ADVERTISEMENT

ಸಿಸೇರಿಯನ್ ಹೆರಿಗೆ: ಪಿಡುಗಾಯಿತು ಹೇಗೆ?

ಡಾ.ವೀಣಾ ಭಟ್ಟ‌ ಭದ್ರಾವತಿ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

ಸಿಸೇರಿಯನ್ ಹೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಅಂಕಿ–ಅಂಶ­ಗಳನ್ನು  ಬಿಡುಗಡೆ ಮಾಡಿದೆ. ಅದರ ಪ್ರಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಪ್ರಮಾಣ ಹೆಚ್ಚಾಗಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿ­ಯನ್‌ ಹೆರಿಗೆ ಪ್ರಮಾಣ ಅಧಿಕವಾಗಿದೆ.
2013ರ ಅಂಕಿ–ಸಂಖ್ಯೆಯಂತೆ, ಖಾಸಗಿ ಆಸ್ಪತ್ರೆ­ಗಳಿಗೆ ದಾಖಲಾದವರಲ್ಲಿ ಶೇ 40­ಕ್ಕಿಂತಲೂ ಹೆಚ್ಚು ಗರ್ಭಿಣಿಯರು ಸಿಸೇರಿಯನ್‌ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಾದ ಶೇ 82ಕ್ಕಿಂತ ಹೆಚ್ಚಿನ ಗರ್ಭಿ­ಣಿಯರಿಗೆ ಸಹಜ ಹೆರಿಗೆ ಆಗಿದೆ. ಅದ­ರಲ್ಲೂ ಗ್ರಾಮೀಣ ಭಾಗದ ಗರ್ಭಿಣಿಯರಲ್ಲಿ ಸಹಜ ಹೆರಿಗೆ ಪ್ರಮಾಣ ಹೆಚ್ಚು ಎಂಬುದು ತಿಳಿದು­ಬಂದಿದೆ.

ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿ­ಯನ್‌ ಹೆರಿಗೆ ಒಂದು ದಂಧೆಯಾಗಿದ್ದು, ಹಣ ಮಾಡುವ ಸಲುವಾಗಿ ವೈದ್ಯರು ಅನಗತ್ಯವಾಗಿ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿದೆ. ಸರ್ಕಾರದ ಈಗಿನ ಅಂಕಿ–ಸಂಖ್ಯೆ ಸಹ ಇದನ್ನೇ ಪುಷ್ಟೀಕರಿ­ಸು­ತ್ತದೆ.

ಆದರೆ ಸಹಜ ಹೆರಿಗೆಗಿಂತ ಸಿಸೇರಿಯನ್‌ ಹೆರಿಗೆಗಳೇ ಹೆಚ್ಚು ನಡೆಯುತ್ತಿರುವುದಕ್ಕೆ ನಾನಾ ಕಾರಣ­ಗಳಿವೆ. ಅದಕ್ಕೆ ವೈದ್ಯರನ್ನಷ್ಟೇ ದೂಷಿಸು­ವುದು ಸರಿಯಲ್ಲ. ಸ್ತ್ರೀರೋಗ ತಜ್ಞರ ಜೊತೆಗೆ ಭಾವಿ ತಾಯಂದಿರು ಮತ್ತು ಅವರ ಕುಟುಂಬ­ದ­ವರೂ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ.

