ADVERTISEMENT

ಸಂಗತ | ಪ್ರಕೃತಿಯ ಶತ್ರುವೂ ಹೊಟ್ಟೆಬಾಕ ನಗರವೂ: ಬದಲಾಗಿದೆ ಮಲೆನಾಡಿನ ಬದುಕು

ಕಾಲಚಕ್ರ ಉರುಳಿದೆ, ಮಲೆನಾಡಿನ ಬದುಕು ಈಗ ತೀವ್ರ ಬದಲಾವಣೆಗಳಿಗೆ ತೆರೆದುಕೊಂಡಿದೆ. ಕಷ್ಟಗಳು ಬೆಂಬತ್ತಿವೆ...

ಡಾ.ರಾಜೇಗೌಡ ಹೊಸಹಳ್ಳಿ
Published 15 ಮಾರ್ಚ್ 2020, 18:28 IST
Last Updated 15 ಮಾರ್ಚ್ 2020, 18:28 IST
ಮಲೆನಾಡಿನ ಬದುಕು
ಮಲೆನಾಡಿನ ಬದುಕು   

ಹಿರಿಯರು ಹಿಂದೆ, ಸಾಲು ಗಾಡಿ ಮೇಲೆ ದಿನನಿತ್ಯದ ಉಪ್ಪು, ಉಳ್ಳಿ, ಬೇಳೆ ಒಳ ಗೊಂಡಂತೆ ಹಾಸನ– ಆಲೂರು ಸಂತೆ ಸಾಮಾನುಗಳನ್ನು ಮಲೆನಾಡಿಗೆ ಮುಟ್ಟಿಸುತ್ತಿದ್ದರು.

ಮಲೆನಾಡಿನ ಕಲ್ಲೂರು ಮಲ್ಲಪ್ಪನವರ ಮನೆಯೇ ದಾಸ್ತಾನು ಮಳಿಗೆ. ಆಗ ಈಗಿನಷ್ಟು ತೀವ್ರ ವ್ಯಾವಹಾರಿಕತೆ ಇರಲಿಲ್ಲ. ಜಾತಿ ಗೌಣವಾಗಿತ್ತು. ನನಗೆ ನೆನಪಿರುವಂತೆ, ಮಲೆನಾಡಿನ ಕರಿಟೋಪಿ ಅಮುಕಿ, ಅಡ್ಡ ವಿಭೂತಿ ಪಟ್ಟೆಯು ಢಾಳಾಗಿ ಕಾಣುವಂತೆ ಹಚ್ಚಿ, ಬಿಳಿಅಂಗಿಯ ಮೇಲೆ ಕರಿಕೋಟು ಧರಿಸಿ, ಮಂಡಿವರೆಗೆ ಅಡ್ಡಪಂಚೆ ಉಟ್ಟು, ಗಿರಕಿಮೆಟ್ಟು ಮೆಟ್ಟಿ ‘ಸೋಮೇಗೌಡ ಏನ್ಮಾಡ್ತಾ ಇದೀಯಪ್ಪಾ’ ಎಂದು ಸಂತೆಗೆ ಬಂದ ಮಲೆನಾಡಿನ ಲಿಂಗಾಯತ ಮಲ್ಲಪ್ಪ ಅವರು ಗೆಳೆಯನನ್ನು ಕೂಗುತ್ತಾ ನಮ್ಮ ಮನೆಗೆ ಬರುತ್ತಿದ್ದರು. ಗೆಳೆಯನನ್ನು ಕಂಡಕೂಡಲೇ ಅಜ್ಜನ ಮುಖ ಊರಗಲವಾಗುತ್ತಿತ್ತು. ಮಾತುಕತೆ ಪ್ರಾರಂಭವಾಗುತ್ತಿತ್ತು. ಫಲಾಹಾರ ನಡೆಯುತ್ತಿತ್ತು. ಆ ಕಾಲದಲ್ಲಿ ಮನೆಯಲ್ಲಿ ಕಾಲೊನಿಯ ನಾಲ್ಕಾರು ಜೋಡಿ ಹೆಂಗಸರು ಒನಕೆಯಲ್ಲಿ ಭತ್ತ ಕುಟ್ಟಿ ಮಾಡಿದ ಅಕ್ಕಿಯು ಆಲೂರು ಸಂತೆಯಲ್ಲಿ ರಾಶಿಯಾಗುತ್ತಿತ್ತು. ಆದರೆ ಆಗ ಭವಿಷ್ಯ ಅರ್ಥವಾಗಲೇ ಇಲ್ಲ.

