ADVERTISEMENT

ಗುರುವಾರ, 28–9–1967

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2017, 19:30 IST
Last Updated 27 ಸೆಪ್ಟೆಂಬರ್ 2017, 19:30 IST

ಆಮದು ಆಹಾರಕ್ಕೆ ಇನ್ನು ಮುಂದೂ ಸಹಾಯಧನ
ನವದೆಹಲಿ, ಸೆ. 27–
ಆಮದು ಮಾಡಿಕೊಂಡ ಆಹಾರಧಾನ್ಯಗಳಿಗೆ ಈಗ ನೀಡಲಾಗುತ್ತಿರುವ ಸಹಾಯ ಧನವನ್ನು ಸದ್ಯಕ್ಕಂತೂ ರದ್ದು ಮಾಡುವ ಸಂಭವವಿಲ್ಲ.

ಮುಖ್ಯಮಂತ್ರಿಗಳು ಮತ್ತು ರಾಜ್ಯ ಆಹಾರ ಮಂತ್ರಿಗಳು ನಡೆಸಿದ ಎರಡು ದಿನಗಳ ಚರ್ಚೆ ಮುಕ್ತಾಯವಾದಾಗ ಈ ವಿಷಯ ಸ್ಪಷ್ಟವಾಯಿತು.

ಈಜಿಪ್ಟ್–ಇಸ್ರೇಲ್ ನಡುವೆ ಭಾರಿ ಘರ್ಷಣೆ: 14 ಜನರ ಸಾವು
ಟೆಲ್ ಆವೀವ್, ಸೆ. 27–
ಸೂಯೆಜ್ ಕಾಲುವೆಯುದ್ದಕ್ಕೂ ಇಂದು ಇಸ್ರೇಲ್ ಮತ್ತು ಈಜಿಪ್ಟ್ ಪಡೆಗಳ ನಡುವೆ ದಿನವಿಡೀ ನಡೆದ ಘರ್ಷಣೆಯಲ್ಲಿ 12 ಮಂದಿ ಮೃತರಾದರೆಂದು ಮಿಲಿಟರಿ ವಕ್ತಾರರೊಬ್ಬರು ಈ ರಾತ್ರಿ ಹೇಳಿದರು. ಈ ಪೈಕಿ ಎಂಟು ಮಂದಿ ಸಿನಾಯ್‌ನಲ್ಲಿದ್ದ ಈಜಿಪ್ಷಿಯನರು.

ADVERTISEMENT

ಇಸ್ರೇಲ್ ಕಡೆ ಇಬ್ಬರು ಮೃತರಾಗಿ 10 ಮಂದಿ ಗಾಯಗೊಂಡರೆಂದು ಈ ವಕ್ತಾರರು ತಿಳಿಸಿದ್ದಾರೆ.

ಉತ್ತಮ ಬೆಳೆಯಿಂದ ಗಲಭೆ, ಗಲಾಟೆಗಳು ಕಡಿಮೆಯಾಗುವ ಭರವಸೆಯಿಲ್ಲ
ನವದೆಹಲಿ, ಸೆ. 27– ಈ ವರ್ಷ ಒಳ್ಳೆಯ ಮುಂಗಾರು ಬೆಳೆ ಬರುವ ನಿರೀಕ್ಷೆಯಿರುವುದರಿಂದ ಕೆಲವು ರಾಜ್ಯಗಳಲ್ಲಿ ಕಾನೂನು ಮತ್ತು ವ್ಯವಸ್ಥೆ ಸುಧಾರಿಸುವುದೆಂಬ ಭರವಸೆ ಕೊಡುವುದು ಅಸಾಧ್ಯವೆಂದು ಕೇಂದ್ರ ಆಹಾರ ಮಂತ್ರಿ ಶ್ರೀ ಜಗಜೀವನರಾಂ ಅವರು ತಿಳಿಸಿದರು.

ಮುಖ್ಯಮಂತ್ರಿಗಳ ಎರಡು ದಿನಗಳ ಸಮ್ಮೇಳನದ ಕೊನೆಯಲ್ಲಿ ಪತ್ರಕರ್ತರು ಈ ಬಗ್ಗೆ ಶ್ರೀ ಜಗಜೀವನರಾಂ ಅವರನ್ನು ಪ್ರಶ್ನಿಸಿದಾಗ, ತಮ್ಮ ಲಾಭಕ್ಕಾಗಿ ಆಹಾರ ಪರಿಸ್ಥಿತಿಗೆ ಯಾರೂ ರಾಜಕೀಯದ ಬಣ್ಣ ಬಳಿಯುವುದಿಲ್ಲವೆಂದು ಹೇಗೆ ಆಶ್ವಾಸನೆ ಕೊಡಲಿ? ಎಂದರು.

ನವಂಬರ್‌ನಿಂದ ಆಕಾಶವಾಣಿಯಲ್ಲಿ ಜಾಹೀರಾತು ಪ್ರಸಾರ: ನೀತಿಸೂತ್ರ ಅಂಗೀಕಾರ
ನವದೆಹಲಿ, ಸೆ. 27–
ಆಕಾಶವಾಣಿಯಲ್ಲಿ ನವಂಬರ್ 1 ರಿಂದ ಜಾಹೀರಾತು ಪ್ರಸಾರದ ಬಗ್ಗೆ ನೀತಿಸೂತ್ರವನ್ನು ಕೇಂದ್ರ ಸಂಪುಟವು ಇಂದು ಅನುಮೋದಿಸಿತೆಂದು ತಿಳಿದುಬಂದಿದೆ.