ಸಾಕಷ್ಟು ಕಷ್ಟಕರ ಹೆರಿಗೆಗಳನ್ನು ಸುಲಲಿತ­ಗೊಳಿಸಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣವನ್ನು ತಗ್ಗಿಸಿದ ಹೆಗ್ಗಳಿಕೆ ಸಿಸೇರಿಯನ್ ಹೆರಿಗೆಗಿದೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಇದೊಂದು ಪಿಡುಗು ಎನಿಸಿಕೊಂಡಿರುವುದು ವಿಪರ್ಯಾಸವೇ ಸರಿ. ಇದಕ್ಕೆ ಕೆಲವು ಖಾಸಗಿ ವೈದ್ಯರ ಹಣದ ದಾಹವನ್ನೇ ಸಂಪೂರ್ಣ ಹೊಣೆ ಮಾಡುವುದೇ,  ಭಾವಿ ತಾಯಂದಿರ ಬದಲಾಗಿ­ರುವ ನಾಜೂಕು ಜೀವನಶೈಲಿ ಕಾರಣವೇ, ಅರಿವಿನ ಕೊರತೆಯೇ, ಕಡಿಮೆಯಾಗಿರುವ ಕಷ್ಟ ಸಹಿಷ್ಣುತೆಯೇ, ಮನುಷ್ಯ ಜಾತಿಯಲ್ಲಿಯೇ ಕಡಿಮೆಯಾಗುತ್ತಿರುವ ಸಹನೆ, ತಾಳ್ಮೆ ಇತ್ಯಾದಿ ಸದ್ಗುಣಗಳೇ (ವೈದ್ಯರೂ ಮನುಷ್ಯರೇ) ಎಂಬ ಪ್ರಶ್ನೆಗಳು ಸಹಜವಾಗಿಯೇ ಎದುರಾಗುತ್ತವೆ.

ಕಳೆದ ಇಪ್ಪತ್ತು ವರ್ಷಗಳ ನನ್ನ ಅನುಭವ­ದಲ್ಲಿ, ಸಿಸೇರಿಯನ್ ಹೆರಿಗೆ ಮಾಡಲು ಹೆಚ್ಚುತ್ತಿ­ರುವ ವೈದ್ಯರ ತುಡಿತಕ್ಕಿಂತ ಅಂತಹ ಹೆರಿಗೆಯನ್ನೇ ಹೆಚ್ಚಾಗಿ ಬಯಸುವ ಭಾವಿ ತಾಯಂದಿರು ಮತ್ತು ಮನೆಯವರೇ ಹೆಚ್ಚಾಗಿದ್ದಾರೆ ಎನಿಸು­ತ್ತದೆ. ‘ನಮಗೆ ನೋವೇ ಬೇಡ, ಒಳಪರೀಕ್ಷೆಗಳೆಲ್ಲ ಹಿಂಸೆ. ನೇರವಾಗಿ ಸಿಸೇರಿಯನ್ನೇ ಮಾಡಿ’ ಎಂದು ಸಾಕಷ್ಟು ಮಂದಿ ದುಂಬಾಲು ಬೀಳುತ್ತಾರೆ. ಅದರಲ್ಲೂ ಶೇ 15–-20ರಷ್ಟು ಮಂದಿಯಂತೂ ಹೆರಿಗೆಗೆ ಮುಹೂರ್ತವನ್ನು ನಿಗದಿಪಡಿಸಿಕೊಂಡೇ ವೈದ್ಯರ ಮೇಲೆ ಒತ್ತಡ ಹೇರತೊಡಗುತ್ತಾರೆ. ‘ನಮಗೆ ಜೀವನದಲ್ಲಿ ಒಂದೇ ಮಗು ಸಾಕು, ಅದಕ್ಕೆ ಯಾವ ತೊಂದರೆಯೂ ಆಗಬಾರದು’ ಎಂಬ ಅತೀವ ಕಾಳಜಿ, ಹೆಚ್ಚುತ್ತಿರುವ ಬಂಜೆತನ, ಕೃತಕ ಚಿಕಿತ್ಸೆಯಿಂದ ಗರ್ಭಿಣಿಯರಾಗುವವರು, ‘ಅಯ್ಯೋ ನನ್ನ ಮಗಳು ನೋವು ಸಹಿಸುವುದು ನೋಡೋಕ್ಕಾಗಲ್ಲ, ನೀವೆಂತಹ ಡಾಕ್ಟರ್ರೀ, ತಕ್ಷಣ ಸಿಸೇರಿಯನ್ ಮಾಡುತ್ತೀರೋ ಇಲ್ಲವೋ?’ ಎಂದು ಧಮಕಿ ಹಾಕುವ ತಾಯಂದಿರು, ಇದೆಲ್ಲ­ವನ್ನೂ ಮೀರಿ ಸಹಜ ಹೆರಿಗೆಗಾಗಿ ಹೆಚ್ಚು ಹೊತ್ತು ಕಾದು ತಾಯಿಗೋ ಅಥವಾ ಮಗುವಿಗೋ ಆಗ­ಬ­ಹುದಾದ ಕೆಲವು ಅನಿವಾರ್ಯ ವೈದ್ಯಕೀಯ ಅವ­ಘಡಗಳನ್ನು ವೈಭವೀಕರಿಸುವ ಬಂಧು­ಬಾಂಧ­ವರು, ಮಾಧ್ಯಮಗಳು, ಇಂತಹ ಸಂದ­ರ್ಭ­ಗಳಲ್ಲಿ ವೈದ್ಯರು ಸಾರ್ವಜನಿಕರಿಂದ ಎದುರಿ­ಸ­ಬೇಕಾದ ಆಕ್ರೋಶ ಎಲ್ಲವೂ ವೈದ್ಯರು ಹಲ­ವಾರು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಸಿಸೇ­ರಿ­ಯನ್‌ ಚಿಕಿತ್ಸೆಗೆ ಮುಂದಾಗುವುದರ ಹಿಂದೆ ಇರುತ್ತವೆ.

