ADVERTISEMENT

ವೇಶ್ಯಾವೃತ್ತಿ ಎಂಬ ಹಿಮ್ಮುಖ ಚಲನೆ

ಚರ್ಚೆ

ಡಾ.ವಿನಯಾ ವಕ್ಕುಂದ, ಧಾರವಾಡ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಪಿತೃ ಪ್ರಧಾನ ಮನಸ್ಥಿತಿಯು ಮಹಿಳಾ ವಿಷಯವನ್ನು ಕರುಣೆಯಿಂದ, ಉದಾರವಾದಿ ನೆಲೆಯಿಂದ ಪ್ರವೇಶಿಸಿ­ದರೆ ಉಂಟಾಗುವ ಅಪಾಯ ವೇಶ್ಯಾವೃತ್ತಿ ಕುರಿತ ಚರ್ಚೆ­ಯಲ್ಲಿ ಕಾಣುತ್ತಿದೆ. ಮಹಿಳಾ ಪರ ಚಿಂತನೆಯು ಈ ನೆಲವನ್ನು ಪ್ರವೇಶಿಸಿದ ಇಷ್ಟು ಕಾಲದ ನಂತರವೂ  ಮಹಿಳಾ ಸಮಸ್ಯೆ­ಯಲ್ಲಿನ ಸೂಕ್ಷ್ಮವನ್ನು ಕಾಣುವುದು ಸಾಧ್ಯವಾಗುತ್ತಿಲ್ಲ. ಮಹಿಳಾ ಉದ್ಧಾರ, ಸಶಕ್ತೀಕರಣ, ಸಬಲೀಕರಣ ಮುಂತಾದ ಧೋರಣೆಗಳು ಪ್ರಭುತ್ವವನ್ನು, ಪಿತೃಸಂಹಿತೆಯನ್ನು ಉದ್ಧಾರ­ಕರ ಸ್ಥಾನದಲ್ಲಿ ನಿಲ್ಲಿಸುವುದರಿಂದ ಸಮಸ್ಯೆಯ ಪದರರೂಪಿ ನೆಲೆ ಗೋಚರಿಸುವುದಿಲ್ಲ. ಈ ಉದ್ಧಾರಕ ನಿಲುವು ಸಂವೇ­ದನಾಶೀಲ ಮನಸ್ಸುಗಳನ್ನೂ ಅತಿಕ್ರಮಿಸುವ ದುರಂತ ಇದು.

ನಿಜ, ವೇಶ್ಯಾವಾಟಿಕೆ ಭಾರತೀಯ ಸಮಾಜದ ಅವಿಭಾಜ್ಯ ವಾಸ್ತವ. ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಸ್ವರೂಪ-­­ಗಳಲ್ಲಿ ಅದು ವ್ಯಾಪಿಸಿತ್ತು, ಈಗಲೂ ಇದೆ. ಭಾರತ­ದಲ್ಲಿ ಮೇಲ್ಜಾತಿ, ಮೇಲ್ವರ್ಗ ಮತ್ತು ಪ್ರಭುತ್ವಗಳು, ಕೆಳಜಾತಿ ವರ್ಗಗಳ ಹೆಣ್ಣುಮಕ್ಕಳನ್ನು ತಮ್ಮ ಭೋಗದ ವಸ್ತುವಾಗಿಸಿ­ಕೊಳ್ಳುವುದನ್ನು ಪದ್ಧತಿಯಾಗಿಸಿಕೊಂಡವು. ದೇವದಾಸಿ, ನಾಯಕ­ಸಾನಿ, ವೇಶ್ಯೆ, ಅಂಗಭೋಗ, ರಂಗಭೋಗ ಹೀಗೆ ಹಲವು ಗುರುತುಗಳನ್ನಿಟ್ಟು ಆಳಿದವು.

ರಾಜಪ್ರಭುತ್ವ ಮತ್ತು ಜಮೀನ್ದಾರಿ ವ್ಯವಸ್ಥೆಗಳ ಕಾಲದಲ್ಲಿ ವೇಶ್ಯಾವಾಟಿಕೆಗೆ ಸಾಮಾ­ಜಿಕ ಕಾನೂನಿನ ಸಮ್ಮತಿಯಿತ್ತು. ರಾಜರ ಕಾಲದಲ್ಲಂತೂ ಅದೊಂದು ವೃತ್ತಿಯೇ. ಆದರೆ ಆಗ ವೇಶ್ಯೆಯರು ಗೌರವ­ದಿಂದ ಬದುಕಿದರೇ?

