ADVERTISEMENT

ಸೌಂದರ್ಯಪ್ರಜ್ಞೆಯ ವಿಷವರ್ತುಲ

ಎಚ್.ಕೆ.ಶರತ್
Published 29 ಮೇ 2016, 19:30 IST
Last Updated 29 ಮೇ 2016, 19:30 IST

ಸ್ನೇಹಿತರಿಬ್ಬರು ಮೊನ್ನೆ ಒಂದೇ ದಿನ ‘ಅಪ್ಪ’ನ ಪಟ್ಟ ಅಲಂಕರಿಸಿದರು. ಆಗಷ್ಟೆ ಜನಿಸಿದ ತಮ್ಮ ಮಗುವಿನ ಫೋಟೊವನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳ ಮೂಲಕ ಹಂಚಿಕೊಳ್ಳುವ ಮುಖೇನ ತಾವು ತಂದೆಯಾದ ಸಂತಸವನ್ನು ಜಗತ್ತಿನೊಂದಿಗೆ ಹಂಚಿಕೊಂಡರು.

ಅವರಿಗೆ ಶುಭ ಹಾರೈಸಿದ ಸ್ನೇಹಿತರೆಲ್ಲ ‘ಸೋ ಕ್ಯೂಟ್’ ಅಂತನ್ನುವ ಮೂಲಕ ಆಗಷ್ಟೆ ಜನಿಸಿದ ಮಗುವಿನ ಬಾಹ್ಯ ಸೌಂದರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಮಂದಿ, ಕೆಲ ದಿನಗಳ ಹಿಂದಷ್ಟೆ ಜನಿಸಿದ, ಮತ್ತೊಬ್ಬ ಸ್ನೇಹಿತನ ಮಗುವಿಗೆ ‘ಸೋ’ ಇರಲಿ ಬರೀ ‘ಕ್ಯೂಟ್’ ಅಂತಲೂ ಹೇಳಿರಲಿಲ್ಲ. ಅದು ನೆನಪಾಗಿ ಒಳಗೊಳಗೆ ಕಸಿವಿಸಿಯಾಯಿತು.

ಈಗಿನ ಮಕ್ಕಳು ತಾವು ಕಣ್ಬಿಡುವಾಗಲೇ ‘ನೋಡುವ ಜಗತ್ತು’  ಆಯೋಜಿಸುವ ‘ಮುದ್ದು ಕಂದ’ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲೇಬೇಕೇನೊ ಎನ್ನುವ ಅನುಮಾನವೂ ಕಾಡಲಾರಂಭಿಸಿತು. ಹುಟ್ಟಿನೊಂದಿಗೆ ನಡೆಯುವ ಈ ಸೌಂದರ್ಯ ಸ್ಪರ್ಧೆಯಲ್ಲಿ ತೀರ್ಪುಗಾರರ ಕೃಪಾಕಟಾಕ್ಷ ಯಾವಾಗಲೂ ಬಿಳಿ ಅಥವಾ ಕೆಂಪಗಿರುವ ಮಕ್ಕಳೆಡೆಗೆ ಇರುವುದು ಕಾಕತಾಳೀಯವೇನೂ ಅಲ್ಲವೆನ್ನುವುದು ಕಣ್ಣಿಗೆ ರಾಚಲಾರಂಭಿಸಿತು.
* * *
ಬೆಳ್ಳಗಿರುವ ಒಂದೇ ಕಾರಣಕ್ಕೆ ಇದುವರೆಗೂ ಅವರಿವರಿಂದ ಪ್ರಶಂಸೆಗಳನ್ನಷ್ಟೆ ಕೇಳುತ್ತ ಬಂದಿದ್ದ ನಾನು, ಈಗೀಗ ವ್ಯತಿರಿಕ್ತ ಅಭಿಪ್ರಾಯಗಳಿಗೂ ಕಿವಿಯಾಗಬೇಕಿದೆ. ಚರ್ಮ ಇಂದಿಗೂ ಬೆಳ್ಳಗಿರುವುದರಿಂದ ಆ ಕುರಿತು ಯಾರದೂ ಆಕ್ಷೇಪವಿಲ್ಲ. ಆದರೆ, ತಲೆಯಲ್ಲಿರುವ ಬಿಳಿ ಕೂದಲ ಸಂಖ್ಯೆ ಹೆಚ್ಚಿದಂತೆಲ್ಲ ಸೌಂದರ್ಯ ಪ್ರಜ್ಞೆಯ ಆರಾಧಕರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಬೇಕಾದ ಸಂಭವನೀಯ ಸಾಧ್ಯತೆಯೂ ಗಣನೀಯವಾಗಿ ಹೆಚ್ಚುತ್ತಿದೆ. ‘ಮದ್ವೆಗೆ ಮುಂಚೆನೇ ಇಷ್ಟೊಂದು ಬಿಳಿ ಕೂದ್ಲು ಆಗಿದ್ದಾವಲ್ಲಪ್ಪ... ಹೇರ್ ಡೈ ಮಾಡುಸ್ಕೊಳ್ಳೋದಲ್ವಾ’ ಅನ್ನುವ ಮಾತು ನನ್ನ ಪಾಲಿಗೆ ಸುಪ್ರಭಾತವೇ ಆಗಿಹೋಗಿದೆ.

