ADVERTISEMENT

ಮಂಗಳವಾರ, 5–9–2017

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST

ಒರಿಸ್ಸದ 2 ಜಿಲ್ಲೆಗಳಲ್ಲಿ ಭಾರಿ ಪ್ರವಾಹ
ಕಟಕ್, ಸೆ. 4–
ಕಳೆದ ಎರಡು ದಿನಗಳಲ್ಲಿ ಭಾರಿ ಮಳೆ ಸುರಿದು, ಉತ್ತರ ಒರಿಸ್ಸದ ಎಲ್ಲ ನದಿಗಳಲ್ಲೂ ಪ್ರವಾಹ ಉಕ್ಕೇರಿದೆ. ಬಾಲಸೋರ್ ಜಿಲ್ಲೆಯ ಮುಕ್ಕಾಲು ಭಾಗವೂ ಮಯೂರ್ ಗಂಜ್ ಜಿಲ್ಲೆಯ ಬಾರಿಪಾಸ್‌ನ ಹೆಚ್ಚು ಪ್ರದೇಶಗಳೂ ನೀರಿನಲ್ಲಿ ಮುಳುಗಿವೆ.

ಮಹಾಜನ್ ತೀರ್ಮಾನ ಒಪ್ಪಿಕೊಳ್ಳತಕ್ಕದ್ದೆಂದು ಮುಖ್ಯಮಂತ್ರಿ ನಿಲುವು
ಬೆಂಗಳೂರು, ಸೆ. 4–
ಮೈಸೂರು–ಮಹಾರಾಷ್ಟ್ರ ಮತ್ತು ಮೈಸೂರು- ಕೇರಳಗಳ ನಡುವಿನ ಗಡಿ ವಿವಾದ ಕುರಿತು ನ್ಯಾಯಾಂಗದ ಅತ್ಯುನ್ನತಾಧಿಕಾರದಲ್ಲಿದ್ದಂಥ ವ್ಯಕ್ತಿ ನೀಡಿರುವ ತೀರ್ಮಾನ ವನ್ನು ಸಂಬಂಧಪಟ್ಟವರೆಲ್ಲ ಒಪ್ಪಬೇಕೆಂಬುದು ‘ಜವಾಬ್ದಾರಿಯುತ ಭಾರತೀಯನಾಗಿ’ ಮುಖ್ಯಮಂತ್ರಿ ಶ್ರೀ ಎಸ್.ನಿಜಲಿಂಗಪ್ಪ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

ಕಾವೇರಿ ನೀರು ಯೋಜನೆಗೆ 2 ಕೋಟಿ ರೂ. ವಿದೇಶಿ ವಿನಿಮಯ‌
ಬೆಂಗಳೂರು, ಸೆ. 4–
ಕಾವೇರಿ ನೀರು ಸರಬರಾಜು ಯೋಜನೆಗೆ 2 ಕೋಟಿ ರೂಪಾಯಿ ವಿದೇಶಿ ವಿನಿಮಯವನ್ನು ಕೇಂದ್ರ ಒದಗಿಸುವುದೆಂಬ ವಿಶ್ವಾಸದಿಂದ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು ದೆಹಲಿಯಿಂದ ಹಿಂದಿರುಗಿದ್ದಾರೆ.

ADVERTISEMENT

ಈ ಯೋಜನೆಗೆ ಸುಮಾರು 3 ಕೋಟಿ ರೂಪಾಯಿಗಳಷ್ಟು ವಿದೇಶಿ ವಿನಿಮಯ ಅಗತ್ಯವಾಗಿದೆ. 1000 ಅಶ್ವಶಕ್ತಿಯುಳ್ಳ ಮೋಟಾರುಗಳನ್ನು ದೇಶದಲ್ಲೇ ತಯಾರಿಸುವ ಸಾಧ್ಯತೆಯಿದೆ. ಇದು ಸಾಧ್ಯವಾದಲ್ಲಿ ವಿದೇಶಿ ವಿನಿಮಯ ಅಗತ್ಯ ಕಡಿಮೆಯಾಗುತ್ತದೆ.

‘ಹಿಂದೀ ಮಾತ್ರವೇ ಸಂಪರ್ಕ ಭಾಷೆ ಆಗಬಲ್ಲದು’
ಬೆಂಗಳೂರು, ಸೆ. 4–
ದೇಶದಲ್ಲಿ ಅಂತರರಾಜ್ಯ ಸಂಪರ್ಕಭಾಷೆಯಾಗಿ ಹಿಂದೀಯನ್ನು ಮಾತ್ರ ಜಾರಿಗೆ ತರಲು ಸಾಧ್ಯ ಎಂದು ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು ಇಂದು ಇಲ್ಲಿ ಸ್ಪಷ್ಟವಾಗಿ ತಿಳಿಸಿದರು.

ರಾಷ್ಟ್ರಭಾಷೆಯ ಸುಗಮ ಬೆಳವಣಿಗೆಗಾಗಿ ಉತ್ತರ ಭಾರತೀಯರು ಯಾವುದಾದರೂ ಒಂದು ದಕ್ಷಿಣ ಭಾಷೆ ಕಲಿಯುವುದು ಅಗತ್ಯವೆಂದು ಒತ್ತಿ ಹೇಳಿದರು. ಮುಂಬೈ ಮಾರ್ಗವಾಗಿ ಇಂದು ದೆಹಲಿಯಿಂದ ಹಿಂದಿರುಗಿದ ಮುಖ್ಯಮಂತ್ರಿಗಳು ಭಾಷಾ ಸೂತ್ರ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸಿರುವ ನಿರ್ಣಯವನ್ನು ವರದಿಗಾರರೊಡನೆ ಪ್ರಸ್ತಾಪಿಸಿ ‘ಮೈಸೂರು ರಾಜ್ಯದಲ್ಲಿ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡು ಅದನ್ನನುಸರಿಸಿ ನಡೆಯುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.