ADVERTISEMENT

ಬುಧವಾರ, 5–4–1967

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 19:30 IST
Last Updated 4 ಏಪ್ರಿಲ್ 2017, 19:30 IST

ರಾಷ್ಟ್ರಪತಿ ಸ್ಥಾನಕ್ಕೆ  ಶ್ರೇಷ್ಠ ನ್ಯಾಯಾಧೀಶ ಶ್ರೀ ಕೆ. ಸುಬ್ಬರಾವ್, ಉಪರಾಷ್ಟ್ರಪತಿ ಆಗಲು ನವಾಬ್ ಯಾರ್ ಜಂಗ್
ನವದೆಹಲಿ, ಏ. 4–
ರಾಷ್ಟ್ರಪತಿ ಸ್ಥಾನಕ್ಕೆ ಸುಪ್ರೀಂ ಕೋರ್ಟಿನ ಶ್ರೇಷ್ಠ ನ್ಯಾಯಾಧೀಶರಾದ ಕೆ. ಸುಬ್ಬರಾವ್ ಅವರನ್ನೂ ಉಪರಾಷ್ಟ್ರಪತಿ ಸ್ಥಾನಕ್ಕೆ ಆಲಿಘಡ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ನವಾಬ್‌ ಯಾರ್ ಜಂಗ್‌ರವರ ಹೆಸರನ್ನೂ ಸೂಚಿಸಲು ಪಾರ್ಲಿಮೆಂಟಿನ ಏಳು ವಿರೋಧ ಪಕ್ಷಗಳ ನಾಯಕರು ಇಂದು ಸರ್ವಾನುಮತದಿಂದ ಒಪ್ಪಿದ್ದಾರೆ.

ಮಧ್ಯಾಹ್ನ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳು ಕೈಗೊಂಡ ಈ ನಿರ್ಧಾರವನ್ನು ನಂತರ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಪತ್ರ ಮೂಲಕ ತಿಳಿಸಲಾಯಿತು.

ಏ.ಎನ್. ಉಪಾಧ್ಯೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು
ಬೆಂಗಳೂರು, ಏ. 4–
ಶ್ರವಣಬೆಳಗೊಳದಲ್ಲಿ ಜರುಗುವ 46ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಕೊಲ್ಹಾಪುರದ ಡಾ. ಏ.ಎನ್. ಉಪಾಧ್ಯೆ ಅವರನ್ನು ಸರ್ವಾನುಮತದಿಂದ ಆರಿಸಲಾಗಿದೆ.

ಡಾ. ಉಪಾಧ್ಯೆಯವರು ಇತಿಹಾಸ ಮತ್ತು ಸಾಹಿತ್ಯಗಳ ಬಗ್ಗೆ ತುಂಬ ಪರಿಶ್ರಮ ಪಡೆದು ಸಂಸ್ಕೃತ, ಪ್ರಾಕೃತ, ಪಾಳಿ, ಇಂಗ್ಲೀಷ್ ಮುಂತಾದ ಭಾಷೆಗಳಲ್ಲಿ ಪ್ರಸಿದ್ಧ ವಿದ್ವಾಂಸರಾಗಿ ಅನೇಕ ಉದ್ಗ್ರಂಥಗಳನ್ನು ಪ್ರಥಮವಾಗಿ ಸಂಪಾದಿಸಿ, ಪ್ರಕಟಿಸಿದ್ದಾರೆ. ಭಾರತದ ಅನೇಕ ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವವನ್ನಿತ್ತಿವೆ.

ಅನೇಕ  ವಿಶ್ವವಿದ್ಯಾನಿಲಯಗಳಲ್ಲಿ ಡಾ. ಉಪಾಧ್ಯೆ ಯವರು ವಿಸ್ತರಣೋಪನ್ಯಾಸಗಳನ್ನಿತ್ತು, ಕನ್ನಡ ನಾಡಿಗೆ ಅಪಾರ ಕೀರ್ತಿಯನ್ನು ತಂದಿದ್ದಾರೆ. ಶ್ರವಣಬೆಳಗೊಳದ ಸ್ವಾಗತ ಸಮಿತಿಯವರೂ, ಪರಿಷತ್ತಿನ ಕಾರ್ಯಸಮಿತಿಯೂ ಶ್ರೀಯುತರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ.

ಡಾ. ಉಪಾಧ್ಯೆಯವರು ಅಧ್ಯಕ್ಷತೆಯನ್ನು ವಹಿಸಲು (ಕೃತಜ್ಞತೆಯಿಂದ ಕರ್ತವ್ಯವೆಂದು) ಒಪ್ಪಿ ಕೊಂಡಿರುವುದಾಗಿ ಸೂಚಿಸಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.