ಇನ್ನು ಕಳೆದ ಐದಾರು ವರ್ಷಗಳ ಹಿಂದಿನವರೆಗೂ ತೆಳ್ಳಗಿದ್ದ ನಾನು, ಇದೀಗ ಬದಲಾದ ಜೀವನಶೈಲಿ ಮತ್ತು ಇತರೆ ಕಾರಣಗಳಿಂದಾಗಿ ಗುಡಾಣದಂತಹ ಹೊಟ್ಟೆಗೆ ವಾರಸುದಾರನಾಗಿ ರೂಪುಗೊಂಡಿರುವುದು ಕೂಡ ಹಲವರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಮೊನ್ನೆ ಕ್ರಿಕೆಟ್ ಆಡುವಾಗ ಸ್ನೇಹಿತರೊಬ್ಬರು ಆಡಿದ ಮಾತು ಆ ಕ್ಷಣಕ್ಕೆ ತಮಾಷೆಯಂತೆ ತೋರಿ ಸಿಕ್ಕಾಪಟ್ಟೆ ನಕ್ಕರೂ ಆನಂತರ ಅದೇ ಮಾತು ಜೀರ್ಣಿಸಿಕೊಳ್ಳಲಾಗದ ಹೀಗಳಿಕೆಯಾಗಿ ಚುಚ್ಚಲಾರಂಭಿಸಿತು.

‘ಮದ್ವೆಗೆ ಮುಂಚೆನೇ ನಿನ್ ಥರ ಹೊಟ್ಟೆ ಏನಾದ್ರೂ ನಂಗೆ ಬಂದಿದ್ರೆ ಮೊದ್ಲು ಚಾಕು ತಗೊಂಡು ಹೊಟ್ಟೆ ಕುಯ್ಕೊತಿದ್ದೆ’ ಅಂತಂದು ನಕ್ಕಿದ್ದರು. ಅವರೊಂದಿಗೆ ನಾನೂ ಅವರಷ್ಟೆ ತೀವ್ರತೆಯಲ್ಲಿ ನಕ್ಕಿದ್ದೆ. ‘ಹೊಟ್ಟೆ ಕರುಗ್ಸಪ್ಪ... ಹೊಟ್ಟೆ ಜಾಸ್ತಿ ಆಯ್ತು... ತಿನ್ನೋದು ಕುಡ್ಯೋದು ಕಮ್ಮಿ ಮಾಡು... ವಾಕ್ ಮಾಡುದ್ರೆ ಏನೇನೂ ಪ್ರಯೋಜ್ನ ಇಲ್ಲ, ಓಡ್ಬೇಕು...’ ಈ ರೀತಿಯ ಸಲಹೆ ಮತ್ತು ಅಭಿಪ್ರಾಯ

ಗಳನ್ನು ವಿವಿಧ ಸಂದರ್ಭಗಳಲ್ಲಿ ಯಾರ್‌್ಯಾರಿಂದಲೋ ಅದೆಷ್ಟೋ ಬಾರಿ ಕೇಳಿಯೂ ತಲೆ ಕೆಡಿಸಿಕೊಳ್ಳದ ನನಗೆ  ‘ನಾನಾಗಿದ್ರೆ ಹೊಟ್ಟೆ ಕುಯ್ಕೊತಿದ್ದೆ’ ಅನ್ನುವ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದರ ಮೂಲಕ ಹೊರ ನೂಕಲು ಸಾಧ್ಯವಾಗುತ್ತಲೇ ಇಲ್ಲ.

