ADVERTISEMENT

ಶನಿವಾರ, 2–9–1967

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 19:30 IST
Last Updated 1 ಸೆಪ್ಟೆಂಬರ್ 2017, 19:30 IST

ರಾಜ್ಯದ ಎರಡು ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ 47 ಕೋಟಿ ರೂ. ಸಾಲ
ಬೆಂಗಳೂರು, ಸೆ. 1–
ರಾಜ್ಯದ ಘಟಪ್ರಭಾ ಯೋಜನೆಯ ಎರಡನೆಯ ಹಂತ ಹಾಗೂ ತುಂಗಭದ್ರಾ ಮೇಲ್ಮಟ್ಟದ ನಾಲೆಯ ದ್ವಿತೀಯ ಘಟ್ಟದ ಯೋಜನೆಗಳಿಗೆ ಒದಗುವ ವೆಚ್ಚವನ್ನು ಪೂರ್ಣವಾಗಿ ಸಾಲದ ರೂಪದಲ್ಲಿ ನೀಡಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ.

ಇದರಿಂದ ರಾಜ್ಯಕ್ಕೆ 47 ಕೋಟಿ ರೂ. ಸಾಲ ಸೌಲಭ್ಯ ದೊರಕಿದಂತಾಗುವುದು. ಈ ನೆರವು (ಸಾಲ) ಕಾರ್ಯಕ್ರಮದಲ್ಲಿ ತುಂಗಭದ್ರಾ ಜಲಾಶಯದ ಮುನಿರಾಬಾದ್ ವಿದ್ಯುತ್‌ ಕೇಂದ್ರವೂ ಸೇರಿದೆ.

ಪೂರ್ಣ ಪಾನನಿರೋಧ ಜಾರಿ ಪ್ರಯಾಸದ ಕೆಲಸ
ನವದೆಹಲಿ, ಸೆ. 1–
ರಾಜ್ಯಗಳು ಪಾನನಿರೋಧವನ್ನು ಜಾರಿಗೆ ತರಲು ಒಂದು ಬಿಗಿಯಾದ ಕಾರ್ಯಕ್ರಮವನ್ನು ರೂಪಿಸುವುದು ಅಸಾಧ್ಯ ಎನ್ನುವ ಅಭಿಪ್ರಾಯ ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮೂರೂವರೆ ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಕಂಡು ಬಂದಿತು.

ADVERTISEMENT

ಇಂದು ಚರ್ಚೆ ಪೂರ್ಣವಾಗಲಿಲ್ಲ. ವಿಶೇಷ ಆಹ್ವಾನವನ್ನು ಅಂಗೀಕರಿಸಿ ಬಂದಿದ್ದ ಮೈಸೂರು, ಮಹಾರಾಷ್ಟ್ರ ಮತ್ತು ಆಂಧ್ರ ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ಜಾರಿಗೆ ತರುವುದರಲ್ಲಿರುವ ಕಷ್ಟಗಳನ್ನು ವಿವರಿಸಿದರು.

ಕೋಮು ಗಲಭೆ: ಕಾಂಗ್ರೆಸ್ ಕಾರ್ಯ ಸಮಿತಿ ಕಳವಳ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಸೆ. 1–
ರಾಂಚಿ ಮತ್ತು ಶ್ರೀನಗರಗಳಲ್ಲಿನ ಕೋಮುವಾರು ಗಲಭೆಗಳ ಬಗ್ಗೆ ಕಾಂಗ್ರೆಸ್ ಕಾರ್ಯ ಸಮಿತಿಯು ಇಂದು ‘ತೀವ್ರ ಕಳವಳ’ವನ್ನು ವ್ಯಕ್ತಪಡಿಸಿದ್ದಲ್ಲದೆ, ಈ ಗಲಭೆಗಳು ಪೂರ್ವ ಯೋಜಿತವೆಂದು ಅನೇಕ ಮಂದಿ ಸದಸ್ಯರು ಅಭಿಪ್ರಾಯಪಟ್ಟರು.

ಗಡಿಯಲ್ಲಿ ಚೀನಿ ಕುತಂತ್ರ ವಿಫಲ
ನವದೆಹಲಿ, ಸೆ. 1–
ನಾಥುಲಾ ಕಣಿವೆಯ ಸಿಕ್ಕಿಂ ಭಾಗದಲ್ಲಿ ಠಾಣ್ಯಗಳನ್ನೂ ಮತ್ತು ರಕ್ಷಣಾ ಕಾಮಗಾರಿಗಳನ್ನೂ ಸ್ಥಾಪಿಸುವ ಚೀನಿ ಸೈನಿಕರ ಪ್ರಯತ್ನಗಳನ್ನು ಕಳೆದ ತಿಂಗಳು ಭಾರತೀಯ ಸೈನಿಕರು ಭಗ್ನಗೊಳಿಸಿದರು.

ಭಾರತೀಯ ಸೇನಾ ಪಹರೆ ದಳವು ನೀಡಿದ ಎಚ್ಚರಿಕೆಯ ಪರಿಣಾಮವಾಗಿ ಚೀನೀಯರು ವಾಪಸಾದರು. ಆದರೆ, ಮರುದಿನ ಅವರು ಮತ್ತೆ ಬಂದು ಘೋಷಣೆಗಳನ್ನು ಕೂಗಿದರು.

ಆರ್ಥಿಕ ಹಿಂಜರಿತ: ಡಾ. ಗಾಡ್ಗಿಲ್ ಅವರನ್ನು ಕಾಡುತ್ತಿರುವ ಪ್ರಶ್ನೆ
ನವದೆಹಲಿ, ಸೆ. 1–
ಯೋಜನೆಯ ಪ್ರಗತಿಯ ಬಗ್ಗೆ ಜನತೆಯ ಮನಸ್ಸಿನಲ್ಲಿ ಉಂಟಾಗಿರುವ ಹತಾಶ ಮನೋಭಾವ ಮತ್ತು ಆರ್ಥಿಕ ಹಿಂಜರಿತವನ್ನು ತೆಗೆದು ಹಾಕುವುದು ಹೇಗೆ ಎನ್ನುವುದೇ ತಮ್ಮನ್ನು ಕಾಡಿಸುತ್ತಿರುವ ಪ್ರಮುಖ ಸಮಸ್ಯೆಯೆಂದು ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೊ. ಡಿ.ಆರ್. ಗಾಡ್ಗಿಲ್ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.