ADVERTISEMENT

ಗುರುವಾರ, 4–5–1967

​ಪ್ರಜಾವಾಣಿ ವಾರ್ತೆ
Published 3 ಮೇ 2017, 19:30 IST
Last Updated 3 ಮೇ 2017, 19:30 IST
ಸಿ. ಸುಬ್ರಹ್ಮಣ್ಯಂ ಎಫ್‌.ಎ.ಓ.ಅಧ್ಯಕ್ಷರಾಗುವ ಸಂಭವ 
ಮದ್ರಾಸ್‌, ಮೇ 3–ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌.ಎ.ಓ.) ಡೈರೆಕ್ಟರ್‌ ಜನರಲ್‌ ಆಗಿ ಕೇಂದ್ರದ ಮಾಜಿ  ಆಹಾರ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಅವರನ್ನು ನೇಮಿಸುವ ಸಂಭವವಿದೆಯೆಂದು ತಿಳಿದುಬಂದಿದೆ.
 
ಈಗ ಮದ್ರಾಸಿನಲ್ಲಿರುವ ಶ್ರೀ ಸಿ. ಸುಬ್ರಹ್ಮಣ್ಯಂ ಅವರನ್ನು ಈ ವಿಷಯವಾಗಿ ಕೇಳಿದಾಗ, ಡೈರೆಕ್ಟರ್‌ ಜನರಲ್‌ ಅವರನ್ನು ಎಫ್‌.ಎ.ಓ. ಸದಸ್ಯರು ಚುನಾಯಿಸಬೇಕಾಗಿದ್ದು ನವೆಂಬರ್‌ನಲ್ಲಿ ಚುನಾವಣೆ ನಡೆಯುವುದೆಂದೂ ತಮ್ಮ ಹೆಸರನ್ನು ಸಹ ಪರಿಶೀಲಿಸಲಾಗುವುದೆಂದೂ ಅವರು ತಿಳಿಸಿದರು.
 
ಟಿ. ಸಿದ್ದಲಿಂಗಯ್ಯ ರಾಜ್ಯಸಭೆಗೆ: ಪರಿಷತ್ತಿಗೆ ಬಿ. ರಂಗಪ್ಪ 
ಬೆಂಗಳೂರು ಮೇ 3–  ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಕ್ರಮವಾಗಿ ಕಾಂಗ್ರೆಸ್‌ ಸ್ಪರ್ಧಿಗಳಾದ ಹಿರಿಯ ಕಾಂಗ್ರೆಸ್‌ ನಾಯಕ ಶ್ರೀ ಟಿ. ಸಿದ್ದಲಿಂಗಯ್ಯ ಮತ್ತು ಶ್ರೀ ಬಿ. ರಂಗಪ್ಪ ಅವರುಗಳು ಇಂದು ಚುನಾಯಿತರಾದರು.
 
ಬಾಲಗಂಧರ್ವರಿಗೆ ಸಂಗೀತ ಚಿಕಿತ್ಸೆ
ಪುಣೆ, ಮೇ 3–  ಮರಾಠಿ ರಂಗಭೂಮಿಯ ಹಿರಿಯ ನಟ ಬಾಲಗಂಧರ್ವ ಅವರು 25ನೇ ದಿನವಾದ ಇಂದೂ ಕೂಡ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದರು.
ಕಳೆದ ಸೋಮವಾರ ಅವರನ್ನು ಮುಂಬೈನಿಂದ ಇಲ್ಲಿಗೆ ಕರೆತಂದಾಗಿನಿಂದಲೂ ಅವರ ಆರೋಗ್ಯ ಸ್ಥಿತಿ ಉತ್ತಮಗೊಳ್ಳುತ್ತಿರುವ ಯಾವ ಸೂಚನೆಯೂ ಕಂಡುಬಂದಿಲ್ಲ.
 
ಸಂಗೀತದ ನಾದತರಂಗಗಳು ಅವರ ಜೀವಕ್ಕೆ ಚೇತನ ನೀಡಬಹುದೆಂಬ ನಂಬಿಕೆಯ ಮೇಲೆ ಬಾಲಗಂಧರ್ವರ ಆತಿಥೇಯರಾದ ಡಾ. ಬಾಬೂರಾವ್‌ ಬೈನ್‌ಕರ್‌ ಅವರು ಬಾಲಗಂಧರ್ವರು ಮಲಗಿರುವ ಕೋಣೆಯ ಹೊರಗಡೆ ಇಂದು ಸಂಜೆ ಸಿತಾರ್‌ ವಾದನ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.