ನನ್ನಜ್ಜನಿಗೆ ಗಾಂಧಿ ಯಾರು ಎಂಬ ಅರಿವಿರಲಿಲ್ಲ. ದಿರಿಸು ಮಾತ್ರ ಗಾಂಧಿಯ ದಿರಿಸಿನ ಪ್ರತಿರೂಪ. ಸರಳತೆಯು ಗಾಂಧಿಗೆ ಸಮಸಮ. ಇದೇ ಗಾಂಧಿ ಕಂಡುಕೊಂಡ ಭಾರತೀಯ ತತ್ವ. ‘ಜಗತ್ತಿನ ಆರ್ಥಿಕ ನೀತಿ ಎಂದರೇನೆಂದು ತಿಳಿಯದ ಬ್ರಿಟಿಷ್‌ಪೂರ್ವ ಭಾರತವು ಶ್ರಮಜೀವನ ನಡೆಸುತ್ತಿತ್ತು. ಈಗಿನಂತೆ ಜಗಲಿ ಮೇಲೆ, ಊರ ಮುಂದಿನ ಕಟ್ಟೆಮೇಲೆ ಅರೆಬೆಂದ ಯುವಜನ ನಡೆಸುವಂತೆ ‘ಈ ವರ್ಷ ಯಾವ ಚುನಾವಣೇಲಿ ಎಷ್ಟು ಸಿಕ್ಕೀತು’ ಎಂಬಂಥ ಲೆಕ್ಕಾಚಾರ ನಡೆಯುತ್ತಿರಲಿಲ್ಲ.

ADVERTISEMENT

ಗಾಂಧೀಜಿ ಕಾಲದಲ್ಲೇ ಬಿಳಿಯರು ಮದರಾಸು ಬಂದರಿನ ಮೂಲಕ ತಮ್ಮ ಬೀಬಿಗಳನ್ನು ಕೂರಿಸಿ ಕೊಂಡು ಬಂದು ಮನೆ ಮಾಡಿ, ಹೆಮ್ಮರಗಳನ್ನು ಉರುಳಿಸಿ, ನೆರಳಿಗಾಗುವಷ್ಟು ಕಿರು ಮರಗಳನ್ನು ಉಳಿಸಿಕೊಂಡು, ಕಾಫಿ ಬೆಳೆಗೆ ಸೂರ್ಯನ ಬಿಸಿಲು ತಾಗುವಷ್ಟು ಬಿಟ್ಟು, ಕಾಫಿ ನೆಟ್ಟು ‘ಎಸ್ಟೇಟ್’ ಎಂದು ನಾಮಕರಣ ಮಾಡಿಬಿಟ್ಟರು. ಆಗಲೇ ಏಲಕ್ಕಿ ಎಂಬ ವ್ಯಾಪಾರಿ ಬೆಳೆಯೊಂದು ಸಾಂಬಾರ ಪದಾರ್ಥದ ಪ್ರಮುಖ ಆಕರ್ಷಣೆಯಾಗಿ ವಿದೇಶಿಗರನ್ನು ದೇಶಕ್ಕೆ ಬರಮಾಡಿಕೊಂಡಿತ್ತು. ಅದರ ಮುಂದಿನ ಸ್ವರೂಪವೇ ಕಾಫಿ ಎಂಬ ಮತ್ತೊಂದು ವ್ಯಾಪಾರಿ ಬೆಳೆ.

