ADVERTISEMENT

ಮಂಗಳವಾರ, 2–4–1968

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

ಅಮೆರಿಕನ್ ಅಧ್ಯಕ್ಷತೆಗೆ ಜಾನ್ಸನ್ ಸ್ಪರ್ಧೆಯಿಲ್ಲ
ವಾಷಿಂಗ್ಟನ್, ಏ. 1– ಮುಂದಿನ ನವಂಬರ್‌ನಲ್ಲಿ ನಡೆಯುವ ಅಮೆರಿಕದ ಅಧ್ಯಕ್ಷ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲವೆಂದು ಅಧ್ಯಕ್ಷ ಜಾನ್ಸನ್ ಅವರು ಇಂದು ಪ್ರಕಟಿಸಿ ಇಡೀ ರಾಷ್ಟ್ರವನ್ನೇ ಬೆರಗುಗೊಳಿಸಿದರು.

ಈ ಬಗೆಗೆ ಮುನ್ಸೂಚನೆಯನ್ನೇನೂ ಕೊಡದಿದ್ದ ಜಾನ್ಸನ್ ಅವರು ತಮ್ಮ ವಿಯಟ್ನಾಂ ಹೇಳಿಕೆ ಅಂತ್ಯದಲ್ಲಿ ಅಧ್ಯಕ್ಷ ಚುನಾವಣೆಗೆ ಡೆಮೊಕ್ರಾಟಿಕ್ ಉಮೇದುವಾರಿಕೆಯನ್ನು ‘ನಾನು ಕೇಳುವುದೂ ಇಲ್ಲ; ಅಂಗೀಕರಿಸುವುದೂ ಇಲ್ಲ’ ಎಂದು ಘೋಷಿಸಿದರು.

ಒತ್ತರಿಸಿ ಬಂದ ಭಾವಾವೇಶ
ವಾಷಿಂಗ್ಟನ್, ಏ. 1– ಪುನಃ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಜಾನ್ಸನ್ ಪ್ರಕಟಿಸಿದ ಸಂದರ್ಭದ ದೃಶ್ಯ ಐತಿಹಾಸಿಕ ಮತ್ತು ಭಾವಾವೇಶಪೂರಿತ.

ADVERTISEMENT

ಪ್ರಕಟಣೆ ಓದುತ್ತಿದ್ದ ಜಾನ್ಸನ್‌ರಿಗೇ ಕಣ್ಣಿನಲ್ಲಿ ನೀರು ತುಂಬಿತ್ತು.

ಆ ಸಂದರ್ಭದಲ್ಲಿ ಜಾನ್ಸನ್‌ರೊಡನೆ ಅವರ ಬಂಧು ಬಳಗದವರೂ ಇದ್ದರು.

ಜಾನ್ಸನ್ ಜೊತೆ ಭೇಟಿ: ಕೆನಡಿ ತವಕ
ನ್ಯೂಯಾರ್ಕ್, ಏ. 1– ಅಧ್ಯಕ್ಷ ಜಾನ್‌ಸನ್‌ ಅವರನ್ನು ಭೇಟಿಯಾಗಿ ವಿಯಟ್ನಾಮಿನಲ್ಲಿ ಶಾಂತಿಯನ್ನು ಸ್ಥಾಪಿಸುವ ಹಾಗೂ ಅಮೆರಿಕದಲ್ಲಿ ರಾಷ್ಟ್ರೀಯ ಐಕಮತ್ಯವನ್ನು ಕುರಿತ ವಿಷಯಗಳನ್ನು ಚರ್ಚಿಸುವುದು ತಮ್ಮ ಅಪೇಕ್ಷೆಯೆಂದು ಸೆನೆಟರ್ ರಾಬರ್ಟ್ ಕೆನಡಿ ಇಂದು ತಿಳಿಸಿದರು.

ಅಧ್ಯಕ್ಷ ಚುನಾವಣೆಯ ಪ್ರಮುಖ ಅಭ್ಯರ್ಥಿಯೆಂದು ಪರಿಗಣಿಸಲಾದ ನ್ಯೂಯಾರ್ಕಿನ ಡೆಮೊಕ್ರಾಟ್ ಸೆನೆಟರ್ ರಾಬರ್ಟ್ ಕೆನಡಿ, ಅಧ್ಯಕ್ಷ ಜಾನ್‌ಸನ್‌ರ ನಿರ್ಧಾರ ಪ್ರಕಟಣೆಯ ನಂತರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ಕೊಡುತ್ತಿದ್ದರು.

ಮಹಾಜನ್ ವರದಿ: ಶೀಘ್ರವೇ ಎರಡನೇ ಸುತ್ತಿನ ಮಾತುಕತೆ
ನವದೆಹಲಿ, ಏ. 1– ಮೈಸೂರು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ನಡುವಣ ಗಡಿ ವಿವಾದವನ್ನು ಸಮರ್ಪಕವಾಗಿ ಪರಿಹರಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಒಟ್ಟು ಅಭಿಪ್ರಾಯ ರೂಪಿಸುವುದಕ್ಕೆ ಪ್ರಯತ್ನಿಸುತ್ತಿದೆಯೆಂದೂ, ಈ ಬಗ್ಗೆ ಪ್ರಧಾನಿ ಹಾಗೂ ರಾಷ್ಟ್ರೀಯ ಪಕ್ಷಗಳ ನಾಯಕರ ನಡುವೆ ಎರಡನೇ ಸುತ್ತಿನ ಮಾತುಕತೆ ಶೀಘ್ರದಲ್ಲೇ ನಡೆಯುವುದೆಂದೂ ಗೃಹಖಾತೆ ಸ್ಟೇಟ್ ಸಚಿವ ಶ್ರೀ ಶುಕ್ಲ ಇಂದು ಲೋಕಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.