ADVERTISEMENT

ಮಂಗಳವಾರ, 28–2–1967

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಮಾರ್ಚ್ 12ರಂದೇ ನೂತನ ಪ್ರಧಾನಮಂತ್ರಿ ಆಯ್ಕೆ
ನವದೆಹಲಿ, ಫೆ. 27–ಸಂಸತ್‌ಗೆ ಕಾಂಗ್ರೆಸ್‌ ಪಕ್ಷ ತನ್ನ ನಾಯಕನನ್ನು ಮಾರ್ಚಿ 12ರಂದೇ ಚುನಾಯಿಸಬೇಕೆಂದು ಕಾಂಗ್ರೆಸ್‌ ಪಾರ್ಲಿಮೆಂಟರಿ ಮಂಡಳಿ ನಿಶ್ಚಯಿಸಿದುದ ರಿಂದ ಶ್ರೀ ಮುರಾರಜಿ ದೇಸಾಯಿ ಅವರಿಗೆ ನಾಯಕತ್ವದ ಹೋರಾಟದ  ತಂತ್ರದಲ್ಲಿ ಹಿನ್ನಡೆ  ಸಂಭವಿಸಿದಂತಾಯಿತು. ಶ್ರೀಮತಿ ಇಂದಿರಾ ಗಾಂಧಿ ಹಾಗೂ ಅವರ ಬೆಂಬಲಿಗರು ಸಂಸತ್ತಿನ ‘ಸಪ್ಪೆ ಅಧಿವೇಶನ’ 13ರಂದು ಪ್ರಾರಂಭವಾಗುವ ಮುನ್ನವೇ ನಾಯಕತ್ವಕ್ಕೆ ಚುನಾವಣೆಯಾಗಬೇಕೆಂದು ಒತ್ತಾಯಪಡಿಸುತ್ತಿದ್ದರೆ  ಮುರಾರ್ಜಿ ದೇಸಾಯಿ ಅವರು ಅಧಿವೇಶನ ಮುಗಿಯುವವರೆಗೂ ಚುನಾವಣೆಯನ್ನು ಮುಂದೂಡಬೇಕೆಂದು ವಾದಿಸುತ್ತಿದ್ದರು.
 
ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ತ್ಯಜಿಸಲು ಕಾಮರಾಜ್‌ ಇಚ್ಛೆ
ನವದೆಹಲಿ, ಫೆ. 27– ಕಾಂಗ್ರೆಸ್‌ ಅಧ್ಯಕ್ಷರ ಸ್ಥಾನದಿಂದ ತಮ್ಮನ್ನು ಆದಷ್ಟು ಬೇಗನೆ ನಿವೃತ್ತಿಗೊಳಿಸಬೇಕೆಂದು ಕಾಮರಾಜರು ಒತ್ತಾಯ ಪಡಿಸಿದ್ದಾರೆ.
ನಿನ್ನೆ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ಮಾಡಿದಾಗ ಕಾಮರಾಜರು ತಮ್ಮ ಇಚ್ಛೆ ವ್ಯಕ್ತಪಡಿಸಿದರೆಂದು ಹೇಳಲಾಗಿದೆ. ಕಾಮರಾಜರ ಎರಡು ವರ್ಷಗಳ ಅಧಿಕಾರಾವಧಿ ವರ್ಷಾಂತ್ಯಕ್ಕೆ ಪೂರ್ಣ ಗೊಳ್ಳಲಿದೆಯಾದರೂ ಮದರಾಸ್‌ ನಲ್ಲಿ ಕಾಂಗ್ರೆಸ್ಸನ್ನು ಬಲಪಡಿಸಲು ಅವರು ತಮ್ಮ ಗಮನವನ್ನು ಕೇಂದ್ರೀಕರಿಸಲಿದ್ದಾರೆಂದು ತಿಳಿದುಬಂದಿದೆ.
 
ಕಾಂಗ್ರೆಸ್‌ ಪಕ್ಷದ ಸೋಲಿಗೆ ಕಾರಣವೇನು?
ನವದೆಹಲಿ, ಫೆ. 27– ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೋಲು ಸಂಭವಿಸಿದ್ದುದನ್ನು ಉನ್ನತ ಕಾಂಗ್ರೆಸ್‌ ನಾಯಕತ್ವವು ಇಲ್ಲಿ ಇಂದು ವಿಮರ್ಶಿಸಿತು. ಸೋಲಿಗೆ ಸರಕಾರ ಅಥವಾ ಪಕ್ಷ ಕಾರಣವೇ ಎಂಬ ಬಗ್ಗೆ ವಿಪುಲ ಚರ್ಚೆ ನಡೆಯಿತೆಂದು ತಿಳಿದು ಬಂದಿದೆ. ಕಾಂಗ್ರೆಸ್‌ ಪಾರ್ಲಿಮೆಂಟರಿ ಬೋರ್ಡ್‌ ನಲ್ಲಿ, ಮಧ್ಯಾಹ್ನ ಸಭೆ ಸೇರಿದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿಯೂ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.