ದಟ್ಟ ಅಡವಿ ಕಡಿದು, ರೈಲು ಕಂಬಿಯನ್ನು ಸಮುದ್ರ ದವರೆಗೂ ಹಾಸಿ, ದೈತ್ಯ ಮರದ ದಿಮ್ಮಿಗಳನ್ನು, ಸ್ಥಳೀಯ ಉತ್ಪನ್ನಗಳನ್ನು ಸಾಗಿಸುತ್ತಾ, ನಮ್ಮ ದೇಶದ ಜಗಲಿ ಮೇಲಿದ್ದ ಬದುಕಿನ ಶ್ರಮವಾದ ಬಂಗಾರದ ಹತ್ತಿಯ ಚರಕಗಳನ್ನು ಈ ದೇಶದ ಜನರಿಂದ ಮುರಿದು ಒಲೆಗೆ ಹಾಕಿಸಿದ ವಿದೇಶಿ ವ್ಯಾಪಾರಿಗಳ ಕೌಶಲಕ್ಕೆ ಜನ ದಿಗಿಲಾಗಲಿಲ್ಲ. ಗಾಂಧೀಜಿಯಂತಹವರು ಮಾತ್ರ ಬೆದರಿಹೋದರು. ಅದೆಲ್ಲದರ ಪ್ರತಿರಿಂಗಣವಾಗಿ ಈಗ ಮಲೆನಾಡು ಕುಸಿಯುತ್ತಿದೆ.

ಬದುಕು ಆಗ ಲಂಕೇಶ್ ಹೇಳಿದಂತೆ ಸೌದಿ ಅರೇಬಿಯಾದ ಆಡಂಬರಕ್ಕೆ ಸಮನಾಗಿತ್ತು. ಹಾಗೆ ಬದುಕುತ್ತಿದ್ದ ಪ್ಲಾಂಟರುಗಳೀಗ, ಐಷಾರಾಮಿ ಕಾರು ಬಿಟ್ಟು ಕೆಂಪು ಬಸ್ಸು ಹತ್ತಿಕೊಳ್ಳುತ್ತಿದ್ದಾರೆ. ನೂರಾರು ಎಕರೆ ಏಲಕ್ಕಿ ತೋಟಗಳಿಗೆ ಕಟ್ಟೆರೋಗ ತಗುಲಿ, ಈಗವರು ಬೆಂಗಳೂರೆಂಬ ಹೊಟ್ಟೆಬಾಕ ನಗರದಲ್ಲಿ ಮಾರುತಿ ವ್ಯಾನಿನಲ್ಲಿ ಊಟ ಮಾರಿ, ಕಬ್ಬನ್ ಪಾರ್ಕ್ ಕಡೆ ಬದುಕು ಸಾಗಿಸುತ್ತಿದ್ದಾರೆಂದು ಸುದ್ದಿ.

ಕಾಲಚಕ್ರ ಉರುಳಿದೆ. ಸುಲ್ತಾನರು, ತುಂಡುರಾಜರ ಸಂತತಿಯವರು ಕದ್ದುಮುಚ್ಚಿ ಹಿರಿಯರ ಕಿರೀಟ ನೆನೆಯುತ್ತಾ ಜೀವನ ಸಾಗಿಸುತ್ತಾರಲ್ಲವೇ! ಮಲೆನಾಡಿ ನಲ್ಲಿ ಇದು ಮುಂದುವರಿದಂತೆ ಕಾಣುತ್ತಿದೆ.

