ADVERTISEMENT

ಹಾಡು... ಚಿನ್ನದ ಗಣಿ

ಆರ್‌.ಜಿ.ಬ್ಯಾಕೋಡ
Published 6 ಸೆಪ್ಟೆಂಬರ್ 2017, 19:30 IST
Last Updated 6 ಸೆಪ್ಟೆಂಬರ್ 2017, 19:30 IST

ಪತಿಯೊಂದಿಗೆ ಮುನಿಸಿಕೊಂಡು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದ ಮಹಿಳೆಯೊಬ್ಬಳು ಆತನು ಹಾಡಿದ ಗೀತೆಯೊಂದಕ್ಕೆ ಮಾರುಹೋಗಿ ಮತ್ತೆ ಅವನಿಗೆ ಒಲಿದ ಬಗ್ಗೆ ಪ್ರಕಟವಾದ ‘ಒಂದಾಗಿಸಿದ ಹಾಡು’ (ವಾ.ವಾ., ಆಗಸ್ಟ್‌ 30) ಪತ್ರಕ್ಕೆ ಈ ಪ್ರತಿಕ್ರಿಯೆ.

ಕನ್ನಡ ಸಾಹಿತ್ಯ ಮತ್ತು ಚಿತ್ರ ಸಂಗೀತದಲ್ಲಿ ಮುಂಚಿನಿಂದಲೂ ಪ್ರೇಮಗೀತೆಗಳು ವಿಜೃಂಭಿಸುತ್ತಲೇ ಬಂದಿವೆ. ಕೆ.ಎಸ್‌. ನರಸಿಂಹಸ್ವಾಮಿಯವರ ‘ಮೈಸೂರ ಮಲ್ಲಿಗೆ’ ಸಂಕಲನದ ಕವನಗಳು ದಾಂಪತ್ಯಗೀತೆಗಳೆಂದೇ ಹೆಸರುವಾಸಿಯಾದವು.

ಕುವೆಂಪು ವಿರಚಿತ ಹಲವಾರು ಪ್ರೇಮಗೀತೆಗಳಲ್ಲಿ ‘ಸೊಬಗಿನ ಸೆರೆಮನೆಯಾಗಿಹೆ ನೀನು’ ಅತಿ ಪ್ರಸಿದ್ಧ. ಕಲ್ಪನಾ ಅಭಿನಯದ ‘ಅನಿರೀಕ್ಷಿತ’ (1970) ಚಿತ್ರಕ್ಕೆ ಅಳವಡಿಸಿಕೊಂಡ ಆ ಗೀತೆ, ಪತ್ನಿಯನ್ನು ಒಲಿಸಿಕೊಳ್ಳಲು ಉದಾಹರಿಸಬಹುದಾದ ಮತ್ತೊಂದು ಮೇರುಕವಿತೆ. ಆಕೆಯ ಮೊಗದಲ್ಲಿ ನಸುನಗೆಯಾಗಿರಲು, ಮುಡಿಯಲ್ಲಿ ಹೂವಾಗಿರಲು, ಹಣೆಯಲ್ಲಿ ಕುಂಕುಮವಾಗಿರಲು, ಕೈಗಳಲ್ಲಿ ಹೊಂಬಳೆಯಾಗಿರಲು... ಮುಂತಾಗಿ ಆಸೆಗಳನ್ನು ತಂಪಾಗಿ ವ್ಯಕ್ತಪಡಿಸುವ ಆ ಪದ್ಯವನ್ನು ಕೇಳಿಯೇ ಆನಂದಿಸಬೇಕು.

ADVERTISEMENT

‘ಅನುರಾಗದೆ ನೀ ಪಾಡಲೇಕೆ’ (ಗಾಳಿಗೋಪುರ), ‘ಕಣ್ಣುರೆಪ್ಪೆ ಒಂದನೊಂದು ಮರೆವುದೇ’ (ಪರೋಪಕಾರಿ), ‘ಬೆಡಗಿನರಸಿ ಬಾರೆ’ (ನಾಗಪೂಜಾ), ‘ನಗುವ ನಿನ್ನ ಮೊಗದ ಚೆನ್ನ’ (ಅಪರಾಧಿ), ‘ನನ್ನವಳು ನನ್ನೆದೆಯ ಹೊನ್ನಾಡನಾಳುವಳು’ (ಸರ್ವಮಂಗಳಾ), ‘ನಾನೂ ನೀನೂ ಜತೆಯಾಗಿರಲು ಕಾಲದ ನೆನಪೇ ಬೇಕಿಲ್ಲ’ (ಪ್ರೇಮಕ್ಕೂ ಪರ್ಮಿಟ್ಟೇ), ‘ಪ್ರೀತಿಯ ಹೂಗಳ ಮುಡಿದವಳೇ’ (ಮನೆ ಅಳಿಯ), ‘ಸಂಗಾತಿ ಮೊದಲು ನಿನ್ನ ನಾ ಕಂಡಾಗ’ (ದೇವರ ದುಡ್ಡು) ಮುಂತಾದ ಗೀತೆಗಳು ಅದೇ ಜಾಡಿನ ಇತರ ಕೆಲವು ಹಾಡುಗಳು.

ಹಾಗೆಯೇ ಕೋಪಿಸಿಕೊಂಡ ಇನಿಯನನ್ನು ಒಲಿಸಿಕೊಳ್ಳಲು ಹೆಂಡತಿಯು ಹಾಡಬಹುದಾದ ಗೀತೆಗಳೂ ಅನೇಕ. ‘ನೀಯಾರೋ ಏನೋ ಸಖ’ (ಹಸಿರು ತೋರಣ), ‘ಎಲ್ಲಿ ನೀನೋ ಅಲ್ಲಿ ನಾನು’ (ರಾಮ ಪರಶುರಾಮ), ‘ಇಲ್ಲೂ ಇರುವೆ ಅಲ್ಲೂ ಇರುವೆ’ (ಬದುಕುವ ದಾರಿ), ‘ಜೀವ ನೀನು ದೇಹ ನಾನು’ (ಮೋಡದ ಮರೆಯಲ್ಲಿ), ‘ನನ್ನ ಆಸೆ ಹಣ್ಣಾಗಿ ನನ್ನ ಬಾಳ ಕಣ್ಣಾಗಿ’ (ಆಟೋರಾಜ), ‘ನೀ ನಡೆವ ಹಾದಿಯಲ್ಲಿ’ (ಬಂಗಾರದ ಹೂ), ‘ನಿನ್ನಾ ರೂಪು ಎದೆಯ ಕಲಕಿ’ (ಪರಸಂಗದ ಗೆಂಡೆತಿಮ್ಮ)... ಪಟ್ಟಿ ಉದ್ದವಾಯಿತೇ? ಪ್ರೇಮದ ಪರಿಯೇ ಹಾಗೆ. ಅಗೆದಷ್ಟೂ ಚಿನ್ನದ ಗಣಿ.

–ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.