ವೇಶ್ಯಾವಾಟಿಕೆಯನ್ನು ವೃತ್ತಿಯಾಗಿ ಒಪ್ಪಿಕೊಳ್ಳಲು ಸಾಧ್ಯ­ವಿಲ್ಲ. ಯಾಕೆಂದರೆ ಇದು ಪುರುಷರು, ಮಹಿಳೆಯರು ಮತ್ತು ಅನ್ಯಲಿಂಗೀಯರ ಮೇಲೆ ನಡೆಸುವ ಲೈಂಗಿಕ ಅಧಿಕಾರ­ವಾಗಿ­ರುತ್ತದೆ. ಹಣದ ಮೂಲಕ ಇನ್ನೊಂದು ದೇಹವನ್ನು ಕೊಂಡು-­ಕೊಳ್ಳುವ, ಬಳಸಿಕೊಳ್ಳುವ ಕಾನೂನುಬದ್ಧ ಹಕ್ಕನ್ನು ಪಡೆದು­ಕೊಳ್ಳು­ವುದು ಎಂಬ ಅರ್ಥ ಕೊಡುತ್ತದೆ. ಈ ವೃತ್ತಿಯನ್ನು ದೇಹ­ದಿಂದ ಹೊರತುಪಡಿಸಲು ಸಾಧ್ಯವಿಲ್ಲ.

ದೇಹವನ್ನು ವಿಕ್ರ­ಯಕ್ಕೆ ಒಡ್ಡಿಕೊಳ್ಳುವುದು ಆತ್ಮಾನುಕಂಪಕ್ಕೆ, ಅಧೀರತೆಗೆ ಕಾರಣ­ವಾಗುತ್ತದೆ.
ಲೈಂಗಿಕ ಕಾರ್ಯಕರ್ತೆಯೊಬ್ಬಳನ್ನು ಮಾತನಾಡಿಸಿದ ಸಂದರ್ಭವೊಂದರಲ್ಲಿ ‘ಮನಿಯಾಗ ಯಾರೋ ಕುಂತ್ರ ಇರಸು ಮುರಸು ಅಂತೀರಿ ಅವ್ವಾರೆ, ಮೈಯಂತ ಮೈಯಾಗ... ಹ್ಯಾಂಗ ಹೇಳೂದ ಹೇಳ್ರೀ...’ ಎಂದಿದ್ದು ಮನಸ್ಸಿಗೆ ನಟ್ಟಿದಂತಿದೆ.

‘ಎಲ್ಲ ವೃತ್ತಿಗಳೂ ಸಮಾನ’ ಎಂದು ಹೇಳುವುದು ಸುಲಭ (ಸಂಗತದಲ್ಲಿ ಸುರೇಶ್‌ ಹೆಬ್ಳೀಕರ್‌ ಅವರ ಲೇಖನ, ಸೆ. 25). ವಾಸ್ತವ ಹಾಗಿರುವುದಿಲ್ಲ. ಮುಕ್ತ ಉದ್ಯೋಗಾವಕಾಶಗಳ ಕಾಲ ಎಂದು ಪ್ರಚಾರ ಪಡೆಯುತ್ತಿರುವಾಗಲೂ ವೃತ್ತಿಗಳು ಪರಂಪ­ರಾಗತ ಜಾತಿ, -ಲಿಂಗ, -ವರ್ಗಗಳ ಮುಂದು­ವರಿಕೆಗಳೇ ಆಗಿವೆ. ಪೌರ ಕಾರ್ಮಿ­ಕರು ಮತ್ತು ಸಫಾಯಿ ಕರ್ಮಚಾರಿಗಳು ಯಾವ ಜಾತಿ, ವರ್ಗಗಳಿಗೆ ಸೇರಿದವರು ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳ­ಬೇಕಿದೆ. ವೃತ್ತಿ ಶ್ರೇಣೀಕರಣವು ಸಂಬಳ, ಸವ­ಲತ್ತು, ಅಧಿಕಾರದ ಪ್ರತಿ ಹಂತದಲ್ಲೂ ಕಣ್ಣಿಗೆ ರಾಚುತ್ತದೆ.