ಊದುತ್ತಿರುವ ಹೊಟ್ಟೆ ದೇಹದ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಕುರಿತು ನನಗೂ ಅರಿವಿದೆ. ಆದರೆ ಅದು ನನ್ನ ದೇಹದ ಬಾಹ್ಯ ಸ್ವರೂಪ ಹದಗೆಡಿಸುತ್ತಿರುವ ಬಗೆಗೆ ಯಾವುದೇ ಕಾರಣಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು ಎಂದು ದೃಢವಾಗಿ ನಿಶ್ಚಯಿಸಿದ್ದೆ. ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿತ್ವದ ಸೌಂದರ್ಯವೇ ದೀರ್ಘಕಾಲ ಸೆಳೆಯುವಂತಹದ್ದು ಎಂದೇ ನಂಬಿರುವ ನನ್ನ ನಂಬಿಕೆಯ ಸೌಧವೂ ಈಗೀಗ ಅದುರುವಂತೆ ಮಾಡುವಲ್ಲಿ ಸುತ್ತಲಿನ ಸೌಂದರ್ಯ ಪ್ರಜ್ಞೆಯುಳ್ಳವರು ಯಶಸ್ವಿಯಾಗುತ್ತಿದ್ದಾರೆ.

ಇದುವರೆಗೂ ಮದುವೆಗೂ ಮುನ್ನವೇ ತಲೆ ಕೂದಲು ಉದುರಿ ಬೋಳು ತಲೆ ಸಮಸ್ಯೆಯ ಸುಳಿಗೆ ಸಿಲುಕಿದ ಸ್ನೇಹಿತನಿಗೆ, ‘ಅದಕ್ಕೆಲ್ಲ ತಲೆ ಕೆಡಿಸ್ಕೊಬೇಡ’ ಅಂತ ಸಲೀಸಾಗಿ ಸಲಹೆ ನೀಡುತ್ತಿದ್ದವನು, ಇನ್ನು ಮುಂದೆ ತೆಪ್ಪಗಿರಬೇಕಾಗಬಹುದೇನೊ? ಜಗತ್ತು ತನಗೆ ಕೊಟ್ಟ ಕುಳ್ಳನ ಪಟ್ಟವನ್ನು ತಿರಸ್ಕರಿಸಲೂ ಆಗದೆ ನೋವಿನಿಂದಲೇ ಸ್ವೀಕರಿಸಿದ ಸ್ನೇಹಿತ, ಅದ್ಯಾಕೆ ಎತ್ತರ ಬೆಳೆಯುವ ಸಲುವಾಗಿ ಯಾವ್ಯಾವುದೋ ಔಷಧಿಯ ಮೊರೆ ಹೋಗುತ್ತಿದ್ದ ಎಂಬುದು ಈಗ ಅರ್ಥವಾಗಲಾರಂಭಿಸಿದೆ.

ಸೌಂದರ್ಯ ಪ್ರಜ್ಞೆಯುಳ್ಳ ಜಗತ್ತು ಬಣ್ಣ, ಎತ್ತರ, ತೂಕ, ತೊಡುವ ದಿರಿಸು ಇನ್ನು ಏನೇನೊ ಅಂಶಗಳನ್ನು ತನ್ನೆದುರು ಇಟ್ಟುಕೊಂಡು ತನ್ನ ಬಳಿ ಸುಳಿಯುವ ಮಂದಿಯ ಮನದಲ್ಲಿ ಕೀಳರಿಮೆ ಬಿತ್ತುವ ಮೂಲಕ ತಾನು ಸಾಧಿಸಿಕೊಳ್ಳುವ ಹಿತಾಸಕ್ತಿಯ ವ್ಯಾಪ್ತಿ, ನಾವು ಹೆಚ್ಚೆಚ್ಚು ಆಧುನಿಕರಾದಂತೆಲ್ಲ ವಿಸ್ತಾರಗೊಳ್ಳುತ್ತಿದೆ. ‘ಸ್ಮಾರ್ಟ್‌’ನ ಬೆನ್ನು ಹತ್ತಿರುವ ನಮಗೆ, ಅದರ ವ್ಯಾಪ್ತಿಯಿಂದ ಹೊರಗುಳಿದವರ ಮೇಲಿನ ಕಾಳಜಿ ಅಷ್ಟಕ್ಕಷ್ಟೆ.

