ADVERTISEMENT

ಮಂಗಳವಾರ, 13–6–1967

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST

ಅರಬ್ ಸ್ನೇಹಕ್ಕೆ ಚೀನಾ– ರಷ್ಯಾ ಪೈಪೋಟಿ
ಕೈರೋ, ಜೂನ್ 12–
ಶಸ್ತ್ರಾಸ್ತ್ರಗಳನ್ನು   ಹೊತ್ತ ಚೀನಾದ ಮೂರು ವಿಮಾನಗಳು ಕೈರೋವನ್ನು ತಲುಪಿವೆ. 

ಅರಬ್ಬರ ವಿಶ್ವಾಸವನ್ನು ಮತ್ತೆ ಗಳಿಸಲು ರಷ್ಯಾ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಸಮಯದಲ್ಲಿ ಹಾಗೂ ಅರಬ್ ರಾಜಧಾನಿಗಳಲ್ಲಿ ರಷ್ಯಾ ವಿರೋಧಿ ಭಾವನೆ ಹೆಚ್ಚುತ್ತಿರುವ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ರಷ್ಯಾದ ಪ್ರಭಾವವನ್ನು ತಗ್ಗಿಸಲು ಚೀನಾ ಪ್ರಯತ್ನಿಸುತ್ತಿದೆ.

ಭಾರತದ ಅಧಿಕಾರಿ ಮೇಲೆ ಚೀನದಿಂದ ಗುಪ್ತಚರ್‍ಯೆ ಆಪಾದನೆ
ಹಾಂಕಾಂಗ್, ಜೂನ್ 12–
ಪೀಕಿಂಗ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಯಾದ ಶ್ರೀ ಕೆ. ರಘುನಾಥ್‌ರನ್ನು ಚೀನವು ಇಂದು ‘ಪಕ್ಕ ಗೂಢಚಾರ’ ಎಂದು ಆಪಾದಿಸಿತಲ್ಲದೆ ಅವರಿಗೆ ನೀಡಲಾಗಿದ್ದ ರಾಜತಾಂತ್ರಿಕ ಸ್ಥಾನಮಾನವನ್ನು ರದ್ದುಗೊಳಿಸಿತು.

ADVERTISEMENT

ಭಾರತದ ಉಪರಾಯಭಾರಿ ಶ್ರೀ ಆರ್.ಡಿ. ಸಾಠೆಯವರಿಗೆ ಒಪ್ಪಿಸಲಾದ ಪತ್ರವೊಂದರಲ್ಲಿ ಚೀನದ ವಿದೇಶಾಂಗ ಸಚಿವ ಶಾಖೆಯು, ಭಾರತದ ರಾಯಭಾರ ಕಚೇರಿಯ ಕೆಲವು ಅಧಿಕಾರಿಗಳು ನಡೆಸುತ್ತಿರುವರೆಂದು ಹೇಳಲಾದ ಗೂಢಚರ್‍ಯೆಯ ಚಟುವಟಿಕೆಗಳ ಬಗ್ಗೆ ‘ಅತ್ಯಂತ ಉಗ್ರವಾದ ಪ್ರತಿಭಟನೆ’ಯನ್ನು ಸಲ್ಲಿಸಿತು.

ಶ್ರೀ ರಘುನಾಥ್ ಅವರು ಎಸಗಿರುವ ಅಪರಾಧಗಳ ವಿಷಯದಲ್ಲಿ ಚೀನದ ನ್ಯಾಯಾಲಯಗಳು ಶಾಸನದಂತೆ ಕ್ರಮವನ್ನು ಕೈಗೊಳ್ಳುವುದಕ್ಕೆ ಮುಂಚೆ ಚೀನದಿಂದ ತೆರಳಲು ಅವರಿಗೆ ಅವಕಾಶ ನೀಡುವುದಿಲ್ಲವೆಂದೂ ಆ ಪತ್ರದಲ್ಲಿ ತಿಳಿಸಲಾಗಿದೆ.

ಉತ್ಪ್ರೇಕ್ಷೆ, ಸುಳ್ಳು
ನವದೆಹಲಿ, ಜೂನ್ 12– 
ಪೀಕಿಂಗಿನ ಭಾರತೀಯ ರಾಯಭಾರಿ ಕಚೇರಿ ನೌಕರ ಶ್ರೀ ರಘುನಾಥ್ ಅವರ ವಿರುದ್ಧ ಚೀನೀಯರು ಮಾಡಿರುವ ಆಪಾದನೆಗಳು ‘ಶುದ್ಧ ಸುಳ್ಳು’, ‘ಪೂರ್ಣ ಉತ್ಪ್ರೇಕ್ಷೆ’ ಎಂದು ಅಧಿಕೃತ ವಕ್ತಾರರೊಬ್ಬರು ಇಂದು ತಿಳಿಸಿದರು.

ಡಿಗಾಲ್ ಮಧ್ಯಸ್ಥಿಕೆಗೆ ಅರಬ್ ದೇಶಗಳ ಯತ್ನ
ಪ್ಯಾರಿಸ್, ಜೂನ್ 12– 
ಮಧ್ಯ ಪ್ರಾಚ್ಯದಲ್ಲಿ ಇತ್ಯರ್ಥವನ್ನುಂಟು ಮಾಡುವುದರಲ್ಲಿ ಚುರುಕಾದ ಪಾತ್ರವನ್ನು ವಹಿಸಬೇಕೆಂದು ಅಧ್ಯಕ್ಷ ಡಿಗಾಲ್‌ರನ್ನು ಪ್ರಾರ್ಥಿಸಲು ಇಲ್ಲಿರುವ ಅರಬ್ ರಾಯಭಾರಿ ಕಚೇರಿಗಳ ಮುಖ್ಯಾಧಿಕಾರಿಗಳು ಇಂದು ನಿರ್ಧರಿಸಿದರು.

ಟುನೀಸಿಯದ ರಾಯಭಾರಿ ಮಹಮದ್ ಎಂ. ಅಸ್ಮೂರಿಯವರು ಅರಬ್ ಲೀಗಿನ ಇಲ್ಲಿನ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯೊಂದರಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

ಒಂದು ಕೋಟಿ ಟನ್ ಆಹಾರ ಧಾನ್ಯಗಳ ಆಮದು ಅಗತ್ಯ
ನವದೆಹಲಿ, ಜೂನ್ 12– 
ಕನಿಷ್ಠಪಕ್ಷ ಒಂದು ಕೋಟಿ ಟನ್ ಆಹಾರ ಧಾನ್ಯಗಳನ್ನು ವಿದೇಶಗಳಿಂದ ಆಮದು ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆಯೆಂದು ಆಹಾರ ಶಾಖೆಯ ಸ್ಟೇಟ್ ಸಚಿವ ಶ್ರೀ ಎ.ಪಿ. ಶಿಂಧೆಯವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.