ADVERTISEMENT

ಬುಧವಾರ, 9–8–1967

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2017, 19:30 IST
Last Updated 8 ಆಗಸ್ಟ್ 2017, 19:30 IST

ಸತ್ಯಜಿತ್ ರಾಯ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ
ಮನಿಲಾ, ಆ. 8-
ಚಲನಚಿತ್ರದಲ್ಲಿ ಕಾವ್ಯ ಸೃಷ್ಟಿಸಿದ ಭಾರತದ 45 ವರ್ಷ ವಯಸ್ಸಿನ ಚಲನಚಿತ್ರ ನಿರ್ಮಾಪಕ–ನಿರ್ದೇಶಕ ಸತ್ಯಜಿತ್ ರಾಯ್ ಅವರಿಗೆ ಪತ್ರಿಕೋದ್ಯೋಗ ಹಾಗೂ ಸಾಹಿತ್ಯಕ್ಕಾಗಿ 1967ರ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಲು ನಿರ್ಧರಿಸಿರುವುದಾಗಿ ಪ್ರಶಸ್ತಿ ಪ್ರತಿಷ್ಠಾನವು ಇಂದು ಪ್ರಕಟಿಸಿತು.

ಹತ್ತು ಸಾವಿರ ಅಮೆರಿಕನ್ ಡಾಲರುಗಳು (75 ಸಾವಿರ ರೂಪಾಯಿ) ಮತ್ತು ಚಿನ್ನದ ಪದಕವನ್ನು ಪ್ರಶಸ್ತಿಯಾಗಿ ನೀಡಲಾಗುವುದು. 1957ರಲ್ಲಿ ವಿಮಾನಾಪಘಾತದಲ್ಲಿ ಮಡಿದ ಫಿಲಿಪ್ಪೀನ್ಸ್ ಅಧ್ಯಕ್ಷ ರೇಮನ್ ಮ್ಯಾಗ್ಸೆಸೆ ಅವರ ಜ್ಞಾಪಕಾರ್ಥವಾಗಿ ಪ್ರತಿವರ್ಷ ಅಗ್ರಗಣ್ಯರೆನಿಸಿದ ಏಷ್ಯನ್ನರಿಗೆ ಈ ಪ್ರಶಸ್ತಿ ಕೊಡಲಾಗುವುದು.

ಪ್ರತಿಭಟನೆ– ಸಭಾತ್ಯಾಗ: ಶಾಸಕರ ವೇತನ ಏರಿಕೆಗೆ ಮೇಲ್ಮನೆಯ ಒಪ್ಪಿಗೆ
ಬೆಂಗಳೂರು, ಆ. 8–
ಒಬ್ಬರನ್ನು ಉಳಿದು ವಿರೋಧ ಪಕ್ಷದ ಗೈರು ಹಾಜರಿಯಲ್ಲಿ ವಿಧಾನ ಪರಿಷತ್ ಇಂದು ಶಾಸಕರ ವೇತನ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಿತು.

ADVERTISEMENT

ವಿಧಾನಸಭೆಯು ಅಂಗೀಕರಿಸಿದ ರೂಪದಲ್ಲಿದ್ದ ಅದನ್ನು ಪುನಃ ವಿಧಾನ ಸಭೆಗೆ ವಾಪಸು ಕಳಿಸುವಂತೆ ಮಾಡಲು ವಿರೋಧ ಪಕ್ಷಗಳ ಸದಸ್ಯರು ಪ್ರಯತ್ನ ನಡೆಸಿದರು. ಅಲ್ಲದೆ ಅದರ ಮಂಡನೆಯ ಔಚಿತ್ಯವನ್ನು ಪ್ರಶ್ನಿಸಿ ಅವರು ಎತ್ತಿದ ಕ್ರಿಯಾಲೋಪಗಳು ತಿರಸ್ಕೃತವಾದವು. ತಂದ ತಿದ್ದುಪಡಿಗಳು ಬಿದ್ದು ಹೋದವು. ಕೊನೆಯ ಅಸ್ತ್ರವಾಗಿ ಸಭಾತ್ಯಾಗವನ್ನು ಮಾಡಿದರು.