ಮದುವೆಗೂ ಮುನ್ನ ಮತ್ತು ನಂತರವೂ ನಡೆಯುವ ಗುಣಾಕಾರ ಭಾಗಾಕಾರಗಳೆಲ್ಲವೂ ವಧು-ವರರ ಬಾಹ್ಯ ಸೌಂದರ್ಯ ‘ಮ್ಯಾಚ್’ ಮಾಡಿಸುವ ನಿಟ್ಟಿನಲ್ಲಿ ಕೇಂದ್ರೀಕೃತವಾಗುವುದು ಏನನ್ನು ಪ್ರತಿನಿಧಿಸುತ್ತದೆ? ಇಬ್ಬರ ದೇಹ ವಿನ್ಯಾಸವೂ ಹೊಂದುವಂತಿದ್ದರೆ ‘ಒಳ್ಳೆ ಜೋಡಿ’ ಎಂಬ ಬಿರುದು ದಯಪಾಲಿಸುವ ಸಮಾಜಕ್ಕೆ, ಸಾಕಷ್ಟು ಸಂದರ್ಭಗಳಲ್ಲಿ ಮನಸ್ಸುಗಳ ನಡುವಿನ ಹೊಂದಾಣಿಕೆ ಮುದುವೆಯಾಗಲು ಇರಬೇಕಾದ ಅತಿ ಮುಖ್ಯ ಅರ್ಹತೆ ಎಂದು ಅನಿಸುವುದೇ ಇಲ್ಲ.

ಸಮಾಜ ಎಲ್ಲರೊಳಗೂ ಬಿತ್ತುವಲ್ಲಿ ಸಫಲವಾಗಿರುವ ಸೌಂದರ್ಯದ ವ್ಯಾಪ್ತಿಯಿಂದ ತಾವು ಹೊರಗೆ ದೂಡಿಸಿಕೊಂಡವರು ಎಂಬ ಕೀಳರಿಮೆಯಿಂದ ದಿನನಿತ್ಯ ಗಾಸಿಗೊಳ್ಳುವ ಸ್ನೇಹಿತರನ್ನು ನೋಡುತ್ತಿದ್ದರೆ ಒಮ್ಮೊಮ್ಮೆ ಭಯವಾಗುತ್ತದೆ. ‘ವಯಸ್ಸಿನ್ನೂ ಇಪ್ಪತ್ತೈದು ಆಗಿದ್ರೂ ಮೂವತ್ತೈದು ನಲ್ವತ್ತು ವರ್ಷದವರಂತೆ ಕಾಣ್ತೀಯ. ಬೇಗ ಮದ್ವೆ ಆಗ್ಬಿಡು’ ಅನ್ನುವ ಸಲಹೆ ಬಿಸಾಕುವುದು ಕೆಲವರ ಪಾಲಿಗೆ ಚಟವಾಗಿ ಬಿಟ್ಟಿದೆ.

ಈ ಮಾತು ಕಿವಿಗೆ ಬಿದ್ದಾಗಲೆಲ್ಲ ಸ್ನೇಹಿತರು ಖಿನ್ನರಾಗುವುದು, ಕೆಲವೊಮ್ಮೆ ಬದುಕುವ ಉತ್ಸಾಹವೇ ತಮ್ಮಲ್ಲಿ ಇಲ್ಲವೆನ್ನುವಂತೆ ವರ್ತಿಸುವುದನ್ನು ಕಂಡಾಗಲೆಲ್ಲ ಆತಂಕವಾಗುತ್ತದೆ.

‘ತೋರಿಕೆ’ಯ ವ್ಯಕ್ತಿತ್ವಕ್ಕೆ ಇನ್ನಷ್ಟು ರಂಗು ತುಂಬಲು ತರಹೇವಾರಿ ಸಲಹೆ ಸೂಚನೆಗಳನ್ನು ರವಾನಿಸುವ ಜಾಹೀರಾತು, ದೃಶ್ಯ ಮಾಧ್ಯಮ, ವ್ಯಕ್ತಿತ್ವ ವಿಕಸನ ಗೊಳಿಸುವ ಗುತ್ತಿಗೆ ಪಡೆದವರು ಸೌಂದರ್ಯ ಪ್ರಜ್ಞೆಯ ವಿಷಮ ವರ್ತುಲ ಹಿಗ್ಗಿಸುವಲ್ಲಿ, ಆ ಮೂಲಕ ದೈಹಿಕವಾಗಿ ಆಕರ್ಷಕವಾಗಿ ಇರದಿರುವವರಲ್ಲಿ ಕೀಳರಿಮೆ ಉದ್ದೀಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.