ADVERTISEMENT

ಭಾನುವಾರ, 6–8–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2017, 19:30 IST
Last Updated 5 ಆಗಸ್ಟ್ 2017, 19:30 IST

ಸಚಿವರ ವೇತನ ಏರಿಕೆಗೆ ಭಾರಿ ವಿರೋಧ

ಬೆಂಗಳೂರು, ಆ. 5– ಮೈಸೂರು ವಿಧಾನ ಸಭೆಯಲ್ಲಿ ಇಂದು, ಹಿಂದೆಂದೂ ಕಾಣದ ಪ್ರಕ್ಷುಬ್ಧ ವಾತಾವರಣ, ನಾಲ್ಕೂವರೆ ಗಂಟೆಗಳ ಕಾಲ, ಹೆಜ್ಜೆ ಹೆಜ್ಜೆಗೂ ಪ್ರತಿಭಟನೆಯನ್ನು ಎದುರಿಸಿದ ಸಚಿವರ ವೇತನ ಏರಿಕೆ ಮಸೂದೆ, ಸಭಾತ್ಯಾಗ ಮಾಡಿದ ವಿರೋಧ ಪಕ್ಷಗಳ ಸದಸ್ಯರ ಗೈರುಹಾಜರಿಯಲ್ಲಿ ಸಭೆಯ ಒಪ್ಪಿಗೆ ಪಡೆಯಿತು.

ಗುರುವಾರ ಮತ್ತು ಶುಕ್ರವಾರ ವಿರೋಧ ಪಕ್ಷಗಳ ತೀವ್ರ ವಿರೋಧಕ್ಕೆ ಒಳಗಾಗಿದ್ದ ಶಾಸಕರ ವೇತನ ಏರಿಕೆ ತಿದ್ದುಪಡಿ ಮಸೂದೆಯು ಬೆಳಿಗ್ಗೆ ಸಭೆಯ ಒಪ್ಪಿಗೆ ಪಡೆಯಿತು.

ADVERTISEMENT

ಮಂತ್ರಿಗಳ ವೇತನ ಏರಿಕೆ ಮಸೂದೆಯನ್ನು ಮಂಡಿಸುವ ಪ್ರಶ್ನೆ ಬಂದಾಗ, ಅದರ ಮೇಲಿನ ಚರ್ಚೆಯನ್ನು ಮುಂದಕ್ಕೆ ಹಾಕಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಪಡಿಸಿದರು.

**

ಶಾಸಕರ ವೇತನ ಏರಿಕೆ ಮಸೂದೆ ಅಂಗೀಕೃತ

ಬೆಂಗಳೂರು, ಆ. 5– ಮೈಸೂರು ಶಾಸಕರ ವೇತನ ಏರಿಕೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಇಂದು ಬಹುಮತದಿಂದ ಅಂಗೀಕರಿಸಿತು.

ಕಳೆದ ಎರಡು ದಿನಗಳ ಕಾಲ, ಮಂಡನೆಯಿಂದ ಹಿಡಿದು ಸಭೆಯ ಒಪ್ಪಿಗೆಯವರೆಗಿನ ವಿವಿಧ ಘಟ್ಟಗಳಲ್ಲಿ ವಿರೋಧ ಪಕ್ಷಗಳ ಕಟು ವಿರೋಧವನ್ನು ಈ ಮಸೂದೆ ಎದುರಿಸಿತು.

1956ರ ಸದಸ್ಯರ ವೇತನ ಶಾಸನಕ್ಕೆ ತಿದ್ದುಪಡಿ ತರುವ ಈ ಶಾಸನದ ಪ್ರಕಾರ ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಇನ್ನು ಮುಂದೆ ತಿಂಗಳಿಗೆ 400 ರೂಪಾಯಿಗಳ ವೇತನ ಪಡೆಯುವರು. ಈಗ ಬರುವ ಸಂಬಳ 250 ರೂ.

**

ಆಡಳಿತ ಭಾಷೆ ಕನ್ನಡ: ಐದು ವರ್ಷಗಳಲ್ಲಿ ಪೂರಾ ಜಾರಿಗೆ

ಬೆಂಗಳೂರು, ಆ. 5 – ಇನ್ನು 5 ವರ್ಷಗಳಲ್ಲಿ ರಾಜ್ಯ ಸರ್ಕಾರ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅಧಿಕೃತ ಭಾಷೆಯನ್ನಾಗಿ ಜಾರಿಗೆ ತರುವುದೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಎಷ್ಟು ವರ್ಷಗಳಲ್ಲಿ ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಕಾರ್ಯಗತ ಮಾಡಲಾಗುವುದೆಂದು ಶ್ರೀ ಕೆ.ಆರ್. ಆಚಾರ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಹೇಳಿದರು.

ಕನ್ನಡ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಕಾರ್ಯಗತ ಮಾಡಲು ಸರ್ಕಾರ ಪೂರ್ಣ ಆಸಕ್ತಿ ಹೊಂದಿದೆ ಎಂದು ಸಚಿವರು ಶ್ರೀ ಮಲ್ಲಾರಾಧ್ಯ ಅವರಿಗೆ ಉತ್ತರವಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.