ADVERTISEMENT

ಶುಕ್ರವಾರ, ಅಕ್ಟೋಬರ್ 20, 2017

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಕ್ರಾಂತಿದಳ ಸರ‍್ಕಾರಕ್ಕೆ ಯತ್ನ: ಅಜಯ್‌ ನಾಯಕತ್ವ ಅಂತ್ಯಗೊಳಿಸಲು ಸನ್ನಾಹ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಅ. 19–
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ಬಾಂಗ್ಲಾ ಕಾಂಗ್ರೆಸ್‌ ನಾಯಕ ಶ್ರೀ ಹುಮಾಯೂನ್‌ ಕಬೀರ್‌ ಅವರು ನೀಡಿದ ಹೇಳಿಕೆಯು ಕಾಂಗ್ರೆಸ್‌ ಹಾಗೂ ಭಾರತೀಯ ಕ್ರಾಂತಿದಳದ ಸಮ್ಮಿಶ್ರ ಸರ್ಕಾರ ಸ್ಥಾಪನೆಯ ಒಂದು ಹೆಜ್ಜೆಯಾಗಿದೆ ಎಂದು ಇಲ್ಲಿ ಅರ್ಥ ಕಲ್ಪಿಸಲಾಗುತ್ತಿದೆ.

ಮಹಾಜನ್‌ ಶಿಫಾರಸಿಗೆ ಮಹಾರಾಷ್ಟ್ರ ಪಿ.ಎಸ್‌.ಪಿ. ವಿರೋಧ
ಮುಂಬೈ, ಅ. 19–
ಮಹಾರಾಷ್ಟ್ರ–ಮೈಸೂರು ಗಡಿ ವಿಚಾರದ ಬಗೆಗಿನ ಮಹಾಜನ್‌ ಆಯೋಗದ ಶಿಫಾರಸುಗಳನ್ನು ಕೂಡಲೇ ಪ್ರಕಟಿಸಬೇಕೆಂದು ಮಹಾರಾಷ್ಟ್ರ ಪ್ರಜಾ ಸಮಾಜವಾದಿ ಪಕ್ಷದ ಕ್ರಿಯಾ ಸಮಿತಿ ಒತ್ತಾಯ ಪಡಿಸಿದೆ.

ಆಯೋಗದ ಶಿಫಾರಸುಗಳ ಪ್ರಕಟಣೆಯಿಂದ, ಆಯೋಗ ರಚನೆಯ ಪ್ರಥಮ ಉದ್ದೇಶ ಸಫಲವಾಗಿದೆಯೇ ಎಂದು ಜನ ನಿರ್ಣಯಿಸಲು ಸಾಧ್ಯವಾಗುತ್ತದೆ ಎಂದು ಸಮಿತಿಯ ಹೇಳಿಕೆ.

ADVERTISEMENT

ಹುಚ್ಚ ಮಾಸ್ತಿಗೌಡರ ಆಯ್ಕೆ ವಿರುದ್ಧದ ಅರ್ಜಿ ವಜಾ
ಬೆಂಗಳೂರು, ಅ. 19–
ಹುಲಿಯೂರು ದುರ್ಗ ಮತದಾರ ಕ್ಷೇತ್ರದ (ಸಾರ್ವತ್ರಿಕ) ಕಳೆದ ಚುನಾವಣೆಯ ಮತಪತ್ರಗಳ ಪರಿಶೀಲನೆ ಅಥವಾ ಮರು ಎಣಿಕೆ ಮಾಡುವಂತೆ, ಸೋತ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ಡಿ.ಟಿ. ಮಾಯಣ್ಣ ಅವರು ಸಲ್ಲಿಸಿದ ಮನವಿಯನ್ನು ಇಂದು ಮೈಸೂರು ಹೈಕೋರ್ಟ್‌ ತಿರಸ್ಕರಿಸಿತು.

ಸಚಿವರಿಂದ ನೇತ್ರದಾನ
ಹೈದರಾಬಾದ್‌, ಅ. 19–
ಅವಶ್ಯವಿರುವವರಿಗೆ ಅಳವಡಿಸಲು ತಾವು ತಮ್ಮ ಕಣ್ಣುಗಳನ್ನು ದಾನಮಾಡುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಎಸ್‌. ಚಂದ್ರಶೇಖರ್‌, ಆಂಧ್ರ ಆರೋಗ್ಯ ಸಚಿವ ಶ್ರೀ ಪಿ.ವಿ. ನರಸಿಂಹರಾವ್‌, ಆಂಧ್ರದ ಆರೋಗ್ಯ ಇಲಾಖೆ ಡೈರೆಕ್ಟರ್‌ ಡಾ. ಐ. ಭೂಷಣರಾವ್‌ ಮತ್ತು ಇತರೆ ಕೆಲವರು ಸರಕಾರದ ಸರೋಜಿನಿ ದೇವಿ ಕಣ್ಣಾಸ್ಪತ್ರೆಗೆ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.