ADVERTISEMENT

ಶೌಚಾಲಯ ‘ನುಂಗುವ’ ಚಮತ್ಕಾರ

ಶರತ್ ಕಲ್ಕೋಡ್, ತೀರ್ಥಹಳ್ಳಿ
Published 19 ಫೆಬ್ರುವರಿ 2015, 19:30 IST
Last Updated 19 ಫೆಬ್ರುವರಿ 2015, 19:30 IST

ಡಾ.ಸುಶಿ ಕಾಡನಕುಪ್ಪೆ ಅವರ ‘ಬಯಲು ಶೌಚಾಲಯ: ವಾಸ್ತ­ವದ ಸವಾಲುಗಳು’ ಲೇಖನಕ್ಕೆ (ಸಂಗತ, ಫೆ.೧೯) ಮತ್ತಷ್ಟು ಆಯಾಮಗಳಿರುವುದರಿಂದ ಈ ಪ್ರತಿಕ್ರಿಯೆ. -ಮೂರು ತಿಂಗಳಿಂದ ಮಲೆನಾಡಿನ ಮೂಲೆಯೊಂದರಲ್ಲಿ ವಾಸವಿದ್ದ ಸಂದರ್ಭದಲ್ಲಿ ವಿಚಿತ್ರವೆನಿಸುವ ಕೆಲವೊಂದು  ಸಂಗತಿಗಳು ಕಣ್ಣಿಗೆ ಬಿದ್ದವು. ವಾಸ್ತವದ ಈ ಭೀಕರತೆ ಮಲೆನಾಡಿನ ಯಾವುದೇ ಹಳ್ಳಿಯ ಸಂಗತಿಯೂ ಆಗಬಲ್ಲದು. ಅಷ್ಟೇ ಏಕೆ, ಕರ್ನಾಟಕದ ಉದ್ದಗಲದ ಮಾತ್ರ­ವಲ್ಲ; ಸಮಗ್ರ ಭಾರತದ ಹಳ್ಳಿಗಳ ದಾರುಣ ಚಿತ್ರಣದ ಕೈಗನ್ನಡಿಯೂ ಆಗಬಹುದು.

ಮಲೆನಾಡಿನ ಕೊಂಪೆಯೊಂದರಲ್ಲಿ ಹಿಂದು­ಳಿದ ವರ್ಗದವರು ವಾಸಿಸುತ್ತಿರುವ ಹತ್ತು-–ಹದಿನೈದು ಗುಡಿಸಲುಗಳಿವೆ. ನಕ್ಸಲರ ಓಡಾಟ ಇರುವ ಪ್ರದೇಶವಾದ್ದರಿಂದ, ಆ ಗುಡಿಸಲುಗಳಿಗೆ ಸಂಪರ್ಕ ಕಲ್ಪಿಸುವ ದಾರಿಗೆ ಕೆಲವು ಕಡೆ ಸಿಮೆಂಟ್ ಹಾಕಲಾಗಿದೆ. ಪ್ರತ್ಯೇಕವಾದ ವಿದ್ಯುತ್‌ ತಂತಿ ಎಳೆಯಲಾಗಿದೆ. ಸಮೀಪದ ಹಳ್ಳಕ್ಕೆ ಪಂಪ್‌ಸೆಟ್ ಜೋಡಿಸಿ ನೀರಿನ ಸೌಲಭ್ಯ ಕಲ್ಪಿಸ­ಲಾಗಿದೆ (ಸರ್ಕಾರ ಹಾಕಿದ್ದ ಪಂಪ್‌ಸೆಟ್ಟನ್ನು ಬಲಾಢ್ಯರು ಎಗರಿಸಿ, ಹಾಳಾದ ಪಂಪ್‌ಸೆಟ್ಟನ್ನು ಜೋಡಿಸಿರು­ವುದರಿಂದ ಕುಡಿಯುವ ನೀರಿಗಾಗಿ ಪರದಾಡು­ತ್ತಿರು­ವುದು ಬೇರೆ ಮಾತು!). ಹಾಗೆಯೇ ರಾಜ್ಯ ಸರ್ಕಾರದ ನಿರ್ಮಲ ಶೌಚಾ­ಲಯದ ಯೋಜನೆ­ಯಡಿಯಲ್ಲಿ ಕಕ್ಕಸು ಕೋಣೆ­ಯನ್ನೂ ಕಟ್ಟಿಸಿ­ಕೊಡಲಾಗಿದೆ ಎಂದು ನೀವು ಅಂದುಕೊಳ್ಳ­ಬಹುದು. ಈ ಆಶಯದೊಂದಿಗೆ ಹಿಂದುಳಿದ ವರ್ಗದ ಪರಿಚಿತರೊಬ್ಬರನ್ನು ಪ್ರಶ್ನಿಸಿದೆ. ಅವರ ಉತ್ತರ ಕೇಳಿ ದಂಗಾದೆ.