ಖಾಸಗಿ ಜನ ಸರ್ಕಾರಿ ಸಂಸ್ಥೆಗಳಲ್ಲಿ ಹಣ ಹೂಡಿಕೆ ವಿಚಾರ ಪರಿಶೀಲನೆಯಲ್ಲಿ
ಬೆಂಗಳೂರು, ಆ. 8–
ಜಾಯಿಂಟ್ ಸ್ಟಾಕ್ ಕಂಪನಿಗಳಾಗಿ ಪರಿವರ್ತಿಸಲಾಗಿರುವ ಕೆಲವು ಸರ್ಕಾರಿ ಸಂಸ್ಥೆಗಳಲ್ಲಿ ಬಂಡವಾಳ ಹೂಡಲು ಖಾಸಗಿಯವರಿಗೆ ಅವಕಾಶ ಕಲ್ಪಿಸುವ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರ ಪ್ರಶ್ನೆಗೆ ಉತ್ತರವಿತ್ತ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು, ಖನಿಜಾಭಿವೃದ್ಧಿ ಮಂಡಳಿಯ ಕೆಲವು ವಹಿವಾಟುಗಳನ್ನು ‘ಮೈಸೂರು ಮಿನರಲ್ಸ್’ಗೆ ವಹಿಸಿಕೊಡುವ ವಿಷಯವನ್ನು ಪರಿಶೀಲಿಸಲಾಗುತ್ತಿದ್ದು, ಈ ‘ಮೈಸೂರು ಮಿನರಲ್ಸ್’ ಜಾಯಿಂಟ್ ಸ್ಟಾಕ್‌ ಕಂಪನಿಯಾಗಿದ್ದು, ಅದರ ಪೂರ್ಣ ಸ್ವಾಮ್ಯವನ್ನು ಸರ್ಕಾರ ಹೊಂದಿದೆ ಎಂದರು.

69ರ ವೇಳೆಗೆ ಮಂಗಳೂರು ಬಂದರು ಪೂರ್ಣವಾಗಲೆಂದು ಮುಖ್ಯಮಂತ್ರಿ ಒತ್ತಾಯ

ಬೆಂಗಳೂರು, ಆ. 8– 1969ರ ಹೊತ್ತಿಗೆ, ಮಂಗಳೂರು ಬಳಿ ಸ್ಥಾಪನೆಯಾಗುವ ರಾಸಾಯನಿಕ ಗೊಬ್ಬರ ಕಾರ್ಖಾನೆಯ ಯಂತ್ರೋಪಕರಣಗಳನ್ನು ಈ ಬಂದರಿನ ಮೂಲಕವೇ ಆಮದು ಮಾಡಿಕೊಳ್ಳಲು ಸಾಧ್ಯವಾಗುವಂತೆ ಮಂಗಳೂರು ಬಂದರಿನ ನಿರ್ಮಾಣ ಕಾರ್ಯವನ್ನು ಆರಂಭಿಸಿ ಮುಗಿಸಬೇಕೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಕೇಂದ್ರವನ್ನು ಒತ್ತಾಯ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಈ ಸಂಬಂಧದಲ್ಲಿ ಇತ್ತೀಚೆಗೆ ಕೇಂದ್ರದ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರಿಗೆ ಪತ್ರ ಬರೆದಿದ್ದಾರೆ.

ಹಾಲಿನ ಡೈರಿ ಬಗ್ಗೆ ಗ್ರಾಮಾಂತರಗಳಲ್ಲಿ ಪೈಲೆಟ್ ಪ್ರಾಜೆಕ್ಟ್
ಬೆಂಗಳೂರು, ಆ. 8–
ಹಾಲಿನ ಡೈರಿಯ ಸಂಬಂಧದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಪೈಲೆಟ್ ಯೋಜನೆಯನ್ನು ಪ್ರಾರಂಭಿಸುವ ವಿಚಾರವನ್ನು ಸರ್ಕಾರ ಆಲೋಚಿಸುತ್ತಿದೆ ಎಂದು ಪಶು ಸಂಗೋಪನಾ ಸಚಿವ ಶ್ರೀ ಡಿ. ದೇವರಾಜ್‌ ಅರಸ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಬೇಸಾಯ ಮಾಡುವುದರ ಜೊತೆಗೆ ಉಪ ಕಸುಬಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹಾಲು ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಸಂಬಂಧಿಸಿದ ನಿರ್ದಿಷ್ಟ ಕಾರ್ಯನೀತಿ ಏನು? ಎಂದು ಶ್ರೀ ವೆಂಕನಗೌಡ ಅವರು ಪ್ರಶ್ನಿಸಿದ್ದಕ್ಕೆ ಸಚಿವ ಶ್ರೀ ದೇವರಾಜ್‌ ಅರಸ್ ಅವರು, ಮಿಶ್ರ ತಳಿ ಹಾಗೂ ಒಣ ಮೇವು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲಾಗುವುದೆಂದು ಉತ್ತರವಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.