ADVERTISEMENT

ಬುಧವಾರ, 13–9–1967

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 19:30 IST
Last Updated 12 ಸೆಪ್ಟೆಂಬರ್ 2017, 19:30 IST

ಸಿಕ್ಕಿಂ ಗಡಿಯಲ್ಲಿ ಹೋರಾಟ ಸ್ತಬ್ಧ ಮಾತುಕತೆ ಆರಂಭವಾದರೆ ಗಡಿ ಗುರುತಿಸುವ ಪ್ರಶ್ನೆ ಇತ್ಯರ್ಥವಾಗುವ ನಿರೀಕ್ಷೆ

ನವದೆಹಲಿ, ಸೆ. 12– ಇಂದು ಮಧ್ಯಾಹ್ನ ಎರಡೂವರೆ ಗಂಟೆಯಿಂದ ನಾಥೂಲಾ ಬಳಿ ಗುಂಡಿನ ಕಾಳಗ ನಿಂತಿದೆಯೆಂದು ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ.

ಇಂದು ಮಧ್ಯಾಹ್ನ ಎರಡೂವರೆ ಗಂಟೆವರೆಗೆ ಚೀನಿಯರು ಆಗಿಂದಾಗ್ಗೆ ಗುಂಡು ಹಾರಿಸುತ್ತಿದ್ದರೆಂದೂ, ಆನಂತರ 30 ಗಂಟೆಗಳ ಕಾಲ ಅವ್ಯಾಹತವಾಗಿ ಗುಂಡಿನ ಕಾಳಗಕ್ಕೆ ಪಕ್ಕಾಗಿದ್ದ ನಾಥೂಲಾ ಪ್ರದೇಶದಲ್ಲಿ ಸೂಕ್ಷ್ಮ ತೆರನ ಶಾಂತಿ ನೆಲೆಸಿದೆಯೆಂದೂ ವರದಿಯಾಗಿದೆ.

ADVERTISEMENT

ನಾಳೆ ಬೆಳಗಿನ 5.30 ರಿಂದ ಕದನಸ್ತಂಭನವೇರ್ಪಡಬೇಕೆಂಬ ಭಾರತದ ಸಲಹೆಯನ್ನು ಚೀನವು ಒಪ್ಪಿಕೊಳ್ಳುವುದು ಅಸಂಭವವೆಂದು ಭಾವಿಸಲಾಗಿದೆ. ಸದ್ಯಕ್ಕಂತೂ ಗುಂಡಿನ ಕಾಳಗ ನಿಂತಿದೆ.

**

ತಾತನ ಮಾತು!

ಬೆಂಗಳೂರು, ಸೆ. 12– ‘ಮನೆಗೊಬ್ಬ ತಾತ, ಮನೆಮಂದಿಗೆಲ್ಲಾ ಸದಾ ಅವರ ಹಿತೋಪದೇಶ. ಅವರ ಮಾತನ್ನು ಗೌರವದಿಂದ ಆಲಿಸಿದರೆ ತೀರಿತು. ಎಲ್ಲವನ್ನೂ ಪಾಲಿಸಬೇಕೆಂದಿಲ್ಲ’.

‘ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರ ಸಲಹೆಯ ಕುರಿತೂ ಅಷ್ಟೆ. ಹಿರಿಯರ ಮಾತು ಎಂದು ಆದರದಿಂದ ಕೇಳಿದರೆ ಸಾಕು, ಅದರಂತೆ ನಡೆಯಬೇಕಾಗಿಲ್ಲ’.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶ್ರೀ ಕೆ. ಹನುಮಂತಯ್ಯ ಅವರು ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ಕಾಲದಲ್ಲಿ ನುಡಿದರು.

**

ಚೀನದ ಪ್ರತಿಭಟನೆ

ಹಾಂಗ್‌ಕಾಂಗ್, ಸೆ. 12– ಚೀನ–ಸಿಕ್ಕಿಂ ಗಡಿಯಲ್ಲಿ ನಿನ್ನೆ ನಡೆದ ಘರ್ಷಣೆಗಳ ಬಗ್ಗೆ ಚೀನವು ಭಾರತಕ್ಕೆ ಅತ್ಯಂತ ಉಗ್ರವಾದ ಹಾಗೂ ತುರ್ತು ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ಇಲ್ಲಿ ಪ್ರಕಟವಾದ ನವಚೀನ ವಾರ್ತಾ ಸಂಸ್ಥೆಯ ವರದಿಯೊಂದು ತಿಳಿಸಿದೆ.

ಪೀಕಿಂಗ್‌ನಲ್ಲಿರುವ ಭಾರತದ ಉಪರಾಯಭಾರಿ ಶ್ರೀ ಆರ್.ಡಿ. ಸಾಠೆ ಅವರನ್ನು ನಿನ್ನೆ ದಿವಸ ಚೀನದ ವಿದೇಶಾಂಗ ಕಚೇರಿಗೆ ಕರೆಸಿ ಅಲ್ಲಿ ಅವರಿಗೆ ಈ ಪ್ರತಿಭಟನಾಪತ್ರವನ್ನು ನೀಡಲಾಯಿತೆಂದು ಹೇಳಲಾಗಿದೆ.