‘ನಮಗ್ಯಾಕಯ್ಯ ಕಕ್ಕಸು-ಪಕ್ಕಸು. ಅದೆಲ್ಲಾ ನಿಮ್ಮಂತಹವರಿಗೆ ಹೇಳಿ ಮಾಡಿಸಿದ್ದು’ ಎಂದರು ನಿರ್ಲಿಪ್ತ ಭಾವದಲ್ಲಿ.
‘ಅಲ್ಲೋ ಮಾರಾಯ ಸರ್ಕಾರದವರು ನಿಮಗೆ ಶೌಚಾಲಯ ಕಟ್ಟಿಸಿಕೊಡಬೇಕೂಂತ ಕಾನೂನು ಮಾಡಿದ್ದಾರೆ. ಅಲ್ಲದೆ ಹಣ ಬೇರೆ ಬಿಡುಗಡೆ ಆಗಿದೆ. ನೀನೇನೂ ಕೈಯಿಂದ ಕಾಸು ಖರ್ಚು ಮಾಡಬೇಕಾಗಿಲ್ಲ. ಕಕ್ಕಸು ಕೋಣೆ ಮಾತ್ರವಲ್ಲ; ಬಚ್ಚಲು ಮನೆ ಕಟ್ಟಸಿಕೊಡ­ಬೇಕೂಂತ ಮೊನ್ನೆಮೊನ್ನೆ ಮಂತ್ರಿಮಂಡಲ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನೀ ಯಾಕೆ ಕಕ್ಕಸು ಕಟ್ಟಿಸಿಕೊಳ್ಳಲಿಲ್ಲ?’
‘ಕಕ್ಕಸು ಕೋಣೆಯಲ್ಲಿ  ಮಾಡೋದಕ್ಕಿಂತ ಹಳ್ಳದ ಬದಿ ಕುಳಿತು ಮಾಡೋದೇ ನೆಮ್ಮದಿ...- ಆರಾಮ!’ ಎಂದರು.

‘ಮತ್ತೆ ನಿಮ್ಮವರು ಯಾರೂ ಕಟ್ಟಿಸಿ­ಕೊಂಡಿಲ್ವಾ?’ ಕುತೂಹಲದಿಂದ ಕೇಳಿದೆ.
‘ಹತ್ತು-–ಹದಿನೈದು ಮನೆಗಳಲ್ಲಿ ಮೂರು-–ನಾಲ್ಕು ಜನ ಕಟ್ಟಿಸಿಕೊಂಡಾರೆ ಅಷ್ಟೇ!’ ನಿರ್ಲಿಪ್ತ­ವಾಗಿ ಉತ್ತರಿಸಿದರು.
ಹಾಗಾದ್ರೆ ಇಲ್ಲಿ ಏನೋ ಗೋಲ್‌ಮಾಲ್ ಆಗಿದೆ ಎಂಬ ಅಂಶ ಸ್ಪಷ್ಟವಾಯ್ತು.

‘ಅಲ್ಲೋ ಸರ್ಕಾರದವರು ನಿಮಗೆ ಶೌಚಾಲಯ ಕಟ್ಟಿಸಿಕೊಡಬೇಕೆಂದು ಕೋಟಿ­ಗಟ್ಟಲೆ ಹಣ ಬಿಡುಗಡೆ ಮಾಡಿದ್ದಾರಲ್ಲೋ’ ಎಂದು ವಿವರಿಸಲು ಯತ್ನಿಸಿದೆ.  ‘ಇಲ್ಲಾ ನಂಗೂ ಎರಡು ಸಾವಿರ ಕೊಟ್ಟಾರೆ!’ ಎಂದು ನನ್ನನ್ನು ಮತ್ತಷ್ಟು ದಿಗಿಲುಗೊಳಿಸಿದರು!