ಇಂದು ಹೆಚ್ಚಿನ ಮಹಿಳೆಯರಲ್ಲಿ ದೈಹಿಕ ಚಟು­ವಟಿಕೆ ಕಡಿಮೆಯಾಗಿದೆ. ಕೂಲಿ ಮಾಡುವವರು ಕೂಡ ಮೈ ಬಗ್ಗಿಸಿ  ಕೆಲಸ ಮಾಡುತ್ತಿಲ್ಲ. ನೆಲ ಒರೆ­ಸು­ವುದಕ್ಕೂ ಸ್ವೀಪಿಂಗ್ ಸ್ಟಿಕ್ ಬಳಕೆ, ಕಂಪ್ಯೂ­ಟ­ರ್‌ನಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಇದ­ರಿಂದ ಕೇವಲ ಬೆರಳುಗಳಿಗಷ್ಟೇ ಕೆಲಸ ಆಗುತ್ತದೆ. ಉಳಿದಂತೆ ಅವರಿಗೆ ಸಿಗುವುದು ಮಾನಸಿಕ ಒತ್ತಡ, ಉದ್ವೇಗಗಳಷ್ಟೇ.

ಎಲ್ಲ  ನೋವಿಗಿಂತಲೂ ಭಿನ್ನವಾಗಿರುವ ಹೆರಿಗೆ ನೋವಿನ ಕಾರಣಗಳು ಇನ್ನೂ ಸಂಶೋಧನೆಯ ವಿಷಯವಾಗಿಯೇ ಉಳಿದಿವೆ. ಗರ್ಭಕೋಶದ ನಿಯಮಿತ ಸಂಕುಚನದಿಂದ ಉಂಟಾಗುವ ಹೆರಿಗೆ ನೋವು ಸರಿಯಾದ ಮಾಹಿತಿ, ಕಷ್ಟ   ಸಹಿಷ್ಣುತೆ ಗುಣ ಇದ್ದರೆ ಧೈರ್ಯವಾಗಿ ಎದುರಿಸ­ಬಹು­ದಾ­ದಂತಹ ಪ್ರಕ್ರಿಯೆ. ದೈಹಿಕ ಮತ್ತು ಮಾನಸಿಕ ದೃಢತೆ, ಸಮಚಿತ್ತ ಇಲ್ಲಿ ಅತಿ ಮುಖ್ಯ. ಇಂದು ಗರ್ಭಿಣಿಯರಲ್ಲಿ ನಗರ ಪ್ರದೇಶದಲ್ಲೂ ಶೇ 60­ಕ್ಕಿಂತ ಹೆಚ್ಚು ಜನ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಏರು ರಕ್ತದೊತ್ತಡ, ಮಧು
­ಮೇ­ಹಿ­ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ­ವರಿಗೆ ಸಿಸೇರಿಯನ್ ಹೆರಿಗೆ ಸಂಭವವೇ ಹೆಚ್ಚು.