ಸಮುದಾಯದ ಹಾಗೂ ಜಾಹೀರಾತುದಾರರ ಹಿತದೃಷ್ಟಿಯಿಂದ ರೇಡಿಯೋ ಜಾಹೀರಾತುದಾರರು ಕೆಲವು ಸೂತ್ರಗಳನ್ನು ಪಾಲಿಸುವಂತೆ ಈ ನೀತಿಸೂತ್ರವು ಮಾರ್ಗದರ್ಶನ ನೀಡುತ್ತದೆ.

ಜಾಹೀರಾತುಗಳು ಸಂವಿಧಾನಕ್ಕೆ ಮಕ್ಕಳ ಮೇಲೆ ತಾಯಿತಂದೆಯರಿಗಿರುವ ಅಧಿಕಾರಕ್ಕೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಅಪಚಾರ ಮಾಡಬಾರದೆಂದು ನೀತಿಸೂತ್ರ ತಿಳಿಸುತ್ತದೆ.

ಜಾಹೀರಾತು ಪ್ರಸಾರವು ಯಾವುದೇ ಧರ್ಮವನ್ನು ಟೀಕಿಸಬಾರದು ಹಾಗೂ ಯಾವುದೇ ಮತದ ಧಾರ್ಮಿಕ ಭಾವನೆಯನ್ನು ಹತ್ತಿಕ್ಕಲು ಯತ್ನಿಸಬಾರದು. ಜಾಹೀರಾತುಗಳು ಭಾರತ ಸರ್ಕಾರವು ಅಂಗೀಕರಿಸಿರುವ ನಿಯಮಗಳಿಗೆ ಅನುಗುಣವಾಗಿರಬೇಕು. ಪ್ರಾಯೋಗಿಕವಾಗಿ ನವಂಬರ್ 1 ರಂದು ಮುಂಬೈ, ಪುಣೆ ಮತ್ತು ನಾಗಪುರ ಕೇಂದ್ರಗಳಿಂದ ಜಾಹೀರಾತು ಪ್ರಸಾರ ಆರಂಭವಾಗುವುದು.

ಪ್ರಸಾರದ ಅವಧಿ ದಿನಕ್ಕೆ ಕೇವಲ ಒಂದೂ ಕಾಲು ಗಂಟೆ. ಈ ಪ್ರಾಯೋಗಿಕ ಯೋಜನೆಯಿಂದ ವರ್ಷಕ್ಕೆ ಒಟ್ಟು ಸುಮಾರು 40 ಲಕ್ಷ ರೂ. ವರಮಾನ ಬರುವುದೆಂದು ಅಂದಾಜು ಮಾಡಲಾಗಿದೆ. ಜಾಹೀರಾತು ಪ್ರಸಾರ ಎಲ್ಲ ಕೇಂದ್ರಗಳಿಂದ ಆರಂಭವಾದಾಗ ವರ್ಷಕ್ಕೆ 2.5 ಕೋಟಿ ರೂ. ವರಮಾನ ಬರುತ್ತದೆನ್ನಲಾಗಿದೆ.

ಆದರ್ಶ ಅಧ್ಯಾಪಕ, ಶಿಕ್ಷಣ ತಜ್ಞ ಡಾ. ಪಾವಟೆ ಅವರಿಗೆ ಸನ್ಮಾನ
ಬೆಂಗಳೂರು, ಸೆ. 27–
ಆದರ್ಶ ಅಧ್ಯಾಪಕ, ಹೆಸರಾಂತ ಶಿಕ್ಷಣ ತಜ್ಞ ಹಾಗೂ ದಕ್ಷ ಆಡಳಿತಗಾರರಾದ ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಡಿ.ಸಿ. ಪಾವಟೆ ಅವರನ್ನು ಇಂದು ಬೆಂಗಳೂರು ವಿಶ್ವವಿದ್ಯಾನಿಲಯ ಗೌರವಿಸಿ ಸನ್ಮಾನ ಮಾಡಿತು.

ಮೂರು ವರ್ಷಗಳಿಗೂ ಹೆಚ್ಚು ಕಾಲ ನಿಕಟ ಬಾಂಧವ್ಯ ಹೊಂದಿದ್ದ ಶಿಕ್ಷಣ ರಂಗವನ್ನು ತೊರೆದು ಪಂಜಾಬಿನ ರಾಜ್ಯಪಾಲರಾಗಿ ತೆರಳಲಿರುವ ಡಾ. ಪಾವಟೆ ಅವರ ಅಮಿತ ಸೇವೆಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ವಿ.ಕೃ. ಗೋಕಾಕ್ ಮತ್ತು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಸ್ಮರಿಸಿ ‘ಕನ್ನಡಾಂಬೆಯ ಶ್ರೇಷ್ಠ ಪುತ್ರ’ನಿಗೆ ಹೊಸ ಹುದ್ದೆಯಲ್ಲಿ ಯಶ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.