ವೇಶ್ಯೆಯರು ಎದುರಿಸುತ್ತಿರುವ ದೌರ್ಜನ್ಯ, ಸಮಸ್ಯೆಗಳೆಲ್ಲವೂ ವೃತ್ತಿಮಾನ್ಯತೆ ಪಡೆದೊಡನೆ ಪರಿಹಾರ­ವಾಗುತ್ತವೆಯೇ? ಬೇರೆಬೇರೆ ವೃತ್ತಿಗಳಲ್ಲಿ ತೊಡಗಿಸಿ­ಕೊಂಡಿ­ರುವ ಮಹಿಳೆಯರು ಅಸುರಕ್ಷಿತರಾಗಿರುವ ಸಂದರ್ಭ ನಮ್ಮದು. ಸಮಾಜದ ಮನೋವೃತ್ತಿಯಲ್ಲಿ ಲಿಂಗಸೂಕ್ಷ್ಮತೆ ಸೇರುವವರೆಗೂ ಹೆಣ್ಣು ಅನುಭವಿಸುವ ಸಂಕಟಗಳು ಕೊನೆ­ಯಾಗು­ವುದಿಲ್ಲ.

ವೇಶ್ಯಾವೃತ್ತಿಯನ್ನು ಸಾಮಾಜಿಕ ಅಗತ್ಯ ಎಂದು ಪ್ರತಿಪಾದಿಸುವವರು  ‘ಸಮಾಜ’ ಎಂಬ ಪರಿಕಲ್ಪನೆ­ಯನ್ನು ಗಂಡಸರಿಂದ ಕೂಡಿದ, ಗಂಡಸಿನ ಯಜಮಾನಿಕೆ ಇರುವ, ಗಂಡಸಿಗೆ ಹಿತಕಾರಿಯಾದ ಎಂಬ ಅರ್ಥಗಳಲ್ಲಿಯೇ ಅನ್ವಯಿಸಿಕೊಳ್ಳುತ್ತಾರೆ. ಹೆಬ್ಳೀಕರ್‌ ಅವರು ಯೋಧರನ್ನು, ಕಾರ್ಮಿಕರನ್ನು ಲೈಂಗಿಕವಾಗಿ ತೃಪ್ತಿಗೊಳಿಸಿ ಕರ್ತವ್ಯಕ್ಕೆ ಬದ್ಧರಾಗಿಸಿದ ವೇಶ್ಯೆಯರ ಸೇವೆಯನ್ನು ಉಲ್ಲೇಖಿಸುತ್ತಾರೆ. ಆದರೆ ಹೆಣ್ಣಾಗಿದ್ದ ಕಾರಣಕ್ಕಾಗಿಯೇ ಯೋಧರಾಗದ, ಕಾರ್ಮಿ­ಕರಾಗದ, ಎಂಜಿನಿಯರುಗಳಾಗದ ಆಗಿನ ವಾಸ್ತವ ಸ್ಥಿತಿ­ಯನ್ನು ಗಮನಿಸುವುದಿಲ್ಲ. ಜಗತ್ತಿನ ಚರಿತ್ರೆಯು ಹೆಂಗಸನ್ನು ಕುರುಹುಗಳೇ ಇಲ್ಲದವಳನ್ನಾಗಿಸಿ ನಿರಂತರ ಪೂರಕ ಪಾತ್ರ­ದಲ್ಲೇ ಇರಿಸಿತು. ಹೆಣ್ಣಿನ ಸ್ವಂತಿಕೆಯ ಶೋಧಕ್ಕೆ ಆಧುನಿ­ಕ­ತೆಯು ತೆರೆದ ಅವಕಾಶಗಳು ಸೀಮಿತವಾಗಿದ್ದವು. ಅದನ್ನೂ ದೇಹ­ಬದ್ಧತೆಯೆಡೆಗೆ ಹೊರಳಿಸುವುದರ ಹಿಂದೆ ಬಂಡವಾಳ­ವಾದದ ಹುನ್ನಾರವಿದೆ.

