂದೆಡೆ ಕಳಪೆ ಗುಣಮಟ್ಟದ ಶಿಕ್ಷಣ ಪಡೆದ ಮಕ್ಕಳು, ಇನ್ನೊಂದೆಡೆ ಕೋಚಿಂಗ್ ಸೆಂಟರ್, ಅಂತರರಾಷ್ಟ್ರೀಯ ಶಾಲಾ ಕಾಲೇಜುಗಳಲ್ಲಿ ವಿಶಿಷ್ಟ ತರಬೇತಿ ಪಡೆದ ಮಕ್ಕಳು ಸೃಷ್ಟಿಯಾಗಿದ್ದಾರೆ. ಇವರ ನಡುವೆ ಸ್ಪರ್ಧೆ ಏರ್ಪಟ್ಟರೆ ಗೆಲ್ಲುವವರು ಯಾರು? ಈ ತಾರತಮ್ಯವನ್ನು ಕಿತ್ತೊಗೆಯದೆ, ‘ನೀಟ್’ ಎಂಬ ಸಾಮಾನ್ಯ ಪರೀಕ್ಷೆಯ ಮೂಲಕ ಗುಣಮಟ್ಟ ಕಾದಿರಿಸುವ ಕೆಲಸಕ್ಕೆ ಕೈಹಾಕಿದರೆ ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿಸಿದಂತೆ ಆಗುವುದಿಲ್ಲವೇ? 

‘ನೀಟ್’ ಪರೀಕ್ಷೆ ಜಾರಿಗೊಳಿಸುವುದರಲ್ಲಿ ಕೋಚಿಂಗ್ ಸೆಂಟರ್ ಲಾಬಿಯ ಕೈವಾಡವಿದೆಯೆಂಬ ಆರೋಪ ಇದೆ. ‘ಅಸೋಚಾಂ’ ಪ್ರಕಾರ, 2015ರಲ್ಲಿ ಕೋಚಿಂಗ್ ಸೆಂಟರ್‌ಗಳ ವಾರ್ಷಿಕ ವಹಿವಾಟು ₹ 3 ಲಕ್ಷ ಕೋಟಿ ಮೀರಿದೆ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ವಿದೇಶಿ ಉದ್ಯಮಪತಿಗಳು ಭಾರತದ ‘ಕೋಚಿಂಗ್ ಮಾರುಕಟ್ಟೆ’ಗೆ ಲಗ್ಗೆ ಇಟ್ಟಿರುವುದನ್ನು ಗಮನಿಸಿದರೆ ಈ ಮೇಲಿನ ಗುಮಾನಿ ಹೆಚ್ಚುತ್ತದೆ.

ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲೇ ದೇಶದ ಶೇ 60ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಕೇಂದ್ರೀಕೃತವಾಗಿವೆ. ಉತ್ತರ ಭಾರತದಲ್ಲಿ ದುಬಾರಿ ಶುಲ್ಕ ತೆತ್ತು ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳಲು ನಿಂತಿರುವ ವಿದ್ಯಾರ್ಥಿಗಳನ್ನು ಆಕರ್ಷಿಸಲು ಎಲ್ಲ ಸೀಟುಗಳನ್ನು ಅಖಿಲ ಭಾರತ ಮಾರುಕಟ್ಟೆ ಅಡಿ ತರುವ ದುರುದ್ದೇಶ ‘ನೀಟ್’ ಹಿಂದೆ ಅಡಕವಾಗಿದೆ ಎಂದು ಕೆಲವರು ಟೀಕಿಸಿದ್ದಾರೆ. ಒಟ್ಟಿನಲ್ಲಿ ‘ಒಂದು ದೇಶ, ಒಂದೇ ಪ್ರವೇಶ ಪರೀಕ್ಷೆ’ ಎಂಬ ಘೋಷಣೆ ‘ಒಂದು ದೇಶ, ಶಿಕ್ಷಣಕ್ಕೆಲ್ಲಾ ಒಂದೇ ಮಾರುಕಟ್ಟೆ’ಯಾಗಿ ಪರಿಣಮಿಸಿದರೆ ಅಂತಿಮವಾಗಿ ಕ್ಯಾಪಿಟೇಷನ್ ಲಾಬಿಯೇ ಗೆದ್ದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.