ADVERTISEMENT

ಭಾನುವಾರ, 12–11–1967

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 20:08 IST
Last Updated 11 ನವೆಂಬರ್ 2017, 20:08 IST

ಮಹಾಜನ್ ತೀರ್ಪು ಒಪ್ಪಲು ಒತ್ತಾಯ ಸಂಸತ್‌ನಲ್ಲಿ ಮಸೂದೆ ಮಂಡಿಸಲು ಕೇಂದ್ರಕ್ಕೆ ಪ್ರದೇಶ ಕಾಂಗ್ರೆಸ್ ಕರೆ
ಬೆಂಗಳೂರು, ನ.11-
ಮಹಾಜನ್ ಗಡಿ ಆಯೋಗದ ‘ತೀರ್ಪನ್ನು ಪೂರ್ಣವಾಗಿ ಒಪ್ಪಿಕೊಂಡು’ ವಿಳಂಬವಿಲ್ಲದೆ ಸಂಸತ್ ಮುಂದೆ ಮಸೂದೆಯನ್ನು ತಂದು ಅದನ್ನು ಸಂವಿಧಾನಾತ್ಮಕವಾಗಿ ಕಾರ್ಯರೂಪಕ್ಕೆ ತರಬೇಕೆಂದು ಇಂದು ಇಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಕಾರ್ಯಸಮಿತಿ ಹಾಗೂ ರಾಜ್ಯದ ಸಂಸತ್ ಸದಸ್ಯರ ಜಂಟಿಸಭೆ ಕೇಂದ್ರ ಸರಕಾರವನ್ನು ಒತ್ತಾಯ ಮಾಡಿತು.

ಈ ಕಾರ್ಯ ಕೈಗೊಳ್ಳುವುದರಲ್ಲಿ ಆಗಿರುವ ವಿಳಂಬ, ರಾಜ್ಯದ ಜನತೆಯನ್ನು ತೀವ್ರವಾಗಿ ಅಸಮಾಧಾನಗೊಳಿಸಿದೆ ಎಂದೂ ಸ್ಪಷ್ಟವಾಗಿ ಕೇಂದ್ರಕ್ಕೆ ತಿಳಿಸಿದೆ.

ಕಾಂಗ್ರೆಸ್ ಗಾದಿಗೆ ಎಸ್.ಕೆ. ಪಾಟೀಲ್?
ನವದೆಹಲಿ, ನ. 11–
ಪ್ರಮುಖ ಕಾಂಗ್ರೆಸ್ ನಾಯಕರೂ ಕೇಂದ್ರದ ಮಾಜಿ ಸಚಿವರೂ ಆದ ಶ್ರೀ ಎಸ್.ಕೆ. ಪಾಟೀಲ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವರೆಂದು ತಿಳಿದು ಬಂದಿದೆ.

ADVERTISEMENT

ಈ ಸಂಬಂಧದಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಹೆಸರೆಂದರೆ ಮಾಜಿ ಗೃಹ ಸಚಿವ ಶ್ರೀ ಜಿ.ಎಲ್. ನಂದಾ.ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಇಚ್ಛೆಯಿಲ್ಲವೆಂದು ಶ್ರೀ ಕೆ. ಕಾಮರಾಜ್ ಅವರು ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ.

ಹುಲಿಯೂರುದುರ್ಗ ಕಾಡಿಗೆ ಆನೆ ಹಿಂಡು
ಬೆಂಗಳೂರು, ನ. 11–
ದಾರಿತಪ್ಪಿ ಬಂದಿದ್ದ ಆನೆಗಳ ಹಿಂಡು ಇಂದು ಹುಲಿಯೂರುದುರ್ಗ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ. ಪ್ರಾಣಹಾನಿ ಮತ್ತು ಫಸಲು ನಾಶ ಉಂಟು ಮಾಡಿ ಕೆಂಗೇರಿ ಸುತ್ತಮುತ್ತಲಿನ ಗ್ರಾಮಾಂತರ ಜನತೆಯನ್ನು ಹೆದರಿಸಿದ ಅವು ತಾವೂ ಬೆದರಿ ಓಡಿದೆ.

ಗುರುವಾರ ವೃಷಭಾವತಿ ನದಿ ಬಯಲಿನಲ್ಲಿ ಕಾಣಿಸಿಕೊಂಡ ಕಾಡಾನೆಗಳು ಅರ್ಕಾವತಿ, ಕಣ್ವಾ ನದಿ ಬಯಲುಗಳನ್ನು ಹಾದು ಶಿಂಷಾ ನದಿ ಬಯಲು ತಲುಪಿವೆ.

ಬೆಂಗಳೂರು ಅಭಿವೃದ್ಧಿಗೆ ಕೇಂದ್ರದಿಂದ ಸಾಲ ಕೇಳಿಕೆ
ಬೆಂಗಳೂರು, ನ. 11–
ಬೆಂಗಳೂರು ನಗರದ ಅಭಿವೃದ್ಧಿಯ ಕೇಂದ್ರದ ಯೋಜನೆಯನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ಇದಕ್ಕಾಗಿ ಕೇಂದ್ರ ಸರ್ಕಾರದಿಂದ ದೀರ್ಘಕಾಲಾವಧಿಯ ಸಾಲವನ್ನು ಮೈಸೂರು ಸರ್ಕಾರ ಕೇಳಲಿದೆ ಎಂದು ಪೌರಾಡಳಿತ ಸಚಿವ ಶ್ರೀ ಆರ್.ಎಂ. ಪಟೇಲ್ ಅವರು ಇಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಜನವರಿ ವೇಳೆಗೆ ನಗರ ಡೈರಿಗೆ ಪೂರ್ಣ ಸಾಮರ್ಥ್ಯ
ಬೆಂಗಳೂರು, ನ. 11–
ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಬೆಂಗಳೂರಿನ ಡೈರಿ ಮುಂದಿನ ಜನವರಿ ವೇಳೆಗೆ ತನ್ನ ಪೂರ್ಣ ಸಾಮರ್ಥ್ಯವಾದ 50 ಸಾವಿರ ಲೀಟರ್ ಹಾಲಿನ ಉತ್ಪಾದನೆಯನ್ನು ಮುಟ್ಟಲಿದೆ.

ಡೈರಿಯ ದಿನವಹಿ ಹಾಲಿನ ವಹಿವಾಟು 12 ಸಾವಿರ ಲೀಟರುಗಳಿಂದ 26 ಸಾವಿರ ಹಾಗೂ ಕೆಲವು ದಿನ 28 ಸಾವಿರ ಲೀಟರುಗಳವರೆಗೆ ಏರಿದೆ.

ವರ್ಷದಲ್ಲಿ ಕೇವಲ ಹತ್ತು ಹದಿನೈದು ದಿನ ಮಾತ್ರ ದೂರದ ಸ್ಥಳಗಳಿಂದ ಹಾಲು ತರುತ್ತಿದ್ದ ತಲಾ 7,000 ಲೀಟರು ಹಿಡಿಯುವ ಎರಡು ಟ್ಯಾಂಕುಗಳು ಈಗ ಪ್ರತಿದಿನ ನಗರದ ಕ್ಷೀರ ಪೂರೈಕೆ ಕಾರ್ಯದಲ್ಲಿ ನಿರತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.