ವೇಶ್ಯೆಯರ ಸಮಸ್ಯೆಯನ್ನು ನಿರ್ವಹಿಸಬೇಕಾದ ವಿಧಾನ ಬೇರೆಯಿದೆ. ಅವರ ಬದುಕನ್ನು ಆರೋಗ್ಯಕರವಾಗಿಯೂ, ಮಾನವೀಯ ಘನತೆಗೆ ತಕ್ಕುದಾಗಿಯೂ ಬದಲಿಸುವ ಕ್ರಮ­ಗಳನ್ನು ಕೈಗೊಳ್ಳಬೇಕಿದೆ. ಬಂಡವಾಳವಾದ ಸುಲಭ ಹಣ ಗಳಿ­ಕೆಯ ಆಮಿಷವನ್ನು ಒಡ್ಡುತ್ತಿರುವುದರಿಂದ ವೇಶ್ಯಾವಾಟಿಕೆ­ಯತ್ತ ಆಕರ್ಷಿತರಾಗುವ ಯುವತಿಯರ ಸಂಖ್ಯೆ ಹೆಚ್ಚುತ್ತಿದೆ. ಈ ಪ್ರಲೋಭನೆ ಹೆಣ್ಣಿನ ವ್ಯಕ್ತಿತ್ವ ದಮನದ ಹತ್ಯಾರವೂ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ‘ವೃತ್ತಿ’ ಮಾನ್ಯತೆ ನೀಡಿದರೆ ಉಂಟಾಗಬಹುದಾದ ಸಾಮಾಜಿಕ ಪಲ್ಲಟ­ಗಳಿಗೆ ನಾವು ಸಿದ್ಧರಿದ್ದೇವೆಯೇ?

ಸೆ. 27 ರಂದು ಪತ್ರಿಕೆಗಳಲ್ಲಿ ಒಂದು ಸುದ್ದಿ­ಯಿದೆ. ದೇವದಾಸಿ ಕುಟುಂಬದಿಂದ ಬಂದ, ಆ ವೃತ್ತಿಗೆ ಸೇರುವಂತೆ ಕುಟುಂಬದ ಒತ್ತಾಯಕ್ಕೆ ಒಳಗಾಗಿದ್ದ ಯುವತಿಯೊಬ್ಬಳು ಅದನ್ನು ನಿರಾಕರಿಸಿ ಪ್ರೇಮವಿವಾಹ ಮಾಡಿ­ಕೊಂಡಿದ್ದಾಳೆ. ಎರಡೂ ಕುಟುಂಬಗಳು ಮದುವೆಯನ್ನು ಒಪ್ಪಿಲ್ಲ. ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆಯವರು ಬೆಂಬಲ ನೀಡಿದ್ದಾರೆ. ಬಯಲುಸೀಮೆಯ ಅಂಚಿನ ಊರು­ಗಳಲ್ಲಿ ಗುಜ್ಜರ ಮದುವೆಯ ಹೆಸರಿನಲ್ಲಿ ಹುಡುಗಿಯರು ಪುಡಿ­ಗಾಸಿಗೆ ಮಾರಾಟವಾಗುತ್ತಿದ್ದಾರೆ. ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ ಎಂದು ಗೊತ್ತಿದ್ದೂ ಅವರ ಕುಟುಂಬ ಜಾಣ ಕುರುಡನ್ನು ಪ್ರದರ್ಶಿಸುತ್ತದೆ.

ಬಡತನದೊಂದಿಗೆ ಪುರುಷ ಪ್ರಧಾನ ಮನೋಧರ್ಮವೂ ಕಲೆತರೆ ಹೆಣ್ಣು ಮಕ್ಕಳು ಬದುಕಲಿಕ್ಕೇ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಿರುವಾಗ ವೇಶ್ಯಾವಾಟಿಕೆ ವೃತ್ತಿ ಎಂದು ಪರಿಗಣಿತವಾದರೆ ಬಡ ಹೆಣ್ಣುಮಕ್ಕಳ ಬದುಕಿನ ಹಾದಿ ಇಕ್ಕಟ್ಟಿನದಾಗುತ್ತದೆ. ಮನೆಯೇ ಅವರನ್ನು ಆ ಕಾರ್ಯಕ್ಕೆ ಒತ್ತಾ­ಯಿಸುತ್ತದೆ. ಇಂತಹ ಅನೇಕ ಕಾರಣಗಳಿಗಾಗಿ ವೇಶ್ಯೆ­ಯಾ­ಗುವವರನ್ನು  ‘ಒಂದು ವರ್ಗ’ ಎಂದು ಸುಲಭವಾಗಿ ಪ್ರತ್ಯೇ­ಕಿಸಿ­ಬಿಡುತ್ತೇವೆ. ಕರುಣೆಯಿಂದ ಅವರ ಸೇವೆಯನ್ನು ಸ್ಮರಿಸುತ್ತೇವೆ.