ಆ ಬಳಿಕ ವಿಚಾರಿಸಿದಾಗ ತಿಳಿದು ಬಂದ ವಿಷಯ ಇಷ್ಟು. ಶೌಚಾಲಯ ಕಟ್ಟಿಸಿಕೊಡ­ಲೆಂದು ಸರ್ಕಾರ ಅಲ್ಲಿ ಪ್ರತಿ ಮನೆಗೆ 12–15 ಸಾವಿರ ರೂಪಾಯಿ ಬಿಡುಗಡೆ ಮಾಡಿದೆ. ಅದರ ಜವಾಬ್ದಾರಿ ಆಯಾ ಪಂಚಾಯ್ತಿಯವರದ್ದು. ಪಂಚಾಯ್ತಿಯವರು, ಅಧಿಕಾರಿಗಳು ಸೇರಿ ಕಕ್ಕಸಿನ ಹಣ ನುಂಗಿ ನೀರು ಕುಡಿದಿದ್ದಾರೆ. ಭವ್ಯವಾದ ಯೋಜನೆಯೊಂದನ್ನು ರೂಪಿಸಿ, ಕೊಳ್ಳೆ ಹೊಡೆ­ಯುವುದ­ರಲ್ಲಿ ಯಶಸ್ವಿಯಾಗಿದ್ದಾರೆ!

ಶೌಚಾಲಯ ಪಿಟ್‌ ಅನ್ನು ಪ್ರತಿ ಗುಡಿಸಿಲಿನ ಪಕ್ಕದಲ್ಲಿ ಇರಿಸಿ, ಅದು ಸಿದ್ಧವಾಗಿರುವಂತೆ ಯಜ­ಮಾನ­ನನ್ನು ಪಕ್ಕದಲ್ಲಿ ನಿಲ್ಲಿಸಿ ಫೋಟೊ ತೆಗೆಯು­ತ್ತಾರೆ. ಇದೇ ಶೌಚಾಲಯ ನಿರ್ಮಾಣವಾದುದ್ದಕ್ಕೆ ಪ್ರತ್ಯಕ್ಷ ಪುರಾವೆ! ಫೋಟೊ ತೆಗೆದ ನಂತರ ಅದೇ ಕಕ್ಕಸು ಪಿಟ್‌ ಅನ್ನು ಪಕ್ಕದ ಗುಡಿಸಲಲ್ಲಿ ಜೋಡಿಸಿ ಫೋಟೊ ತೆಗೆದು ಸಾಕ್ಷ್ಯಾಧಾರ ಸಿದ್ಧಡಿಸುವುದು. ಎಷ್ಟು ಸುಲಭ ಹಾಗೂ ಎಂಥ ಸಾಹಸದ ಚಮತ್ಕಾರ ನೋಡಿ! ಶೌಚಾಲಯ ಬೇಡ ಅಂದವರ ಕೈಗೆ ಎರಡು ಸಾವಿರ ಭಕ್ಷೀಸು ಬೇರೇ! ಹಾಗಾಗಿ ಹತ್ತು,- ಹದಿನೈದು ಗುಡಿಸಲುಗಳ ಪೈಕಿ ನಿಜವಾಗಿಯೂ ಶೌಚಾಲಯ  ಅವಶ್ಯವೆಂದು ಮನಗಂಡವರು ಮೂರು–ನಾಲ್ಕು ಗುಡಿಸಲು­ಗಳವರು ಮಾತ್ರ! ಉಳಿದವರೆಲ್ಲಾ ಹಣ ತೆಗೆದು ಕೊಂಡು ಮಜಾ ಉಡಾಯಿಸಿದವರೇ!

ಶೌಚಾಲಯವನ್ನೇ ನುಂಗಿ ನೀರು ಕುಡಿಯುವ, ರಸ್ತೆ, ಕೆರೆ ಯಾವುದೇ ಹಳ್ಳಿಯ ಅಭಿವೃದ್ಧಿಗೆ ಸಂಬಂಧಿಸಿ ಸರ್ಕಾರದ ಯೋಜನೆಯ ಹಣ­ವನ್ನೆಲ್ಲಾ ಮುಕ್ಕುವ ಪುಢಾರಿಗಳು, ರಾಜಕಾರಣಿ­ಗಳು ಹಾಗೂ ಅಧಿಕಾರಿಗಳು ಇರುವವರೆಗೆ ಯಾವುದೇ ಸರ್ಕಾರ ಅಥವಾ ಎಷ್ಟೇ ಪಂಚ­ವಾರ್ಷಿಕ ಯೋಜನೆ­ಗಳು ಬಂದರೂ, ಭ್ರಷ್ಟಾ­ಚಾರ ತಾಂಡವದ ಈ ಕೂಪದಿಂದ ಹಳ್ಳಿಗರ, ಭಾರತದ ಉದ್ಧಾರ ಆಗುವುದು ಸಾಧ್ಯವೇ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.