ಈಗಂತೂ ಮಲೆನಾಡಿನಲ್ಲಿ ಅವರ ಕಾಫಿ ತೋಟವನ್ನು ಯಾರೂ ಕೊಳ್ಳುತ್ತಿಲ್ಲ. ನಗರ ಸೇರಲಾಗುತ್ತಿಲ್ಲ. ಬ್ಯಾಂಕುಗಳ, ಸಹಕಾರಿ ಸಂಘಗಳ ಮೆಟ್ಟಿಲು ಹತ್ತಿದ್ದೂ ಮುಗಿಯಿತು. ಈಗಾಗಲೇ ಐದಾರು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂ
ದಾಗಿ ವರ್ಷಾವರ್ಷ ಲಕ್ಷಾಂತರ ರೂಪಾಯಿ ಸಾಲವನ್ನು ವಾಪಸ್‌ ನೀಡಲಾಗುತ್ತಿಲ್ಲ. ಈಗ? ಭತ್ತ, ಕಾಫಿ, ಮೆಣಸು ಬೆಳೆಯುವವನು ಬೇಕೂಫ ಎಂದಾಗಿ, ತೀರ್ಥಹಳ್ಳಿ ಅಡಿಕೆಯಲ್ಲಿ ಫಸಲು ಭವಿಷ್ಯ ಕಾಣುವ ಹಂಬಲ. ಅದು ಸಹಾ ಮುಂದೇನೋ ಗೊತ್ತಿಲ್ಲ.

ಹಾಗಾಗದೆ ಮಲೆನಾಡು ಏನಾಗುತ್ತದೆ? ಆನೆಗಳಾಗಲೇ ಹಾಳು ಬಿದ್ದಿರುವ ತೋಟಗಳನ್ನು ‘ಇದು ನಮ್ಮದು, ಬಿಟ್ಟು ಹೊರಡಿ’ ಎಂದು; ಮಂಗಗಳು ಹಲ್ಲು ಕಿರಿದು ‘ಆಯ್ತು ನರಮನುಷ್ಯರೇ, ಇದು ಕಿಷ್ಕಿಂಧಾ ಪಟ್ಟಣವಾಗಿದ್ದ ನಮ್ಮದು’ ಎಂದು ಹಂಗಿಸುತ್ತಿವೆ. ಪುನಃ ಭಾರಿ ಮರಗಳು ಬೆಳೆದು, ತಾವು ನೆತ್ತಿಯ ಮೇಲೆ ಬಿಸಿಲು ಕಾಯಿಸಲು ಆಸೆಪಡುತ್ತಿವೆ. ಪ್ರಕೃತಿಗೆ ಮನುಷ್ಯ ಮಹಾಶತ್ರು ಎಂಬ ಅರಿವಾಗುತ್ತಿದೆ.

ಹಾಗಾಗಿ ಇನ್ನು ಕೆಲವೇ ವರ್ಷಗಳಲ್ಲಿ ಏಲಕ್ಕಿಯಂತೆ ಕಾಫಿ ಸಹಾ ಮಾಯವಾಗಿ ಐಷಾರಾಮಿಯಾಗಿ ಬದುಕುವ ಕಾಲ ಮುಗಿಯಬಹುದು. ಅದರೊಡನೆ ಮನುಷ್ಯನ ಬದುಕು ಆದಿಮಾನವನಂತೆ ಪ್ರಾಣಿ, ಹಕ್ಕಿಪಕ್ಷಿ ಜೊತೆ ಪುನಃ ಆರಂಭವಾಗುವ ಸೂಚನೆ ಕಂಡುಬರುತ್ತಿದೆ. ಗಾಂಧೀಜಿ ಹೇಳಿದಂತೆ ‘ಅತಿವೃಷ್ಟಿ, ಅನಾವೃಷ್ಟಿಗಳು ಪ್ರಕೃತಿಯ ಕೋಪತಾಪಗಳು, ಪ್ರಕೃತಿಯ ಕೊಡುಗೆಗಳು, ಅವೇ ಕಡಿವಾಣಗಳು, ದೇವರು ನೀಡುವ ಉಡುಗೆಗಳು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.