ಸ್ವತಃ ವೇಶ್ಯಾವಾಟಿಕೆಯಲ್ಲಿರುವ ಮಹಿಳೆಯರು ವೃತ್ತಿ­ಮಾನ್ಯತೆ­ಗಾಗಿ ಒತ್ತಾಯಿಸಿದರೆ, ಅವರು ಅದರಿಂದ ಸಿಗಬಹು­ದಾದ ಸೌಲಭ್ಯಗಳ ಭ್ರಮೆಯಲ್ಲಿದ್ದಾರೆ ಮತ್ತು ಪಿತೃ ಸಂಹಿತೆ­ಯನ್ನು ಮರುಪ್ರಶ್ನೆಯಿಲ್ಲದೆ ಒಪ್ಪಿಕೊಂಡಿದ್ದಾರೆ ಎಂದರ್ಥ.

ಮದುವೆಯ ಮನಸ್ಸಿಲ್ಲದ ಯುವಕರ ತೃಪ್ತಿಗೆ ವೇಶ್ಯಾ­ವೃತ್ತಿಯ ಅಗತ್ಯವಿದೆ- ಎನ್ನುವವರು ಪರಂಪರಾಗತ ಕೌಟುಂಬಿಕ ಚೌಕಟ್ಟುಗಳ ಬಗ್ಗೆ ಯಾವ ನಿಲುವನ್ನು ತಳೆಯುತ್ತಾರೆ? ಸಮಾಜವು ಕುಟುಂಬ ವ್ಯವಸ್ಥೆ ಸಡಿಲಗೊಳ್ಳಲು ಬಿಡುವುದಿಲ್ಲ. ಯಾಕೆಂದರೆ ಅದು ಪುರುಷ ಹಿತಾಸಕ್ತಿಯ ರಚನೆಯಾಗಿದೆ. ಇದರಿಂದ ಗೃಹಿಣಿ, -ಸೂಳೆ ಎಂಬ ಸಿದ್ಧ ಪಡಿಯಚ್ಚು ನವೀ­ಕರ­ಣಗೊಳ್ಳುತ್ತದೆ. ಹೆಣ್ಣು ಕುಟುಂಬದ, ಸಮಾಜದ ಖಾಸಗಿ ಆಸ್ತಿ­ಯಾಗಿ ಸದಾ ರಕ್ಷಣೆಗೆ ಒಳಗಾಗಬೇಕಾದ ಪದಾರ್ಥವಾಗು­ತ್ತಾಳೆ. ನೈತಿಕ ಗಡಿಗೆರೆಗಳು ಹೆಚ್ಚುತ್ತವೆ. ಸ್ವಸ್ಥವಾಗಿ ಬದುಕುವ, ಕಲಿ­ಯುವ, ಆನಂದಿಸುವ ಎಲ್ಲ ಹಕ್ಕುಗಳೂ ದಮನಕ್ಕೊಳ­ಗಾಗುತ್ತವೆ. ಸಾಮಾನ್ಯ ವರ್ಗದ ಮಹಿಳೆಯರಲ್ಲಿ ಶಿಕ್ಷಣದಿಂದ ಸಣ್ಣಗೆ ಮೊಳೆಯುತ್ತಿರುವ ಸ್ವಾತಂತ್ರ್ಯದ ರೆಕ್ಕೆಗಳು ಶಾಶ್ವತವಾಗಿ ತುಂಡಾಗುತ್ತವೆ. ವಿಕಾಸಶೀಲ ತತ್ವ ಮೊಟಕಾಗುತ್ತದೆ.