ಹೆಚ್ಚಿನ ಸಂದರ್ಭಗಳಲ್ಲಿ ಮಧುಮೇಹ, ಏರು ರಕ್ತದೊತ್ತಡ ಇರುವಂತಹ ಗರ್ಭಿಣಿಯರು, ಬಂಜೆತನಕ್ಕೆ ಚಿಕಿತ್ಸೆ ಪಡೆದವರು ಹೆಚ್ಚಾಗಿ ಖಾಸಗಿ ಆಸ್ಪತ್ರೆಗೇ ಬರುತ್ತಾರೆ. ಇವರಲ್ಲಿ  ದೈಹಿಕ ಶ್ರಮವೂ ಕಡಿಮೆ. ಇದರಿಂದ 9 ತಿಂಗಳು ತುಂಬಿ­ದ್ದರೂ ಮಗುವಿನ ತಲೆಯು ಕಟೀರದ (ಪೆಲ್ವಿಸ್) ಒಳಗೆ ಹೋಗದೆ ಮೇಲೇ ಇರುತ್ತದೆ. ಔಷಧಿ­ಗಳನ್ನು ಕೊಟ್ಟರೂ  ಗರ್ಭಕೋಶದ ಬಾಯಿ ಅಗ­ಲ­ವಾಗದೇ ಹೋಗಬಹುದು. ನೋವು ಬಂದ  ಪ್ರಾರಂಭದಲ್ಲೇ ಕಿರುಚಾಡಿ ಶಸ್ತ್ರಚಿಕಿತ್ಸೆ ಮಾಡು­ವಂತೆ ವೈದ್ಯರ ಮೇಲೆ ಒತ್ತಡ ಹೇರುವವರೂ ಇಲ್ಲದಿಲ್ಲ.

ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಸಿಸೇ­ರಿಯನ್‌ ವಿಧಾನ ಸುರಕ್ಷತೆಯನ್ನು ಹೆಚ್ಚಿಸಿದೆ. ಒಮ್ಮೆ ಸಿಸೇರಿಯನ್‌ ಮಾಡಿಸಿಕೊಂಡ ಮೇಲೆ ಎರಡನೇ ಮಗುವಿಗೂ ಸಿಸೇರಿಯನ್ನೇ ಮಾಡಿಬಿಡಿ ಎಂದು ಹೇಳುತ್ತಾ ಸಹಜ ಹೆರಿಗೆಗೆ ಒಲವನ್ನೇ ತೋರಿ­ಸದ ಹೆಣ್ಣುಮಕ್ಕಳಿದ್ದಾರೆ. ಆರೋಗ್ಯ ವಿಮಾ ಕಾರ್ಡ್‌ಗಳ  ಫಲಾನುಭವಿಗಳಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಮಾಡಿಸಿ­ಕೊ­ಳ್ಳು­ವವರ ಸಂಖ್ಯೆ ಹೆಚ್ಚು. ಈ ಎಲ್ಲ ಕಾರಣ­ಗಳು ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಹೆಚ್ಚಾಗಿರುವುದಕ್ಕೆ ಕಾರಣ-­ವಾಗು­ತ್ತವೆ.

ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಸೇರಿಯನ್ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಕೆಳ ಮಧ್ಯಮ ವರ್ಗದ ಶ್ರಮಜೀವಿಗಳು, ಕಷ್ಟ ಸಹಿಷ್ಣುತೆ ಉಳ್ಳವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಸಹಜ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಇದರ ಜೊತೆಗೆ ತಾಲ್ಲೂಕು ಪ್ರದೇಶಗಳಲ್ಲಿ ಸ್ತ್ರೀರೋಗ ತಜ್ಞರಿಗೆ ಹೆಚ್ಚುತ್ತಿರುವ ಒತ್ತಡ, ಸಕಾಲಕ್ಕೆ ಸಿಗದ ಅರಿವಳಿಕೆ ತಜ್ಞರು, ಒಮ್ಮೆ ಸಿಸೇರಿಯನ್ ಹೆರಿಗೆಯಾದರೆ ಎರಡನೆಯದಕ್ಕೆ ಸಹಜ ಹೆರಿಗೆಗೆ ಕಾಯುವ ತಾಳ್ಮೆಯಿಲ್ಲದ ವೈದ್ಯರು, ಕುಟುಂಬ ವರ್ಗದ­ವರು, ಬ್ರೀಚ್ ಹೆರಿಗೆ ಹಾಗೂ ಕಷ್ಟಕರ ಹೆರಿಗೆ­ಯನ್ನು (ಫೋರ್ಸೆಪ್ಸ್, ವ್ಯಾಕ್ಯೂಮ್ ಇತ್ಯಾದಿ) ಮಾಡಿಸಲು ಯುವ ವೈದ್ಯರಲ್ಲಿ ಇರುವ ತರಬೇತಿ, ಅನುಭವಗಳ ಕೊರತೆ ಇತ್ಯಾದಿಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ.

ಸ್ವತಃ ಭಾವಿ ಪೋಷಕರು ಉತ್ಸಾಹದಿಂದ ಜನನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಜ್ಞಾನ ಹೆಚ್ಚಿ­ಸಿ­ಕೊಳ್ಳಬೇಕು. ಸಹಜ ಹೆರಿಗೆಯ ಲಾಭಗಳ ಬಗ್ಗೆ ತಿಳಿವಳಿಕೆ ನೀಡಿ ವೈದ್ಯರು ಅವರನ್ನು ಪ್ರೋತ್ಸಾ­ಹಿ­ಸಬೇಕು. ತಾತ್ಕಾಲಿಕ ನೋವಿನಿಂದ ಉಪಶಮನ ಸಿಕ್ಕಾಗ ಆಗುವ ಲಾಭವು ಶಸ್ತ್ರಚಿಕಿತ್ಸೆಯಿಂದ ಆಗುವ ಅರಿವಳಿಕೆ ತೊಂದರೆಗಳು, ದೀರ್ಘ­ಕಾ­ಲೀನ ನೋವುಗಳಿಗಿಂತ ಹೆಚ್ಚು ಎಂಬ ಬಗ್ಗೆ ವ್ಯಾಪಕ  ಚರ್ಚೆ, ಮಾಹಿತಿ ದೊರೆಯಬೇಕು.  ಎಲ್ಲ­ಕ್ಕಿಂತ ರೋಗಿ ಮತ್ತು ವೈದ್ಯರ ಬಾಂಧವ್ಯ 9 ತಿಂಗಳ ಅವಧಿಯಲ್ಲಿ ಹೆಚ್ಚಾಗಬೇಕು. ಏಕೆಂದರೆ ನೋವಿನ ಸಂದರ್ಭದಲ್ಲಿ ವೈದ್ಯರ ಮಾತೇ ವೇದವಾಕ್ಯ­ವಾಗಿರುತ್ತದೆ.

ತಾಯಂದಿರು, ಕುಟುಂಬದವರು ತಾಳ್ಮೆ, ಸಹನೆ­ಯನ್ನು ಬೆಳೆಸಿಕೊಂಡು ಮಗುವಿನ ಆಗಮ­ನಕ್ಕೆ ಪ್ರಾರಂಭದಿಂದಲೇ ತಕ್ಕ ಏರ್ಪಾಡು ಮಾಡಿ­ಕೊಳ್ಳಬೇಕು. ನಂತರವೂ ತುರ್ತು ಅಗತ್ಯ ಇದ್ದಲ್ಲಿ ಮಾತ್ರ ಸಿಸೇರಿಯನ್‌ಗೆ ಶರಣಾಗುವುದು ವೈದ್ಯ­ರಿಗೂ, ಭಾವಿ ತಾಯಂದಿರಿಗೂ ಅನಿವಾರ್ಯ. ಅಂತಹ ಸಂದರ್ಭಗಳಲ್ಲಿ ಸಿಸೇರಿಯನ್ ಹೆರಿಗೆ ಪಿಡುಗಾಗದೇ ವರವಾಗಿ ಪರಿಣಮಿಸು­ತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.