ADVERTISEMENT

ಮಂಗಳವಾರ, 22–8–1967

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST

ಟಿಬೆಟ್ ಬಗ್ಗೆ ಚೀನದ ವಿಶ್ವಾಸದ್ರೋಹ

ಟೋಕಿಯೋ, ಆ. 21– ಟಿಬೆಟ್ ವಿಷಯದಲ್ಲಿ ಜನತಾ ಚೀನವು ವಿಶ್ವಾಸದ್ರೋಹ ಬಗೆದಿದೆಯೆಂದು ಭಾರತದ ಉಪಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.

ವರದಿಗಾರರ ಭೋಜನಕೂಟದಲ್ಲಿ ಸ್ವಿಸ್ ವರದಿಗಾರರೊಬ್ಬರು ಟಿಬೆಟ್ ಬಗ್ಗೆ ಭಾರತದ ಇಂದಿನ ನಿಲುವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಾ ಶ್ರೀ ದೇಸಾಯಿ ಅವರು, ಟಿಬೆಟ್ಟಿನಲ್ಲಿ ಸ್ವಯಮಾಧಿಕಾರವನ್ನು ಪುನರ್ ನೆಲೆಗೊಳಿಸಬೇಕೆಂಬುದೇ ಭಾರತದ ಅಪೇಕ್ಷೆಯಾಗಿದೆ ಎಂದರು.

ADVERTISEMENT

ಟಿಬೆಟ್ ಪರಿಣಾಮಕಾರಿ ಸ್ವಯಮಾಧಿಕಾರತ್ವವನ್ನು ಹೊಂದುವುದೆಂಬ ಷರತ್ತಿನ ಮೇಲೆಯೇ ಭಾರತವು 1950ರಲ್ಲಿ ಟಿಬೆಟ್ ಮೇಲೆ ಚೀನದ ಸಾರ್ವಭೌಮತ್ವಕ್ಕೆ ಒಪ್ಪಿಗೆ ನೀಡಿತೆಂದು ಶ್ರೀ ದೇಸಾಯಿ ಅವರು ಹೇಳಿ, ಆ ಕಾಲಕ್ಕೆ ಚೀನದ ದುರುದ್ದೇಶ ಹಾಗೂ ಟಿಬೆಟ್ ಸ್ವಯಮಾಧಿಕಾರವನ್ನು ಅದು ತುಳಿದು ಹಾಕುವ ಸಂಗತಿ ಭಾರತಕ್ಕೆ ತಿಳಿದಿರಲಿಲ್ಲವೆಂದರು.

ಪರಮಾತ್ಮನ ಪ್ರಥಮ ಭಾವಚಿತ್ರ

ಪ್ಯಾರಿಸ್, ಆ. 21– ಭಗವಂತನ ‍ಪ್ರಥಮ ಭಾವಚಿತ್ರವನ್ನು ತಾನು ತೆಗೆಯುವುದಾಗಿ ಅತಿ ವಾಸ್ತವವಾದಿ ಕಲಾವಿದ ಸಾಲ್ವಡೋರ್ ಡಾಲಿ ಪ್ರಕಟಿಸಿದ್ದಾರೆ.

ಪರಮಾತ್ಮನ ಚಿತ್ರವನ್ನು ತೆಗೆಯುವುದಕ್ಕಾಗಿ ಅತ್ಯಾಧುನಿಕ ಮತ್ತು ಹಳೆಯ ತಾಂತ್ರಿಕ ವಿಧಾನಗಳನ್ನು ತಾವು ಅನುಸರಿಸುವುದಾಗಿ 63 ವರ್ಷದ ಈ ಕಲಾವಿದ ಮಾಂಟೆ ಕಾರ್ಲೋ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಮ್ಮ ಪ್ರಯತ್ನದ ಫಲಿತಾಂಶವನ್ನು ಮುಂದಿನ ಪ್ಯಾರಿಸ್ ಪ್ರದರ್ಶನದಲ್ಲಿ ತೋರಿಸುವುದಾಗಿ ತಿಳಿಸಿರುವ ಈ ಕಲಾವಿದ, ದೇವರ ಚಿತ್ರವನ್ನು ತೆಗೆಯುವುದಕ್ಕೆ ತಮಗೆ ದಾರ್ಶನಿಕ– ಸಂತ ಟೈಲ್‌ಹಾರ್ಟ್ ಡೆ ಚಾರ್ಡಿನ್‌ ಅವರಿಂದ ಸ್ಫೂರ್ತಿ ದೊರಕಿದುದಾಗಿ ಹೇಳಿದ್ದಾರೆ.

ತಮ್ಮ ಈ ಯೋಜನೆ ಸಂಪೂರ್ಣ ನ್ಯಾಯಬದ್ಧವಾಗಿರುವುದಾಗಿ ಈತ ಹೇಳಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.