ವೇಶ್ಯಾವೃತ್ತಿಯಿಂದ ಅತ್ಯಾಚಾರ ತಡೆಯಬಹುದೆಂಬ ಅಸಭ್ಯ ವಾದವೂ ಬೆಳೆಯುತ್ತಿದೆ. ಅತಿ ಹೆಚ್ಚು ಅತ್ಯಾಚಾರಗಳು ನಡೆಯುವುದು ಸಾಮಾಜಿಕ, ಧಾರ್ಮಿಕ, ಆರ್ಥಿಕ ಭಯೋ­ತ್ಪಾದನೆಗಾಗಿ. ಕೆಲವು ಅಂಶ ಮಾತ್ರ ಗಂಡಸಿನ ಮನೋದೈಹಿಕ ವಿಕೃತಿಯ ಫಲ. ಇದೊಂದು ವಿಕೃತಿ. ಲೈಂಗಿಕ ಅಗತ್ಯವಲ್ಲ. ದೆಹಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರ ಪ್ರಕರಣ­ದಲ್ಲಿ ಅತ್ಯಾಚಾರಿಗಳ ಮನ­ಸ್ಥಿತಿ ಏನು ಸೂಚಿಸುತ್ತಿದೆ? ಅದೊಂದು ಕ್ರೌರ್ಯವೇ ವಿನಾ ತೃಷೆಯಲ್ಲ. ಈ ವಿಕೃತಿಗೆ ಪರಿಹಾರ ಮಾರ್ಗಗಳನ್ನು ಹುಡುಕಬೇಕಿದೆಯೇ ಹೊರತು  ‘ವೇಶ್ಯೆಯರನ್ನು ಬಳಸಿಕೊಳ್ಳಿ’ ಎಂದು ಸೂಚಿಸುವುದಲ್ಲ. ಲೈಂಗಿಕ ಕಾರ್ಯಕರ್ತೆಯರು ಬರೆದ ಕಥನಗಳು ಇಂತಹ ಕ್ರೌರ್ಯ­ಗಳನ್ನು ದಾಖಲಿಸುತ್ತಿವೆ.

ಮನುಷ್ಯ ಕುಲ ಅನಾದಿಯಿಂದ ಸಂರಚಿಸಿಕೊಂಡ ಪವಿತ್ರ ಸಂಬಂಧಗಳಲ್ಲಿ ಪ್ರೇಮವೂ ಒಂದು. ವೇಶ್ಯಾವೃತ್ತಿ ಪ್ರೇಮ­ವಿಲ್ಲದ ಕಾಮವನ್ನು ವಿಜೃಂಭಿಸುತ್ತಾ ಸಂಬಂಧಪಟ್ಟವರನ್ನು ಸಂವೇದನಾಶೂನ್ಯರನ್ನಾಗಿಸುತ್ತದೆ. ಭಾವಶೂನ್ಯತೆ ಮನುಷ್ಯ ಸಂಬಂಧವನ್ನು ದೇಹ ಸಂಬಂಧವಾಗಿಸುವ ಅಪಾಯವಿದೆ. ಇದು ಹೆಣ್ಣಿಗೆ ಲೈಂಗಿಕ ಮಡಿವಂತಿಕೆ ಇರಬೇಕು ಎನ್ನುವ ಹಳೆಯ ಒಡಂಬಡಿಕೆಯ ಮಾತಲ್ಲ. ಸಾಮಾಜಿಕ ನೈತಿಕತೆಯ ಪ್ರಶ್ನೆಯೂ ಆಗಿದೆ.

ವೇಶ್ಯೆಯರ ಬದುಕಿಗೆ ಪರ್ಯಾಯವನ್ನು ಕಲ್ಪಿಸಬೇಕು. ವೃತ್ತಿ­­ಯಾಗಿ ಅದನ್ನು ಸಾಮಾನ್ಯೀಕರಿಸುವುದು ಸಮಸ್ಯೆಗೆ ಪರಿ­ಹಾರವಲ್ಲ. ನಮ್ಮ ಮಕ್ಕಳಿಗೆ ಮತ್ತು ತರಗತಿಯಲ್ಲಿ ಪಾಠ ಕೇಳುವ ಮಕ್ಕಳಿಗೆ ಈ ವೃತ್ತಿಯನ್ನು ಆಯ್ದುಕೊಳ್ಳಲು ಸೂಚಿಸ­ಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.