**

ಅಕ್ಟೋಬರ್‌ನಲ್ಲಿ ಸಣ್ಣ ಕಾರು ಯೋಜನೆ ಬಗ್ಗೆ ಅಂತಿಮ ನಿರ್ಧಾರ

ನವದೆಹಲಿ, ಸೆ. 12– ಸಣ್ಣ ಕಾರು ಯೋಜನೆ ಬಗ್ಗೆ ಸರ್ಕಾರವು ಅಕ್ಟೋಬರ್‌ನಲ್ಲಿ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳುವುದೆಂದು ಕೇಂದ್ರ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ಶಾಖೆ ಸಚಿವ ಶ್ರೀ ಫಕ್ರುದೀನ್ ಆಲಿ ಅಹಮದ್ ಅವರು ಇಂದು ಇಲ್ಲಿ ತಿಳಿಸಿದರು.

**

ಭಾರತಕ್ಕೆ ಅಮೆರಿಕದಿಂದ 10 ಲಕ್ಷ ಟನ್ ಆಹಾರಧಾನ್ಯ ಸರಬರಾಜು: ಒಪ್ಪಂದಕ್ಕೆ ಸಹಿ

ನವದೆಹಲಿ, ಸೆ. 12– ಇಂದು ಇಲ್ಲಿ ಸಹಿ ಹಾಕಲಾದ ಒಪ್ಪಂದದ ಪ್ರಕಾರ ಅಮೆರಿಕವು ಭಾರತಕ್ಕೆ 10 ಲಕ್ಷ ಟನ್‌ಗಳಷ್ಟು ಗೋಧಿ ಮತ್ತು ಜೋಳವನ್ನು ಸರಬರಾಜು ಮಾಡುವುದು.

ಅಮೆರಿಕದ ಶಾಂತಿಗಾಗಿ ಆಹಾರ ಕಾರ್ಯಕ್ರಮ (ಪಿ.ಎಲ್. 480) ಅನುಸಾರ ಆದ ಈ ಒಪ್ಪಂದದ ಪ್ರಕಾರ ಅಮೆರಿಕವು ಭಾರತಕ್ಕೆ 70,000 ಟನ್ ವನಸ್ಪತಿ ಮತ್ತು 30,000 ಟನ್‌ಗಳಷ್ಟು ಹತ್ತಿಯನ್ನೂ ಸರಬರಾಜು ಮಾಡುವುದು.

**

ಗುಲ್ಬರ್ಗದಲ್ಲಿ ಮುಖ್ಯಮಂತ್ರಿ ವಿರುದ್ಧ ಕಪ್ಪು ಬಾವುಟ ಪ್ರದರ್ಶನ

ಗುಲ್ಬರ್ಗಾ, ಸೆ. 12– ‘ಎಂತಹ ಪರಿಸ್ಥಿತಿಯಲ್ಲೂ ಇಲ್ಲಿನ ಎಂ.ಎಸ್.ಕೆ. ಗಿರಣಿಯನ್ನು ಮುಚ್ಚುವುದಿಲ್ಲವೆಂದು ಚುನಾವಣಾಪೂರ್ವ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಘೋಷಿಸಿದ್ದರೆಂದು ಆಪಾದಿಸಲಾದ ವಚನದ ಭಂಗವಾದುದರ ವಿರುದ್ಧ ನಿನ್ನೆ ಇಲ್ಲಿ ಕಪ್ಪು ಬಾವುಟಗಳ ಭಾರಿ ಪ್ರದರ್ಶನವೊಂದು ಜರುಗಿತು.

ವಿರೋಧ ಪಕ್ಷಗಳು ಮತ್ತು ಸ್ಥಳೀಯ ನಾಗರಿಕರನ್ನೊಳಗೊಂಡ ನಾಗರಿಕ ಸಮಿತಿಯು ಈ ಪ್ರದರ್ಶನವನ್ನು ಏರ್ಪಡಿಸಿತ್ತು.

**

ವಿಧಾನ ಪರಿಷತ್ತಿಗೆ ಶ್ರೀ ಗಾಂಜಿ ವೀರಪ್ಪ ಆಯ್ಕೆ

ಶಿವಮೊಗ್ಗ, ಸೆ. 12– ಮೈಸೂರು ಉಪಾಧ್ಯಾಯರ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಶ್ರೀ ಗಾಂಜಿ ವೀರಪ್ಪ (ಕಾಂಗ್ರೆಸ್) ಅವರು ರಾಜ್ಯದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾದ ಶಿವಮೊಗ್ಗ ಜಿಲ್ಲಾಧಿಕಾರಿ ಶ್ರೀ ಜಿ. ವಿಶ್ವನಾಥ್ ಅವರು ಇಂದು ಇಲ್ಲಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.