ADVERTISEMENT

ಗುರುವಾರ, 16–2–1967

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST

ಬೆಂಗಳೂರು, ಫೆ. 15– ನಾಲ್ಕು ಸ್ಥಳಗಳಲ್ಲಿ ಘರ್ಷಣೆ ನಡೆದುದನ್ನು ಬಿಟ್ಟರೆ, ಶೇಕಡ 50 ರಷ್ಟಕ್ಕಿಂತ ಹೆಚ್ಚು ಮಂದಿ ಮತದಾರರು ಇಂದು ಉತ್ಸಾಹದಿಂದ ವೋಟಿನ ಕೇಂದ್ರಗಳಿಗೆ ಸಾಗಿ 15 ಮಂದಿ ಲೋಕಸಭಾ ಸದಸ್ಯರು ಹಾಗೂ 119 ಮಂದಿ ವಿಧಾನಸಭಾ ಸದಸ್ಯರನ್ನು ಆರಿಸುವ ಕಾರ್ಯವನ್ನು ಶಾಂತರೀತಿಯಲ್ಲಿ ಮುಗಿಸಿದರು.

ಉಳಿದ 12 ಲೋಕಸಭೆ ಹಾಗೂ 95 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 19 ರಂದು ಮತದಾನ ಜರುಗುವುದು.
ಈ ಕ್ಷೇತ್ರಗಳಲ್ಲಿ ಮತದಾನ ಮುಗಿಯುತ್ತಿದ್ದಂತೆಯೇ ಪ್ರಚಾರಕರು 19 ರಂದು ಮತದಾನ ನಡೆಯುವ ತಮ್ಮ ಪಕ್ಷಗಳ ಅಭ್ಯರ್ಥಿಗಳಿರುವ ಕ್ಷೇತ್ರಗಳಿಗೆ ವಾಹನಗಳೊಡನೆ ಚಲಿಸಲಾರಂಭಿಸಿದರು.

ಮತದಾನದಲ್ಲಿ ಚಿಂತಾಮಣಿಗೆ ಅಗ್ರ ಸ್ಥಾನ?
ಚಿಂತಾಮಣಿ, ಫೆ. 15– ಚಿಂತಾಮಣಿಯಲ್ಲಿ 1028 ಮಂದಿ ಮತದಾರರಿರುವ ಮತದಾನದ ಕೇಂದ್ರವೊಂದರಲ್ಲಿ 1020 ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಒಂದು ಕೇಂದ್ರದಲ್ಲಿ ಶೇಕಡ 99.2 ರಷ್ಟು ಮಂದಿ ಮತ ನೀಡಿರುವುದು ರಾಷ್ಟ್ರದಲ್ಲೆ ಇದೇ ಮೊದಲನೆಯ ಪ್ರಸಂಗವೆಂದು ಹೇಳಲಾಗಿದೆ.

ಮತದಾನಕ್ಕಿಂತ ಮದುವೆ ಮುಖ್ಯ
ಬಿಕನೀರ್, ಫೆ. 15– ಬಿಕನೀರ್ ಜಿಲ್ಲೆಯ ಲೂನ್‌ಕರನ್ ಸರ್ ಚುನಾವಣಾ ಕ್ಷೇತ್ರದಲ್ಲಿನ ಮೊತಿಘರ್ ಮತದಾನದ ಕೇಂದ್ರಕ್ಕೆ ಇಂದು ಮಧ್ಯಾಹ್ನದವರೆಗೂ ಒಬ್ಬರೂ ಮತದಾರನೂ ಮತ ನೀಡಲು ಬಂದಿರಲಿಲ್ಲ. ಇಡೀ ಗ್ರಾಮದ ಜನರು ವಿವಾಹ ಸಮಾರಂಭವೊಂದರಲ್ಲಿ ಪಾಲುಗೊಂಡಿದ್ದರು.

ಜೂನ್‌ನಲ್ಲಿ ಕೆನಡಾಕ್ಕೆ ಡಾ. ರಾಧಾಕೃಷ್ಣನ್
ಅಟ್ಟಾವ, ಫೆ. 15– ಕೆನಡಾದ ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ಕೊಡಲು ಭಾರತದ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರು ಒಪ್ಪಿಕೊಂಡಿದ್ದಾರೆ. ಅವರು ಮುಂದಿನ ಜೂನ್ 26ರಂದು ಅಟ್ಟಾವಾಕ್ಕೆ ಆಗಮಿಸುವ ನಿರೀಕ್ಷೆ ಇದೆ. ಜೂನ್ 28ರಂದು ಅಟ್ಟಾವಾದಲ್ಲಿ ನಡೆಯಲಿರುವ ವಿಶ್ವಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ಅಧ್ಯಕ್ಷರು ಮತ ನೀಡಲಿಲ್ಲ
ಮದ್ರಾಸ್, ಫೆ. 15– ಚುನಾವಣೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಕೆ. ಕಾಮರಾಜ್‌ ಅವರು ಮತ ನೀಡಲಿಲ್ಲ.
ಅವರ ಸ್ವಕ್ಷೇತ್ರವಾದ ವಿರುಧುನಗರ ದಲ್ಲಿ ಇಂದು ಮತದಾನ ನಡೆಯಿತು. ಇತ್ತೀಚೆಗೆ ಕಾರು ಅಪಘಾತವೊಂದರಲ್ಲಿ ಗಾಯಗೊಂಡಿದ್ದರಿಂದ ಅವರು ಹಾಸಿಗೆಯಲ್ಲಿದ್ದು ಪ್ರವಾಸ ಮಾಡಲು ಅಸಮರ್ಥರಾಗಿದ್ದಾರೆ.

ನಿರಾಕರಣೆ
ನವದೆಹಲಿ, ಫೆ. 15– ಪ್ರಧಾನಮಂತ್ರಿಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕಾಗಿ ಕೆಲಸ ಮಾಡಲು ಮಫ್ತಿಯಲ್ಲಿರುವ ಪೋಲೀಸ ರನ್ನು ನೇಮಿಸಲಾಗಿದೆ ಎಂದು ಜನ ಸಂಘದ ಅಧ್ಯಕ್ಷರು ಮಾಡಿರುವ ಆಪಾದನೆಯನ್ನು ಕಾಂಗ್ರೆಸ್‌ ಪಕ್ಷ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.