ADVERTISEMENT

ಬುಧವಾರ, 29–11–1967

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 19:30 IST
Last Updated 28 ನವೆಂಬರ್ 2017, 19:30 IST

ರಾಷ್ಟ್ರಪತಿಗೆ ದೋಷಾರೋಪ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ನ. 28–
ಸಂಯುಕ್ತ ರಂಗ ಸರ್ಕಾರ ವಜಾ ಮಾಡಿದ್ದಕ್ಕಾಗಿ ಇನ್ನೂ ಬುಸುಗುಟ್ಟುತ್ತಲೇ ಇರುವ ಕೋಪೋದ್ರಿಕ್ತ ಎಡ ಗುಂಪಿನ ವಿರೋಧಿಪಕ್ಷಗಳು, ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್‌ರವರ ಮೇಲೆ ದೋಷಾರೋಪ ಮಾಡುವ ದಿಕ್ಕಿನಲ್ಲಿ ಯೋಚಿಸಲು ಆರಂಭಿಸಿವೆ.

ಅಭೂತಪೂರ್ವವೆಂದು ಹೇಳಲಾದ ಈ ಕ್ರಮದ ಸೂತ್ರಧಾರ ಎಸ್.ಎಸ್.ಪಿ. ನಾಯಕ ಮಧುಲಿಮಯೆ.

‘ಸರಕಾರದ ವಜಾ ಸಂಬಂಧದಲ್ಲಿ ರಾಜ್ಯ‍ಪಾಲರ ವಿರುದ್ಧ ದೋಷಾರೋಪ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದ ರಾಷ್ಟ್ರಪತಿಯನ್ನೆ ಇದಕ್ಕಾಗಿ ಖಂಡಿಸಬೇಕು’ ಇದು ಲಿಮಯೆರವರ ವಾದ.

ADVERTISEMENT

ಸಭಾಪತಿಯತ್ತ ನುಗ್ಗಿದ ಸದಸ್ಯ
ನವದೆಹಲಿ, ನ. 28–
ಕ್ರಿಯಾಲೋಪವನ್ನೆತ್ತಲು ಅವಕಾಶ ಕೊಡಬೇಕೆಂದು ಒತ್ತಾಯ ಮಾಡುತ್ತಾ ಸಭಾಧ್ಯಕ್ಷ ಪೀಠದತ್ತ ಶ್ರೀ ಜಿ. ಮುರಹರಿಯವರು ಧಾವಿಸಿ ರಾಜ್ಯ ಸಭೆಯಲ್ಲಿ ಇಂದು ದೊಡ್ಡ ಕೋಲಾಹಲವನ್ನೇ ಮಾಡಿದರು.

ಶ್ರೀಮತಿ ವೈಯೋಲೆಟ್ ಆಳ್ವರು ಆಗ ಅಧ್ಯಕ್ಷತೆ ವಹಿಸಿದ್ದರು.

‘ಬೆದರಿಸುವ ರೀತಿಯಲ್ಲಿ’ ಅಧ್ಯಕ್ಷ ಪೀಠದತ್ತ ಧಾವಿಸುವುದು ಸಭೆಯ ಗೌರವ, ಮರ್ಯಾದೆ ಪ್ರತಿಷ್ಠೆಗಳಿಗೆ ತಕ್ಕುದಲ್ಲ. ನಾನದನ್ನು ಖಂಡಿಸುತ್ತೇನೆ’ ಎಂದು ಶ್ರೀಮತಿ ಆಳ್ವ ಹೇಳಿದಾಗ ಕಾಂಗ್ರೆಸ್ ಬೆಂಚುಗಳಿಂದ ಹರ್ಷೋದ್ಗಾರ ಕೇಳಿಬಂತು.

ಸಕ್ಕರೆ ಮೇಲಿನ ನಿಯಂತ್ರಣ ಪೂರ್ಣ ರದ್ದಾಗದು
ನವದೆಹಲಿ, ನ. 28–
ಸಕ್ಕರೆ ಮೇಲಿನ ಹತೋಟಿಯನ್ನು ಪೂರ್ಣವಾಗಿ ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಆಹಾರ ಸಚಿವ ಶ್ರೀ ಜಗಜೀವನರಾಂರವರು ಇಂದು ಲೋಕಸಭೆಯಲ್ಲಿ ತಳ್ಳಿ ಹಾಕಿದರು.

ಈ ಘಟ್ಟದಲ್ಲಿ ಪೂರ್ಣ ನಿಯಂತ್ರಣ ಅಪೇಕ್ಷಣೀಯವಲ್ಲವೆಂದು ಅವರು ಶ್ರೀಮತಿ ಸುಚೇತಾ ಕೃಪಲಾನಿಯವರ ಉಪ ಪ್ರಶ್ನೆಯೊಂದಕ್ಕೆ ಉತ್ತರವಿತ್ತರು.

ಅರ್ಧ ಪಾತಿವ್ರತ್ಯ
ನವದೆಹಲಿ, ನ. 28–
ಸಕ್ಕರೆ ನಿಯಂತ್ರಣದ ಭಾಗಶಃ ಸಡಿಲಿಕೆ ನೀತಿಯನ್ನು ಶ್ರೀ ವನ್ನೇಟಿ ವಿಶ್ವನಾಥಂ ಅವರು ಇಂದು ಲೋಕಸಭೆಯಲ್ಲಿ ‘ಅರ್ಧ ಪಾತಿವ್ರತ್ಯ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.